ರವೀಂದ್ರನಾಥ ಟಾಗೋರ್ ಅವರು ಬರೆದ ಒಂದು ಅನನ್ಯ ಗೀತೆಯನ್ನು ಎಲ್ಲಾ ಭಾರತೀಯರು, ಅದರಲ್ಲೂ ಮುಖ್ಯವಾಗಿ ಹಿಂದೂಗಳು ತಮ್ಮೊಳಗೆ ಅಂತರ್ಗತಗೊಳಿಸಬೇಕು. ಈ ಗೀತೆಯ ಸಾಲು ಹೀಗೆ ಆರಂಭವಾಗುತ್ತದೆ:
ಜೊಡಿ ತೊರ್ ದಕ್ ಶುನೆ ಕೆಯು ನ ಅಶೆ, ತೊಬೆ ಎಕ್ಲ ಚಲೋ ರೇ
ಇದರ ಅರ್ಥ, ‘ನಿನ್ನ ಕರೆಗೆ ಯಾರೂ ಓಗೊಡುವುದಿಲ್ಲ, ನೀನೇ ಒಬ್ಬಂಟಿಯಾಗಿಯೇ ಸಾಗು’ ಎಂಬುದು.
ಸುದೀರ್ಘ ಸಮಯಗಳವರೆಗೆ, ತನ್ನನ್ನು ತಾನು ಬಲಿಷ್ಠಗೊಳಿಸುವವರೆಗೂ ಏಕಾಂಗಿಯಾಗಿ ಚಲಿಸುವುದೇ ಭಾರತಕ್ಕಿರುವ ದಾರಿಯಾಗಿದೆ. ಹೀಗಾಗಿ ನಾವು ‘ಎಕ್ಲ ಚಲೋ ರೇ’ ಎಂದು ಉಚ್ಛರಿಸುತ್ತಾ ನಮ್ಮ ಕೆಲಸಗಳನ್ನು ಮಾಡಲು ಸಿದ್ಧರಾಗಿರಬೇಕಾಗುತ್ತದೆ.
ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರವಾಗಲಿ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (ಆರ್ಸಿಇಪಿ) ಒಮ್ಮತ ಸೂಚಿಸದ ನಿರ್ಧಾರವಾಗಲಿ, ಆಕ್ರಮಣಕಾರಿ ಮತಾಂತರಕ್ಕೆ ನಮ್ಮ ವಿರೋಧವಾಗಲಿ, ಇಸ್ರೇಲ್ನೊಂದಿಗಿನ ನಮ್ಮ ಪಾಲುದಾರಿಕೆಯಾಗಲಿ ಅಥವಾ ಪರಮಾಣು ಶಕ್ತಿಯಾಗುವ ನಮ್ಮ ನಿರ್ಧಾರವಾಗಲಿ, ಈ ಎಲ್ಲಾ ನಿರ್ಧಾರದಲ್ಲೂ ಜಗತ್ತು ನಮ್ಮನ್ನು ಏಕಾಂಗಿಯಾಗಿಸಿದೆ, ಜಾಗತಿಕ ಒತ್ತಡಕ್ಕೆ ಶರಣಾದ ನಮ್ಮವರೇ ಕೂಡ ಈ ನಿರ್ಧಾರವನ್ನು ಬೆಂಬಲಿಸಿಲ್ಲ.
ಭಾರತವು ಹಿಂದೂ ತಾಯ್ನಾಡಾಗಿದ್ದು, ಪ್ರಪಂಚದ ಬಹುತೇಕ ಪ್ರಮಾಣದ ಹಿಂದೂಗಳು ಇಲ್ಲಿಯೇ ಇದ್ದಾರೆ. ಹೀಗಾಗಿ, ವಿಶ್ವದಲ್ಲಿ ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಬಹುಸಂಖ್ಯಾತ ದೇಶಗಳು ಇದ್ದರೂ, ಕೇವಲ ಒಂದೇ ಒಂದು ಹಿಂದೂ ದೇಶವಿದೆ. ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸುವ, ಅದನ್ನು ಬೆಂಬಲಿಸುವ ಒಂದೇ ಒಂದು ಧ್ವನಿ ಇದ್ದರೆ ಅದು ಭಾರತ ಮಾತ್ರ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಿದಾಗ ಧ್ವನಿ ಎತ್ತುವಂತಹ ಹಲವಾರು ದೇಶಗಳು ಇವೆ. ಆದರೆ ನಮ್ಮ ಅನಾರೋಗ್ಯಕರ ಜಾತ್ಯತೀತತೆಯು ನಮ್ಮ ನೆರೆಹೊರೆಯಲ್ಲಿನ ಹಿಂದೂ ಹಿತಾಸಕ್ತಿಗಳನ್ನು ಕಾಪಾಡುವುದನ್ನು ತಡೆಯುತ್ತಿರುವುದು ಭಾರತದ ದುರಂತ. ಜಗತ್ತಿನ ಮುಂದೆ ಮೂಲೆಗುಂಪಾಗುವ ಭಯವು ಧರ್ಮ ಮತ್ತು ಸತ್ಯವನ್ನು ರಕ್ಷಿಸಲು, ಸಮರ್ಥಿಸಲು ಸರಿಯಾದ ಮಾರ್ಗವಾಗುವುದಿಲ್ಲ.
