ಟ್ರೋಲ್ ಅಂತ ಅಷ್ಟೇ ಕೇಳಿದ್ದೇವೆ. ಆದರೆ ಟ್ರೋಲ್ ಮಾಫಿಯಾ !? ಏನಿದು ಅಂತ ಕೆಲವರ ಹುಬ್ಬೇರಬಹುದು, ಕೆಲವರಿಗೆ ಮಾಫಿಯಾ ಹೆಸರಿಗೆ ತಕ್ಕದಾಗಿದೆ ಅನ್ನಿಸಬಹುದು. ಅಥವಾ ಕೆಲವರಿಗೆ ಕೋಪ ನೆತ್ತಿಗೇರಬಹುದು ಅವರವರ ಭಾವನೆಗೆ ತಕ್ಕಂತೆ ಪ್ರತಿಕ್ರಿಯಿಸಿಕೊಂಡು ಬಿಡಿ.
ಭಾರತದಲ್ಲಿ ಸೋಶಿಯಲ್ ಮೀಡಿಯಾ ಎಷ್ಟು ಸ್ಟ್ರಾಂಗ್ ಆಗಿದೆ ಎಂದರೆ, ಈ ಹಿಂದೆ ನ್ಯೂಸ್ಗಳಲ್ಲಿ ಬರುತ್ತಿದ್ದ ಸುದ್ದಿಗಳೇ ಸೋಷಿಯಲ್ ಮಿಡಿಯಾಗಳಲ್ಲಿ ಸುದ್ದಿಯಾಗುತ್ತಿದ್ದವು ಆದರೆ ಇವಾಗ ಸೋಷಿಯಲ್ ಮಿಡಿಯಾಗಳಲ್ಲಿ ಬರುವ ಸುದ್ದಿಗಳೇ ನ್ಯೂಸ್ ಚಾನೆಲ್ಗಳಲ್ಲಿ ಸುದ್ದಿಯಾಗುತ್ತಿವೆ. ಅಂದರೆ ನ್ಯೂಸ್ಗಳಾಗುವ ಮುಂಚೆ ಸೋಷಿಯಲ್ ಮಿಡಿಯಾದಲ್ಲಿ ಬಂದು ಹೋಗುತ್ತಿವೆ. ಅಷ್ಟು ಬಲಿಷ್ಠವಾಗಿದೆ ಸೋಷಿಯಲ್ ಮಿಡಿಯಾ!
ಭಾರತ ಯುವಕರ ದೇಶ. ಈ ಯುವಕರು ದೇಶದ ಸಂಪತ್ತು ಅಂತ ಚಿಕ್ಕ ವಯಸ್ಸಿನಿಂದ ಇವತ್ತಿರವರೆಗೂ ಭಾಷಣಗಳಲ್ಲಿ, ಲೇಖನಗಳಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಮುಖಾಂತರ ಕೇಳುತ್ತಿದ್ದೇವೆ. ಭಾರತದಲ್ಲಿ ಈ ಸೋಷಿಯಲ್ ಮಿಡಿಯಾ ಬಲಿಷ್ಠವಾಗಿರೋದಕ್ಕೆ ನಮ್ಮ ಯುವ ವೃಂದವೇ ಕಾರಣ ಅಂತ ಗೊತ್ತಿರುವ ವಿಚಾರ. ಸುಮಾರು 100 ಜನ ಭಾರತೀಯರಲ್ಲಿ 60ಕ್ಕಿಂತ ಹೆಚ್ಚು ಜನ ಸೋಷಿಯಲ್ ಮಿಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಕೆಲವರಂತು ಇದೇ ವೃತ್ತಿ-ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಕೆಲವರು ಟೈಮ್ ಪಾಸ್ಗೆ, ಕೆಲವರು ಮಾಹಿತಿ ಸಂಗ್ರಹಕ್ಕಾಗಿ, ಇನ್ನೂ ಕೆಲವರು ಮತ್ತೊಬ್ಬರ ಕಾಲೆಳೆಯಲು ಉಪಯೋಗಿಸುತ್ತಿದ್ದಾರೆ. ದೇಶದಲ್ಲಿ ಯುವಕರೇ ಹೆಚ್ಚಿರುವವರ ಮಧ್ಯೆ ನಿರುದ್ಯೋಗ ಸಮಸ್ಯೆಯೂ ಅಷ್ಟೇ ಗಣನೀಯವಾಗಿದೆ. ಆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಕೆಲವರು ಆರಿಸಿಕೊಂಡ ಮಾರ್ಗವೇ ಈ ಟ್ರೋಲ್ ಪೇಜ್ಗಳು. ಮೊದಮೊದಲು ಒಳ್ಳೊಳ್ಳೆ ಮಾಹಿತಿಗಳನ್ನು ಹಂಚುತ್ತಾ, ಒಂದೊಳ್ಳೆ ಓದು ಬಳಗ ಸೃಷ್ಟಿ ಮಾಡಿ ತಮ್ಮ ಪೇಜ್ನ್ನು ಫೇಮಸ್ ಮಾಡಿಕೊಳ್ಳಲು ಎಲ್ಲ ತರಹ ಸರ್ಕಸ್ಸುಗಳನ್ನು ಮಾಡಿಕೊಳ್ಳುವುದು. ಯಾವಾಗ ಆ ಪೇಜ್ನ, ಗ್ರೂಪ್ನ ಫಾಲೋವರ್ಗಳು ಜಾಸ್ತಿಯಾಗುತ್ತಿದ್ದಂತೆ ಕಮರ್ಶಿಯಲ್ಲಾಗಿ ಮಾರ್ಪಾಡು ಹೊಂದುತ್ತಿವೆ. ಕೆಲ ಪೇಜ್ ಅಡ್ಮಿನ್ಗಳಂತು ದುಡಿದು ತಿನ್ನುವುದನ್ನು ಬಿಟ್ಟು ಇದನ್ನೆ ವೃತ್ತಿಯನ್ನಾಗಿ ಮಾಡ್ಕೊಂಡು ಬಿಟ್ಟಿದ್ದಾರೆ.
ಟ್ರೋಲ್ ಪೇಜ್ಗಳನ್ನು ಮಾಡಿ ಅದನ್ನು ಫೇಮಸ್ ಮಾಡ್ಕೊಂಡ ತಕ್ಷಣ ಅವರ ದಿನಚರಿ ಹೇಗಿರುತ್ತೆಂದರೆ, ದಿನಕ್ಕೆ ಸಾಮಾನ್ಯವಾಗಿ 08-15 ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ಮೊದಮೊದಲು ಒಳ್ಳೊಳ್ಳೆ ಮಾಹಿತಿಗಳನ್ನು ನೀಡಿ, ಹಾಸ್ಯ, ಸುದ್ದಿಗಳನ್ನು ನೀಡುತ್ತಿದ್ದವರು ಅದೇ 08 ರಿಂದ 15 ಪೋಸ್ಟ್ಗಳಲ್ಲಿ ಸುಮಾರು 10 ಪೋಸ್ಟ್ಗಳವರೆಗೆ ಜಾಹಿರಾತುಗಳು, ಟೀಸರ್ಗಳು, ಸಿನೆಮಾ ಹಾಡುಗಳು, ಶಾರ್ಟ್ ಮೂವಿಗಳನ್ನು ತಮ್ಮ ಪೇಜ್ನಲ್ಲಿ ಹಾಕಿಕೊಳ್ಳಲು ಮಾಲಿಕರಿಂದ ಹಣ ತೆಗೆದುಕೊಳ್ಳುತ್ತಾರೆ.
ಟಿವಿಗಳಲ್ಲಿ ಯಾವುದೋ ಕಾರ್ಯಕ್ರಮ ನಡೆದಾಗ ನಡು ನಡುವೆ ಜಾಹಿರಾತುಗಳು ಬರುತ್ತವೆ. ಆ ಜಾಹಿರಾತುಗಾರರಿಂದ ಆ ಚಾನೆಲ್ನವರು ಹಣ ಪಡೆಯೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಸೋಷಿಯಲ್ ಮಿಡಿಯಾ ಪೇಜ್ಗಳು ಜಾಹಿರಾತಿನ ಹಾಗೆ ಪೋಸ್ಟ್ ಮಾಡಿ ಹಣ ಪಡೆಯುವ ದಂಧೆ ಅವ್ಯಾಹತವಾಗಿ ನಡೆದಿದೆ. ಒಂದು ಅಂಗಡಿಯು, ಫೇಮಸ್ಗಾಗಿ ಅಥವಾ ಪ್ರೊಡಕ್ಟ್, ಟೀಸರ್, ಹಾಡು, ಶಾರ್ಟ್ ಮೂವಿಗಳನ್ನು ಜಾಹಿರಾತಿನ ಹಾಗೆ ಪೋಸ್ಟ್ ಮಾಡಲು ಸುಮಾರು 1 ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ. ಹಾಗೇನೆ ಲೈಕ್ , ಕಾಮೆಂಟ್, ಶೇರ್, ನೋಡುಗರು ಜಾಸ್ತಿಯಾದಂಗೆ ಅವರು ಹೆಚ್ಚಿಗೆ ಹಣ ಪಡೆಯುತ್ತಾರೆಂಬ ಮಾಹಿತಿ ಇದೆ.
ಕೆಲವು ಪೇಜ್ಗಳಲ್ಲಿ ಪೋಸ್ಟ್ ಮಾಡಿಸಬೇಕಂದ್ರೆ ಕ್ಯೂ ಹಚ್ಚಬೇಕಾಗಿದೆ. ಕಮರ್ಷಿಯಲ್ ಆಗಿರುವ ಗ್ರೂಪ್/ಪೇಜ್ಗಳು ಒಂದು ತಿಂಗಳಿಗೆ ಸುಮಾರು 30 ಸಾವಿರ ರೂಪಾಯಿಗಳಿಂದ 80 ಸಾವಿರ ರೂಪಾಯಿಗಳವರೆಗೆ ಆದಾಯಗಳಿಸುತ್ತಾರಂತೆ. ಕೆಲವರು ಈ ಹಿಂದೆ ದೊಡ್ಡ ದೊಡ್ಡ ಡಾನ್ಗಳು ಶ್ರೀಮಂತರ ಹತ್ತಿರ, ಸರ್ಕಾರಿ ಅಧಿಕಾರಿಗಳ ಹತ್ತಿರ, ರಾಜಕೀಯದವರ ಹತ್ತಿರ ಹಫ್ತಾ ವಸೂಲಿ ಮಾಡುತ್ತಿದ್ದರಂತೆ ಕೇಳಿದ್ದೇವು ಈಗಲೂ ಕೆಲವು ಕಡೆ ಈ ಕಾಯಕ ಚಾಲ್ತಿಯಲ್ಲಿದೆ. ಹಾಗೇನೆ ಕೆಲವು ಅಡ್ಮಿನ್ಗಳು ದೊಡ್ಡ ದೊಡ್ಡ ಕ್ರಾಂಟ್ರ್ಯಾಕ್ಟರ್, ಸರಕಾರಿ ಅಧಿಕಾರಿಗಳ ಹತ್ತಿರ ಹಫ್ತಾ ವಸೂಲಿ ಮಾಡುತ್ತಿದ್ದಾರೆಂಬ ಆಘಾತಕಾರಿ ಸುದ್ದಿ ಹರಿದಾಡುತ್ತಿದೆ. ಅವರ ಕೆಲಸದ ಬಗ್ಗೆ ನಮ್ಮ ಪೇಜ್ಗಳಲ್ಲಿ ಟ್ರೋಲ್ ಮಾಡಿ ಹೆಸರು ಕೆಡಿಸುವೆ ಅಂತ ಹೆದರಿಸಿ ಹಣ ವಸೂಲಿ ದಂಧೆ ನಡೆಯುತ್ತಿದೆ.
