ಶಾಲೆ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಟೀಚರ್, ಬೆಂಚು, ಡೆಸ್ಕು, ವಿದ್ಯಾರ್ಥಿಗಳು, ಕಪ್ಪು ಹಲಗೆ ಇತ್ಯಾದಿ ಇತ್ಯಾದಿ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ, ವೈಟ್ ಕಾಲರ್ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ದೂರದೃಷ್ಟಿಯನ್ನು ಹೆತ್ತವರು ಹೊಂದಿರುವುದು ಸಾಮಾನ್ಯ. ಅದಕ್ಕಾಗಿ ಉತ್ತಮ ಶಾಲೆಗಳು, ಅದರಲ್ಲಿಯೂ ಲಕ್ಷ ಲಕ್ಷ ಫೀಸು ತೆತ್ತು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳನ್ನೇ ಹುಡುಕುತ್ತಾರೆ. ಅಲ್ಲಿ ತಮ್ಮ ಮಕ್ಕಳಿಗೆ ಸೀಟು ಸಿಕ್ಕರೆ ಅದೇ ದೊಡ್ಡ ಸಾಧನೆ ಎಂಬಂತೆ ವರ್ತಿಸುವುದು ಸರ್ವೇ ಸಾಮಾನ್ಯ. ಪರಿಸ್ಥಿತಿ ಹೀಗಿರುವಾಗ ಸರಕಾರಿ ಶಾಲೆಗಳು ಮಾತ್ರ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಲ್ಲದೆ, ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದೆ ಪರದಾಡುತ್ತಿರುತ್ತವೆ. ಇವೆಲ್ಲದರ ನಡುವೆ ಕೇರಳದ ಆಲಪ್ಪುರ ಜಿಲ್ಲೆಯ ಪಾಥಮಿಕ ಶಾಲೆಯೊಂದು ಎಲ್ಲಾ ಸಮಸ್ಯೆಗಳಿಗೂ ಸಡ್ಡು ಹೊಡೆದು ಖಾಸಗಿ ಶಾಲೆಗೆ ಏನೇನೂ ಕಮ್ಮಿ ಇಲ್ಲದಂತೆ ಶಿಕ್ಷಣ ನೀಡುತ್ತಿದೆ. ಜೊತೆಗೆ ಮಕ್ಕಳಿಗೆ ಮಣ್ಣಿನ ಶಿಕ್ಷಣವನ್ನು ನೀಡುವಲ್ಲಿಯೂ ಮಹತ್ತರ ಹೆಜ್ಜೆ ಇಟ್ಟಿದೆ. ಪುಟಾಣಿ ಮಣ್ಣಿನ ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿ ಮಾಡಲು ಹೊರಟಿರುವ ಈ ಶಾಲೆಯ ಶಿಕ್ಷಕರ ಕಾರ್ಯಕ್ಕೆ ಶಹಬ್ಬಾಸ್ ಎನ್ನಲೇ ಬೇಕು.
ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಕಟಿಬದ್ಧರಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಮಕ್ಕಳಿಂದಲೇ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಹಸಿರಾಗಿಸುವ ಮೂಲಕ, ಶುದ್ಧ ಪರಿಸರ ನಿರ್ಮಾಣದ ಕೈಕಂರ್ಯದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಈ ಶಾಲೆಯಲ್ಲಿ 150 ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದು, ಇಂದು 700 ರಷ್ಟು ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪಾಠದ ಜೊತೆಯಲ್ಲಿಯೇ ಬದುಕಿಗೆ ಬೇಕಾದ ಮೌಲ್ಯಯುತ ಮಣ್ಣಿನ ಶಿಕ್ಷಣವನ್ನೂ ನೀಡುತ್ತಾ ಬರಲಾಗುತ್ತಿದೆ. ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ತರಹೇವಾರಿ ತರಕಾರಿ, ಧಾನ್ಯಗಳು, ಹೂ, ಹಣ್ಣುಗಳು ಸೇರಿದಂತೆ ಇತರೇ ಹಲವಾರು ಬಗೆಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಶಾಲೆಯ ಸಾಧನೆಯನ್ನು ಮೆಚ್ಚಿ ’ಬೆಸ್ಟ್ ಔಟ್ಬಾಂಡಿಂಗ್ ಪ್ರೋಗ್ರಾಮ್’, ’ಇನ್ನೋವೇಟಿವ್ ಲರ್ನಿಂಗ್ ಟೆಕ್ನಿಕ್’, ರಾಜ್ಯ ಸರ್ಕಾರದ ವತಿಯಿಂದ ‘ದಿ ಬೆಸ್ಟ್ ಟೀಚರ್’, ‘ದಿ ಬೆಸ್ಟ್ ಸ್ಕೌಟ್ ಮಾಸ್ಟರ್’ ಎಂಬ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ.
ಇಲ್ಲಿನ ಶಿಕ್ಷಕರೇ ಹೇಳುವಂತೆ ಕಳೆದ 15 ವರ್ಷಗಳ ಹಿಂದೆ ಈ ಶಾಲೆ ಎಲ್ಲಾ ಸರಕಾರಿ ಶಾಲೆಗಳಂತೆಯೇ ಹಿಂದುಳಿದಿತ್ತು. ಸರಿಯಾದ ವ್ಯವಸ್ಥೆಗಳಿಲ್ಲದೆ ಅಥವಾ ಇರುವ ಸೌಲಭ್ಯಗಳನ್ನೇ ಸರಿಯಾದ ಕ್ರಮದಲ್ಲಿ ಬಳಕೆ ಮಾಡದೆ ವಿದ್ಯಾರ್ಥಿಗಳನ್ನು ಆಕರ್ಷಿಸುವುದೂ ಕಷ್ಟವಾಗಿತ್ತು. ಆದರೆ ಆ ಪರಿಸ್ಥಿತಿ ಈಗಿಲ್ಲ. ಇಲ್ಲಿನ ಶಿಕ್ಷಕರ ಜೀವನೋತ್ಸಾಹ ಮತ್ತು ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎನ್ನುವ ಮಹತ್ವಾಕಾಂಕ್ಷೆಯೇ ಇಂದು ಶಾಲೆ ಮಾದರಿ ಶಾಲೆಯಾಗಿ ಬೆಳೆದು ನಿಲ್ಲುವುದಕ್ಕೆ ಕಾರಣವಾಗಿದೆ.
