16 ರಾಷ್ಟ್ರಗಳ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕತೆ ಅಥವಾ ಆರ್ಸಿಇಪಿ ಭಾಗವಾಗುವುದಿಲ್ಲ ಎಂದು ಸೋಮವಾರ ಭಾರತ ಸರ್ಕಾರ ಘೋಷಿಸಿದೆ.
ಆರ್ಸಿಇಪಿ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿತ್ವವ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಹತ್ತು ಸದಸ್ಯ ರಾಷ್ಟ್ರಗಳು ಮತ್ತು ಅದರ ಆರು ಎಫ್ಟಿಎ ಪಾಲುದಾರರಾದ ಚೀನಾ, ಭಾರತ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಈ ಒಪ್ಪಂದದಿಂದ ಭಾರತದ ತಯಾರಿಕಾ ವಲಯ ಮತ್ತು ಹೈನುಗಾರಿಕೆಗೆ ಧಕ್ಕೆಯಾಗುತ್ತದೆ. ಇದಕ್ಕಾಗಿಯೇ ಈ ಒಪ್ಪಂದವನ್ನು ಭಾರತ ತಿರಸ್ಕರಿಸಿದೆ.
ಸುಂಕ ರಹಿತ ವ್ಯಾಪಾರಕ್ಕೆ ಸದಸ್ಯ ರಾಷ್ಟ್ರಗಳಿಗೆ ಅವಕಾಶ ಕೊಡುವುದರಿಂದ ಇದು ನಮ್ಮ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತದೆ. ಹೀಗಾಗಿ ಕೆಲವು ಸರಕುಗಳ ಮೇಲೆ ಸುಂಕ ಜಾರಿಯಲ್ಲಿರಲು ಅವಕಾಶ ನೀಡಬೇಕು ಎಂದು ಭಾರತ ಪಟ್ಟು ಹಿಡಿದಿತ್ತು. ಆದರೆ ಇದಕ್ಕೆ ಉಳಿದ ರಾಷ್ಟ್ರಗಳು ಸಹಮತ ಸೂಚಿಸದೆ ಇದ್ದಿದ್ದರಿಂದ ಈ ಒಪ್ಪಂದವನ್ನು ತಿರಸ್ಕರಿಸಲಾಗಿದೆ. ವಿಯೆಟ್ನಾಂನಲ್ಲಿ 2020ರ ಫೆಬ್ರವರಿಯಲ್ಲಿ ನಡೆಯಲಿರುವ ಆರ್ಸಿಇಪಿ ಶೃಂಗಸಭೆಯಲ್ಲಿ ಭಾರತವನ್ನು ಹೊರತುಪಡಿಸಿ ಉಳಿದ 15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲಿವೆ.
ಈ ಒಪ್ಪಂದಕ್ಕೆ ಸಹಿ ಹಾಕಿದರೆ ಚೀನಾದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆ ಆಮದಾಗುತ್ತದೆ. ಇದರಿಂದ ಭಾರತೀಯ ವಸ್ತುಗಳಿಗೆ ಬೇಡಿಕೆ ಕುಸಿದು, ಭಾರತದ ತಯಾರಿಕಾ ವಲಯಕ್ಕೆ ಧಕ್ಕೆಯಾಗುತ್ತದೆ. ಹಾಲಿನ ಉತ್ಪನ್ನಗಳೂ ಕಡಿಮೆ ಬೆಲೆಯಲ್ಲಿ ಆಮದಾಗುವುದರಿಂದ ಭಾರತದ ಹೈನುಗಾರಿಕೆಗೆ ಧಕ್ಕೆಯಾಗುವ ಸಾಧ್ಯತೆ ಇತ್ತು.
