ಉಸಿರು ಬಿಗಿಹಿಡಿದುಕೊಳ್ಳಿ, ಹೇಳಬೇಕೆಂದಿರುವುದು ಕ್ರೂರ ಧರ್ಮಾಂಧರ ಸೆರೆಯಿಂದ ತಪ್ಪಿಸಿಕೊಂಡು ಉಳಿದವರ ಬಗ್ಗೆ. ಹೌದು ಈ ಬಾರಿ ಹೇಳಲಿರುವುದು ಓದಲೇ ಬೇಕಾದ ಪುಸ್ತಕದ ಬಗ್ಗೆ. ಮೈ ಮರೆತು ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಧಿಕ್ಕಾರ ಕೂಗುವ ಮುನ್ನ ಒಮ್ಮೆ ಈ ಪುಟ್ಟ ಪುಸ್ತಕ ಓದಿ. ಶುರುವಾತಿನಿಂದ ಅಂತ್ಯದವರೆಗೆ ಒಂದಕ್ಷರವನ್ನು ನಗುಮೊಗದಿಂದ ಓದಲಾರಿರಿ. ಸಿಎಎ ಧಿಕ್ಕರಿಸುವ ಮುನ್ನ ಸಿಂಧನೂರಿನ ಅಂಗಳದಲ್ಲಿ ಒಂದು ಬಾರಿ ಇಣುಕಿ ಬನ್ನಿ. ಕ್ರೂರತೆಯ ಮಡಿಲಲ್ಲಿ ಬದುಕಿದರೂ ಉದ್ದೇಶಪೂರ್ವಕವಾಗಿ ಕೆಲ ಹಿತಾಸಕ್ತಿಗಳಿಂದ ಇತಿಹಾಸದ ಪುಟಗಳಲ್ಲಿ ದಾಖಲಾಗದೇ ಉಳಿದ ಬಾಂಗ್ಲಾ ಹಿಂದೂಗಳ ನೋವಿನ ಕುರಿತು ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು (ವಿನಾಯಕ ಭಟ್ಟ, ರೋಹಿತ್ ಚಕ್ರತೀರ್ಥ, ಗೀರ್ವಾಣಿ, ವೃಷಾಂಕ ಭಟ್ ವಿರಚಿತ) ಪುಸ್ತಕ ಓದಲೇ ಬೇಕು.
ಚಂದದ ಮನೆ, ಮುದ್ದಾದ ಹೆಂಡತಿ, ಹರೆಯದ ಮಗಳು ಇರುವ ಸುಂದರ ಬದುಕು. ನಾಳೆ ಅನ್ನುವಷ್ಟರಲ್ಲಿ ಅಪರಿಚಿತರು ಪತ್ನಿಯ ಕೊಂದು, ಮಗಳ ಹೊತ್ತೊಯ್ದು, ನಿಮ್ಮನ್ನು ಮನೆಯಿಂದ ನೂಕಿದರೆ ಏನಾಗಬಹುದು? ನಿಮ್ಮ ರಕ್ಷಿಸಲು ಸರ್ಕಾರ, ಕಾನೂನು, ನೆರೆಹೊರೆ ಯಾವುದೂ ಇಲ್ಲ. ಇಡೀ ಊರಲ್ಲ, ಇಡೀ ದೇಶದಲ್ಲೇ ನೀವೊಬ್ಬ ಅನಾಥ. ಕೆಟ್ಟ ಕನಸು ಬಿದ್ದಿತೇನೋ ಅನ್ನುವಂಥ ಘಟನೆ ಅಲ್ಲಿಯ ಎಲ್ಲಾ ಹಿಂದೂಗಳ ಮನೆಗಳಲ್ಲಿ ನಡೆದಿತ್ತು. ಕೇಳಲು ಎಷ್ಟು ಕ್ರೂರವಾಗಿದೆ. ಮನೆಯ ಮಾಳಿಗೆ ಮೇಲೆ ಪೇರಿಸಿದ ಕತ್ತರಿಸಿದ ಕಾಲುಗಳು, ಕಣ್ಣೆದುರೇ ತುಂಡರಿಸಿದ ಮನೆಮಗಳ ಸ್ತನಗಳು, ಗರ್ಭವ ಸೀಳಿ ಬಿಸುಡುವ ಗರ್ಭಿಣಿಯರ ಶಿಶುಗಳು ಹೀಗೆ ಇಷ್ಟು ಕ್ರೌರ್ಯವನ್ನು ಯಾವ ಚಲನಚಿತ್ರವೂ ತೋರಲಾರದು.