ಶಾಲೆಯಲ್ಲಿ ಕೈತೋಟ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿ ಸಂಸ್ಕೃತಿಯ ಬಗ್ಗೆ ಜಾಗೃತಿ, ಅದರ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಮಕ್ಕಳು ಮತ್ತು ಶಿಕ್ಷಕರ ಬೆವರಿನ ಫಲವೋ ಎಂಬಂತೆ ಶಾಲೆಯ ಸುತ್ತಲೂ ಫಲ ಬಿಡುವ ಅನೇಕ ತರಕಾರಿ, ಅರಳಿ ನಗುವ ಹೂ, ಸಿಹಿಯಾದ ಹಣ್ಣುಗಳು, ಭತ್ತ ಇತ್ಯಾದಿಗಳು ಅಲ್ಲಿಗೆ ಬರುವವರನ್ನು ಸ್ವಾಗತಿಸುತ್ತಿವೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಈ ಕಾರ್ಯವನ್ನು ನೋಡಿದ ಹೆತ್ತವರೂ ಅಳಿಲು ಸೇವೆ ಸಲ್ಲಿಸಲಾರಂಭಿಸಿದ್ದಾರೆ ಎಂದು ಅಭಿಮಾನದಿಂದ ಹೇಳುತ್ತಾರೆ ಶಿಕ್ಷಕಿ ಜಾಲಿ ತೋಮಸ್. ಅಲ್ಲದೆ ದನದ ಸೆಗಣಿ ಸೇರಿದಂತೆ ಸಾವಯವ ರೀತಿಯಲ್ಲಿಯೇ ಈ ಬೆಳೆಗಳಿಗೆ ಗೊಬ್ಬರಗಳನ್ನೂ ಉಣಿಸಲಾಗುತ್ತಿದೆ. ಶಾಲೆಯ ಉಪಯೋಗಕ್ಕೆ ಬಯೋ ಗ್ಯಾಸ್ ನಿರ್ಮಿಸಿದ ಕೀರ್ತಿಯೂ ಇಲ್ಲಿಗೆ ಸಲ್ಲುತ್ತದೆ.
ಇನ್ನು ಇಲ್ಲಿ ಬೆಳೆದ ಬೆಳೆಗಳನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ, ಉಳಿದಂತೆ ಹೆತ್ತವರಿಗೆ ಮತ್ತು ಸ್ಥಳೀಯ ಮಾರುಕಟ್ಟೆಗೂ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ ಈ ಶಾಲೆಯಲ್ಲಿ ಹೆತ್ತವರಿಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ರೀತಿಯ ಚಟುವಟಿಕೆಗಳಿಂದ ತಮ್ಮ ಮಕ್ಕಳಿಗೆ ಹೋಂ ವರ್ಕ್ ವಿಚಾರದಲ್ಲಿ ಸಹಾಯ ಮಾಡುವಂತೆಯೂ ತಯಾರು ಮಾಡಲಾಗುತ್ತಿದೆ. ಅಲ್ಲದೆ ಅಮ್ಮೆಯೊಡಪ್ಪಂ (ಅಮ್ಮನೊಂದಿಗೆ) ಎಂಬ ಯೋಜನೆಯನ್ನು ಹಾಕಿಕೊಂಡಿರುವ ಈ ಶಾಲೆ, ವಿದ್ಯಾರ್ಥಿಗಳ ಜೊತೆಗೆ ಹೆತ್ತವರನ್ನೂ ತರಗತಿಯಲ್ಲಿ ಕುಳಿತುಕೊಂಡು ಪಾಠ ಮಾಡುವ ಶೈಲಿಯನ್ನು ಗಮನಿಸುವ, ಬದಲಾವಣೆಗಳನ್ನು ಹೇಳುವುದಕ್ಕೂ ಅವಕಾಶಗಳನ್ನು ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಶಾಲೆಗೆ ಹೋಗುವುದು, ಶೈಕ್ಷಣಿಕ ವಿಚಾರಗಳನ್ನಷ್ಟೇ ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕಿಂತ, ಅವರಲ್ಲಿ ಪ್ರಕೃತಿ ಪ್ರೇಮ ಸೃಜಿಸುವಂತೆ ಮಾಡುವುದೂ ಹೆಚ್ಚು ಉಪಯುಕ್ತ. ಮಣ್ಣಿನ ಸಂಬಂಧ ಕಳೆದುಕೊಂಡು ತಾಂತ್ರಿಕತೆಯ ಯಾಂತ್ರಿಕ ಮಾಯೆಯಲ್ಲಿ ನಲುಗುವ ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ, ಬದುಕನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿಯೂ ಸಿದ್ಧ ಪಡಿಸಿದರೆ ನೀಡಿದ, ಪಡೆದ ಶಿಕ್ಷಣಕ್ಕೂ ಒಂದು ಬೆಲೆ. ಆ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಈ ಶಾಲೆ ಇತರ ಶಾಲೆಗಳಿಗೂ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.