ಬೆಳ್ತಂಗಡಿ : ಮದ್ಯಪಾನಾದಿ ದುಶ್ಚಟಗಳ ತಡೆಗಟ್ಟುವಿಕೆ, ನಿರ್ವಹಣೆ ಮತ್ತು ಸಮಾಜ ಬಾಹಿರ ಚಟುವಟಿಕೆಗಳ ವಿರುದ್ದ ಜನಾಂದೋಲನ ರೂಪಿಸುವ ರಾಜ್ಯಮಟ್ಟದ ಸಂಸ್ಥೆಯಾಗಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಾರ್ಷಿಕ ವರದಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಡಾ| ಹೆಗ್ಗಡೆ ಅವರು, ವೇದಿಕೆಯ ಮೂಲಕ ಗಣನೀಯವಾಗಿ ವ್ಯಸನಿಗಳು ಹೊಸ ಜೀವನ ಕಂಡುಕೊಂಡಿದ್ದಾರೆ. ಈ ಮೂಲಕ ಕುಟುಂಬದಲ್ಲಿ ನೆಮ್ಮದಿ ಕಾಣುವಂತಾಗಿದೆ. ಪಾನಮುಕ್ತರಾದ ನವಜೀವನ ಸದಸ್ಯರನ್ನು ಮತ್ತೊಮ್ಮೆ ಕುಡಿತಕ್ಕೆ ಬಲಿಬೀಳದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನವಜೀವನ ಸಮಿತಿಗಳನ್ನು ಬಲಪಡಿಸಬೇಕೆಂದು ಸಲಹೆ ನೀಡಿದರು.
ವ್ಯಸನಗಳಿಗೆ ಬಲಿಬೀಳದಂತೆ ಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ನಾಲ್ಕು ಸಾಕ್ಷ್ಯಾಚಿತ್ರಗಳನ್ನು ಮಾಡಲಾಗಿದೆ ಎಂದು ಸಲಹೆ ನೀಡಿದರು. ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಸ್ ವರದಿಯ ಮಾಹಿತಿ ನೀಡಿ, ವರದಿಯ ವರ್ಷದಲ್ಲಿ 123 ಮದ್ಯವರ್ಜನ ಶಿಬಿರಗಳನ್ನು ನಡೆಸಿ 9277 ಜನರಿಗೆ ಚಿಕಿತ್ಸೆ ನೀಡಲಾಗಿದೆ.ಪ್ರಸ್ತುತ ತಿಂಗಳಲ್ಲಿ 17 ಶಿಬಿರಗಳು ನಡೆಸಲಾಗುತ್ತಿದೆ. ರಾಜ್ಯದ 28 ಜಿಲ್ಲೆಗಳಲ್ಲಿ 19 ಜಿಲ್ಲಾ ವೇದಿಕೆ, ೯ ತಾಲೂಕು ವೇದಿಕೆ, 80 ವಲಯ ವೇದಿಕೆ, 184 ಗ್ರಾಮಸಮಿತಿಗಳನ್ನು ರಚಿಸಲಾಗಿದೆ. ಸುಮಾರು 8,790 ಸಕ್ರೀಯ ಸ್ವಯಂ ಸೇವಕರು, 880 ಪದಾಧಿಕಾರಿಗಳು ಈ ಉದ್ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಪ್ರತೀ ವರ್ಷ 1.25 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ದ ಜಾಗೃತಿ ಮೂಡಿಸಲಾಗುತ್ತಿದೆ. 11,973 ಮನೆಭೇಟಿ ಕಾರ್ಯಕ್ರಮ, 413 ಮಾಹಿತಿ ಮತ್ತು ಪ್ರಚಾರ ಕಾರ್ಯಕ್ರಮ ನಡೆಸಲಾಗಿದೆ. ಬಿಗ್ ಎಫ್ಎಂ92.7ನಲ್ಲಿ ಬಿಗ್ಫೈಟ್ ಕಾರ್ಯಕ್ರ್ರಮ, ಅಂತರ್ಜಾಲ ಮತ್ತು ಫೇಸ್ಬುಕ್ಗಳಲ್ಲಿ ಮಾಹಿತಿ, ಜಾಗೃತಿ ನೀಡಲಾಗುತ್ತಿದೆ.
ಪಾನಮುಕ್ತರ 386 ನವಜೀವನ ಸಮಿತಿಗಳನ್ನು ರಚಿಸಲಾಗಿದೆ. 2985 ಮಂದಿಗೆ ನೊಂದಾವಣಾ ಪತ್ರ, 29 ಸಂವಾದ ಕಾರ್ಯಕ್ರಮ, 5 ಪ್ರೇರಕರ ತರಬೇತಿ, 22 ನವಜೀವನ ಸದಸ್ಯರ ಕ್ಷೇತ್ರ ಸಂದರ್ಶನ, 775 ಸದಸ್ಯರಿಗೆ ಪತ್ರ ವ್ಯವಹಾರ, 143 ಮಹಿಳಾ ಕಾರ್ಯಕ್ರಮ, 208 ಸುಭಿಕ್ಷಾ ಕಾರ್ಯಕ್ರಮ, 28 ಹಕ್ಕೊತ್ತಾಯ ಕಾರ್ಯಕ್ರಮ, ಸಮುದಾಯ ಸಲಹಾ ಕಾರ್ಯಕ್ರಮ ನಡೆಸಲಾಗಿದೆ. ಪುಂಜಾಲಕಟ್ಟೆ ಶ್ರೀಧರ ಆಚಾರ್ಯರಿಗೆ ರೂ. 4 ಲಕ್ಷ ವೆಚ್ಚದ ಮನೆಯನ್ನು ನಿರ್ಮಿಸಲಾಗಿದೆ. ಸ್ವಾಸ್ಥ್ಯಸಂಕಲ್ಪ ರ್ಕಾಕ್ರಮವನ್ನು ಬಲಪಡಿಸಲು ನಾಲ್ಕು ಸಾಕ್ಷ್ಯಾಚಿತ್ರಗಳನ್ನು ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ನಿರ್ಮಿಸಲಾಗಿದೆ.
ಈ ವರ್ಷದ ವಿಶೇಷ ಸಾಧನೆಗೆ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕರುಗಳಾದ ಜಯಶಂಕರ್ ಶರ್ಮ, ಎ. ಶ್ರೀಹರಿ, ಕೆ. ಮಹಾವೀರ ಅಜ್ರಿ, ಬೂದಪ್ಪ ಗೌಡ, ಆನಂದ ಸುವರ್ಣ, ಜಿಲ್ಲಾಧ್ಯಕ್ಷರುಗಳು, ಜಿಲ್ಲಾ ನಿರ್ದೇಶಕರು, ಯೋಜನಾಧಿಕಾರಿಗಳು, ಎಲ್ಲಾ ಕಾರ್ಯಕರ್ತರು ಸಹಕರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಕೆ. ದೇವದಾಸ್ ಹೆಬ್ಬಾರ್, ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಕಿಶೋರ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷರಾದ ಪ್ರತಾಪ್ಸಿಂಹ ನಾಯಕ್, ಡಿ. ಎ. ರಹಿಮಾನ್, ತಿಮ್ಮಪ್ಪ ಗೌಡ ಬೆಳಾಲು, ಪಿ. ಕೆ. ರಾಜು ಪೂಜಾರಿ, ಅಡೂರು ವೆಂಕಟ್ರಾಯ, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಕಛೇರಿ ಸಹಾಯಕಿ ನವ್ಯ ಕೆ. ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.