ಸಮಾಜ ಸೇವೆಯಲ್ಲೇ ಸಾರ್ಥಕತೆಯನ್ನು ಕಾಣುತ್ತಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ.ಅಂತಹವರಲ್ಲಿ ಒಬ್ಬರು ತಮಿಳುನಾಡಿನ ತಿರುಚಿರಾಪಳ್ಳಿಯ ರವೀಂದ್ರ ಕುಮಾರ್. ದಿನನಿತ್ಯ ಸರ್ಕಾರಿ ಆಸ್ಪತ್ರೆಗೆ ತೆರಳುವ ಇವರು, ಅಲ್ಲಿರುವ ರೋಗಿಯ ಸಂಬಂಧಿಗಳಿಗೆ ಉಚಿತವಾಗಿ ಊಟವನ್ನು ಹಂಚುತ್ತಾರೆ.
ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿರುತ್ತಾರೆ. ಅವರಿಗೆ ಒಂದು ಹೊತ್ತಿನ ಊಟ ಸೇವಿಸುವುದು ಕೂಡ ಕಷ್ಟವಾಗಿರುತ್ತದೆ. ಇನ್ನು ರೋಗಿಗಳನ್ನು ನೋಡಿಕೊಳ್ಳಲು ಬರುವ ಸಂಬಂಧಿಗಳು ಕೂಡ ಹಣದ ಕೊರತೆಯಿಂದಾಗಿ ಹಸಿವು ಕಟ್ಟಿಕೊಂಡು ದಿನದೂಡುವ ಪರಿಸ್ಥಿತಿ ಇರುತ್ತದೆ. ಇದನ್ನು ಮನಗಂಡ ರವೀಂದ್ರ ಕುಮಾರ್ ಅವರು ಪ್ರತಿದಿನ ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆಹಾರ ವಿತರಣೆ ಮಾಡುತ್ತಾರೆ.
ಈ ಸೇವೆಯನ್ನು ಅವರು ಕಳೆದ ಸುಮಾರು 29 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ತಮ್ಮ ವಾಹನದಲ್ಲೇ ಆಹಾರವನ್ನು ಹೊತ್ತು ಆಸ್ಪತ್ರೆಗೆ ತೆರಳುವ ಅವರು, ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ತಿಂಡಿಯನ್ನು ನೀಡುತ್ತಾರೆ. ಮಧ್ಯಾಹ್ನ 1 ಗಂಟೆ ಊಟ ನೀಡುತ್ತಾರೆ. ಸಂಜೆ 7 ಗಂಟೆಯಿಂದ 8 ಗಂಟೆವರೆಗೂ ರಾತ್ರಿಯ ಊಟ ನೀಡುತ್ತಾರೆ. ಅವರ ಈ ಸೇವೆ ಎಷ್ಟೋ ಜೀವಗಳ ಹಸಿವನ್ನು ನಿತ್ಯ ನೀಗಿಸುತ್ತಿದೆ.
ರವೀಂದ್ರ ಅವರ ತಂದೆ ವಿ. ಗೋವಿಂದರಾಜು ಅವರು 1990ರಲ್ಲಿ ಸರ್ಕಾರಿ ಆಸ್ಪತ್ರೆಗೆ ಉಚಿತ ಆಹಾರ ವಿತರಿಸುವ ಕಾರ್ಯವನ್ನು ಆರಂಭಿಸಿದ್ದರು. “ನನ್ನ ತಂದೆ ಸಮಾಜ ಸೇವೆಯನ್ನು ಮಾಡಲು ಬಯಸುತ್ತಿದ್ದರು. ಒಂದೊಮ್ಮೆ ತಿರುಚಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಬಡರೋಗಿಗಳ ಪರಿಸ್ಥಿತಿಯನ್ನು ಕಂಡು ಮರುಕಪಟ್ಟು ಕೊಂಡಿದ್ದರು. ಮೊದಲು ಅವರು ಬಡ ರೋಗಿಗಳಿಗೆ ಬಿಸಿನೀರನ್ನು ಹಂಚಲು ಆರಂಭಿಸಿದರು, ತಮ್ಮ ಕಾರ್ಯಕ್ಕೆ ಉತ್ತಮ ಸ್ಪಂದನೆ ದೊರೆತ ಬಳಿಕ ಅವರು ಗಂಜಿಯನ್ನು ವಿತರಿಸಲು ಆರಂಭಿಸಿದರು” ಎಂದು ರವೀಂದ್ರಕುಮಾರ್ ಹೇಳುತ್ತಾರೆ. ಇದೀಗ ತಂದೆಯ ಕಾರ್ಯವನ್ನು ಮಗ ಮುಂದುವರೆಸುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಮಾನವೀಯತೆ ಎಂಬುದು ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ತಮ್ಮ ಆಹಾರಕ್ಕೆ ರವೀಂದ್ರ ಅವರು ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದಾರೆ. ಸ್ವಯಂ ಸೇವಕರು ಅಡುಗೆ ಮಾಡುವುದಕ್ಕೆ ಅವರಿಗೆ ಸಹಾಯ ಮಾಡುತ್ತಾರೆ. ರವೀಂದ್ರ ಅವರ ಟ್ರಸ್ಟ್ ಇದ್ದು, ಹಲವು ಮಂದಿ ಧನಸಹಾಯ ಮಾಡುತ್ತಾರೆ. ಪ್ರತಿದಿನ ಜನರಿಗೆ ಊಟ ಹಾಕಲು 20 ಸಾವಿರ ರೂಪಾಯಿ ಖರ್ಚು ಅವರಿಗೆ ತಗಲುತ್ತಿದೆ.
ತಮ್ಮ ತಂದೆ ಬಿಸಿನೀರಿನಿಂದ ಆರಂಭಿಸಿದ ಕಾರ್ಯವನ್ನು ಇಂದು ಮಗ ರವೀಂದ್ರ ಕುಮಾರ್ ಅವರು ನಿತ್ಯ 1000 ಜನರಿಗೆ ಅನ್ನ ಹಾಕುವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಎಲ್ಲರಿಗೂ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.