ಆರ್ಯ ಸಮಾಜದ ಸ್ಥಾಪಕ, ಭಾರತದ ಧಾರ್ಮಿಕ ಮುತ್ಸದ್ಧಿ, ವೈದಿಕ ಧರ್ಮದ ಸುಧಾರಣಾ ಚಳುವಳಿಗಳ ಮೂಲಕ ಇಂದಿಗೂ ಮನೆ ಮಾತಾಗಿರುವ ಸ್ವಾಮಿ ದಯಾನಂದ ಸರಸ್ವತಿ ಅವರು, ಭಾರತೀಯ ತತ್ವಜ್ಞಾನಿ ಮತ್ತು ಸಂಸ್ಕೃತ ವಿದ್ವಾಂಸರಾಗಿಯೂ ಹೆಸರು ಮಾಡಿದವರು. ಇಂಡಿಯಾ ಫಾರ್ ಇಂಡಿಯನ್ಸ್ (ಭಾರತ ಭಾರತೀಯರಿಗಾಗಿ) ಎಂದು ಸ್ವರಾಜ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಒಬ್ಬ ಹೋರಾಟಗಾರನಾಗಿಯೂ ಇವರು ಖ್ಯಾತಿಯನ್ನು ಪಡೆದಿದ್ದಾರೆ. ಗುಜರಾತ್ನ ಮೋರ್ಬಿ ಜಿಲ್ಲೆಯ ಕಾಥೀವಾಡದಲ್ಲಿ ಬ್ರಾಹ್ಮಣ ಕುಟುಂಬದ ಕರ್ಶನ್ಜಿ ಲಾಲ್ಜಿ ಕಪಾಡಿ, ತಾಯಿ ಯಶೋಧಾ ಭಾಯಿ ಅವರ ಪುತ್ರನಾಗಿ 12 ಫೆಬ್ರವರಿ 1824 ರಂದು ಜನಿಸಿದರು. ಇವರ ಮೂಲ ಹೆಸರು ಮೂಲಶಂಕರ.
ಯಜ್ಞೋಪವೀತದ ನಂತರದಲ್ಲಿನ ಪ್ರಾಥಮಿಕ ಶಿಕ್ಷಣಗಳನ್ನು ಮುಗಿಸಿದ ದಯಾನಂದ ಸರಸ್ವತಿ ಅವರು ಬಾಲ್ಯದಿಂದಲೇ ದೊಡ್ಡ ಶಿವಭಕ್ತರಾಗಿದ್ದರು. ಉಪವಾಸ ವ್ರತಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು. ಒಂದು ಶಿವರಾತ್ರಿಯ ದಿನದ ಉಪವಾಸದಂದು ಇಲಿಯೊಂದು ಶಿವನಿಗಿಟ್ಟ ನೈವೇದ್ಯವನ್ನು ತಿಂದು ಶಿವನ ಮೂರ್ತಿಯ ಮೇಲಿಂದಲೇ ಹೋಗಿ ಅವಿತುಕೊಳ್ಳುವುದನ್ನು ಕಂಡ ಇವರು, ಶಿವನಿಗೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವುದಕ್ಕೆ ಸಾದ್ಯವಾಗಿಲ್ಲ ಎಂದ ಮೇಲೆ ನಂಬಿದವರನ್ನು ಹೇಗೆ ರಕ್ಷಿಸುವುದು ಸಾಧ್ಯವಾಗುತ್ತದೆ ಎಂಬುದಾಗಿ ಸಂದೇಹ ಪಡುತ್ತಾರೆ. ಈ ಘಟನೆಯ ನಂತರದಲ್ಲಿ ಅವರು ಮೂರ್ತಿ ಪೂಜೆಯನ್ನು ನಿರಾಕರಿಸುತ್ತಾರೆ. ಆದರೆ ವೈದಿಕ ಸಿದ್ದಾಂತಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಾರೆ. ತಮ್ಮ ಮೊದಲ ಕೃತಿ ಸತ್ಯಾರ್ಥ ಪ್ರಕಾಶದಲ್ಲಿ ವೇದಗಳಿಗೆ ಹಿಂದಿರುಗಿ ಎನ್ನುವ ಕರೆಕೊಟ್ಟು ಆಧುನಿಕ ಭಾರತದ ನಿರ್ಮಣಕ್ಕಾಗಿ ಪ್ರಯತ್ನಿಸುತ್ತಾರೆ.
