ಶಿವ ಶಿವ ಎಂದರೆ ಭಯವಿಲ್ಲ.. ಶಿವ ನಾಮಕೆ ಸಾಟಿ ಬೇರಿಲ್ಲ.. ಶಿವರಾತ್ರಿ ನೀಲಕಂಠನಿಗೆ ವಿಶೇಷವಾದ ದಿನ. ಈ ದಿನದಂದು ನಿಷ್ಟೆಯಿಂದ ಶಿವನ ಪೂಜೆಯಲ್ಲಿ ತೊಡಗಿಸಿಕೊಂಡರೆ ಸಂಪ್ರೀತನಾಗಿ ಪರಮೇಶ್ವರ ಇಷ್ಟಾರ್ಥ ನೆರವೇರಿಸುತ್ತಾನೆ, ಆತನ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವುದು ಸಾಧ್ಯ ಎಂಬ ನಂಬಿಕೆಗಳು ನಮ್ಮಲ್ಲಿದೆ. ಶಿವರಾತ್ರಿಯಂದು ಉಪವಾಸ, ವ್ರತಗಳ ಮೂಲಕ ಪೂಜಾ ಕೈಂಕರ್ಯಗಳನ್ನು ಮಾಡಿದರೆ ಶಿವ ಸಂಪ್ರೀತನಾಗುತ್ತಾನೆ, ಒಲಿಯುತ್ತಾನೆ ಎಂಬುದೂ ಜನಜನಿತ. ಪಾರ್ವತಿ ಮತ್ತು ಪರಮೇಶ್ವರರ ವಿವಾಹ ದಿನದ ಸಂಭ್ರಮದ ನೆನಪಿಗಾಗಿಯೇ ಶಿವರಾತ್ರಿ ಆಚರಣೆಗೆ ಬಂತು ಎಂಬ ಪ್ರತೀತಿ ಇದೆ.
ಈ ಪುಣ್ಯ ದಿನದಂದು ಮಹೇಶ್ವರ ಭೂಮಿಗೆ ಇಳಿಯುತ್ತಾನೆ ಹಾಗೂ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾನೆ ಎಂಬುದು ಶಿವಭಕ್ತರ ನಂಬಿಕೆ. ಕತ್ತಲಿನಿಂದ ಬೆಳಕಿನೆಡೆಗೆ ಅಂದರೆ ಅಂಧಕಾರದ ಪೊರೆ ಕಳಚಿ ಜ್ಞಾನದ ಬೆಳಕಿನತ್ತ ಸಾಗುವ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದರೂ ತಪ್ಪಾಗಲಾರದು. ದೇಶದೆಲ್ಲೆಡೆ ಈ ಹಬ್ಬದ ಸಂದರ್ಭದಲ್ಲಿ ಭಕ್ತಾಧಿಗಳು ಶಿವಾಲಯಗಳಿಗೆ ಭೇಟಿ ನೀಡುವುದು, ಜ್ಯೋತಿರ್ಲಿಂಗಗಳನ್ನು ಸಂದರ್ಶಿಸುವುದರ ಮೂಲಕ ಕೃತಾರ್ಥರಾಗುತ್ತಾರೆ. ಅಲ್ಲದೆ ಹೆಚ್ಚಿನ ದೇಗುಲಗಳಲ್ಲಿ ಶಿವರಾತ್ರಿಯಂದು ಅಖಂಡ ಭಜನೆ, ವಿಶೇಷ ಪೂಜೆ, ಧ್ಯಾನಗಳನ್ನು ನಡೆಸುವ ಮೂಲಕ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗೆ ಶಿವರಾತ್ರಿಯ ಆಚರಣೆ ಇದ್ದು, ಪ್ರದೇಶಕ್ಕನುಗುಣವಾಗಿ ಆಚರಿಸುವ ವಿಧಾನಗಳಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.