ನಮ್ಮ ಮನೆಯಂಗಳದ ಬದುವಿನಲ್ಲಿ ಬೆಳೆದವರು ಏನು ತಾನೇ ಮಾಡಿಯಾರು, ನಾವು ಸಿರಿವಂತರು ಏನು ತಾನೇ ಮಾಡಿಯಾರು ಎಂಬ ಭಾವನೆಯಲ್ಲಿ ಬದುಕಿದ ಕಾಶ್ಮೀರಿ ಪಂಡಿತರಂತೆಯೇ ಬಾಂಗ್ಲಾ ಹಿಂದೂಗಳು ಯಾವುದೋ ಒಂದು ಧೈರ್ಯದಿಂದ ಅದೇ ತಮ್ಮ ನೆಲ ಎಂದು ಅಲ್ಲಿಯೇ ಉಳಿಯುವ ಮನಸ್ಸು ಮಾಡಿದರು. ಸರ್ಕಾರಿ ದಾಖಲೆಗಳಲ್ಲಿ 1971ರ ಮಾರ್ಚ್ 26ರಂದು ಎಲ್ಲವೂ ಆಪರೇಷನ್ ಸರ್ಚ್ಲೈಟ್ ಹೆಸರಿನಲ್ಲಿ ಆರಂಭವಾಯಿತು ಎನ್ನುತ್ತದೆ. ಪುಸ್ತಕ ಹೇಳುವಂತೆ ಬಾಂಗ್ಲಾದ ಸೈನ್ಯ ಹಾಗೂ ಜಮಾತೆ ಇಸ್ಲಾಮಿ ಸಂಘಟನೆ ಸೇರಿ ಒಂಬತ್ತು ತಿಂಗಳ ಈ ಭೀಕರ ಕೃತ್ಯದಲ್ಲಿ ಮೂವತ್ತು ಲಕ್ಷಕ್ಕೂ ಮೀರಿ ಹಿಂದೂ ಧರ್ಮೀಯರ ಕೊಂದರು. ನಾಲ್ಕು ಲಕ್ಷಕ್ಕೂ ಹೆಚ್ಚಿನ ಹಿಂದೂ ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಮಾತುಗಳಲ್ಲಿ ಮತ್ತು ಪ್ರಕಟಣೆಗಳಲ್ಲಿ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ ನಡೆಯುತ್ತಿತ್ತು. ಅವರ ಬದುಕು ನರಕವಾದಾಗ ಸರ್ಕಾರ ಮತ್ತು ಅದರ ಅಂಗಗಳು ಧರ್ಮಾಂಧರ ಬೆನ್ನಿಗೆ ನಿಂತಿದ್ದವು.
ಪುಸ್ತಕದ ವಿಚಾರಕ್ಕೆ ಬಂದರೆ ಹತ್ತೊಂಬತ್ತು ಅಧ್ಯಾಯಗಳಲ್ಲಿ ಕ್ರೌರ್ಯದ ಗರಿಷ್ಠ ಮಜಲನ್ನು ದಾಟಿದ ಬಾಂಗ್ಲಾ ಮುಸ್ಲಿಂರ ರೌದ್ರತೆಯಿದೆ. ದಮನಿತರು ಬಿಚ್ಚಿಟ್ಟಿರುವ ಬದುಕಿನ ವೃತ್ತಾಂತಗಳು ಓದುಗರ ಕಣ್ಣಲ್ಲಿ ನೀರು ತರಿಸಲಿಕ್ಕೇ ಸಾಕು. ಒಂದೊಮ್ಮೆಯಾದರೂ ಬಾಂಗ್ಲಾ ಹಿಂದೂಗಳ ಜಾಗದಲ್ಲಿ ನಿಂತು ಯೋಚಿಸಿ.