ಇಸ್ರೇಲ್ ಮತ್ತು ಚೀನಾವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶಗಳಿಗಿಂತ ಹೆಚ್ಚು ಮೂಲೆಗುಂಪಾಗುವ ಸಾಧ್ಯತೆಯು ಭಾರತಕ್ಕೆ ಹೆಚ್ಚಿದೆ ಎಂದು ಹಿಂದೂ / ಭಾರತೀಯ ಧಾರ್ಮಿಕ ಭೌಗೋಳಿಕತೆ ಸೂಚಿಸುತ್ತದೆ. ಹೀಗಾಗಿ ಏಕಾಂಗಿಯಾಗಿ ಹೇಗೆ ನಡೆಯಬೇಕು ಎಂಬುದರ ಕುರಿತು ನಾವು ಚೀನಾ ಮತ್ತು ಇಸ್ರೇಲಿನಿಂದ ಪಾಠಗಳನ್ನು ಕಲಿಯಬೇಕಾಗಿದೆ. ನಮ್ಮ ಸ್ವಂತ ಸಾಮರ್ಥ್ಯವನ್ನು ನಿರ್ಮಿಸುವುದರ ಮೂಲಕ ಮತ್ತು ನಮಗೆ ಆಸಕ್ತಿಯಿಲ್ಲದ ಒಪ್ಪಂದಗಳು ಅಥವಾ ಮೈತ್ರಿಗಳಿಗೆ ಪ್ರವೇಶಿಸದಿರುವ ಮೂಲಕ ನಾವು ನಮ್ಮ ಏಕಾಂಗಿ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗುತ್ತದೆ. ಮೂಲೆಗುಂಪಾಗುವ ಭಯದಿಂದ ಸಂಪೂರ್ಣವಾಗಿ ನಾವು ಹೊರಬರಬೇಕಿದೆ.
“ಭಾರತವು ಆರ್ಸಿಇಪಿಯಿಂದ ಹೊರಗುಳಿದರೆ, ನಮ್ಮ ದೇಶ ದೊಡ್ಡ ವ್ಯಾಪಾರ ಬಣದಿಂದ ಪ್ರತ್ಯೇಕವಾಗಿ ಬಿಡುತ್ತದೆ. ಆರ್ಸಿಇಪಿ ದೇಶಗಳೊಂದಿಗಿನ ವ್ಯಾಪಾರವು ಸುಮಾರು 8 2.8 ಟ್ರಿಲಿಯನ್ ಆಗಿದೆ. ಭಾರತವು ಆರ್ಸಿಇಪಿ ಹೊರಗೆ ಕುಳಿತುಕೊಂಡರೆ ಅದು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿರಲಿದೆ, ಈ ಬಗ್ಗೆ ನೋಡುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ರಾಷ್ಟ್ರೀಯ ಹಿತಾಸಕ್ತಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಕಂಡುಹಿಡಿಯಲು ನಾವು ತೊಡಗಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ಅಕ್ಟೋಬರ್ 10 ರಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಹೇಳಿದ್ದರು. ಜಗತ್ತಿನ ಮುಂದೆ ಮೂಲೆಗುಂಪಾಗುವ ಭಯ ಅವರನ್ನು ಕಾಡುತ್ತಿತ್ತು. ಆದರೆ ಅಂತಿಮವಾಗಿ ಭಾರತ ಆರ್ಸಿಇಪಿ ಒಪ್ಪಂದದಿಂದ ಹೊರಗುಳಿದು ಏಕಾಂಗಿಯಾಗಿ ಮುನ್ನಡೆಯವ ನಿರ್ಧಾರವನ್ನು ತೆಗೆದುಕೊಂಡಿತು.
