ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿ ತಟದಲ್ಲಿ ದೇಶದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಅವರ ಸ್ಮರಣಾರ್ಥ ನಿರ್ಮಾಣವಾದ ವಿಶ್ವದ ಅತೀ ಎತ್ತರದ ಅತ್ಯದ್ಭುತವಾದ ಪ್ರತಿಮೆ ‘ಏಕತಾ ಪ್ರತಿಮೆ’ಯನ್ನು ನಮ್ಮ ದೇಶದ ಬುದ್ಧಿ ಜೀವಿಗಳು ಆಗಾಗ ಟೀಕಿಸುತ್ತಿರುತ್ತಾರೆ. ಪ್ರತಿಮೆಗೆ ಇಷ್ಟೊಂದು ಹಣ ಖರ್ಚು ಮಾಡುವ ಬದಲು ಆಸ್ಪತ್ರೆ, ಶಾಲೆಗಳಿಗೆ ಬಳಸಬಹುದಿತ್ತಲ್ಲ ಎಂದು ವಾದಿಸುತ್ತಾರೆ.
ಸೋಶಿಯಲ್ ಮೀಡಿಯಾ ಎಕನಾಮಿಸ್ಟ್ ಮತ್ತು ಯೂಟ್ಯೂಬರ್ ಧ್ರುವ್ ರತಿ ತನ್ನ ಲೇಖನದಲ್ಲಿ, ಏಕತಾ ಪ್ರತಿಮೆಯು ತಾಜ್ ಮಹಲ್ನಷ್ಟು ಪ್ರಸಿದ್ಧವಾದರೂ ಕೂಡ ಅದರ ದಾಖಲೆಯನ್ನು ಮುರಿಯಲು 120 ವರ್ಷಗಳೇ ಬೇಕು ಎಂದು ವಾದಿಸಿದ್ದಾರೆ. ಈ ಲೇಖನದಲ್ಲಿ ಅವರು, ತಾಜ್ ಮಹಲ್ ವಾರ್ಷಿಕ 25 ಕೋಟಿ ರೂಪಾಯಿ ಆದಾಯ ತಂದುಕೊಡುತ್ತದೆ ಎಂದು ವಾದಿಸಿದ್ದರು. “ಏಕತಾ ಪ್ರತಿಮೆಯು ಅದರ ಶೇ.10ರಷ್ಟು ಕೂಡ ಆದಾಯ ತಂದುಕೊಡಲಾರದು ಎಂಬುದು ಶತಸಿದ್ಧ. ತಾಜ್ ಮಹಲಿನಷ್ಟು ಖ್ಯಾತವಾದರೂ ಅದರ ದಾಖಲೆಯನ್ನು ಮುರಿಯಲು ಪ್ರತಿಮೆಗೆ 120 ವರ್ಷಗಳು ಬೇಕು” ಎಂದಿದ್ದಾರೆ.
2016 ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಾಜ್ಮಹಲ್ ಹಿಂದಿನ ಮೂರು ವರ್ಷಗಳಲ್ಲಿ ಟಿಕೆಟ್ ಮಾರಾಟ ಮತ್ತು ಇತರ ಪಾವತಿ ಸೇವೆಗಳ ಮೂಲಕ 75 ಕೋಟಿ ರೂಪಾಯಿ ಗಳಿಸಿದೆ. ಆದರೆ, ಏಕತಾ ಪ್ರತಿಮೆಯ ಆದಾಯದ ಬಗೆಗಿನ ಇತ್ತೀಚಿನ ವರದಿಯ ಪ್ರಕಾರ, ಸರ್ದಾರ್ ಪಟೇಲ್ ಅವರ ಪ್ರತಿಮೆಗೆ 26 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಹನ್ನೊಂದು ತಿಂಗಳಲ್ಲಿ 71.66 ಕೋಟಿ ರೂಪಾಯಿಗಳನ್ನು ಗಳಿಸಿದೆ. ಪ್ರತಿಮೆ ನಿರ್ಮಾಣ ಮಾಡಲು ತಗುಲಿದ ವೆಚ್ಚ 3,000 ಕೋಟಿ ರೂಪಾಯಿ. ಆದರೆ 10 ತಿಂಗಳಲ್ಲಿ ಅದು ಗಳಿಸಿದ ಆದಾಯವನ್ನು ಲೆಕ್ಕ ಹಾಕಿದರೆ ಮುಂದಿ 50 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಾಣಕ್ಕೆ ತಗುಲಿದ ವೆಚ್ಚವನ್ನು ಅದು ಮರಳಿ ಗಳಿಸಲಿದೆ.