ಹಿಂದೂ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದ ಜನರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆ ತರುವ ಸಲುವಾಗಿ ಶುದ್ಧಿ ಚಳುವಳಿಯನ್ನೂ ಆರಂಭಿಸಿದರು. ವೈದಿಕ ಧರ್ಮದ ರಕ್ಷಣೆ ಮತ್ತು ಪ್ರಚರ ಕಾರ್ಯಗಳಲ್ಲಿ ಇವರ ತೊಡಗಿಸಿಕೊಳ್ಳುವಿಕೆಗಾಗಿ ಇವರಿಗೆ ಆಧುನಿಕ ಭಾರತದ ಹಿಂದೂ ಧರ್ಮದ ಮೊದಲ ಸುಧಾರಕ ಎಂಬುದಾಗಿಯೂ ಹೆಸರು ಬಂದಿದೆ. ಇವರ ಈ ಎಲ್ಲಾ ಕಾರ್ಯ ವೈಖರಿಗಳ ಕಾರಣಕ್ಕೆ ಭಾರತದ ಆಗಿನ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಆಧುನಿಕ ಭಾರತದ ನಿರ್ಮಾತೃ ಎಂಬುದಾಗಿಯೂ ಕರೆದಿದ್ದಾರೆ.
ಬಾಲ್ಯದಲ್ಲಿಯೇ ತಮ್ಮ ಸಹೋದರಿ ಮತ್ತು ಸಂಬಂಧಿಕರೊಬ್ಬರ ಮರಣದಿಂದ ಜೀವನ ಮತ್ತು ಮರಣಗಳ ಬಗ್ಗೆ ಆಲೋಚಿಸುವುದಕ್ಕೆ ತೊಡಗಿಕೊಳ್ಳುತ್ತಾರೆ. ಜೊತೆಗೆ ಸಂಸಾರದ ಬಗ್ಗೆಯೂ ನಿರಾಸಕ್ತಿ ಹೊಂದುತ್ತಾರೆ. ಇದನ್ನು ಕಂಡ ಅವರ ಹೆತ್ತವರು ಅವರಿಗೆ ಮದುವೆ ಮಾಡುವ ಯೋಚನೆಯನ್ನು ಮಾಡುತ್ತಾರೆ. ಇದ್ಯಾವುದರಲ್ಲಿಯೂ ನಂಬಿಕೆ ಇರದ ಅವರು 1846 ರಲ್ಲಿ ಮನೆ ಬಿಟ್ಟು ಹೊರಡುತ್ತಾರೆ. ನಂತರದ ಸುಮರು 25 ವರ್ಷಗಳನ್ನು ಅವರು ಸನ್ಯಾಸ ಜೀವನದಲ್ಲಿ ಕಳೆಯುತ್ತಾರೆ. ಹಿಮಾಲಯ ಸೇರಿದಂತೆ ಇನ್ನಿತರ ಯಾತ್ರಾ ಸ್ಥಳಗಳನ್ನು ಸಂದರ್ಶಿಸುವ ಮೂಲಕ ಆಧ್ಯಾತ್ಮಿಕ ಜೀವನದ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಾರೆ. ಜೊತೆಗೆ ವಿರಾಜಾನಂದ ಎಂಬ ಗುರುಗಳ ಶಿಷ್ಯನಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅನಂತರದಿಂದ ಸ್ವಾಮಿ ದಯಾನಂದ ಸರಸ್ವತಿ ಎಂಬ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಹಿಂದೂ ಧರ್ಮದಲ್ಲಿ ವೇದಗಳಿಗೆ ಯೋಗ್ಯ ಸ್ಥಾನಮಾನ ಲಭಿಸುವಂತೆ ಮಾಡುವುದಕ್ಕಾಗಿಯೂ ಅವರು ಶ್ರಮಿಸಿದವರು.