ಹಳೆಯ ವಿಶ್ವ ರೂಢಿಗಳು ಇಂದು ಕಳಚಿ ಬೀಳುತ್ತಿವೆ. ಬಹುತೇಕ ದೇಶಗಳು ರಕ್ಷಣೆಯ ವಿಷಯದಲ್ಲಿ ತಮ್ಮ ನಿರ್ದಿಷ್ಟ ಹಿತಾಸಕ್ತಿಗಾಗಿ ತಮ್ಮನ್ನು ತಾವು ಮೂಲೆಗುಂಪಿಗೆ ಒಳಪಡಿಸುತ್ತಿದೆ. ಜಗತ್ತಿನ ಹಲವು ಕಡೆಗಳಲ್ಲಿ ಇದ್ದ ತನ್ನ ಪಡೆಗಳನ್ನು ಅಮೆರಿಕಾ ಈಗ ವಾಪಾಸ್ ಪಡೆದುಕೊಳ್ಳುತ್ತಿದೆ. ಚೀನಾದೊಂದಿಗೆ ಅದು ವ್ಯಾಪಾರ ಗುದ್ದಾಟ ನಡೆಸುತ್ತಿದೆ. ಯುರೋಪ್ ಮತ್ತು ಜಪಾನಿನೊಂದಿಗೆ ಮೈತ್ರಿ ಕಡಿದುಕೊಳ್ಳುತ್ತಿದೆ, ಮಿಲಿಟರಿ ಒಪ್ಪಂದವನ್ನು ಹಿಂಪಡೆಯುತ್ತಿದೆ. ಇನ್ನು ಚೀನಾಗೆ ವಿಶ್ವದಲ್ಲಿ ಒಬ್ಬನೇ ಒಬ್ಬ ಸ್ನೇಹಿತ ಇರುವುದು ಕೂಡ ಕಷ್ಟ. ಅದು ವಿಷ ಕಾರುವ ದೇಶವೇ ಹೊರತು, ಸ್ನೇಹಪರ ರಾಷ್ಟ್ರವಲ್ಲ. ಭಾರತದಷ್ಟೇ ಅದು ಏಕಾಂಗಿಯಾಗಿದೆ, ಆದರೆ ಹಣದ ಪ್ರಭಾವದಿಂದ ಅದು ಬೆಂಬಲವನ್ನು ಪಡೆದುಕೊಳ್ಳುತ್ತಿದೆ.
ಜಪಾನ್ ಹಿಂದಿನಿಂದಲೂ ಒಂದು ರೀತಿಯ ಸಾಂಸ್ಕೃತಿಕ ಏಕಾಂಗಿತನದಲ್ಲೇ ಬದುಕುತ್ತಿದೆ. ಜಾಗತಿಕ ವ್ಯಾಪಾರ ವ್ಯವಸ್ಥೆಯ ಭಾಗವಾದರೂ ಅದು ಈಗ ತನ್ನದೇ ರಾಷ್ಟ್ರೀಯ ಗುರತು ಮತ್ತು ಸಂಸ್ಕೃತಿಯನ್ನು ಮರು ನಿರ್ಮಾಣ ಮಾಡಲು ಬಯಸುತ್ತಿದೆ. ಇನ್ನು ರಷ್ಯಾ ತನ್ನ ಆರ್ಥಿಕ ದುಃಸ್ಥಿತಿಯನ್ನು ಸರಿಪಡಿಸಲು ಚೀನಾಗೆ ನಿಕಟವಾಗಿದೆಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ.
ಇಸ್ಲಾಮಿಕ್ ರಾಷ್ಟ್ರಗಳು ಪ್ರತ್ಯೇಕವಾಗಿ ಒಡೆದು ಹೋಗುತ್ತಿದೆ. ಸೌದಿ ಅರೇಬಿಯಾದ ನೇತೃತ್ವದಲ್ಲಿ ಕೆಲವು ರಾಷ್ಟ್ರಗಳು, ಇರಾನ್ ನೇತೃತ್ವದಲ್ಲಿ ಕೆಲವು ಮತ್ತು ಟರ್ಕಿ ನೇತೃತ್ವದಲ್ಲಿ ಕೆಲವು ರಾಷ್ಟ್ರಗಳು ಇವೆ. ಪಾಕಿಸ್ಥಾನ ಮಾತ್ರ ಚೀನಾದ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಭಾರತ ಕೂಡ ತಾನು ಏಕಾಂಗಿಯಾಗುವ ಬಗ್ಗೆ ಎಂದಿಗೂ ಭಯ ಪಡಬಾರದು, ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನಿಯಮಗಳಿಗೂ ನಾವು ಒಳಪಡಬಾರದು. ನಮ್ಮ ಒಪ್ಪಂದಗಳನ್ನು ನಾವೇ ಮುನ್ನಡೆಸಬೇಕು.
ವಿಶ್ವ ಗುರು ಆಗುವ ಯಾವುದೇ ರಾಷ್ಟ್ರವೂ ಜನಸಮೂಹದ ನಡುವೆ ನಿಲ್ಲುವ ಸಲುವಾಗಿ ತನ್ನ ಹಿತಾಸಕ್ತಿಗಳನ್ನು ಬಲಿಕೊಡಬಾರದು. ವಿಶ್ವಕ್ಕೆ ಶಾಂತಿ, ಸೌಹಾರ್ದತೆಯ ಪಥವನ್ನು ಬೋಧಿಸುವವರು ನಾವಾಗಬೇಕು. ಜಗತ್ತು ನಮ್ಮನ್ನು ಅರ್ಥ ಮಾಡಿಕೊಳ್ಳುವವರೆಗೂ ನಾವು ಸ್ವತಂತ್ರವಾಗಿ ‘ಎಕ್ಲ ಚಲೋ ರೇ’ ಹಾಡನ್ನು ಹಾಡುತ್ತಾ ಮುನ್ನಡೆಯಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.