ಹಿಂದೂಗಳು, ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರು ಸುರಕ್ಷಿತವಾಗಿರುತ್ತಿದ್ದರೆ ಅವರೆಂದೂ ತಮ್ಮ ಮೂಲ ದೇಶವಾದ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶವೆಂಬ ಇಸ್ಲಾಮಿಕ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬರುತ್ತಿರಲಿಲ್ಲ. ತಾವು ಹುಟ್ಟಿದ ಭೂಮಿಯನ್ನು ತೊರೆದು ಬರುವ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಅವರು ಇಸ್ಲಾಂ ಧರ್ಮವನ್ನು ಅನುಸರಿಸಲಿಲ್ಲ ಎಂಬ ಕಾರಣಕ್ಕೆ ಅವರ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ನಿರಾಕರಿಸಲಾಗಿದೆ. ಅವರ ವಿರುದ್ಧ ಧಾರ್ಮಿಕ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ. ಆ ದೇಶಗಳಲ್ಲಿ ಬದುಕಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತಕ್ಕೆ ವಲಸೆ ಬಂದಿದ್ದಾರೆ. ಇಲ್ಲಿ ಸರ್ಕಾರ ಸವಲತ್ತುಗಳಿಲ್ಲದೆ ಜೀವಿಸುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿಶೇಷತೆ ಏನು?
ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದ ಧಾರ್ಮಿಕವಾಗಿ ದೌರ್ಜನ್ಯಕ್ಕೀಡಾದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ನೀಡುವ ಕಾಯ್ದೆಯಾಗಿದೆ. ಈ ಮೂರು ದೇಶಗಳು ಮುಸ್ಲಿಂ ಪ್ರಾಬಲ್ಯವಿರುವ ರಾಷ್ಟ್ರಗಳಾಗಿವೆ. ಇಲ್ಲಿ ಮುಸ್ಲಿಮರು ಅಲ್ಪಸಂಖ್ಯಾತ ಶ್ರೇಣಿಗಳಲ್ಲಿ ಇಲ್ಲ. ಈ ಮೂರು ರಾಷ್ಟ್ರಗಳಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಧರ್ಮೀಯರು ಅಲ್ಪಸಂಖ್ಯಾತ ಶ್ರೇಣಿಯಲ್ಲಿ ಇದ್ದಾರೆ. ಈ ಕಾಯ್ದೆಯಿಂದ ಈಗಾಗಲೇ ಭಾರತೀಯರೆಂದು ನಮೂದಿತರಾದವರ ಮೇಲೆ ಯಾವ ಪರಿಣಾಮವೂ ಇಲ್ಲ. ಇದು ಪೌರತ್ವ ಕೊಡುವ ಕಾಯ್ದೆಯೇ ಹೊರತು, ಪೌರತ್ವ ಕಸಿಯುವ ಕಾಯ್ದೆ ಅಲ್ಲ.
ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಹಿಂಸಾಚಾರಕ್ಕೆ ಅಧಿಕ ಸಂಖ್ಯೆಯಲ್ಲಿ ಬಲಿಪಶುಗಳಾದವರು ಹಿಂದೂಗಳು. ಪಾಕಿಸ್ಥಾನದಲ್ಲಿ ಹಿಂದೂ ಜನಸಂಖ್ಯೆ 1951ರಲ್ಲಿ 22% ಇತ್ತು, ಈ ಅದು 2019 ರಲ್ಲಿ 7-8%ಕ್ಕೆ ಇಳಿಕೆಯಾಗಿದೆ. ಮೂರು ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯವನ್ನು ಅನುಭವಿಸಿದ ಮತ್ತು 2014ರ ಡಿಸೆಂಬರ್ 1 ರೊಳಗೆ ಭಾರತಕ್ಕೆ ಆಗಮಿಸಿದ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಈ ಕಾಯ್ದೆ ಅನ್ವಯಿಸುತ್ತದೆ. ಭಾರತದ ಮುಸ್ಲಿಮರಿಗೆ ಇದು ಯಾವುದೇ ರೀತಿಯಲ್ಲೂ ಸಂಬಂಧಿಸಿಲ್ಲ.