ಇನ್ನು ಇವರು ಮಾಡುವ ಪೋಸ್ಟ್ಗಳು ಎಲ್ಲವೂ ಸತ್ಯವಾ ? ಅಥವಾ ತಾವೆ ಇನ್ವೆಸ್ಟಿಗೇಷನ್ ಮಾಡಿರೋದಾ ಖಂಡಿತವಾಗಿಯೂ ಸಾಧ್ಯವಿಲ್ಲ. ಹಾಸ್ಯವನ್ನು ಮಾಡುವ ನೆಪದಲ್ಲಿ ಏನೇನೋ ಸುಳ್ಳು ಮಾಹಿತಿಗಳನ್ನು ನೀಡುತ್ತವೆ. ಇನ್ವೇಷ್ಟಿಗೇಷನ್ ಮಾಡೋಕೆ ಇವರೇನು ಸರ್ಕಾರದಿಂದ ಅಥವಾ ಯಾವುದೋ ಶಿಕ್ಷಣ ಸಂಸ್ಥೆಗಳಿಂದ ಪರವಾನಿಗೆ ಪಡೆದಿರುತ್ತಾರಾ ಖಂಡಿತಾ ಇಲ್ಲ. ಹಾಗಾದರೆ ಇವರಿಗೆಲ್ಲ ಈ ಎಲ್ಲ ಸ್ವಾತಂತ್ರ್ಯ ಕೊಟ್ಟವರ್ಯಾರು ಎನ್ನುವ ಪ್ರಶ್ನೆ ಮೂಡುತ್ತದೆ.
ಎಲ್ಲಾ ಪೇಜ್ ಅಥವಾ ಗ್ರೂಪ್ ಹೀಗೆ ಇಲ್ಲ. ಇದು ಕೆಲವು ಅಡ್ಮಿನ್ಗಳು ಈ ರೀತಿ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಯಾವ ಗ್ರೂಪ್, ಪೇಜ್ಗಳಲ್ಲಿ ಅದು ಚೆನ್ನಾಗಿದೆ ಇದು ಚೆನ್ನಾಗಿದೆ ನೋಡಿ ಅಂತ ಬಂದಿರುತ್ತೋ ಅದೆಲ್ಲವೂ ಜಾಹಿರಾತು ಆ ಅಡ್ಮಿನ್ಗಳು ಹಣ ಪಡೆದಿರುತ್ತಾರೆ ಅಂತ ತಿಳ್ಕೊಂಡುಬಿಡಿ. ನಾಲ್ಕಾರು ಪೋಸ್ಟ್ ಮಾಡಿ ತಾವು ದೊಡ್ಡ ಸೇವಕರು ಅನ್ಕೊಂಡು ಸೈನಿಕರ ಹೆಸರಿನ ಮೇಲೆ, ನೆರೆ ಹಾವಳಿಯಾದಾಗ, ಬಡವರ ಹೆಸರಿನ ಮೇಲೆ, ಹಾಗೂ ಪ್ರಕೃತಿ ವಿಕೋಪಗಳಾದಾಗ ಸ್ವಯಂ ಪ್ರೇರಿತರಾಗಿ ತಮ್ಮ ಪೇಜ್ ಹಾಗೂ ಗ್ರೂಪ್ಗಳಲ್ಲಿ ಹಣ ಸಂಗ್ರಹಕ್ಕೆ ಚಾಲನೆ ನೀಡಿರುತ್ತಾರೆ. ಸಾಕಷ್ಟು ಹಣ ಸಂಗ್ರಹಿಸಿ ಮೂಗಿಗೆ ತುಪ್ಪ ಸವರಿದಂತೆ ತೋರಿಸುತ್ತಾರೆ. ತಾವೇ ದೊಡ್ಡ ಸಹಾಯ ಮಾಡಿದವರ ಹಾಗೇ ತೋರಿಸಿ ಸರಿಯಾಗಿ ಲೆಕ್ಕ ನೀಡದೇ ಆ ಸಾರ್ವಜನಿಕ ಹಣವನ್ನು ಗುಳುಂ ಮಾಡುತ್ತಿದ್ದಾರೆ. ಆ ಸುಳ್ಳು ಲೆಕ್ಕಪತ್ರ ತೊರಿಸಿ ಜನರನ್ನು ನಂಬಿಸುವ ದಂಧೆಯೂ ಈ ಅಡ್ಮಿನ್ಗಳು ಮಾಡುತ್ತಿದ್ದಾರೆ. ಯಾವಾಗ ತಾವು ಮಾಡಿದ್ದು ತಪ್ಪು, ಸರಿಯಲ್ಲ ಸಾರ್ವಜನಿಕ ಹಣಕ್ಕೆ ಮೋಸ ಮಾಡುತ್ತಿದ್ದಿರಿ ಅಂತ ಯಾರಾದರೂ ಬಾಯಿ ಬಿಚ್ಚಿದರೆ ಅವರಿಗೆ ದೇಶದ್ರೋಹಿ ಆರೋಪದವರ ಹಾಗೆ ಬಿಂಬಿಸಿ ತಮ್ಮ ಪೇಜ್ಗಳಲ್ಲೆ ಕಾಲೆಳೆಯುತ್ತಾರೆ. ಅಷ್ಟೇ ಅಲ್ಲ ಕೆಲವು ಕಡೆ ಧಮ್ಕಿಗಳು ನಡೆದಿವೆ.
ಸಾರ್ವಜನಿಕರಿಂದ ಹಣ ಸಂಗ್ರಹಿಸುವುದಕ್ಕಾಗಿ ಯಾರು ಇವರಿಗೆ ಹೇಳಿದ್ದಾರೆ ? ಹಾಗೇನೆ ಹಗರಣದ ಆರೋಪ ಯಾವಾಗ ತಮ್ಮ ಮೇಲೆ ಬರಲು ಶುರುವಾಗುತ್ತದೆಯೋ ಆವಾಗ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ತಳುಕು ಹಾಕಿಕೊಂಡು ತಮ್ಮ ಜೊತೆಗೆ ಆ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಹಾಳುವ ಮಾಡುವ ದಂಧೆಯನ್ನು ಮೈಗೂಡಿಸಿಕೊಂಡಿದ್ದಾರೆ. ಹಣಕ್ಕಾಗಿ ಏನು ಬೇಕಾದರೂ ಮಾಡುವ ಈ ವ್ಯವಸ್ಥಿತ ಮಾಫಿಯಾವು ನಮ್ಮ ನಡುವೆಯೇ ನಮಗೆ ಗೊತ್ತಿಲ್ಲದೇ ಬೆಳೆಯುತ್ತಿದೆ. ಇದು ಹಾದರಕ್ಕಿಂತಲೂ ಹೇಸಿಗೆಯಾದದ್ದು ಅಂತ ಪ್ರಜ್ಞಾವಂತರಿಗೆ ಅನಿಸುವುದು ಸಹಜ.
ವಿಪರ್ಯಾಸ ಏನೆಂದರೆ ಈ ಅಡ್ಮಿನ್ಗಳು ಮೂರಕ್ಷರದ ನಾಚಿಗೆ ಮಾನ ಮರ್ಯಾದೆ ಮರೆತು ಬಿಟ್ಟಿರುತ್ತಾರೆ ಅನಿಸುತ್ತದೆ.