1947 – 31%
1961 – 19%
1974 – 14%
2002 – 9%
2020 – 3% – 4% ಹಾಗಾದರೆ ಎಲ್ಲಿ ಹೋದರು ಈ ಹಿಂದೂಗಳು?! ಮುಂಚಿನದು ಬಿಡಿ, 2002 ರಿಂದ ಈಚೆಗೆ ಶೇಕಡಾ ಮೂರಕ್ಕೆ ಬಂದಿದೆ ಎಂದರೆ ಈಗಲೂ ಆ ಶೋಷಣೆ ನಡೆಯುತ್ತಲೇ ಇದೆ. ಎಂದಿನಂತೆ ಅದರ ಉಸಿರನ್ನು ಒತ್ತಿ ಹಿಡಿಯಲಾಗಿದೆ.
ಪುಸ್ತಕದ ಕೆಲ ಮುಖ್ಯ ಸಾಲುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
🔹 ಅದೊಂದು ದಿನ ನಮಗೆಲ್ಲಾ ಊಟ ಬಡಿಸುತ್ತಿದ್ದ ನಮ್ಮ ಸೊಸೆ ಕರುಣಾಗೆ ತಮ್ಮ ಜೊತೆ ಹೊರಡಲು ಹೇಳಿದರು. ನಾವೆಲ್ಲ ವಿರೋಧಿಸಿದಾಗ ಎಲ್ಲರನ್ನೂ ಕಟ್ಟಿ ಹಾಕಿ ನನ್ನ ಸೊಸೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋದರು. ಸಣ್ಣ ಚೀರಾಟಕ್ಕೂ ಅವಕಾಶವಿಲ್ಲದಂತೆ ಅವಳ ಬಾಯಿಗೆ ಬಟ್ಟೆ ತುರುಕಿ ನಮ್ಮೆದುರೇ ಅಪಹರಿಸಿ ಬಿಟ್ಟರು.
🔹 1971 ರ ಮೇ ತಿಂಗಳ 20 ರಂದು ಭಾರತದ ಕಡೆ ಹೊರಟಿದ್ದ ಹಿಂದೂಗಳ ಮೇಲೆ ಬೆಳಗ್ಗೆ ಹತ್ತು ಗಂಟೆಗೆ ಶುರುವಾದ ಫೈರಿಂಗ್ ಕೊನೆಯಾದದ್ದು ಮಧ್ಯಾನ್ಹ ಮೂರು ಗಂಟೆಗೆ. ಬಿದ್ದ ಹೆಣಗಳು 10000. ಬಾಂಗ್ಲಾದ ಚುಕ್ನಗರದಲ್ಲಿ ಕೇವಲ ಅರ್ಧ ದಿನದಲ್ಲಿ, ಐದೇ ಐದು ತಾಸಿನಲ್ಲಿ ಹೆಣವಾಗಿ ಮಲಗಿದ ಹಿಂದೂಗಳ ಸಂಖ್ಯೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹತ್ತು ಪಟ್ಟು. ಆ ದುರುಳ ಸೈನಿಕರಿಗೆ ನೆಲಕ್ಕುರುಳಿದ ಶವಗಳ ತಳ್ಳುಗಾಡಿಗಳಲ್ಲಿ ಪಕ್ಕದ ನದಿಗೆ ಎಸೆಯಲು ಎರಡು ದಿನ ಹಿಡಿದವು.
🔹 ನಮ್ಮನ್ನು ಅಕ್ರಮ ವಲಸಿಗರು ಎಂದು ಜನ ಕರೆದಾಗ ನೋವಾಗುತ್ತದೆ. ನಾವು ಇಲ್ಲಿಗೆ ಬರದೇ ಇನ್ನೆಲ್ಲಿ ಹೋಗಬೇಕು? ನಾವು ಪೂಜಿಸುವುದೂ ನೀವು ಪೂಜಿಸುವ ಕೃಷ್ಣನನ್ನೇ, ನಾವು ನಂಬುವುದೂ ನೀವು ನಂಬುವ ರಾಮನನ್ನೇ ಅಂದ ಮೇಲೆ ನಾವು ಹೇಗೆ ಹೊರಗಿನವರಾಗುತ್ತೇವೆ?