ಈ ಕಾಯ್ದೆಗೆ ಕೆಲವರ ಅಸಮಾಧಾನ ಇದೆ ಯಾಕೆ?
🔹 ಈ ಮಸೂದೆಯನ್ನು ಬೆಂಬಲಿಸುತ್ತಿರುವ ಕೆಲವು ಜನರಿಗೆ ಕೇವಲ 3 ದೇಶಗಳ ಜನರನ್ನು ಮಾತ್ರ ಸೇರಿಸಿಕೊಳ್ಳಲಾಗಿದೆ ಎಂಬ ಬಗ್ಗೆ ಅಸಮಾಧಾನವಿದೆ.
🔹 ಇನ್ನು ಕೆಲವರಿಗೆ ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳನ್ನು ಸೇರಿಸಿಕೊಳ್ಳಲಾಗಿದೆ ಎಂಬ ಬಗ್ಗೆ ಅಸಮಾಧಾನ ಇದೆ. ಯಾಕೆಂದರೆ ಈ ಧರ್ಮಗಳು ಭಾರತದಲ್ಲಿ ಹುಟ್ಟಿಕೊಂಡಿಲ್ಲ.
🔹 ಇನ್ನು ಈ ಕಾಯ್ದೆಯನ್ನು ಸಂಪೂರ್ಣವಾಗಿ ವಿರೋಧಿಸುವ ಜನರಿಗೆ ಇದರಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರು ಅಥವಾ ಸುನ್ನಿಗಳನ್ನು ಹೊರತುಪಡಿಸಿ ಇತರ ಮುಸ್ಲಿಂ ಪಂಥಗಳನ್ನು ಸೇರಿಸಲಾಗಿಲ್ಲ ಎಂಬ ಬಗ್ಗೆ ಅಸಮಾಧಾನವಿದೆ.
ಇದನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಂವಿಧಾನದ 8 ಮತ್ತು 9 ನೇ ವಿಧಿಗಳನ್ನು ಅಧ್ಯಯನ ಮಾಡಬೇಕು. ಆರ್ಟಿಕಲ್ 8, 1935 ಅನ್ನು ಭಾರತದ ಮೂಲ ನಾಗರಿಕರು ಯಾರು ಎಂದು ನಿರ್ಧರಿಸುವ ಕಟ್-ಆಫ್ ದಿನಾಂಕವೆಂದು ಉಲ್ಲೇಖಿಸುತ್ತದೆ – ಇದು ಅವಿಭಜಿತ ಭಾರತ ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ)ವನ್ನು ಸೂಚಿಸುತ್ತದೆ. ಸಿಎಎ 2019 ಈ ಮೂರು ದೇಶಗಳ ನಾಗರಿಕರನ್ನು ಮಾತ್ರ ಯಾಕೆ ಪರಿಗಣಿಸಿದೆ ಎಂಬುದಕ್ಕೆ ಇದುವೇ ಕಾರಣ.
ಆರ್ಟಿಕಲ್ 9 ರ ಅನ್ವಯ ಯಾವುದೇ ದೇಶದ ಪೌರತ್ವವನ್ನು ಸ್ವಯಂಪ್ರೇರಣೆಯಿಂದ ಪಡೆದುಕೊಳ್ಳುವ ವ್ಯಕ್ತಿಗಳು ಆ ದಿನಾಂಕದಿಂದ ಭಾರತದ ಪ್ರಜೆಗಳಾಗಿರುವುದಿಲ್ಲ. ತಾರ್ಕಿಕವಾಗಿ ಇದರ ಅರ್ಥವೇನೆಂದರೆ, ಹೊಸ ಇಸ್ಲಾಮಿಕ್ ದೇಶ ರಚನೆಯ ಬಳಿಕ ಭಾರತದಿಂದ ಪಾಕಿಸ್ಥಾನಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ ಮುಸ್ಲಿಮರ ಬಗ್ಗೆ ಭಾರತಕ್ಕೆ ಯಾವುದೇ ನೈತಿಕ ಜವಾಬ್ದಾರಿ ಇಲ್ಲ.
ಪಾಕಿಸ್ಥಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ಥಾನದಲ್ಲಿ ಈಗ ಇರುವ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಅಲ್ಲಿರುವುಕ್ಕೆ ಕಾರಣ ಅವರು ತಮ್ಮ ಮೂಲ ಭೂಮಿಯನ್ನು ಬಿಡಲಿಲ್ಲ ಎಂಬುದು. ಯಾಕೆಂದರೆ ಆ ದೇಶ ಅವರಿಗೆ, ಇತರ ಧರ್ಮಪಾಲಿಸುವ ಜನರು ಕಿರುಕುಳಕ್ಕೆ ಒಳಗಾಗುವುದಿಲ್ಲ ಮತ್ತು ಇಸ್ಲಾಮಿಕ್ ರಾಷ್ಟ್ರಗಳಾಗಿ ಪರಿವರ್ತನೆಗೊಂಡರೂ ಅವರಿಗೆ ಪೂರ್ಣ ಹಕ್ಕುಗಳು ದೊರೆಯಲಿದೆ ಮತ್ತು ನ್ಯಾಯಯುತವಾಗಿ ಅವರಿಗೆ ಬದುಕುವ ಹಕ್ಕು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗಿತ್ತು. ಆದರೆ ಆ ರಾಷ್ಟ್ರಗಳು ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಇತರ ಧರ್ಮೀಯರ ಹಕ್ಕನ್ನು ಅದು ಕಸಿದುಕೊಂಡಿದೆ. ಅವರನ್ನು ಮುಸ್ಲಿಂ ಧರ್ಮಕ್ಕೆ ಪರಿವರ್ತನೆಗೊಳ್ಳುವಂತೆ ಬಲವಂತ ಮಾಡಿವೆ. ಅವರ ಬದುಕನ್ನು ನರಕವಾಗಿಸಿದೆ. ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳನ್ನು ಏಕೆ ಸೇರಿಸಿಕೊಳ್ಳಲಾಗಿದೆ ಎಂದು ಪ್ರಶ್ನಿಸುತ್ತಿರುವವರು, ನಮ್ಮ ಸಂವಿಧಾನದ 14 ನೇ ಪರಿಚ್ಛೇಧವನ್ನು ಅರ್ಥ ಮಾಡಿಕೊಳ್ಳಬೇಕು. ಅದು ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳುತ್ತದೆ. ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿದ್ದ ಭಾರತ ದೇಶದಿಂದ ಮುಸ್ಲಿಮರು ಪ್ರತ್ಯೇಕವಾಗಿ ಇರಬೇಕೆಂಬ ಬಯಕೆಯನ್ನು ಈಡೇರಿಸಲು ಈ ಮೂರು ರಾಷ್ಟ್ರಗಳು ಭಾರತದಿಂದ ಹೊರಹೋಗಿ ಪ್ರತ್ಯೇಕ ಇಸ್ಲಾಂ ರಾಷ್ಟ್ರಗಳಾದವು.
ಭಾರತ ಪ್ರಪಂಚದ ಎಲ್ಲಾ ಭಾಗಗಳಿಂದ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರ ಬಗ್ಗೆ ನಾಗರಿಕ ಜವಾಬ್ದಾರಿಯನ್ನು ಹೊಂದಿದೆ ಮತ್ತು ಪ್ರಪಂಚದ ಎಲ್ಲಿಯಾದರೂ ಧಾರ್ಮಿಕ ಕಿರುಕುಳದಿಂದ ಬಳಲುತ್ತಿರುವ ಈ ಸಮುದಾಯದ ಯಾವುದೇ ವ್ಯಕ್ತಿಗೆ ಭಾರತ ಮೊದಲ ಆಶ್ರಯವಾಗಬೇಕು. ಈ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಸರ್ಕಾರವು ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಡಬೇಕು, ಮತ್ತು ಸಿಎಬಿ – 2019 ಆ ಪ್ರಾರಂಭದ ಹಂತವಾಗಿದೆ. ನಿಧಾನವಾಗಿ ಅದು ಜಗತ್ತಿನ ಎಲ್ಲೆಡೆಯಿಂದ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಆಶ್ರಯ ನೀಡುವ ಕಡೆಗೆ ಗಮನ ನೀಡಬೇಕು.
