ಅಪ್ಪಟ ರಾಷ್ಟ್ರವಾದಿಯಂತೆ, ಹಿಂದುತ್ವದ ರಕ್ಷಕನಂತೆ ಫೋಸ್ ನೀಡುತ್ತಿದ್ದ ಶಿವಸೇನೆ ರಾಜಕೀಯ ಲಾಭಕ್ಕಾಗಿ ಈಗ ತನ್ನ ವರಸೆಯನ್ನೇ ಬದಲಾಯಿಸಿಕೊಂಡಿದೆ. ಕಾಶ್ಮೀರದ ವಿಷಯ ಪ್ರಸ್ತಾಪವಾದಾಗಲೆಲ್ಲಾ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದ, ಕಾಶ್ಮೀರ ಭಾರತದ ಭಾಗ ಎಂಬುದನ್ನು ಕೂಗಿ ಕೂಗಿ ಹೇಳುತ್ತಿದ್ದ ಶೀವಸೇನೆ ಈಗ ಪೊಳ್ಳು ಸೆಕ್ಯೂಲರ್ ವಾದಿಯಾಗುವತ್ತ ದಾಪುಗಾಲಿಡುತ್ತಿದೆ. ತನ್ನದೇ ಆಡಳಿತದಲ್ಲಿ ‘ಕಾಶ್ಮೀರವನ್ನು ಮುಕ್ತಗೊಳಿಸಿ’ ಎಂದು ಪೋಸ್ಟರ್ ಪ್ರದರ್ಶಿಸಲಾಗುತ್ತಿದ್ದರೂ ಅದರ ಪರವಾಗಿ ವಾಕಲತ್ತು ವಹಿಸುವ ಮಟ್ಟಿಗೆ ಆ ಪಕ್ಷ ನೈತಿಕ ದಿವಾಳಿತನವನ್ನು ಪ್ರದರ್ಶಿಸುತ್ತಿದೆ. ಕೇವಲ ರಾಜಕೀಯಕ್ಕಾಗಿ ಆ ಪಕ್ಷ ತನ್ನ ಸಿದ್ಧಾಂತದೊಂದಿಗೆ ರಾಜಿಯನ್ನು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ.
ವಿವಾದದ ಗೂಡಾಗಿರುವ ಜೆಎನ್ಯುನಲ್ಲಿ ಇತ್ತೀಚಿಗೆ ನಡೆದ ದೊಂಬಿ, ಗಲಾಟೆಗಳನ್ನು ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 26/11 ಮುಂಬಯಿ ದಾಳಿಗೆ ಹೋಲಿಸಿದ್ದರು. 166 ಮಂದಿಯ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೂ, ಜೆಎನ್ಯುನಲ್ಲಿ ನಡೆದ ದೊಂಬಿಗೂ ಎಲ್ಲಿಯ ಸಂಬಂಧ? ಜೆಎನ್ಯು ವಿದ್ಯಾರ್ಥಿ ಸಂಘರ್ಷ ಠಾಕ್ರೆ ಅವರಿಗೆ ಭಯೋತ್ಪಾದಕ ದಾಳಿಯ ನೆನಪು ತರಿಸಿದ್ದು ದುರಾದೃಷ್ಟವೇ ಸರಿ.
ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವಣ ಘರ್ಷಣೆಯನ್ನು ಶಿವಸೇನೆ ಜಲಿಯನ್ ವಾಲಾಭಾಗ್ಗೆ ಹೋಲಿಸಿತ್ತು. ಪ್ರತಿಭಟನೆಯ ಹೆಸರಲ್ಲಿ ದೊಂಬಿ ಎಬ್ಬಿಸಿದ ಇಲ್ಲಿನ ವಿದ್ಯಾರ್ಥಿಗಳು ಶಿವಸೇನೆಗೆ ಸ್ವಾತಂತ್ರ್ಯ ಹೋರಾಟಗಾರರಂತೆ ಕಂಡರು, ದೊಂಬಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ ಪೊಲೀಸರು ಬ್ರಿಟಿಷರಂತೆ ಕಂಡರು. ಜೆಎನ್ಯು ಘಟನೆಯನ್ನು ವಿರೋಧಿಸಿ ಮುಂಬಯಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ್’ ಎಂಬ ಫಲಕವನ್ನು ಪ್ರದರ್ಶಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು, ಕಾಶ್ಮೀರವನ್ನು ನಿರ್ಬಂಧಗಳಿಂದ ಮುಕ್ತಗೊಳಿಸಿ ಎಂದಷ್ಟೇ ಪೋಸ್ಟರ್ನಲ್ಲಿ ಹೇಳಲಾಗಿದೆ ಎಂಬ ಸಮರ್ಥನೆಗಳನ್ನು ನೀಡಿದ್ದರು. ಶಿವಸೇನೆಯ ಇಂತಹ ಹೇಳಿಕೆಗಳು ಆ ಪಕ್ಷ ತನ್ನ ಸಿದ್ಧಾಂತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಶಿವಸೇನೆಗೆ ಈಗ ತನ್ನ ಸಿದ್ಧಾಂತ ಬೇಡವಾಗಿದೆ. ತಾನು ತನ್ನ ಸಿದ್ಧಾಂತದ ಕಾರಣದಿಂದಲೇ ಮತಗಳನ್ನು ಪಡೆದುಕೊಂಡಿದ್ದು ಎಂಬುದನ್ನು ಆ ಪಕ್ಷ ಮರೆತು ಬಿಟ್ಟಿದೆ. ಪ್ರಖರ ರಾಷ್ಟ್ರವಾದಿಯಾಗಿದ್ದ, ಹಿಂದುತ್ವದ ಕಟು ಪ್ರತಿಪಾದಕನಾಗಿದ್ದ ಬಾಳ ಠಾಕ್ರೆ ಅವರ ಸಿದ್ಧಾಂತವನ್ನೇ ಆ ಪಕ್ಷ ಇಂದು ಮೂಲೆಗುಂಪು ಮಾಡಿದೆ. ಶಿವಸೇನೆಯ ಸಿದ್ಧಾಂತವನ್ನು ನೆಚ್ಚಿ ಆ ಪಕ್ಷಕ್ಕೆ ಮತ ಹಾಕಿದವರು ಇಂದು ತಲೆ ಚಚ್ಚಿಕೊಳ್ಳುವಂತೆ ಈ ಪಕ್ಷ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗಿನ ಮೈತ್ರಿ ಆ ಪಕ್ಷದ ದಿಕ್ಕನ್ನೇ ಬದಲಾಯಿಸಿದಂತಿದೆ.