ಈ ಪ್ರತಿಮೆ ಈಗಾಗಲೇ ವಿಶ್ವದ ಅತಿ ಹೆಚ್ಚು ಭೇಟಿ ನೀಡಿದ 25 ಸ್ಥಳಗಳಲ್ಲಿ ಒಂದಾಗಿದೆ. ವಿಶ್ವದ 25 ನೇ ಅತಿ ಹೆಚ್ಚು ಭೇಟಿ ನೀಡಿದ ಸ್ಥಳವಾದ ಮಾಸ್ಕೋದ ಕ್ರೆಮ್ಲಿನ್ 2018 ರಲ್ಲಿ 2.47 ಮಿಲಿಯನ್ ಪ್ರವಾಸಿಗರನ್ನು ಪಡೆದಿದ್ದರೆ, ಏಕತಾ ಪ್ರತಿಮೆಯು ಈಗಾಗಲೇ ಮೊದಲ ಹನ್ನೊಂದು ತಿಂಗಳಲ್ಲಿ 2.6 ದಶಲಕ್ಷಕ್ಕೂ ಹೆಚ್ಚು ಜನರನ್ನು ಪಡೆದುಕೊಂಡಿದೆ. ಈ ಪ್ರತಿಮೆಯು ಸಾರ್ವಜನಿಕರಿಗೆ ತೆರೆಯಲ್ಪಟ್ಟು ಒಂದು ವರ್ಷ ಪೂರ್ಣಗೊಂಡು, ಒಂದು ವರ್ಷದೊಳಗೆ ಇದು ಲಂಡನ್ ಟವರ್ ಅನ್ನೂ ಮೀರಿ ಬೆಳೆಯುವ ಆಶಾವಾದವನ್ನು ಸೃಷ್ಟಿಸಿದೆ. ಲಂಡನ್ ಟವರ್ 2018 ರಲ್ಲಿ 2.85 ಮಿಲಿಯನ್ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಂಡಿತ್ತು.
ಪ್ರಸ್ತುತ, ಲಂಡನ್ ಟವರ್ ಲಂಡನ್ನಿನ ಮಹಾನಗರದ ಸುಂದರವಾದ ರಚನೆಯಾಗಿದ್ದು, ಇದು ನಗರದ ಶಕ್ತಿ ಮತ್ತು ಜಾಗತಿಕ ಸ್ಥಿತಿಯನ್ನು ಸಂಕೇತಿಸುತ್ತದೆ, ಇದು ಅತಿ ಹೆಚ್ಚು ಭೇಟಿ ನೀಡಿದ 20ನೇ ಸ್ಮಾರಕವಾಗಿದೆ. ಶೀಘ್ರದಲ್ಲೇ ಏಕತಾ ಪ್ರತಿಮೆಯು ಇದರ ದಾಖಲೆಯನ್ನು ಮುರಿದು ಮುನ್ನುಗ್ಗುವ ನಿರೀಕ್ಷೆ ಇದೆ. ಅಕ್ಟೋಬರ್ ಅಂತ್ಯದಲ್ಲಿ ಪ್ರತಿಮೆಯು ಒಂದು ವರ್ಷವನ್ನು ಪೂರ್ಣಗೊಳಿಸಿದೆ, ಇದನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಸರ್ದಾರ್ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟ್ ಒಂದು ವರ್ಷದ ಅಂಕಿಅಂಶಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಅಕ್ಟೋಬರ್ 31 ರಂದು ಏಕತಾ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಪ್ರತಿಮೆಯು 182 ಮೀಟರ್ ಎತ್ತರವಾಗಿದೆ, ಇದು ಸರಾಸರಿ ಮನುಷ್ಯನ ಎತ್ತರಕ್ಕಿಂತ 100 ಪಟ್ಟು ಹೆಚ್ಚು. ಇದು ಅಮೆರಿಕಾದ ಪ್ರಸಿದ್ಧ ‘ಸ್ಟ್ಯಾಚು ಆಫ್ ಲಿಬರ್ಟಿ’ಗಿಂತ ಗಾತ್ರದಲ್ಲಿ ದ್ವಿಗುಣವಾಗಿದೆ ಮತ್ತು ವಿಶ್ವದ ಎರಡನೇ ಅತಿ ಎತ್ತರದ ರಚನೆಯಾದ ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನಿಗಿಂತ 54 ಮೀಟರ್ ಹೆಚ್ಚು ಎತ್ತರವಾಗಿದೆ. ಇದು ಸರ್ದಾರ್ ಪಟೇಲರಿಗೆ ಸಮರ್ಪಿತವಾದ ಪ್ರತಿಮೆಯಾಗಿದೆ. ಅವರನ್ನು ‘ಐರನ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ಭಾರತವನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸರ್ದಾರ್ ಪಟೇಲ್ ಬಗ್ಗೆ ಮತ್ತು ದೇಶದ ಹಿರಿಮೆಯ ಬಗ್ಗೆ ಅಪಾರ ಗೌರವವಿರುವವರು ಈ ಪ್ರತಿಮೆಯನ್ನು ನೋಡಲು ಹೆಚ್ಚು ಉತ್ಸಾಹ ತೋರಿಸುತ್ತಾರೆ.