ಸಿಪಿಐ, ಸಿಪಿಎಂ, ಟಿಎಂಸಿ, ಕಾಂಗ್ರೆಸ್ ಮುಂತಾದ ರಾಜಕೀಯ ಪಕ್ಷಗಳು ಈ ವಲಸಿಗರನ್ನು ಎಲ್ಲಾ ಈಶಾನ್ಯ ರಾಜ್ಯಗಳು, ವಿಶೇಷವಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಜನಸಂಖ್ಯಾ ರಚನೆಯನ್ನು ಬದಲಾಯಿಸುವ ಏಕೈಕ ಕಾರ್ಯಸೂಚಿಯೊಂದಿಗೆ ಬೆಂಬಲಿಸಿವೆ ಎಂಬುದು ಸತ್ಯ. ಜಮ್ಮು, ಕೇರಳ, ಬೆಂಗಳೂರು ಮತ್ತು ಇತರ ಸ್ಥಳಗಳ ಜನಸಂಖ್ಯಾ ರಚನೆಯನ್ನು ಬದಲಾಯಿಸಲು ಇತ್ತೀಚಿನ ದಿನಗಳಲ್ಲಿ ಪ್ರಯತ್ನಗಳು ನಡೆದಿವೆ. ಈ ಜನರು ನಿಯಮಿತವಾಗಿ ನಕಲಿ ಆಧಾರ್ ಕಾರ್ಡ್ಗಳು, ಮತದಾರರ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ಗಳೊಂದಿಗೆ ಪ್ರತ್ಯಕ್ಷರಾಗುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರಸ್ತುತ ಬಿಜೆಪಿ ಸರ್ಕಾರ 2024 ರ ವೇಳೆಗೆ ಎನ್ಆರ್ಸಿಯನ್ನು ಜಾರಿಗೆ ತರಲು ಬದ್ಧವಾಗಿದೆ ಮತ್ತು ನಮ್ಮ ಗಡಿಯ ಹೊರಗಿನಿಂದ ಬಂದ ಅಕ್ರಮ ವಲಸಿಗರನ್ನು ವಾಪಾಸ್ ಕಳುಹಿಸುವುದು ಇದರ ಗುರಿ.
ಸಿಎಬಿ 2019 ಅನ್ನು ವಿರೋಧಿಸಲು ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ. ಭಾರತದಲ್ಲಿ ಮುಸ್ಲಿಮರನ್ನು ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಡಿಬಿಡಲಾಗಿದೆ. ಪ್ರಸ್ತುತ ಬಿಜೆಪಿ ಸರ್ಕಾರವು ಕೋಮುವಾದಿಯಾಗುತ್ತಿದೆ ಮತ್ತು ಮುಸ್ಲಿಮರ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡುತ್ತಿದೆ. ಸತ್ಯವೆಂದರೆ ಸಿಎಬಿ 2019 ಭಾರತೀಯ ಮುಸ್ಲಿಮರ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ವಾಸ್ತವವಾಗಿ, ಈ ದೇಶದ ನಿಜವಾದ ನಿವಾಸಿಗಳಾದ ಭಾರತೀಯ ಮುಸ್ಲಿಮರಿಗೂ ಎನ್ಆರ್ಸಿಗೆ ಯಾವುದೇ ಸಂಬಂಧವಿಲ್ಲ. ಭಾರತದಲ್ಲಿ 2 ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂದು 2016 ರಲ್ಲಿ ಸರ್ಕಾರ ಹೇಳಿಕೆ ನೀಡಿತ್ತು. ವಾಸ್ತವವೆಂದರೆ, 5,000 ಮತಗಳಿಗಿಂತ ಕಡಿಮೆ ಮತಗಳ ಅಂತರದಿಂದ ಚುನಾವಣೆಗಳನ್ನು ಗೆಲ್ಲುವ ದೇಶದಲ್ಲಿ, ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 2 ಕೋಟಿ ಅಕ್ರಮ ವಲಸಿಗರು ನಕಲಿ ಮತದಾರರ ಐಡಿ ಮತ್ತು ಆಧಾರ್ ಕಾರ್ಡ್ನೊಂದಿಗೆ ಇದ್ದರೆ ಸಾಕು.
ಮುಸ್ಲಿಮರು ತಮ್ಮನ್ನು ಯಾರು ಬಲಿಪಶುಗಳಾಗಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.