ಕಟ್ಟುವೆವು ನಾವು ಹೊಸ ನಾಡೊಂದನು,
ರಸದ ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ
ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ;
ನಮ್ಮದೆಯ ಕನಸುಗಳೆ ಕಾಮಧೇನು – ಆದಾವು ಕರೆದಾವು ವಾಂಛಿತವನು
“ಒಂದು ಜನಾಂಗದ ಕಣ್ಣು ತೆರೆಸಿದ ಕವಿ” ಎಂಬ ಹಿರಿಮೆಗೆ ಪಾತ್ರರಾದ ಡಾ. ಮೊಗೇರಿ ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನು’ ಎಂಬ ಕವನದ ಈ ಸಾಲುಗಳು ಅದೆಷ್ಟು ರಾಷ್ಟ್ರಭಕ್ತರ, ನಾಡ ಆರಾಧಕರ ತುಟಿಗಳ ಮೇಲೆ ಮಂತ್ರವಾಗಿ ನಲಿದಿವೆ ಎಂಬುದಕ್ಕೆ ಲೆಕ್ಖವಿಲ್ಲ. ಕನ್ನಡ ಕಾವ್ಯ ಪರಂಪರೆಗೆ ಹೊಸದಿಕ್ಕು ತೋರಿದ ಕವಿ-ಕರ್ತಾರನಾಗಿ, ಲೇಖಕ, ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರನಾಗಿ ಹೀಗೆ ಹತ್ತು ಹಲವು ಮುಖಗಳಲ್ಲಿ ವರ್ಣಗಳಲ್ಲಿ ಅಡಿಗರು ಪರಿಚಿತರು.
ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಮನೆಯ ವಾತಾವರಣದಿಂದಾಗಿ ಸಾಹಿತ್ಯ, ಸಂಗೀತ, ಯಕ್ಷಗಾನಗಳ ಪರಿಚಯ ಬಾಲ್ಯದಲ್ಲೇ ಆಗಿತ್ತು. ಹೀಗಾಗಿ 13 ರ ಎಳವೆಯಲ್ಲೇ ಅವರ ಸಾಹಿತ್ಯ ಪಯಣವೂ ಶುರುವಾಗಿತ್ತು. ಬೈಂದೂರುನಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಕುಂದಾಪುರದ ವಾತಾವರಣ ಅವರಿಗೆ ಬರೆಯಲು ಇನ್ನಷ್ಟು ಪ್ರೇರಣೆ ನೀಡಿತು. ಮೊದಲೇ ಇದ್ದ ಓದಿನ ಪ್ರೀತಿ ಇನ್ನಷ್ಟು ಬಲವಾಯಿತು. ಆ ಸಂದರ್ಭದಲ್ಲಿ ಶಿವರಾಮ ಕಾರಂತರ ಅಣ್ಣ ಕೋಲ ಕಾರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು.
ಆಗ ಇಡೀ ದೇಶವೇ ಸ್ವಾತಂತ್ರ್ಯ ಹೋರಾಟದ ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದ ಕಾಲ. ಅಡಿಗರೂ ಹುಮ್ಮಸ್ಸಿನಿಂದ ಹೋರಾಟದಲ್ಲಿ ಭಾಗಿಯಾದರು. ಹೆಂಡದಂಗಡಿಗಳ ಮುಂದೆ ‘ಪಿಕೆಟಿಂಗ್’ ಮಾಡಿದರು. ದೇಶಭಕ್ತಿಯ ಉತ್ಸಾಹ, ಕಾವು ಅವರ ಕಾವ್ಯರಚನೆಗೆ ಪೂರಕ ಸರಕುಗಳಾದವು, ಮಾತ್ರವಲ್ಲ; ಅವರ ಸಮಗ್ರ ಜೀವನದ ಸಮಾಜಮುಖಿ ದೃಷ್ಟಿಗೆ ಕಾರಣವಾದವು. ಬಿ.ಎ., ಎಂ.ಎ. ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ನಂತರ ಅಡಿಗರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾ ಸೇರಿದಂತೆ ಅನೇಕ ಕಡೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.
ಅಡಿಗರು ಸಾಹಿತಿಗಳನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದರು. ತಮ್ಮ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಿದ್ದರು. ಅವರು ಒಬ್ಬರೇ ಕಾಲೇಜಿನ ’ಕ್ಯಾಂಟೀನ್’ ಹೋಗಿದ್ದು ತೀರಾ ಅಪರೂಪವೇ ಸರಿ. ಅನೇಕ ಬಾರಿ ತಮ್ಮ ವಿದ್ಯಾರ್ಥಿಗಳಿಗೂ ಶುಲ್ಕ ತುಂಬಲು, ಪುಸ್ತಕ ಕೊಳ್ಳಲು ತಮ್ಮ ಸಂಬಳದಿಂದಲೇ ಸಹಾಯ ಮಾಡುತ್ತಿದ್ದರು. ಮನೆಯಲ್ಲಿಯೂ ಒಬ್ಬಿಬ್ಬರು ವಿದ್ಯಾರ್ಥಿಗಳು ಯಾವಾಗಲೂ ಇದ್ದೇ ಇರುತ್ತಿದ್ದರು.
