ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ನವೀನ ಯೋಜನೆಗಳ ಪರಿಚಯಿಸಿದೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಮತ್ತು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ). ಇತ್ತೀಚೆಗೆ ಅದು ಪ್ಲಾಸ್ಟಿಕ್ ತ್ಯಾಜ್ಯ ವಿನಿಮಯ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ಲಾಸ್ಟಿಕ್ ತ್ಯಾಜ್ಯ ನೀಡಿದವರಿಗೆ ಬದಲಿಯಾಗಿ ಏನಾದರು ಪ್ರಯೋಜನಕಾರಿ ವಸ್ತುಗಳನ್ನು ನೀಡುವ ಯೋಜನೆ ಇದಾಗಿದೆ.
ಈ ಯೋಜನೆಯಡಿ ಜನರು ಚೀಲಗಳು ಮತ್ತು ಬಾಟಲಿಗಳಂತಹ ನೂರಾರು ಕಿಲೋ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುತ್ತಾರೆ ಮತ್ತು ಇದಕ್ಕೆ ಪ್ರತಿಯಾಗಿ ಇತರ ವಸ್ತುಗಳನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ, ಹಸಿ ತ್ಯಾಜ್ಯವನ್ನು ನೀಡಿದವರಿಗೆ ಪ್ರತಿಯಾಗಿ ಗೊಬ್ಬರ ಸಿಗುತ್ತದೆ. ಕ್ರಮವಾಗಿ ಒಂದು ಮತ್ತು ಮೂರು ಕಿಲೋ ಪ್ಲಾಸ್ಟಿಕ್ ದಾನ ಮಾಡಿದವರಿಗೆ ಬಟ್ಟೆ ಮತ್ತು ಸೆಣಬಿನ ಚೀಲಗಳನ್ನು ನೀಡಲಾಗುತ್ತದೆ.
ಮರುಬಳಕೆ ಮಾಡಬಹುದಾದ ಒಣ ತ್ಯಾಜ್ಯದ ವಿರುದ್ಧದ ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು, ಎಸ್ಡಿಎಂಸಿ ‘ಇಕೋ ಹಬ್ ಆನ್ ವೀಲ್ಸ್’ ಎಂಬ ಟ್ರಕ್ ಅನ್ನು ಸಹ ಕಾರ್ಯಾರಂಭಿಸಿದೆ. ಎಸ್ಡಿಎಂಸಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಟ್ರಕ್ ಸಂಚರಿಸಲಿದೆ ಮತ್ತು ಪ್ಲಾಸ್ಟಿಕ್ ಮತ್ತು ಕಾಗದ, ರಟ್ಟು, ಉಕ್ಕು, ಗಾಜಿನಂತಹ ಒಣ ವಸ್ತುಗಳನ್ನು ಸಂಗ್ರಹಿಸುತ್ತದೆ.
“ಎಸ್ಡಿಎಂಸಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವ ಪ್ರಯತ್ನದಲ್ಲಿ ನಾವು ‘ಇಕೋ ಹಬ್ ಆನ್ ವೀಲ್ಸ್’ ಎಂಬ ವಿಶಿಷ್ಟ ಟ್ರಕ್ ಅನ್ನು ಪ್ರಾರಂಭಿಸಿದ್ದೇವೆ. ಎಸ್ಡಿಎಂಸಿ 5 ಕೆಜಿ ಪ್ಲಾಸ್ಟಿಕ್ಗೆ ಪ್ರತಿಯಾಗಿ ಶೇ 20 ರಷ್ಟು ರಿಯಾಯಿತಿಯ ಆಹಾರ ಕೂಪನ್ಗಳು ಅಥವಾ ಟೀ ಶರ್ಟ್ / ಸ್ವೆಟರ್ ನೀಡುತ್ತದೆ. ಒಣ ತ್ಯಾಜ್ಯವು ಪೇಪರ್ಗಳು, ಹಲಗೆಯ, ಪ್ಲಾಸ್ಟಿಕ್ ವಸ್ತುಗಳು, ಹಳೆಯ ಉಕ್ಕಿನ ವಸ್ತುಗಳು, ಗಾಜಿನ ಬಾಟಲಿಗಳು, ಅಲ್ಯೂಮಿನಿಯಂ ಕ್ಯಾನುಗಳು ಇತ್ಯಾದಿಗಳನ್ನು ಒಳಗೊಂಡಿದೆ ”ಎಂದು ಎಸ್ಡಿಎಂಸಿಯ ಆಯುಕ್ತ ಜ್ಞಾನೇಶ್ ಭಾರತಿ ಮಿಲೇನಿಯಮ್ ಹೇಳಿದ್ದಾರೆ.
ಒಂದು ಕಿಲೋ ಅಥವಾ ಅದಕ್ಕಿಂತ ಹೆಚ್ಚಿನ ಪ್ಲಾಸ್ಟಿಕ್ ಅನ್ನು ನೀಡಿದರೆ ಬಟ್ಟೆ ಮತ್ತು ಸೆಣಬಿನಂತಹ ಪರಿಸರ ಸ್ನೇಹಿ ಚೀಲಗಳನ್ನು ನೀಡಲಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಪ್ರಯತ್ನಗಳ ಜೊತೆಗೆ, ಈ ಕಾರ್ಯಕ್ರಮವು ಜನರು ತಮ್ಮ ಹಳೆಯ ಬಟ್ಟೆಗಳನ್ನು ದಾನ ಮಾಡಲು ಸಹ ಅನುಮತಿಸುತ್ತದೆ, ನಂತರ ಈ ಬಟ್ಟೆಗಳನ್ನು ಅಗತ್ಯವಿರುವವರಿಗೆ ವಿತರಿಸಲಾಗುತ್ತದೆ.
ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕೂಡ ಇದೇ ರೀತಿಯ ಕಾರ್ಯಕ್ರಮವನ್ನು ಆರಂಭಿಸಿ, ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವ ಧ್ಯೇಯವನ್ನು ಮುಂದುವರೆಸಿದೆ. ಇಲ್ಲಿನ ನಿವಾಸಿಗಳು ಅರ್ಧ ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಠೇವಣಿ ಇಟ್ಟರೆ ಅವರಿಗೆ ರಾಜ್ಯ ಸರ್ಕಾರ ನಡೆಸುವ ಆಹಾರ ಕೇಂದ್ರಗಳಲ್ಲಿ ಉಚಿತ ಊಟ ಸಿಗಲಿದೆ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಸಹಯೋಗದೊಂದಿಗೆ ಬಿಎಂಸಿ ‘ಮೀಲ್ ಫಾರ್ ಪ್ಲಾಸ್ಟಿಕ್’ ಯೋಜನೆಯನ್ನು ಪ್ರಾರಂಭಿಸಿದೆ.
“ಈ ಯೋಜನೆಯು ಪರಿಣಾಮಕಾರಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಕಾರ್ಯವಿಧಾನವಾಗಿದ್ದು, ತ್ಯಾಜ್ಯ ಮುಕ್ತ ಸುರಕ್ಷಿತ ವಾತಾವರಣವನ್ನು ಖಾತ್ರಿ ಪಡಿಸಿಕೊಳ್ಳುವುದಲ್ಲದೇ ಅಗತ್ಯವಿರುವವರಿಗೆ ಉಚಿತವಾಗಿ ತಿನ್ನಲು ಅನುವು ಮಾಡಿಕೊಡುತ್ತದೆ ಮತ್ತು ಇದನ್ನು ಶಾಶ್ವತವಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯು ಆಹಾರ ಸುರಕ್ಷತೆ ಮತ್ತು ಪ್ಲಾಸ್ಟಿಕ್ ಅನ್ನು ಜವಾಬ್ದಾರಿಯುತವಾಗಿ ಮರುಬಳಕೆ ಮಾಡುವ ಎರಡು ಪ್ರಮುಖ ಉದ್ದೇಶಗಳನ್ನು ಹೊಂದಿದೆ ”ಎಂದು ಬಿಎಂಸಿ ಆಯುಕ್ತ ಪ್ರೇಮ್ ಚಂದ್ರ ಚೌಧರಿ ಹೇಳುತ್ತಾರೆ.
ಭಾರತದಲ್ಲಿ ಬಹುಪಾಲು ಚಿಂದಿ ಆಯ್ದುಕೊಳ್ಳುವವರು ತ್ಯಾಜ್ಯ ನಿರ್ವಹಣೆಯ ಅನೌಪಚಾರಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರು ಹಣ ಸಂಪಾದಿಸುವ ಭರವಸೆಯೊಂದಿಗೆ ಪ್ಲಾಸ್ಟಿಕ್ ಮತ್ತು ಇತರ ಒಣ ತ್ಯಾಜ್ಯಗಳನ್ನು ಸಂಗ್ರಹಿಸಲು ಅಲೆದಾಡುತ್ತಲೇ ಇರುತ್ತಾರೆ. ಆದರೂ, ಅವರು ತ್ಯಾಜ್ಯದಿಂದ ಯೋಗ್ಯವಾದ ಗಳಿಕೆಯನ್ನು ಪಡೆಯುತ್ತಾರೆ ಎಂಬ ಖಾತರಿಯಿಲ್ಲ.
ಆ ಹಿನ್ನೆಲೆಯಲ್ಲಿ, ಆಹಾರ ಕೂಪನ್ಗಳು ಮತ್ತು ಉಚಿತ ಊಟಗಳಂತಹ ಉಪಕ್ರಮಗಳು ಅವರಿಗೆ ಸಾಕಷ್ಟು ನಿರಾಳತೆಯನ್ನು ನೀಡುತ್ತದೆ, ಅವರ ಹಸಿವನ್ನು ನೀಗಿಸುತ್ತದೆ.
ಪ್ಲಾಸ್ಟಿಕ್ಗಾಗಿ ಉಪಯುಕ್ತ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದು ಭಾರತದಲ್ಲಿ ಹೊಸ ವಿದ್ಯಮಾನವಲ್ಲ. ಪ್ಲಾಸ್ಟಿಕ್ ಅನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಲು ಹಲವಾರು ಎನ್ಜಿಓಗಳು ಮತ್ತು ಸರ್ಕಾರಿ ಇಲಾಖೆಗಳು ನವೀನ ಯೋಜನೆಗಳನ್ನು ಈಗಾಗಲೇ ಪರಿಚಯಿಸಿವೆ. ಹೀಗಾಗಿ ಭವಿಷ್ಯದಲ್ಲಿ ಭಾರತ ಪ್ಲಾಸ್ಟಿಕ್ ಮುಕ್ತಗೊಳ್ಳುವ ಹೊಸ ಭರವಸೆಗಳು ಮೂಡಿವೆ.
ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೀಡಿದವರಿಗೆ ಪ್ರತಿಯಾಗಿ ಬಟ್ಟೆ, ಆಹಾರ ಇತ್ಯಾದಿಗಳನ್ನು ನೀಡುವ ಯೋಜನೆಯನ್ನು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಮತ್ತು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.