ತನ್ನ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಮತ್ತು ತನ್ನ ಕೆಲವೊಂದು ನಿರ್ಧಿಷ್ಟ ಉತ್ಪನ್ನಗಳ ಹಿತರಕ್ಷಣೆ ಮಾಡುವ ಉದ್ದೇಶದಿಂದ ಭಾರತವು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲವು ಸಂಶಯಗಳನ್ನು ವ್ಯಕ್ತಪಡಿಸಿತ್ತು. ಇದರಲ್ಲಿ ಚೀನಾ ದೇಶದ ಕಳಪೆ ಗುಣಮಟ್ಟದ ಕೃಷಿ ಮತ್ತು ಉದ್ಯಮ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಆತಂಕವನ್ನು ಭಾರತ ವ್ಯಕ್ತಪಡಿಸಿತ್ತು.
‘RCEP ಒಪ್ಪಂದದ ಸದ್ಯದ ರೂಪುರೇಶೆಯು ಅದರ ಮೂಲ ಪ್ರಸ್ತಾವನೆಯಲ್ಲಿದ್ದ ಅಂಶಗಳನ್ನು ಸಂಪೂರ್ಣವಾಗಿ ಒಳಗೊಳ್ಳುವಲ್ಲಿ ವಿಫಲವಾಗಿದೆ. ಮತ್ತು ಭಾರತ ಎತ್ತಿದ್ದ ಕೆಲವೊಂದು ಆಕ್ಷೇಪಗಳು ಮತ್ತು ಸಂದೇಹಗಳಿಗೆ ಸಮಾಧಾನಕರ ಸಮಜಾಯಿಸಿ ನೀಡುವಲ್ಲಿಯೂ ಇಲ್ಲಿ ಮಂಡಿಸಲಾದ RCEP ಒಪ್ಪಂದದ ಪ್ರತಿ ವಿಫಲವಾಗಿದೆ’ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ರೈತರು, ವ್ಯಾಪಾರಿಗಳು, ವೃತ್ತಿಪರರು, ಕೈಗಾರಿಕೆಗಳು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಉಲ್ಲೇಖಿಸಿರುವ ಮೋದಿ, “ನಾನು ಎಲ್ಲಾ ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆರ್ಸಿಇಪಿ ಒಪ್ಪಂದವನ್ನು ತುಲನೆ ಮಾಡಿದಾಗ ನನಗೆ ಸಕಾರಾತ್ಮಕ ಉತ್ತರ ಸಿಗಲಿಲ್ಲ. ಆದ್ದರಿಂದ, ಗಾಂಧೀಜಿಯ ಸ್ಪೂರ್ತಿಯಾಗಲಿ, ನನ್ನ ಅಂತಃಕರಣವಾಗಲಿ ಆರ್ಸಿಇಪಿಗೆ ಸೇರಲು ನನಗೆ ಅನುಮತಿ ನೀಡಲಿಲ್ಲ” ಎಂದಿದ್ದಾರೆ.
ಆದರೆ, ಆಸಿಯಾನ್ ಮತ್ತು ಅದರ ಇತರ ಐದು ಮುಕ್ತ-ವ್ಯಾಪಾರ ಪಾಲುದಾರುಕತೆಯನ್ನೊಳಗೊಂಡ RCEPನಿಂದ ಹಿಂದೆ ಸರಿಯುವ ನಿರ್ಧಾರವನ್ನು ಬಿಜೆಪಿ ಏಕಾಏಕಿಯಾಗಿ ತೆಗೆದುಕೊಳ್ಳಲಿಲ್ಲ. ಈ ಒಪ್ಪಂದದ ಬಗ್ಗೆ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಇತರ ವಿವಿಧ ಸಂಸ್ಥೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸುವಂತೆ ಮಾಡಿದ್ದು ಕೂಡ ಇದೇ ನಿರ್ಧಾರ ಎನ್ನಬಹುದು.
