“Never give up” ಎಂಬ ವಾಕ್ಯವನ್ನು ಭವಿಷ್ಯವನ್ನು ಕಟ್ಟಿಕೊಳ್ಳುವ ಹಾದಿಯೆಡೆಗೆ ಸಾಗುತ್ತಿರೋ ಪ್ರತಿಯೊಬ್ಬರು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಎಲ್ಲರಿಗೂ ಯಶಸ್ಸು ಎಂಬುದು ತಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತದೆ ಎಂದು ತಿಳಿದಿರುವುದಿಲ್ಲ. ಇದು ಕೂಡ ಅಂತಹದ್ದೇ ವ್ಯಕ್ತಿಯ ಕಥೆ. ಒಬ್ಬ ಸಾಮಾನ್ಯ ಮನುಷ್ಯ ಒಂದು ದೊಡ್ಡ ಬದಲಾವಣೆಯನ್ನು ತರುವ ಕಡೆಗೆ ಹೆಜ್ಜೆಯಿಟ್ಟ ಕಥೆ.
“ನಾನ್ ಕನ್ನಡಿಗ ಇಂದ ನಾನು ಕನ್ನಡಿಗ” 2018 ರಲ್ಲಿ ಆರಂಭವಾಯಿತು. ಈ ಹಾದಿ ಎಲ್ಲರೂ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅನ್ವಯ ಫೌಂಡೇಶನ್ನ ಸಂಸ್ಥಾಪಕರಾದ ಸಂಪತ್ ರಾಮಾನುಜಂ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ಎಷ್ಟೋ ಜನರಿಗೆ ಕನ್ನಡ ಕಲಿಸುವ ಬಗ್ಗೆ ಯೋಚಿಸಿದರು. ಬೆಂಗಳೂರು ಭಾರತದ ತಾಂತ್ರಿಕ ನಗರಗಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿಗೆ ಸಾವಿರಾರು ಕನಸುಗಳ ಜೊತೆ ಬದುಕು ಕಟ್ಟಿಕೊಳ್ಳಲು ಬರುವ ