ಮಂಗಳೂರು : ಸ್ವಾತಂತ್ರ್ಯದ ಸಂದರ್ಭ ಭಾರತದಲ್ಲಿ 266 ಕಸಾಯಿಖಾನೆಗಳಿದ್ದು, ಈಗ ಭಾರತದಲ್ಲಿ 36000 ಕಸಾಯಿ ಖಾನೆಗಳಿವೆ. ಸ್ವಾತಂತ್ರ್ಯದ ಸಂದರ್ಭ ಗೋಸಂತತಿ ಹೆಚ್ಚಿದ್ದು ಜನಸಂಖ್ಯೆ ಕಡಿಮೆಯಿತ್ತು, ಆದರೆ ಈಗ ಭಾರತ 86 ಲಕ್ಷ ಲೀ ಹಾಲಿನ ಕೊರತೆ ಕಂಡು ಬರುತ್ತಿದೆ. ಈಗ 12 ಕೋಟಿ ಗೋವುಗಳಿದ್ದು 125 ಕೋಟಿ ಜನಸಂಖ್ಯೆಯಿದೆ ಆದುದರಿಂದ ಹಾಲಿನ ಕೊರತೆ ಎದುರಿಸುತ್ತಿದ್ದು ವಿದೇಶಗಳಿಂದ ಹಾಲಿನ ಪುಡಿ ಆಮದು ಮಾಡುವ ಸ್ಥಿತಿ ಉದ್ಭವಿಸಿದೆ ಎಂದು ವಿಹಿಂಪದ ಅಖಿಲ ಭಾರತ ಗೋರಕ್ಷಾ ಪ್ರಮುಖ ಹುಕುಂಚಂದ್ ಸಾಲ್ವಾ ತಿಳಿಸಿದರು.
ಅವರು ಸೋಮವಾರ ವಿಶ್ವ ಹಿಂದು ಪರಿಷತ್ – ಗೋ ಸಂರಕ್ಷಣಾ ಸಮಿತಿಯ ವತಿಯಿಂದ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಗೋ ಸಂರಕ್ಷಣಾ ಜಾಗೃತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಗೋಹತ್ಯೆಯು ಭಾರತದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು 2008-2009 ರಲ್ಲಿ 4.6 ಲಕ್ಷ ಟನ್ ಗೋಮಾಂಸ ರಫ್ತಾಗಿದೆ. 2010-11 ರಲ್ಲಿ 7.9 ಲಕ್ಷ ಟನ್ 2012-2013ರಲ್ಲಿ 15.ಲಕ್ಷ ಟನ್ 2013-14 ರಲ್ಲಿ 20 ಲಕ್ಷ ಟನ್ 2015 ರಲ್ಲಿ ಪ್ರಸಕ್ತ ಕೇಂದ್ರ ಸರಕಾರ 35 ಲಕ್ಷ ಟನ್ ಗೋಮಾಂಸ ರಫ್ತು ಮಾಡುವ ಗುರಿಹೊಂದಿದೆ ಎಂದರು. ಗೋಮಾಂಸ ರಫ್ತು ಮಾಡುತ್ತಿರುವ ಭಾರತ 14 ರಾಷ್ಟ್ರಗಳಿಂದ ಸೆಗಣಿ ಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದೆ. ಗೋವಿನ ಕ್ಷೀರ ಅಮೃತಕ್ಕೆ ಸಮಾನ, ಅದರಲ್ಲಿ ಬರುವ ಹಳದಿ ಕೆನೆಯನ್ನು ಲಿಕ್ವೀಡ್ ಗೋಲ್ಡ್ ಎಂದು ಕರೆಯುತ್ತಾರೆ.
1760 ಕೋಲ್ಕತ್ತಾ ಪ್ರಾಂತ್ಯದಲ್ಲಿ ಮೊದಲ ಕಸಾಯಿಖಾನೆ ಮತ್ತು ವೈಶಾವಾಟಿಕೆಯನ್ನು ರಾಬರ್ಟ್ ಕ್ಲವ್ ಪ್ರಾರಂಭಿಸಿದನು. ಇದರಿಂದ ದೇಶವನ್ನೊಡೆಯುವ ತಂತ್ರ ಅವನದ್ದಾಗಿತ್ತು. ಇನ್ನೂ ಜನರಿಗೆ ಇದು ಸರಿಯಾಗಿ ಅರ್ಥವಾಗಿಲ್ಲ. ಈಗ ಸರಕಾರ ಕಿವುಡಾಗಿ ವರ್ತಿಸುತ್ತಿದೆ. ನೀವು ಇಂದು ಮೆರವಣಿಗೆ ಮೂಲಕ ಬಂದಾಗ ಧ್ವಜವನ್ನು ಹಿಡಿದು ಜೈಕಾರ ಹಾಕುತ್ತಾ ಇಲ್ಲಿಗೆ ಬಂದಿದ್ದೀರಿ ಇಲ್ಲಿ ಗೋವಿನ ಮೇಲೆ ಕಟುಕರು ಕೈಹಾಕಿದರೆ ಧ್ವಜದ ಕೋಲನ್ನು ಬಳಸಿ ಬುದ್ದಿ ಕಲಿಸಿ ಎಂದರು.
ಗೋಹತ್ಯೆ 21ನೇ ಶತಮಾನದ ದೊಡ್ಡ ದುರಂತ ಎಂದ ಅವರು, ಇಂದು ರಾವಣರ ಸಂಖ್ಯೆ ಹೆಚ್ಚಾಗುತ್ತಿದೆ. ರಾಮನ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ದುರದೃಷ್ಟಕರ. ನಮ್ಮಲ್ಲಿ ರಾವಣನಿಗಿಂತ ರಾಮನ ಸಂಖ್ಯೆ ಹೆಚ್ಚಾಗಬೇಕು ಎಂದರು. ಭಾರತದಲ್ಲಿ ಬಜರಂಗದಳದ 1248 ಗೋ ಶಾಲೆಗಳಿವೆ. 1708 ಜನ ಬಜರಂಗದಳದ ಕಾರ್ಯಕರ್ತರು ಜೈಲುಪಾಲಾಗಿದ್ದು, ಅವರು ಯಾವುದೇ ಹಗರಣಗಳಿಗಾಗಿ ಜೈಲು ಸೇರಿಲ್ಲ ಬದಲಾಗಿ ಗೋರಕ್ಷಣೆಗಾಗಿ ಜೈಲು ಸೇರಿದ್ದಾರೆ. ಜೈಲುಗಳಲ್ಲಿ ಕೂಡ ಗೋ ಶಾಲೆ ಪ್ರಾರಂಭಿಸುವ ಚಿಂತನೆ ನಡೆದಿದ್ದು ರಾಜಸ್ಥಾನ, ಚತ್ತೀಸಗಢ, ಮಧ್ಯಪ್ರದೇಶದಲ್ಲಿ ಜೈಲುಗಳಲ್ಲಿ ಗೋಶಾಲೆಯಿದೆ ಎಂದರು.
ಜಾಗತಿಕ ವ್ಯಾಪಾರಸ್ಥರ ಪ್ರಕಾರ ವಿಶ್ವವೇ ಒಂದು ಮಾರುಕಟ್ಟೆ, ಇಲ್ಲಿ ಹಣವಿರುವವರೆ ಹರಿಕಾರರು. ಭಾರತದ ಪ್ರಕಾರ ಬದುಕು ಎಂಬುದು ತ್ಯಾಗ ಸೇವೆ ಮತ್ತು ಸಂಸ್ಕಾರಗಳು ನಮ್ಮ ಮುಖ್ಯ ತತ್ವ. ಭಾರತದ 29 ರಾಜ್ಯಗಳಲ್ಲಿ 24 ರಾಜ್ಯಗಳಲ್ಲಿ ಗೋಹತ್ಯೆ ಮಸೂದೆಗಳು ಜಾರಿಗೆ ಬಂದಿವೆ ಈ ಮಸೂದೆಯು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ಬರಬೇಕೆಂಬುದು ನಮ್ಮ ಆಸೆ ಎಂದರು.
ಗೋವು ಉಳಿದರೆ ಭಾರತ ಉಳಿದೀತು, ಅದಕ್ಕಾಗಿ ನಾವು ಗಾಯ್ ಕೋ ಕಾಟ್ನೆ ನಹೀ ದೇಂಗೆ ಭಾರತ್ ಕೋ ಬಾಂಟ್ನೆ ನಹೀ ದೇಂಗೆ ಎಂದು ಎಲ್ಲರೂ ಪಣ ತೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂತ ಮಟ್ಟದ ಪ್ರಮುಖರಾದ ಪ್ರೊ. ಎಂ. ಬಿ. ಪುರಾಣಿಕ್, ಶರಣ್ ಪಂಪ್ವೆಲ್, ಕಟೀಲ್ ದಿನೇಶ್ ಪೈ, ಕೃಷ್ಣಮೂರ್ತಿ, ಜಿಲ್ಲಾ ಪ್ರಮುಖರಾದ ಜಿತೇಂದ್ರ ಕೊಟ್ಟಾರಿ, ಭುಜಂಗ ಕುಲಾಲ್, ಶಿವಾನಂದ ಮೆಂಡನ್, ಗೋಪಾಲ ಕುತ್ತಾರ್ ಮುಂತಾದವರು ಹಾಗೂ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ನ ಕಾರ್ಯಕರ್ತರು ಹಾಗೂ ಗೋಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.