ಸರ್ವವೇದಮಯೀ ಗೀತಾ ಸರ್ವಧರ್ಮ ಮಯೋ ಮನುಃ |
ಸರ್ವತೀರ್ಥಮಯಿ ಗಂಗಾ ಸರ್ವದೇವ ಮಯೋ ಹರಿಃ ||
ಪಾದಾಸ್ಯಾಪ್ಯರ್ಧ ಪಾದಂ ವಾ ಶ್ಲೋಕಂ ಶ್ಲೋಕಾರ್ಧಮೇವ ವಾ|
ನಿತ್ಯಾಂ ಧಾರಯತೇ ಯಸ್ತು ಸ ಮೋಕ್ಷಮಧಿಗಚ್ಛತಿ ||
ಈ ಎಲ್ಲವೂ ಗೀತೆಯ ಮಹತ್ತ್ವವನ್ನು ತಿಳಿಸುತ್ತವೆ. ಗೀತೆಯು ಶಕ್ತಿಯ, ಜ್ಞಾನದ ಮೂಲ. ಆರು ಸಾವಿರ ವರ್ಷಗಳ ಹಿಂದೆ ದ್ವಾಪರಯುಗದಲ್ಲಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಈ ಜ್ಞಾನಭಂಡಾರ ಜೀವನದ ಸಂದೇಶ- ವೇದಾಂತದ, ಜ್ಞಾನದ ಉದಾತ್ತ ತತ್ವಗಳನ್ನು ಇದು ತಿಳಿಸುತ್ತದೆ. ಇಡೀ ಮಾನವಕೋಟಿಗೆ ಸಂಬಂಧಿಸಿದಂತೆ ದೇಶ, ವರ್ಗ, ಕಾಲಾತೀತ ವಿಚಾರಗಳ ಆಕರ. ಇದು ವಿಶ್ವವ್ಯಾಪಿಯಾದ ಸತ್ಯವನ್ನು ಒಳಗೊಂಡದ್ದು.
ಮಾರ್ಗಶಿರ ಮಾಸದ ಶುಕ್ಲಪಕ್ಷದ ಹನ್ನೊಂದನೆಯ ದಿನವೇ ಶ್ರೀಕೃಷ್ಣನು ಗೀತೆಯನ್ನು ಅರ್ಜುನನಿಗೆ ಬೋಧಿಸಿದ ದಿನವೆಂದು ’ಗೀತಾ ಜಯಂತಿ’ ಯನ್ನು ಆಚರಿಸಲಾಗುತ್ತದೆ. ಸನಾತನ ಧರ್ಮವನ್ನು ಪಾಲಿಸುವ ಸಾವಿರಾರು ಭಕ್ತಾದಿಗಳಿಂದ ಪ್ರಪಂಚದಾದ್ಯಂತ ಇದರ ಆಚರಣೆ ನಡೆಯುತ್ತದೆ. ಇಡೀ ದಿನ ಗೀತಾಪಠಣ ಉಪವಾಸ, ಭಜನೆ ಇತ್ಯಾದಿ ನಡೆಯುತ್ತದೆ. ಗೀತೆಯ ಪುಸ್ತಕಗಳ ಉಚಿತ ವಿತರಣೆಯೂ ಇರುತ್ತದೆ. ಗೀತಾಜಯಂತಿಯ ದಿನ ಮೋಕ್ಷದ ಏಕಾದಶಿಯೂ ಇರುವುದರಿಂದ ಅನೇಕ ಭಕ್ತರು ಅಂದು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ.
ಗೀತೆಯ ಮಹತ್ತ್ವವಿರುವುದು ಅದು ಪ್ರತಿಯೊಬ್ಬರನ್ನೂ ಚಿಂತನೆಯ ದಾರಿಗೆ ಹಚ್ಚುವುದರಲ್ಲಿ. ಬದುಕಿನ ನಾನಾ ಘಟ್ಟಗಳಲ್ಲಿ ಸೂಕ್ತ ನಿರ್ಧಾರಗಳನ್ನು ಮಾಡುವುದರಲ್ಲಿ. ಜೀವನವನ್ನು ಹೊಸದೃಷ್ಟಿಯಿಂದ ನೋಡುವಂತೆ ಮಾರ್ಗದರ್ಶನ ನೀಡುವುದರಲ್ಲಿ, ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದರಲ್ಲಿ, ಒಟ್ಟಾರೆಯಾಗಿ ಗೀತೆಯು ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಸಹಕರಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ಗೀತಾಬೋಧನೆ ನಡೆಯಿತೆಂದು ತಿಳಿದಿರುವುದಾದರೂ ಅದರಲ್ಲಿ ಪ್ರಸ್ತಾಪಿಸಿರುವ ಪ್ರತಿಯೊಂದು ವಿಚಾರವೂ ಸಹ ಪ್ರಸ್ತುತಕ್ಕೆ ಅನ್ವಯ ವಾಗುವಂತೆಯೇ ಇದೆ. ಏಳುನೂರು ಶ್ಲೋಕಗಳಲ್ಲಿ ಹದಿನೆಂಟು ಅಧ್ಯಾಯಗಳಲ್ಲಿ ವಿವರಿಸಿರುವ ವಿಚಾರಗಳು ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗ ಎಂದು ಮೂರು ಬಗೆಗಳಲ್ಲಿ ಬದುಕಿನ ಧ್ಯೇಯವನ್ನು ತಿಳಿಸುತ್ತವೆ. ಕರ್ತವ್ಯವನ್ನು ತಿಳಿಸುತ್ತವೆ. ಉತ್ತಮ ನಡವಳಿಕೆಯನ್ನು ಕಲಿಯುವ ಬಗೆಯನ್ನು ಕಲಿಸುತ್ತವೆ.
