ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ನಂತರ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ನಿದ್ರೆಯಿಂದ ಎದ್ದಂತೆ ದೇಶದಾದ್ಯಂತ ಆಕ್ರಮಣಕಾರಿ ಹೋರಾಟಕ್ಕೆ ಮುಂದಾಯಿತು. ಆದರೆ ಪ್ರತಿಭಟನೆಯ ಹೆಸರಿನಲ್ಲಿ ನಡೆದ ದೊಂಬಿ, ಗಲಾಟೆ ಕಾಂಗ್ರೆಸ್ ಪಕ್ಷಕ್ಕೆ ತಿರುಮಂತ್ರವಾದವು, ಅದರ ದ್ವಂದ್ವ ನಿಲುವು, ಬೂಟಾಟಿಕೆಯ ರಾಜಕಾರಣ ಜನರ ಮುಂದೆ ಬಟಾಬಯಲಾಯಿತು. ಸಿಎಎ-ಎನ್ಆರ್ಸಿ ವಿರುದ್ಧ ದೇಶವ್ಯಾಪಿಯಾಗಿ ಗಲಭೆ ಎಬ್ಬಿಸಿದ ಕಾಂಗ್ರೆಸ್ ಇದೀಗ ಎನ್ಪಿಆರ್ ವಿರುದ್ಧ ಜನರನ್ನು ಎತ್ತಿಕಟ್ಟಲು ಮುಂದಾಗಿದೆ. ಸಿಎಎ ಪ್ರತಿಭಟನೆಯಲ್ಲಿ ನಡೆಸಿದಂತೆ ಎನ್ ಪಿ ಆರ್ ಬಗ್ಗೆಯೂ ಸುಳ್ಳು ವದಂತಿಗಳನ್ನು ಹಬ್ಬಿಸಲು, ಜನರನ್ನು ದಿಕ್ಕು ತಪ್ಪಿಸಲು ಅದು ಹವಣಿಸುತ್ತಿದೆ.
ಮೋದಿ ಸರ್ಕಾರ ಎನ್ಪಿಆರ್ ಪ್ರಾರಂಭಿಸಿದಾಗಿನಿಂದಲೂ, ಕಾಂಗ್ರೆಸ್ ಅದರ ವಿರುದ್ಧ ಕೆಟ್ಟ ಪ್ರಚಾರವನ್ನು ಪ್ರಾರಂಭಿಸಿತು. ಕಾಂಗ್ರೆಸ್ ನೇತೃತ್ವದ ಯುಪಿಎ 2010 ರಲ್ಲಿ ಎನ್ಪಿಆರ್ ಅನ್ನು ಪ್ರಾರಂಭಿಸಿತ್ತು ಎಂಬುದನ್ನು ಮರೆತು ಅದರ ವಿರುದ್ಧ ಸುಳ್ಳು ವದಂತಿಗಳನ್ನು ಹಬ್ಬಿಸಲು ಆರಂಭಿಸಿತು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಇದನ್ನು ನವೀಕರಿಸುತ್ತಿದೆ ಎಂಬುದು ಅದರ ಆರೋಪ. ವಾಸ್ತವವಾಗಿ, ಎನ್ಪಿಆರ್ ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯವಾಗಿತ್ತು, ಆಗಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಅದರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿ, “ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ನಾವು 120 ಕೋಟಿ ಜನರನ್ನು ಗುರುತಿಸಲು, ಎಣಿಸಲು, ದಾಖಲಿಸಲು ಮತ್ತು ಅಂತಿಮವಾಗಿ ಗುರುತಿನ ಚೀಟಿ ನೀಡಲು ಪ್ರಾರಂಭಿಸಿದ್ದೇವೆ” ಎಂದು ಹೇಳಿದ್ದರು.