ಇನ್ನೊಬ್ಬರಿಗೆ ಪ್ರೇರಣೆಯಾಗುವ ವಿಷಯಗಳನ್ನು, ಸಾಮಾನ್ಯ ಮಾದರಿ ವ್ಯಕ್ತಿಗಳ ಬಗ್ಗೆ, ಸೇವೆಯೇ ಜೀವನ ಅಂದುಕೊಂಡವರ ಬಗ್ಗೆ ನಿಮ್ಮ ಪೇಜ್ಗಳಲ್ಲಿ ಪೋಸ್ಟ್ ಮಾಡಿ ಅಂದರೆ ತಕ್ಷಣ ಹಣದ ವ್ಯವಹಾರ ಮಾತನಾಡಲು ಶುರು ಮಾಡ್ತಾರೆ. ಹಿಂದೆ ಭೂ ಮಾಫಿಯಾ, ಟ್ಯೂಷನ್ ಮಾಫಿಯಾ, ಮರಳು ಮಾಫಿಯಾ, ಗಾಂಜಾ, ಗನ್, ಅಕ್ರಮ ಮಕ್ಕಳ ಸಾಗಾಟ, ಇವೆಲ್ಲವನ್ನೂ ಮಾಫಿಯಾ ಅಂತ ಕರೆಯುವ ಹೊತ್ತಲ್ಲೆ ಹೊಸದೊಂದು ಸೇರ್ಪಡೆಯಾಗುತ್ತಿದೆ. ಅದೇ ಈ ಅಡ್ಮಿನ್ಗಳ ಟ್ರೋಲ್ ಮಾಫಿಯಾ. ಈ ಡೆಡ್ಲಿ ಗೇಮ್ಗಳಾದ ಬ್ಲೂವೇಲ್, ಪಬ್ಜಿಗಳು ಕೇವಲ ಕೆಲವು ಅಡಿಕ್ಟ್ಗಳು ಮಾತ್ರ ಹಾಳು ಮಾಡಿದರೆ ಈ ಟ್ರೋಲ್ ಅಡ್ಮಿನ್ಗಳು ಇಡೀ ಸಮಾಜವನ್ನು ತಪ್ಪು ದಾರಿಗೆ ಒಯ್ಯುತ್ತಿವೆ. ಹಣಕ್ಕಾಗಿ ಸರಕಾರಿ ಕೆಲಸಗಳನ್ನು ಕೊಡಿಸುವ ಹಲವಾರು ಏಜೆಂಟರುಗಳು ಇರುವಾಗ ಮುಂದೆಯೂ ಈ ಟ್ರೋಲ್ ಅಡ್ಮಿನ್ಗಳೆ ಈ ಏಜೆಂಟ್ಗಳಾಗುವ ಕಾಲ ದೂರವೇನಿಲ್ಲ. ಸೈಟ್, ಮನೆ, ಹೊಲ ಮಾರಾಟಕ್ಕಿದೆ, ವಧು ವರರ ಕೇಂದ್ರ, ಸರ್ಕಾರಿ ಕಛೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ ಎನ್ನುವಂತಹ ಹಲವಾರು ಜಾಹಿರಾತುಗಳು ಹಣಕ್ಕಾಗಿ ಈ ಅಡ್ಮೀನ್ಗಳೆ ವ್ಯವಹಾರ ಸದ್ಯದಲ್ಲಿಯೇ ಶುರು ಮಾಡುವ ಲಕ್ಷಣಗಳು ಗೋಚರವಾಗುತ್ತಿದೆ.
ಈಗಾಗಲೇ ಯಾವುದೇ ನಿರ್ಬಂಧ ಇಲ್ಲದೇ ಅವ್ಯಾಹತವಾಗಿ ಅಕ್ರಮ ಹಣದ ಹೊಳೆಯೇ ಹರಿಯುತ್ತಿದೆ. ಈ ಹೊಳೆಯು ಸಮುದ್ರ ಸೇರಿ ಸಮುದ್ರವನ್ನು ಹಾಳು ಮಾಡುವ ಮೊದಲೇ ಸಮಾಜ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ರೀತಿ ಸಮಾಜವನ್ನು ತಪ್ಪು ದಾರಿಗೆ ಎಳೆದು ಅಕ್ರಮ ದಂಧೆ ಶುರು ಮಾಡಿರೋದು ಈ ಕೆಲವೇ ಕೆಲವು ನಿರುದ್ಯೋಗಿ ಟ್ರೋಲ್ ಅಡ್ಮಿನ್ಗಳೇ. ಎಲ್ಲ ಎಡ್ಮಿನ್ಗಳು ಹೀಗೆ ಎನ್ನೋದು