ಆಚರಣೆಯ ಹಿನ್ನೆಲೆಯ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಸ್ಕಂದ ಪುರಾಣ, ಲಿಂಗ ಪುರಾಣ, ಪದ್ಮ ಪುರಾಣಗಳಲ್ಲಿಯೂ ಶಿವರಾತ್ರಿಯ ಉಲ್ಲೇಖಗಳನ್ನು ನಾವು ಗಮನಿಸಬಹುದಾಗಿದೆ. ಶೈವ ಸಂಪ್ರದಾಯದ ಒಂದು ಕಥೆಯಲ್ಲಿ ಶಿವನು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಕುರಿತಾದಂತೆ ನೃತ್ಯವನ್ನು ಶಿವರಾತ್ರಿಯಂದು ಮಾಡುತ್ತಾನೆ ಎಂದು ತಿಳಿಸಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಶಿವರಾತ್ರಿಯ ಮಧ್ಯರಾತ್ರಿಯಲ್ಲಿ ಶಿವ ಲಿಂಗದ ಸ್ವರೂಪವನ್ನು ಪಡೆಯುತ್ತಾನೆ ಎಂಬ ಮಾಹಿತಿಯೂ ಇದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಕಥೆಯೊಂದರಂತೆ, ಜನಾಂಗದ ಒಬ್ಬಾತ ಕಾಡಿನಲ್ಲಿ ದಾರಿ ತಪ್ಪುತ್ತಾನೆ. ದಾರಿ ಹುಡುಕುತ್ತಾ ಮುಂದೆ ಸಾಗಿದಂತೆ ಕತ್ತಲಾವರಿಸುತ್ತದೆ. ಕಾಡಿನಲ್ಲಿರುವ ಭಯಾನಕ ಪ್ರಾಣಿಗಳ ಮೇಲಿನ ಭಯದಿಂದ ಆತ ಮರದ ಕೊಂಬೆಯ ಮೇಲೆ ಎಚ್ಚರದಿಂದ ಕುಳಿತು ಮುಂಜಾವಿನವರೆಗೆ ಶಿವ ನಾಮ ಸ್ಮರಣೆಯನ್ನು ಮಾಡುತ್ತಾನೆ. ಆ ಮರದ ಕೆಳಗಿದ್ದ ಲಿಂಗದ ಮೇಲೆ ಬೆಳಗ್ಗಿನ ಜಾವ ಆತನ ಶಿವ ನಾಮ ಸ್ಮರಣೆಯ ಶಕ್ತಿಗೆ ಎಲೆಗಳು ಉದುರಿ ಲಿಂಗವನ್ನು ಅರ್ಚಿಸಿರುತ್ತವೆ. ಇದರಿಂದ ಶಿವ ಸಂಪ್ರೀತನಾದ ಎಂಬುದಾಗಿಯೂ ಪ್ರಚಲಿತದಲ್ಲಿದೆ.
ಅದೇನೇ ಇದ್ದರೂ, ಶಿವರಾತ್ರಿಯಂದು ಶಿವನನ್ನು ಮನಸ್ಸಿನಲ್ಲಿ ಕೇಂದ್ರೀಕರಿಸುವ ಮೂಲಕ ನಮ್ಮನ್ನು ನಾವು ನಿರ್ವಾಣ ಸ್ಥಿತಿ ಅಥವಾ ಶೂನ್ಯತ್ವ ಸ್ಥಿತಿಗೆ ತೆರೆದುಕೊಳ್ಳುವುದನ್ನು ಸೂಚಿಸುತ್ತದೆ. ನಮ್ಮೊಳಗಿನ ಅಹಂಕಾರ, ದುರಾಸೆ, ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯವೇ ಮೊದಲಾದ ಕೆಟ್ಟ ಗುಣಗಳನ್ನು ಸುಟ್ಟು, ಜ್ಞಾನದ ಸೂರ್ಯೋದಯವನ್ನು ಮಾಡಿಕೊಳ್ಳುವುದು ಅಥವಾ ಜ್ಞಾನದ ಬೆಳಕನ್ನು ಹಚ್ಚುವುದರ ಸಂಕೇತವಾಗಿಯೂ ಶಿವರಾತ್ರಿ ಮಹತ್ವವನ್ನು ಪಡೆದಿದೆ. ದಿನವಿಡೀ ಶಿವನ ಕುರಿತಾಗಿ ಯೋಚಿಸುವುದರಿಂದ, ಶಿವ ಧ್ಯಾನದಲ್ಲಿಯೇ ಚಿತ್ತವನ್ನು ಕೇಂದ್ರೀಕರಿಸುವುದರಿಂದಾಗಿ ನಾನು, ನನ್ನದು ಎನ್ನುವ ಅಹಂ ಭಾವ ಕರಗಬೇಕು. ಆ ಮೂಲಕ ಶೂನ್ಯತ್ವಕ್ಕೆ ನಮ್ಮನ್ನು ನಾವು ತಂದುಕೊಳ್ಳುವ ಮೂಲಕ ಸತ್ಚಾರಿತ್ರ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ತಮಸೋಮಾ ಜ್ಯೋತಿರ್ಗಮಯ ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಮನೋಸಂಕಲ್ಪದ ಮೂಲಕ ಈ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.