ಯುಪಿಎ ಸರ್ಕಾರವು ಎನ್ಪಿಆರ್ಗೆ ಸ್ಥಿರವಾಗಿ ಅಂಟಿಕೊಂಡಿತ್ತು ಮತ್ತು 2012ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ತಮ್ಮನ್ನು ನೋಂದಾಯಿಸಿಕೊಂಡಿದ್ದರು. ಅದರ ನಂತರ, 2013 ರಲ್ಲಿ ಯುಪಿಎ ಸರ್ಕಾರವು ಉಪಕ್ರಮವನ್ನು ಉತ್ತೇಜಿಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಗೀತೆಯನ್ನೂ ರಚನೆ ಮಾಡಿತ್ತು. ಆದರೆ ಜನರಿಂದ ತಿರಸ್ಕರಿಸಲ್ಪಟ್ಟ ಬಳಿಕ, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಕೇವಲ ಆರು ವರ್ಷಗಳ ಹಿಂದೆ ತಾವು ತೆಗೆದುಕೊಂಡ ನಿಲುವನ್ನು ಮರೆತು ಬಿಟ್ಟಿದೆ.
ಇದಲ್ಲದೆ, ಎನ್ಪಿಆರ್ ಅನ್ನು ಎನ್ಆರ್ಸಿಗೆ ಬಿಜೆಪಿ ಬಳಕೆ ಮಾಡುತ್ತಿದೆ ಎಂಬ ವಾದವೂ ಸಂಪೂರ್ಣ ಸುಳ್ಳು. 2018-19ರ ವಾರ್ಷಿಕ ಗೃಹ ಸಚಿವಾಲಯದ ವರದಿಯು ‘ಎನ್ಪಿಆರ್ ಎನ್ಆರ್ಸಿಗೆ ಮೊದಲ ಹೆಜ್ಜೆ’ ಎಂದು ಹೇಳುತ್ತದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಮೂಲಕ ಟ್ವೀಟ್ ಮಾಡಿದೆ. ಈ ಸಾಲು ವಾಸ್ತವದಲ್ಲಿ ‘ಎನ್ಪಿಆರ್ ಎನ್ಆರ್ಐಸಿ ತಯಾರಿಸುವ ಮೊದಲ ಹೆಜ್ಜೆ’ ಎಂದು ಹೇಳಿದ್ದು, ಈ ಸಾಲನ್ನು 2011ರಲ್ಲಿನ ಗೃಹ ಸಚಿವಾಲಯದ ಯುಪಿಎ ಡಾಕ್ಯುಮೆಂಟ್ನಿಂದ ಪಡೆದುಕೊಳ್ಳಲಾಗಿದೆ. ಅಂದರೆ ಯುಪಿಎ ಯುಗದಲ್ಲಿ ಇದನ್ನು ಹೇಳಲಾಗಿತ್ತು. ಎನ್ಆರ್ಐಸಿಯನ್ನು ಎನ್ಪಿಆರ್ನ ಉಪ-ಗುಂಪಾಗಿ ನಿರ್ವಹಿಸುವುದು ಯುಪಿಎ ಸರ್ಕಾರದ ಅಧಿಕೃತ ನೀತಿಯಾಗಿದೆ. ಒಂದೋ ಕಾಂಗ್ರೆಸ್ ತನ್ನದೇ ಆದ ನಿಲುವನ್ನು ಮರೆತಿದೆ ಅಥವಾ ಅದು ರಾಷ್ಟ್ರವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂಬುದು ಇದರಿಂದ ಖಚಿತ.
ಎನ್ಪಿಆರ್ ನಡೆಸುವ ಮೂಲಕ ಮೋದಿ ಸರ್ಕಾರ ಎನ್ಆರ್ಐಸಿ (ಪ್ಯಾನ್-ಇಂಡಿಯಾ ಎನ್ಆರ್ಸಿ) ಯನ್ನು ತರಲು ಪ್ರಯತ್ನಿಸುತ್ತಿದೆ ಎಂಬ ಆರೋಪಕ್ಕೆ ವಿರುದ್ಧವಾಗಿ, ಡಿಸೆಂಬರ್ 16, 2014 ರಂದು ಪ್ರಶ್ನೆಗೆ ಉತ್ತರಿಸುವಾಗ ಆಗಿನ ಗೃಹ ವ್ಯವಹಾರಗಳ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧರಿ ಅವರು, ಭಾರತದ ರಿಜಿಸ್ಟ್ರಾರ್ ಜನರಲ್ ಅವರು ಎನ್ ಪಿ ಆರ್ ನಡೆಸುವಾಗ ನಾಗರಿಕರು ಮತ್ತು ನಾಗರಿಕರಲ್ಲದವರನ್ನು ಗುರುತಿಸುವಂತೆ ಹೇಳಿಲ್ಲ ಎಂದು ಹೇಳಿದ್ದರು.