ಭಾರತವು ಅತಿದೊಡ್ಡ ಮುಕ್ತ-ವ್ಯಾಪಾರ ಉಪಕ್ರಮಕ್ಕೆ ಸೇರಬೇಕೆ ಎಂಬ ಬಗ್ಗೆ ಕೈಗಾರಿಕೆಗಳು ಮತ್ತು ವ್ಯಾಪಾರಿಗಳು ಮಿಶ್ರ ಅಭಿಪ್ರಾಯವನ್ನು ಹೊಂದಿದ್ದರೂ, ರೈತ ಸಂಘಗಳು ಮತ್ತು ಸಂಘದ ಅಂಗಸಂಸ್ಥೆಗಳು, ವಿಶೇಷವಾಗಿ ಸ್ವದೇಶಿ ಜಾಗರಣ್ ಮಂಚ್ ಭಾರತದ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಸ್ಪಷ್ಟವಾಗಿ ವಿರೋಧಿಸಿತು. ವಾಸ್ತವವಾಗಿ, ಸಂಘ ಮತ್ತು ಇತರ ವಿವಿಧ ಸಂಸ್ಥೆಗಳು ನೀಡಿದ ಮಾಹಿತಿಗಳು ಆರ್ಸಿಇಪಿಯಿಂದ ಹೊರಬರಲು ಮೋದಿ ಸರ್ಕಾರಕ್ಕೆ ಸಹಾಯಕವಾಗಿ ಕಾರ್ಯನಿರ್ವಹಿಸಿತು. ಈ ಒಪ್ಪಂದವು ಚೀನಾದಂತಹ ದೇಶಗಳಿಗೆ ಭಾರತೀಯ ಮಾರುಕಟ್ಟೆಗಳ ಮುಕ್ತ ಪ್ರವೇಶವನ್ನು ನೀಡುತ್ತದೆ.
ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳು ವ್ಯಾಪಾರ ಒಪ್ಪಂದಕ್ಕೆ ಹೆಚ್ಚು ಮಹತ್ವ ನೀಡದಂತೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದವು, ಒಂದು ವೇಳೆ ಒಪ್ಪಂದಕ್ಕೆ ಒಳಪಟ್ಟರೆ ದೇಶೀಯ ಉದ್ಯಮವು ಅಂಗವಿಕಲವಾಗುತ್ತದೆ ಎಂದು ಎಚ್ಚರಿಸಿತ್ತು. ಭಾರತದೊಳಗೆ ಚೀನಾದ ವಸ್ತುಗಳು ಸುಲಭವಾಗಿ ಎಗ್ಗಿಲ್ಲದೆ ಪ್ರವೇಶಿಸುತ್ತಿದ್ದವು. ಇದರಿಂದ ದೇಶೀಯ ಸಣ್ಣ ಉದ್ಯಮ ನಶಿಸಿ ಹೋಗುತ್ತಿತ್ತು.
ದೇಶದ 250 ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಯಂತಹ ರೈತ ಸಂಘಗಳು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಯೋಜಿಸಿದ್ದವು ಮತ್ತು ಆರ್ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಕೃಷಿಯನ್ನು ಸೇರಿಸದಂತೆ ಸರ್ಕಾರವನ್ನು ಎಚ್ಚರಿಸಿದ್ದವು.
ಆರ್ಸಿಇಪಿಗೆ ಸೇರ್ಪಡೆಗೊಳ್ಳದಿರಲು ಮೋದಿ ಸರ್ಕಾರ ನಿರ್ಧರಿಸಿದ್ದರಿಂದ, ಉದ್ಯಮ, ವ್ಯಾಪಾರಿಗಳು ಮತ್ತು ರೈತ ಸಂಘಗಳು ಮೋದಿ ಸರ್ಕಾರದ ನಿರ್ಧಾರವನ್ನು ಶ್ಲಾಘಿಸುತ್ತಿವೆ. ದೇಶದ ಹಿತ ಕಾಪಾಡಲು ತಾನು ಸದಾ ಬದ್ಧ ಎಂಬುದನ್ನು ಮೋದಿ ಮತ್ತೊಮ್ಮೆ ದೃಢಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.