ಎಡಪಂಥೀಯತೆಯತ್ತ ಸಾಗುತ್ತಿರುವ ಕಾಂಗ್ರೆಸ್ ಪಕ್ಷ ಈಗಾಗಲೇ ಜನರ ಮನಸ್ಸಿನಿಂದ ಸಾಕಷ್ಟು ದೂರ ಸಾಗಿದೆ. ಸಿಪಿಐ-ಸಿಪಿಎಂನಂತಹ ಕಮ್ಯೂನಿಸ್ಟ್ ನಾಯಕರುಗಳಿಗೂ ಕಾಂಗ್ರೆಸ್ ನಾಯಕರುಗಳಿಗೂ ಇಂದು ಒಂಚೂರು ವ್ಯತ್ಯಾಸವಿಲ್ಲ. ರಾಷ್ಟ್ರದ ಹಿತಾಸಕ್ತಿಯನ್ನು ಕಡೆಗಣಿಸಿ ಅದು ಎಡಪಂಥೀಯ ವಿಚಾರಧಾರೆಯತ್ತ ತನ್ನನ್ನು ತಾನು ಕೊಂಡೊಯ್ಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಲವು ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿಲುವುಗಳೇ ಇದಕ್ಕೆ ಸಾಕ್ಷಿ.
ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ವಿರೋಧಿಸುವುದು, ಪ್ರಾಚೀನ ಜ್ಞಾನದ ಬಗ್ಗೆ ಕುಹಕವಾಡವುದು, ಬಹುಸಂಖ್ಯಾತರ ನಂಬಿಕೆಗಳನ್ನು ಅವಮಾನಿಸುವುದು, ಧರ್ಮಗ್ರಂಥಗಳಿಗೆ ಅಪಚಾರ ಮಾಡುವುದು ಎಡಪಂಥೀಯರ ಮೂಲ ಸಿದ್ಧಾಂತ. ಇದೇ ಸಿದ್ಧಾಂತವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಮಾತ್ರವಲ್ಲ ದೇಶದಲ್ಲಿರುವ ಸಾಕಷ್ಟು ಮುಂಚೂಣಿ ಪಕ್ಷಗಳು ಇಂದು ಎಡಪಂಥೀಯ ಸಿದ್ಧಾಂತವನ್ನೇ ಅನುಸರಿಸುತ್ತಿವೆ. ಭಾಳ ಠಾಕ್ರೆ ಅವಧಿಯಲ್ಲಿ ಶಿವಸೇನೆ ಯಾವ ಪರಿಸ್ಥಿತಿಯಲ್ಲೂ ರಾಷ್ಟ್ರವಾದಿ ಚಿಂತನೆಯೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ಆದರೆ ಇಂದು ಕೇವಲ ಮುಖ್ಯಮಂತ್ರಿ ಹುದ್ದೆಗಾಗಿ ಶಿವಸೇನೆ ತನ್ನ ಮೂಲ ಸಿದ್ಧಾಂತವನ್ನು ಮರೆತು ಕಾಂಗ್ರೆಸ್ ಪಕ್ಷವನ್ನು ಓಲೈಸಲು ಅದರ ನಿಲುವುಗಳಿಗೆ ತಲೆ ಬಾಗುತ್ತಿದೆ.
ಶಿವಸೇನೆ ತನ್ನ ನಿಲುವುಗಳ ಮೂಲಕ ಜನಾದೇಶಕ್ಕೆ ಅವಮಾನ ಮಾಡುತ್ತಿದೆ. ತನ್ನ ಮೇಲೆ ನಂಬಿಕೆ ಇಟ್ಟ ಜನರ ಮನಸ್ಸಿಗೆ ಅದು ಘಾಸಿ ಉಂಟು ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ತನ್ನ ಸಿದ್ಧಾಂತವನ್ನು ಅದು ಮರೆಯುತ್ತಿದೆ. ಭವಿಷ್ಯದಲ್ಲಿ ಇದು ಆ ಪಕ್ಷಕ್ಕೆ ಮುಳುವಾಗುವ ಎಲ್ಲಾ ಸಾಧ್ಯತೆಗಳೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.