ಸಾಧನೆ:
– ಆರ್ಯ ಸಮಾಜದ ಸ್ಥಾಪನೆ
– ಮೂಢನಂಬಿಕೆಗಳನ್ನು ವಿರೋಧಿಸಿದರು, ಮೂರ್ತಿ ಪೂಜೆಯ ನಿರಾಕರಿಸಿದರು
– ಮಹಿಳೆಯರಿಗೆ ಸಮಾನ ಹಕ್ಕು, ಗೌರವಗಳನ್ನು ನೀಡುವುದಕ್ಕಾಗಿಯೂ ತಮ್ಮ ಹೋರಾಟಗಳನ್ನು ಮಾಡಿದ್ದಾರೆ.
– ಮಕ್ಕಳ ಶಿಕ್ಷಣಕ್ಕೆ ಒತ್ತು
– ಎಲ್ಲಾ ಧರ್ಮಗಳನ್ನು ತಾತ್ವಿಕ ಮತ್ತು ವೈಜ್ಞಾನಿಕವಾಗಿಯೂ ವಿಶ್ಲೇಷಣೆಗೆ ಒಳಪಡಿಸುವ ಮೂಲಕ ಸತ್ಯ ಶೋಧನೆಯನ್ನು ನಡೆಸಿದ್ದಾರೆ.
– ಓಂ ಅನ್ನು ದೇವರ ಅತ್ಯುನ್ನತ ಶಕ್ತಿ ಎಂದು ಆರ್ಯ ಸಮಾಜದ ಮೂಲಕ ತಿಳಿಸಿಕೊಟ್ಟರು.
– ಸಮಾಜದಲ್ಲಿನ ಜನರ ಸಾರ್ವತ್ರಿಕ ಉನ್ನತಿ ಮತ್ತು ಸಹೋದರತ್ವಕ್ಕಾಗಿ ಕೆಲಸ ಮಾಡಿದವರು.
– ಯೋಗ, ಬರಹಗಳು ಸೇರಿದಂತೆ ತಮ್ಮ ಜೀವನ ಕ್ರಮದ ಮೂಲಕವೇ ವೈದಿಕ ಧರ್ಮದ ತಿರುಳನ್ನು ಜನರಿಗೆ ತಿಳಿಸಿ ಕೊಟ್ಟವರು ಎಂದರೂ ತಪ್ಪಾಗಲಾರದು.
– ವೇದಗಳ ಕಾಲದಲ್ಲಿ ವರ್ಣಾಶ್ರಮ ಧರ್ಮದ ಪಾಲನೆ ಇರಲಿಲ್ಲ. ಈ ಪದ್ಧತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿಯೂ ದಯಾನಂದ ಸರಸ್ವತಿ ಅವರು ಚಿಂತನೆಗಳನ್ನು ನಡೆಸಿದ್ದರು.
– ಲಿಂಗ ಸಮಾನತೆ, ವಿಧವಾ ಪುನರ್ವಿವಾಹ ಮುಂತಾದ ಮಹಿಳೆಯರನ್ನೂ ಮುನ್ನೆಲೆಗೆ ತರುವಂತಹ ಅನೇಕ ಕಾರ್ಯಗಳನ್ನು ಇವರು ಮಾಡಿದ್ದರು.
ಸ್ವಾಮಿ ದಯಾನಂದ ಸರಸ್ವತಿ ಅವರು ಎಲ್ಲಾ ಭಾಷೆಗಳಲ್ಲಿಯೂ ಸುಮಾರು 60 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆರು ವೇದಾಂಗಗಳ ಬಗ್ಗೆ ಸುಮಾರು ಹದಿನಾರು ಆವೃತ್ತಿಗಳನ್ನು ಹೊರತಂದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಸತ್ಯಾರ್ಥ ಪ್ರಕಾಶ, ಸತ್ಯಾರ್ಥ ಭೂಮಿಕ, ಸಂಸ್ಕಾರ ವಿಧಿ, ಋಗ್ವೇದ ಭಾಷ್ಯ ಭೂಮಿಕ, ಋಗ್ವೇದ ಭಾಷ್ಯ, ಯಜುರ್ವೇದ ಭಾಷ್ಯ, ಅಷ್ಟಾಧ್ಯಾಯಿ ಭಾಷ್ಯ ( ಅಪೂರ್ಣ) ಮುಂತಾದವುಗಳ ಜತೆಗೆ ಇನ್ನೂ ಹಲವು ಕೃತಿಗಳನ್ನು ರಚಿಸಿದ ಕೀರ್ತಿ ಇವರದ್ದು.
ಇನ್ನು ದಯಾನಂದ ಸರಸ್ವತಿ ಅವರ ಜೀವನದ ಕೊನೆ ನಿಜಕ್ಕೂ ದುರ್ದೈವವೇ ಹೌದು. ಜೋದ್ಪುರದ ರಾಜ ಜಸ್ವಂತ ಸಿಂಗ್ನ ಅರಮನೆಯ ನೃತ್ಯಗಾತಿಯ ನಂಜಿಗೆ ಗುರಿಯಾದ ಇವರು ವಿಷದ ಹಾಲನ್ನು ಸೇವನೆ ಮಾಡಬೇಕಾಗಿ ಬಂತು. ರಾಜ ಮತ್ತು ನೃತ್ಯಗಾತಿಯ ನಡುವಿನ ಅನೈತಿಕ ಸಂಬಂಧವನ್ನು ಬಿಟ್ಟುಬಿಡುವಂತೆ ರಾಜನಿಗೆ ಬುದ್ಧಿವಾದ ಹೇಳಿದ್ದೇ ಅವರ ಜೀವನಕ್ಕೆ ಮುಳುವಾಯಿತು. ಅನೇಕ ರೀತಿಯ ಚಿಕಿತ್ಸೆಯನ್ನು ಸ್ವಾಮಿ ಅವರಿಗೆ ಈ ಸಂದರ್ಭದಲ್ಲಿ ನೀಡಲಾದರೂ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆಯೂ ಕಂಡು ಬರಲಿಲ್ಲ. ನಂತರ ಮೌಂಟ್ ಅಬುಗೆ ಮತ್ತು ಅಜ್ಮೀರಿಗೂ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ 30 ಅಕ್ಟೋಬರ್ 1883 ರಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.
ಅವರ ಕಾರ್ಯಗಳಿಗೆ, ಸುಧಾರಣೆಗಳಿಗೆ ಗೌರವ ಸೂಚಿಸುವ ಸಲುವಾಗಿ ಅನೇಕ ಶಾಲಾ ಕಾಲೇಜುಗಳಿಗೆ ಅವರ ಹೆಸರನ್ನಿಡಲಾಗಿದೆ. ಸುಮಾರು 800 ಕ್ಕೂ ಅಧಿಕ ವಿದ್ಯಾ ಸಂಸ್ಥೆಗಳು ಇಂದು ಅವರ ಹೆಸರಿನಲ್ಲಿ ವಿದ್ಯಾದಾನ ಮಾಡುತ್ತಿದೆ ಎನ್ನುವುದೇ ಅವರ ತಾತ್ವಿಕತೆಗಳಿಗೆ ಸಿಕ್ಕ ಗೌರವ ಎಂದೆನ್ನಬಹುದೇನೋ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.