ಸಿಎಎ ವಿಷಯದ ಬಗ್ಗೆ ಕಾಂಗ್ರೆಸ್ ನಿಲುವು ಕೂಡ ಬಹಿರಂಗವಾಗಿದೆ. ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು 2012 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು. ಇದರಲ್ಲಿ ಅವರು ಧಾರ್ಮಿಕ ಕಿರುಕುಳವನ್ನು ಅನುಭವಿಸಿ ಬಂದವರನ್ನು ವಿದೇಶಿಗರು ಎಂದು ಪರಿಗಣಿಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಕಾಂಗ್ರೆಸ್ ಮತ್ತೆ 2015 ರಲ್ಲಿ ಈ ನಿಲುವನ್ನು ಪುನರುಚ್ಚರಿಸಿತು. ಹಿಂದೂ ಬಂಗಾಳಿಗಳು, ಬಾಂಗ್ಲಾದೇಶದಿಂದ ವಲಸೆ ಬಂದ ಬೌದ್ಧರು ಪೌರತ್ವ ನೀಡಬೇಕೆಂದು ಒತ್ತಾಯಿಸಿತು. ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಒಬ್ಬರು ಮತ್ತು ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಬಗ್ಗೆ ಒತ್ತು ನೀಡಿದ್ದರು. ಅವರು “ನಮ್ಮ ದೇಶದ ವಿಭಜನೆಯ ನಂತರ, ಬಾಂಗ್ಲಾದೇಶದಂತಹ ದೇಶಗಳಲ್ಲಿನ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸಿದ್ದಾರೆ. ಅವರು ಭಾರತದ ಆಶ್ರಯವನ್ನು ಬಯಸುತ್ತಿದ್ದಾರೆ. ಇಂತಹ ದುರಾದೃಷ್ಟ ವ್ಯಕ್ತಿಗಳಿಗೆ ಪೌರತ್ವ ನೀಡುವುದು ನಮ್ಮ ನೈತಿಕ ಬಾಧ್ಯತೆಯಾಗಿದೆ, ಈ ಬಗ್ಗೆ ನಾವು ಹೆಚ್ಚು ಉದಾರವಾಗಿರಬೇಕು. ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಮುಂದಿನ ಕ್ರಮಗಳನ್ನು ರೂಪಿಸುವಾಗ ಉಪ ಪ್ರಧಾನ ಮಂತ್ರಿ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ” ಎಂದು ರಾಜ್ಯಸಭೆಯಲ್ಲಿ ಹೇಳಿದ್ದರು.
ಆದರೆ ಇಂದು, ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಬಿಜೆಪಿಯನ್ನು “ಮುಸ್ಲಿಂ ವಿರೋಧಿ” ಎಂದು ಆರೋಪಿಸುತ್ತಿದ್ದಾರೆ. ಅದು ಕೂಡ ರಾಷ್ಟ್ರವ್ಯಾಪಿಯಾಗಿ ಎನ್ಆರ್ಸಿಯನ್ನು ತರುವ ಉದ್ದೇಶದಿಂದ ಎನ್ ಪಿರ್ ನಡೆಸಿತ್ತೇ?. ನೆರೆಯ ರಾಷ್ಟ್ರದಿಂದ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಬಗ್ಗೆ ವಾದಿಸುತ್ತಾ ಬಂದಿದ್ದ ಅದು, ಮೋದಿ ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಾಗ ಏಕಾಏಕಿ ದೇಶವ್ಯಾಪಿಯಾಗಿ ಕಿಡಿ ಹೊತ್ತುವಂತೆ ಅದು ಮಾಡಿದ್ದು ಯಾಕೆ?
ತನ್ನ ಈ ದ್ವಂದ್ವ ನೀತಿಯ ಮೂಲಕ ಕಾಂಗ್ರೆಸ್ ಕಪಟ, ಕ್ಷುಲ್ಲಕ ಮತ್ತು ರಾಷ್ಟ್ರ ವಿರೋಧಿ ಕೃತ್ಯವನ್ನು ಎಸಗಿದೆ. ಭಾರತದ ರಾಜಕೀಯ ಇತಿಹಾಸ ಕಂಡ ಅತೀಕೆಟ್ಟ ಯೂಟರ್ನ್ ಇದಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.