🔹 1970 ರ ಸುಮಾರಿಗೆ ಭಾರತ ಪ್ರವೇಶಿಸಲು ಪ್ರಾರಂಭಿಸಿದ ಬಾಂಗ್ಲಾದೇಶಿ ಹಿಂದುಗಳಿಗೆ ವಸತಿ ಕಲ್ಪಿಸಿ ಪೌರತ್ವ ನೀಡಲು ಇಂದಿರಾ ಗಾಂಧಿ ನಿಶ್ಚಯಿಸಿದ್ದರು. ಆಕೆಯನ್ನು ಇವರುಗಳು ಕರೆಯುತ್ತಿದ್ದದ್ದು ಅಮ್ಮಾ ಎಂದು. ಇಂದಿರಾ ಗಾಂಧಿ ಹತ್ಯೆಯಾದಾಗ ನಿರಾಶ್ರಿತ ಶಿಬಿರದ ಜನರು ಆಕೆಯ ತಿಥಿ ಮಾಡಿ ಗೌರವ ಸಲ್ಲಿಸಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ತಿರುಗಿ ನಿಂತಿದೆ.
🔹 ಬಶೀರ್ಹಾಟ್ ಠಾಣೆಯಲ್ಲಿ ಪೋಲೀಸರು ಓಡಿ ಬಂದಿದ್ದವರನ್ನೆಲ್ಲ ಕೂರಿಸಿ ಅವರಿಗೆ ಗುಲಾಬ್ ಜಾಮೂನು ಹಂಚಿದರು. ಅದು ಅವರು ವಾರಗಳಲ್ಲಿ ನೋಡುತ್ತಿರುವ ಮೊದಲ ಸಿಹಿ. ಮನೆ ಬಿಟ್ಟು ಹೊರಟ ಹಲವರಿಗೆ ಮೊದಲ ತುತ್ತು ಕೂಡ. ಗುರುಚಂದ್ ಪ್ರಕಾರ, ಅಂಥ ಸಿಹಿಯಾದ ಜಾಮೂನು ಹಿಂದೆಂದೂ ಅವರಿಗೆ ಸಿಕ್ಕಿರಲಿಲ್ಲ. ಮುಂದೆಂದೂ ಅವರು ತಿನ್ನಲು ಇಲ್ಲ!
ಇವು ಕೆಲ ಸಾಲುಗಳಷ್ಟೆ. ಕಣ್ಣಾಲಿಗಳಲ್ಲಿ ನೀರು ತರುವ ಅವರ ಬದುಕು ಇನ್ನಾದರೂ ಕೊಂಚ ಸರಿಯಾಗಲಿ. ಅವರು ತಮ್ಮ ಸ್ವಂತ ನೆಲದಲ್ಲಿಯೇ ಅನುಭವಿಸಿದ ನೋವು ಕಷ್ಟ ಮತ್ತೆ ಯಾರಿಗೂ ಬರದೇ ಇರಲಿ. ಎಪ್ಪತ್ತರ ದಶಕದಲ್ಲಿ ಸೆಕ್ಯುಲರ್ ಮಾಧ್ಯಮಗಳದ್ದು ಇದೇ ಕಥೆ “ಪೂರ್ವ ಪಾಕಿಸ್ತಾನದಲ್ಲಿ ಹಿಂದೂ ಮುಸ್ಲಿಂರಿಬ್ಬರೂ ಬಂಗಾಳಿ ಮಾತನಾಡುತ್ತಿದ್ದರು. ಆದರೆ ಪಶ್ಚಿಮ ಪಾಕಿಸ್ತಾನ ಈ ಭಾಗದಲ್ಲಿ ಉರ್ದುವನ್ನು ಆಡಳಿತ ಭಾಷೆ ಎಂದು ಘೋಷಿಸಿದಾಗ ಇಲ್ಲಿನ ಹಿಂದೂ ಮುಸ್ಲಿಂ ಸಮುದಾಯದವರು ಅದನ್ನು ವಿರೋಧಿಸಿದರು. ಆಗ ಪಶ್ಚಿಮದ ಮಂದಿ ಈ ಜನರ ಮೇಲೆ ದೌರ್ಜನ್ಯ ಎಸಗಿದರು. ಪೂರ್ವದ ಹಿಂದೂ ಮುಸ್ಲಿಮರು ಹತ್ಯಾಕಾಂಡದ ಬಲಿಪಶುಗಳಾದರು. ಇದು ನಮ್ಮ ಮಾಧ್ಯಮಗಳು ಬಾಂಗ್ಲಾ ಹಿಂದೂಗಳ ಮೇಲಾದ ದೌರ್ಜನ್ಯಕ್ಕೆ ನೀಡುವ ಒಂದು ಸಾಲಿನ ವಿವರಣೆ. ವಿಶ್ವದ ಎಲ್ಲೋ ಮೂಲ ಭಾರತೀಯರ ಮೇಲೆ ದೌರ್ಜನ್ಯ ನಡೆಸಿದಾಗ ಇಡೀ ದೇಶವನ್ನು ಎಚ್ಚರಿಸುವ ಬದಲು ಇಂತಹ ಒಕ್ಕಣೆಯ ಬರೆದು ಏನೂ ಆಗಿಲ್ಲವೇನೋ ಎಂಬಂತೆ ಪ್ರಕರಣಗಳ ಮುಚ್ಚಿ ಹಾಕಿದ ಮಾಧ್ಯಮಗಳ ಕುರಿತು ಅಸಹ್ಯ ಅನ್ನಿಸದೇ ಇರದು. ಜಾಗೃತಿಯನ್ನು ಮೂಡಿಸುವ ವೃತ್ತಿ ಧರ್ಮ ಮರೆತ ಇವರು ಇನ್ನೆಂತಹ ಸಮಾಜದ ಸ್ಥಂಭವಾದಾರು?
ಪ್ರಸ್ತುತ ಪುಸ್ತಕದ ಪ್ರಕಾಶಕರು ಹೇಳುತ್ತಾರೆ ಎಲ್ಲ ಪ್ರಕರಣಗಳ ಮೂಲ ಇಸ್ಲಾಂ ಮತೀಯತೆ. ಆದ್ದರಿಂದ ಓದುವಾಗ ಏಕತಾನತೆ ಕಾಡಬಹುದು ಎಂದು. ಆದರೆ ರಕ್ತ ಸಂಬಂಧಿಗಳ ನೋವಿನಲ್ಲಿ ಎಲ್ಲಿಯ ಏಕತಾನತೆ? ಅವರ ಕಷ್ಟಗಳಿಗೆ ನಾವು ಆಗಲಿಲ್ಲ ಎಂಬ ನೋವಷ್ಟೆ ನಾವು ಮಣ್ಣಾಗುವ ತನಕ ಕಾಡದೇ ಇರದು. ಅಲ್ಲದೆ ಇಲ್ಲಿಯೂ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಮತಾಂತರಿಗಳು ಇದ್ದಾರೆ. ಸಿಂಧನೂರಿನಲ್ಲಿ ಒಟ್ಟು ಐದು ಪುನರ್ವಸತಿ ಕೇಂದ್ರಗಳಿದ್ದು ಅದರಲ್ಲಿ ನಾಲ್ಕು ಬಾಂಗ್ಲಾ ಹಿಂದೂಗಳಿಗೆ ಸೇರಿದ್ದು. ಇನ್ನೊಂದು ಮಯನ್ಮಾರ್ನಿಂದ ಬಂದ ತಮಿಳು ಭಾಷಿಕರದ್ದು. ಈ ತಮಿಳರ ಕೇಂದ್ರದಲ್ಲಿ ಯಾರೂ ಹಿಂದುವಾಗಿ ಉಳಿದಿಲ್ಲ. ಎಲ್ಲರೂ ಮತಾಂತರಗೊಂಡ ಕ್ರಿಶ್ಚಿಯನ್ನರು. ಆ ಕ್ಯಾಂಪಿನಲ್ಲಿ ಒಂದು ಚರ್ಚ್ ಸ್ಥಾಪನೆಯಾಗಿ ಮತಾಂತರ ಆರಂಭಿಸಿತು. ಅದರ ಫಾದರ್ ಆರೋಗ್ಯ ಸ್ವಾಮಿ ಬಾಂಗ್ಲಾ ಹಿಂದೂಗಳ ಮತಾಂತರ ಮಾಡುವ ವಿಫಲ ಯತ್ನ ನಡೆಸಿದ. ಹಿಂದೂ ಕ್ಯಾಂಪಿಗೆ ಹೋಗುವ ನೀರನ್ನು ತಡೆಯುವ ನೀಚ ಕೆಲಸವನ್ನು ಮಾಡಿದ. ಸ್ಥಳೀಯ ಪೋಲೀಸರಿಂದ ನೆರವು ಸಿಗುತ್ತಿಲ್ಲ ಎಂದು ಅವರ ನೋವು. ಅದೇ ರೀತಿ ಕೆಲವು ಸ್ಥಳೀಯ ಮುಸ್ಲಿಂ ಯುವಕರು ಹಿಂದೂ ಕ್ಯಾಂಪ್ ಬಳಿ ಬೈಕಿನಲ್ಲಿ ಓಡಾಡುವುದು, ಗುಂಪು ಗುಂಪಾಗಿ ಮಾತನಾಡುವುದನ್ನು ಮಾಡುತ್ತಿರುತ್ತಾರೆ.