ಭಗವಂತನ ಗೀತೆ’ ಎಂಬ ಅರ್ಥವನ್ನು ಹೊಂದಿರುವ ಈ ಗೀತೆಯಲ್ಲಿ ಜ್ಞಾನಯೋಗವು ಜೀವನದ ಅತ್ಯುಚ್ಛ ಸ್ಥಿತಿಯೆಂದೂ ಆದರೆ ಯಾರೊಬ್ಬರೂ ನೇರವಾಗಿ ಅದನ್ನು ತಲುಪುವುದು ಸಾಧ್ಯವಿಲ್ಲವೆಂದೂ ಉಳಿದೆರಡು ಹಂತಗಳನ್ನು ದಾಟಿದ ನಂತರವೇ ಆ ಹಂತಕ್ಕೆ ಏರಲು ಸಾಧ್ಯವೆಂದೂ ಹೇಳಿದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ತನ್ನ ಪಾಲಿಗೆ ಬಂದ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವುದು ಎಷ್ಟು ಮುಖ್ಯವೋ ಅಷ್ಟೇ ಶ್ರದ್ಧೆಯೊಂದಿಗೆ ಪರಮಾತ್ಮ ತತ್ತ್ವವನ್ನು ಭಕ್ತಿಯೋಗದ ಮೂಲಕ ತಿಳಿಯುವ ಕಾರ್ಯಕ್ಕೆ ತೊಡಗ ಬೇಕೆಂದೂ ಅದರ ನಂತರವೇ ಮೂರನೆಯ ಹಾಗೂ ಪ್ರಬುದ್ಧತೆಯ ’ಜ್ಞಾನಯೋಗ’ ವನ್ನು ಸಾಧಿಸಲು ಸಾಧ್ಯವಾಗುತ್ತದೆಂದು ತಿಳಿಸಿದೆ.
’ಗೀತಾಜಯಂತಿ’ಯನ್ನು ಭಾರತವಲ್ಲದೆ ಹಲವು ದೇಶಗಳಲ್ಲಿಯೂ ಆಚರಿಸುತ್ತಾರೆ. ಕೃಷ್ಣಪಂಥವನ್ನು ಸ್ವಾಮಿ ಪ್ರಭುಪಾದರು ಸ್ಥಾಪಿಸಿದ ನಂತರವಂತೂ ಅವರ ಅನುಯಾಯಿಗಳು ದೇಶದ ಹಾಗೂ ಹೊರದೇಶಗಳಲ್ಲಿಯೂ ಸಾವಿರಾರು ಮಂದಿ ಇರುವುದರಿಂದ ಗೀತಾಜಯಂತಿಯು ಸಂಭ್ರಮದಿಂದ ಎಲ್ಲ ಕಡೆಗಳಲ್ಲಿ ನಡೆಯುತ್ತದೆ. ಭಗವದ್ಗೀತೆಯ ಪಾರಾಯಣ, ವಿದ್ವಾಂಸರ ಜೊತೆಯಲ್ಲಿ ಅದರಲ್ಲಿರುವ ವಿಚಾರಗಳು, ಅವುಗಳ ಪ್ರಸ್ತುತತೆ, ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕಾದ ಅಗತ್ಯ ಎಲ್ಲದರ ಕುರಿತು ಚರ್ಚೆ ನಡೆಯುತ್ತದೆ. ಭಕ್ತಿ ಗೀತೆಗಳ ಗಾಯನವೂ ಇರುತ್ತದೆ. ಗೀತೆಯ ಸಂದೇಶಗಳನ್ನು ಮನನ ಮಾಡಿಕೊಳ್ಳುತ್ತ, ಆತ್ಮವಿಶ್ವಾಸ, ಆತ್ಮಬಲಗಳನ್ನು ವೃದ್ಧಿಸಿಕೊಳ್ಳುವ ಪ್ರಯತ್ನದೊಂದಿಗೆ ಜೀವನವನ್ನು ಹಸನು ಮಾಡಿಕೊಳ್ಳಲು ಸಿದ್ಧರಾಗುತ್ತಾರೆ.
ಗೀತಾಶಾಸ್ತ್ರಮಿದಂ ಪುಣ್ಯಂ ಯಃ ಪಠೇತ್ಪ್ರಯತಃ ಪುಮಾನ್ | ವಿಷ್ಣೋಃ ಪದಮವಾಪ್ನೋತಿ ಭಯಶೋಕಾದಿವರ್ಜಿತಃ ||
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.