1971 ರಲ್ಲಿ ಅಂದಿನ ರಾಜಕೀಯ ವಿದ್ಯಮಾನಗಳಿಗೆ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ತಮ್ಮ ಕರ್ತವ್ಯವನ್ನು ಮನಗಂಡು ಲೋಕಸಭಾ ಚುನಾವಣೆಯಲ್ಲಿ ೯ ಪಕ್ಷಗಳ ಒಕ್ಕೂಟದ ಪರವಾಗಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಸ್ಪರ್ಧಿಸಿದರು. ಏಕಕಾಲಕ್ಕೆ ಕಮ್ಯೂನಿಸಂ ಮತ್ತು ಬಂಡವಾಳಶಾಹಿಯನ್ನು ವಿರೋಧಿಸಿದರು. ಅವರ ಪ್ರಕಾರ ಯಾವ ಬಂಡಾಯ ವಾಗುವುದಿದ್ದರೂ ಅದು ವ್ಯಕ್ತಿಯಲ್ಲಿ! ಈ ದೃಷ್ಟಿಯಿಂದಲೇ ಅವರು ತಮ್ಮ ಸಾಹಿತ್ಯವನ್ನು ನೋಡುವುದೇ ವ್ಯಕ್ತಿಯ ಬೆಳಕಿನಲ್ಲಿ. ಆದರೆ, ಅವರ ರಾಷ್ಟ್ರೀಯತೆಯ ಆದರ್ಶಗಳನ್ನೇ ಅವಗಣಿಸಿ ಅವರೊಬ್ಬ ಪಕ್ಷವಿಶೇಷವೊಂದರ ರಾಜಕಾರಣಿ ಮಾತ್ರ ಎಂದೇ ಸಾಹಿತ್ಯದ ಒಂದು ವಲಯದಲ್ಲಿ ಅವರನ್ನು ಬಿಂಬಿಸಲಾಯಿತು. ಇಂತಹ ವರ್ತನೆಗಳಿಂದಾಗಿ ಅವರ ಧ್ಯೇಯಗಳಿಗೇನೂ ಕುಂದಾಗಲಿಲ್ಲ ಎಂಬದು ಮಾತ್ರ ಅವರ ಸತ್ಯನಿಷ್ಠೆಗೆ ಸಾಕ್ಷಿ.
ಅಡಿಗರು ಭೂಮಿಗೀತ, ಭೂತ, ಕೂಪಮಂಡೂಕ, ಶ್ರೀರಾಮನವಮಿಯ ದಿವಸ, ವರ್ಧಮಾನ, ಚಿಂತಾಮಣಿಯಲ್ಲಿ ಕಂಡಮುಖ ದಂತಹ ಶ್ರೇಷ್ಟ ಕವನಗಳನ್ನು ಬರೆದರು. ಭೂಮಿಗೀತವು ಭೂಮಿ ಮತ್ತು ಮನುಷ್ಯ, ಮನುಷ್ಯ ಮತ್ತು ಕಾಲದ ಸಂಬಂಧವನ್ನು ಶೋದಿಸುತ್ತದೆ. ಇಲ್ಲಿನ ಕಾವ್ಯನಾಯಕ ಭೂಮಿ ಮತ್ತು ಆಕಾಶಗಳ ಸೆಳೆತಕ್ಕೆ ಸಿಕ್ಕಿ ತನ್ನ ಅಸ್ತಿತ್ವದ ಹುಡುಕಾಟದಲ್ಲಿರುವ ತ್ರಿಶಂಕು. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ, ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ- ಅಡಿಗರ ಕಾವ್ಯರೀತಿ.
ಅಡಿಗರು ಅನುವಾದ, ವಿಮರ್ಶೆ, ಚಿಂತನಶೀಲ ಲೇಖನಗಳನ್ನು ಬರೆದಿದ್ದಾರೆ, ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ. ಅಡಿಗರನ್ನು ಮುಖ್ಯರೆಂದು ಗುರುತಿಸುವುದು ಅವರ ಕಾವ್ಯದ ಸಾಧನೆಗಳನ್ನು ತಮ್ಮ ನಿರಂತರ ಪ್ರಯೋಗಶೀಲತೆಯಿಂದ ಹಿಗ್ಗಿಸಿದ ಕವಿ ಎಂದಾಗಿ. ಇವರಿಗೆ ಸಂದ ಗೌರವ ಪ್ರಶಸ್ತಿಗಳು: ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಬೀರ್ ಸಮ್ಮಾನ್, ಪಂಪಪ್ರಶಸ್ತಿ (ಮರಣೋತ್ತರ), 1973 ರಲ್ಲಿ ಧರ್ಮಸ್ಥಳದ ಐವತ್ತೈದನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಏರಿದ್ದರು. 1989 ರಲ್ಲಿ ಅವರು ಪಾರ್ಶ್ವವಾಯು ಪೀಡಿತರಾದರೂ ಅವರ ಕಾವ್ಯಸೃಷ್ಟಿ ನಡೆಯುತ್ತಲೇ ಇತ್ತು. ಕನ್ನಡ ಕಾವ್ಯಪರಂಪರೆಗೆ ಹೊಸದೃಷ್ಟಿಯನ್ನು ಕೊಟ್ಟ ಅಡಿಗರ ಜೀವನಯಾತ್ರೆ ನವೆಂಬರ್ 14, 1992 ರಂದು ಕೊನೆಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.