ಗುಜರಾತ್ನಲ್ಲಿ ಈಗಾಗಲೇ ಎರಡು ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ, ಒಂದು ಗಾಂಧಿ ಸರ್ಕ್ಯೂಟ್ ಇನ್ನೊಂದು ಗ್ರೇಟ್ ರಣ್ ಆಫ್ ಕಚ್. ಈ ರಾಜ್ಯದ ಆರ್ಥಿಕತೆ ಮತ್ತು ಪ್ರವಾಸೋದ್ಯಮವು ‘ಏಕತಾ’ ಪ್ರತಿಮೆಯಿಂದಾಗಿ ಹೆಚ್ಚಿನ ಉತ್ತೇಜನವನ್ನು ಪಡೆದುಕೊಳ್ಳುತ್ತಿದೆ. ಈ ಪ್ರತಿಮೆ ಪಶ್ಚಿಮ ಗುಜರಾತ್ನ ನರ್ಮದಾ ಜಿಲ್ಲೆಯಲ್ಲಿದೆ, ಅಹಮದಾಬಾದ್ನಿಂದ 200 ಕಿ.ಮೀ ದೂರದಲ್ಲಿದೆ. ಪಶ್ಚಿಮ ಗುಜರಾತ್ನ ಪ್ರದೇಶವು ಗ್ರೇಟರ್ ಮುಂಬಯಿ ಮತ್ತು ನಾಸಿಕ್ ಪ್ರದೇಶಕ್ಕೂ ಸಮೀಪದಲ್ಲಿದೆ, ಇದು ದೇಶದ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿದೆ. ಆದ್ದರಿಂದ, ಪ್ರತಿಮೆಯು ಅಹಮದಾಬಾದ್, ಸೂರತ್, ಮುಂಬಯಿ ಮತ್ತು ನಾಸಿಕ್ ನಗರಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶಗಳು ಹೂವಿನ ಕಣಿವೆ, ವಿಂಧ್ಯಾಚಲ ಮತ್ತು ಸತ್ಪುರ ಬೆಟ್ಟ ಶ್ರೇಣಿಗಳು, ಮತ್ತು ನರ್ಮದಾ ನದಿಯ ದಡದಲ್ಲಿರುವ ವಿಶ್ವದ ಅತೀದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಸರ್ದಾರ್ ಸರೋವರ್ ಅಣೆಕಟ್ಟು ಮುಂತಾದುವುಗಳನ್ನು ಒಳಗೊಂಡಿದೆ. ಟಿಕೆಟ್ ದರವನ್ನು ಕೂಡ ಸಮಂಜಸವಾದ ರೀತಿಯಲ್ಲಿ ಇಡಲಾಗಿದೆ. ವಯಸ್ಕರಿಗೆ 120 ರೂಪಾಯಿ ಮತ್ತು 3-15 ವರ್ಷ ವಯಸ್ಸಿನ ಮಕ್ಕಳಿಗೆ 60 ರೂಪಾಯಿ ಆಗಿದೆ. ಕೈಗೆಟುಕುವ ಮಟ್ಟದಲ್ಲಿ ದರವನ್ನು ನಿಗದಿಪಡಿಸಲಾಗಿದ್ದು ಇದು ಇನ್ನೊಂದು ಮಹತ್ತರ ನಿರ್ಧಾರವಾಗಿದೆ. ಸರ್ದಾರ್ ಪಟೇಲ್ ಅವರ ಎದೆಯಿರುವ 400 ಅಡಿ ಎತ್ತರದಲ್ಲಿ ಕಾಣುವ ವಿಹಂಗಮ ನೋಟವನ್ನು ನೋಡಲು ಬಯಸುವವರು 350 ರೂಪಾಯಿಗಳನ್ನು ಪಾವತಿಸಬೇಕು. ಆಧುನಿಕ ಭಾರತದ ಸ್ಥಾಪಕರಲ್ಲಿ ಒಬ್ಬರಾದ ಸರ್ದಾರ್ ಪಟೇಲ್ ಅವರ ಪ್ರತಿಮೆ ಗುಜರಾತ್ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುತ್ತಿದೆ ಮತ್ತು ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.