ಲಕ್ನೋ: ಫೆಬ್ರವರಿ 5 ರಿಂದ 9ರ ವರೆಗೆ ಲಕ್ನೋದಲ್ಲಿ ನಡೆಯಲಿರುವ ‘ಡಿಫೆನ್ಸ್ ಎಕ್ಸ್ಪೋ 2020’ ಭಾರತದ ಇದುವರೆಗಿನ ಅತೀದೊಡ್ಡ ಎಕ್ಸಿಬಿಷನ್ ಆಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ರದರ್ಶಕರ ಭಾಗವಹಿಸುವಿಕೆ, ಪ್ರದರ್ಶನ ಮತ್ತು ಗಳಿಸಬೇಕಾದ ಆದಾಯದ ದೃಷ್ಟಿಯಿಂದ ಇದು ದೇಶದ ಅತಿದೊಡ್ಡ ರಕ್ಷಣಾ ಎಕ್ಸಿಬಿಷನ್ ಆಗಲಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ.
2018 ರಲ್ಲಿ ಚೆನ್ನೈನಲ್ಲಿ ಈ ಹಿಂದೆ ನಡೆದ ಡಿಫೆನ್ಸ್ ಎಕ್ಸ್ಪೋ 80 ಎಕರೆ ಪ್ರದೇಶದಲ್ಲಿ ನಡೆದಿದ್ದರೆ, ಲಕ್ನೋದಲ್ಲಿನ ಡಿಫೆನ್ಸ್ ಎಕ್ಸ್ಪೋ ಅನ್ನು 200 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗುತ್ತಿದೆ. 150 ವಿದೇಶಿ ಕಂಪನಿಗಳು ಸೇರಿದಂತೆ ಸುಮಾರು 925 ಪ್ರದರ್ಶಕರು ಭಾಗವಹಿಸಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.
ಇದರಲ್ಲಿ 25 ದೇಶಗಳ ರಕ್ಷಣಾ ಮಂತ್ರಿಗಳು ಮತ್ತು ಸೇನಾ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ. 135 ದೇಶಗಳಿಗೆ ಆಹ್ವಾನವನ್ನು ವಿಸ್ತರಿಸಲಾಗಿದೆ ಮತ್ತು 70 ರಾಷ್ಟ್ರಗಳು ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ 247 ಎಂಎಸ್ಎಂಇ ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಚಂದ್ರಕಾಂತ್ ಭಾರತಿ ತಿಳಿಸಿದ್ದಾರೆ.
ಅಮೆರಿಕಾ, ರಷ್ಯಾ, ದಕ್ಷಿಣ ಕೊರಿಯಾ, ಯುಕೆ, ಫ್ರಾನ್ಸ್, ಸ್ವೀಡನ್ ಮತ್ತು ಜೆಕ್ ಗಣರಾಜ್ಯದ ಉನ್ನತ ರಕ್ಷಣಾ ತಯಾರಕರು ಡಿಫೆನ್ಸ್ ಎಕ್ಸ್ಪೋದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ರಕ್ಷಣಾ ಕಾರಿಡಾರ್ನಲ್ಲಿ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೂಡಿಕೆಗೆ ರಕ್ಷಣಾ ಎಕ್ಸ್ಪೋ ದಾರಿ ಮಾಡಿಕೊಡಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.