ಕೆಲ ಅಕ್ಷರಸ್ಥ ದಡ್ಡರಿಗೆ NRC, CAA ಅನ್ನುವುದು ಒಂದು ಸ್ಕ್ಯಾಮ್. ಬಹುಶಃ ಅಂತಹ ಮೂರ್ಖರಿಗೆ ಈ ಪುಸ್ತಕ ನೀಡಲೇಬೇಕು. ಬಂದ ನಿರಾಶ್ರಿತರು ಕೇಳುತ್ತಿರುವುದು ಹಿಡಿ ಜಾಗವಷ್ಟೆ. ಸಿಎಎ ಗಲಭೆಕೋರರು ಈ ಪರಿ ಹಾನಿ ಮಾಡಲು ಸಾಧ್ಯವಾಗಿದ್ದು ಕೇವಲ ಮಾಹಿತಿ ಕೊರತೆಯಿಂದ. ಭಾರತೀಯ ಮೂಲ ಮುಸ್ಲಿಂರಲ್ಲಿ ಅವರು ಅನಗತ್ಯ ಭಯ ಹುಟ್ಟಿಸಲು ಯಶಸ್ವಿಯಾದರು. ಸಿಎಎ ಯಾವ ರೀತಿಯಲ್ಲೂ ಈಗಿನ ಯಾವ ಭಾರತೀಯ ನಾಗರೀಕನ ಕುರಿತು ಇಲ್ಲದಿದ್ದರೂ ತಪ್ಪು ಕಲ್ಪನೆ ಮೂಡಿಸಿದರು. ಎಂತಹ ಸುಳ್ಳಿನ ಕಾರ್ಮೋಡವೇ ಆಗಿರಲಿ ಸತ್ಯದ ಪ್ರಕಾಶಮಾನ ಸೂರ್ಯನ ಎಲ್ಲಿಯವರೆಗೆ ತಡೆದೀತು? ಭಾರತ ಅರಿತಿದೆ. ಇನ್ನು ಜಗತ್ತಿನ ಯಾವ ಮೂಲೆಯಲ್ಲಿ ತಡಕಿದರೂ ಈ ನೊಂದ ಪ್ರಜೆಗಳಿಗೆ ನೆರವಾಗಲು ಯಾರೂ ಬರಲಿಲ್ಲ, ಬರುವುದೂ ಇಲ್ಲ. ಅವರನ್ನು ಕಾಯುವುದು ಭಾರತೀಯತೆಯ ಜವಾಬ್ದಾರಿ ಕೂಡ. ಅದೇ ಜನ ಹೇಳುವಂತೆ ಕಡಿವ ಶಕ್ತಿಗಳು ನೂರು ಬರಲಿ, ಕೈ ಹಿಡಿವ ಶಕ್ತಿಯೊಂದು ಇದ್ದೇ ಇರುತ್ತದೆ. ಭಾರತೀಯ ಜಗತ್ತಿನ ಯಾವ ನೋವಿನಿಂದ ಕರೆಗೊಟ್ಟರೂ ಕಾಯ್ವ ದೇಶ ಭಾರತ ಎನ್ನಲು ಹೆಮ್ಮೆಯಾಗುತ್ತದೆ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.