ಖಂಡಿತ ತರವಲ್ಲ. ಕೆಲವೇ ಕೆಲವರು ತಾವು ತಪ್ಪು ದಾರಿ ಹಿಡಿದಿರೋದಕ್ಕೆ ಈ ಮಾಫಿಯಾ ಬೆಳೆಯುತ್ತಿದೆ. ಯುವಕರೇ ದೇಶದ ಸಂಪತ್ತು ಅಂತ ಹೆಸರಿಗೆ ಹೇಳದೇ ಈ ತರಹ ಅಕ್ರಮವಾಗಿ ನಡೆಯುತ್ತಿರುವ ಧಂದೆಗೆ ಕಡಿವಾಣ ಬೀಳಲೇಬೇಕು ಆವಾಗ ಯುವ ಸಂಪತ್ತು ತಪ್ಪು ದಾರಿಯನ್ನು ಬಿಟ್ಟು ದೇಶದ ಸತ್ಪ್ರಜೆಯಾಗುವುದಕ್ಕೆ ಶ್ರಮಿಸುತ್ತಾನೆ. ಸರ್ಕಾರ ಅಥವಾ ಆಡಳಿತ ವರ್ಗವೂ ಕೂಡ ಸೋಷಿಯಲ್ ಮಿಡಿಯಾಗೆ ಸಂಬಂಧಿಸಿದ ಹಾಗೆ ಕಾಯ್ದೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹೊಸ ಹೊಸ ಸ್ಟಾರ್ಟಪ್ಗಳನ್ನು ಶುರು ಮಾಡಲು ಸಹಾಯ, ಸಹಕಾರ, ತರಬೇತಿಗಳನ್ನು ನೀಡಬೇಕು. ಸರ್ಕಾರವು ಪ್ರತಿಭೆ ನಿಮ್ಮದು ಸಹಕಾರ ನಮ್ಮದು ಎನ್ನುವ ಧ್ಯೇಯದೊಂದಿಗೆ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಲು ದಿಟ್ಟ ಹೆಜ್ಜೆಯನ್ನಿಡಬೇಕು.
ಜೊತೆಗೆ ಯುವಮಿತ್ರರು ತಮ್ಮ ಪ್ರತಿಭೆಯನ್ನು ಕೇವಲ ಸೋಷಿಯಲ್ ಮಿಡಿಯಾ ಟ್ರೋಲ್ ಪೇಜ್ಗಳಲ್ಲಿ ಮಾತ್ರ ತೋರಿಸದೇ ಹೊಸ ಹೊಸ ಸ್ಟಾರ್ಟಪ್ಗಳನ್ನು ಶುರುಮಾಡುವುದರೊಂದಿಗೆ ತೋರಿಸಬೇಕು. ಟ್ರೋಲ್ ಪೇಜ್ಗಳಲ್ಲಿ ಸುದ್ದಿ ಮಾಡೋದೇ ವೃತ್ತಿ ಅಂದುಕೊಂಡವರಿಗೆ ಖಂಡಿತವಾಗಿ ಕಡಿವಾಣ ಹಾಕಲೇಬೇಕು. ಪ್ರವೃತ್ತಿಯನ್ನಾಗಿ ಸೋಷಿಯಲ್ ಮಿಡಿಯಾ ಉಪಯೋಗಿಸುವ ಪ್ರಜ್ಞಾವಂತರು ಯಾರು ತಪ್ಪು ದಾರಿ ತುಳಿಯೋಕೆ ಸಾಧ್ಯವಿಲ್ಲ. ವೃತ್ತಿ ಪ್ರವೃತ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಯುವ ಮಿತ್ರರೇ ಸಮಾಜದಲ್ಲಿ ಮುಂದಿನ ಸಾಧಕರಾಗೋದು ಗ್ಯಾರಂಟಿ. ಅಂತವರನ್ನು ಉಳಿಸಿ ಮಾದರಿಯನ್ನಾಗಿಸುವ ಕಾರ್ಯವನ್ನು ಮಾಡುವ ಆಶಯದೊಂದಿಗೆ.
✍ ಸುರೇಶ್ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.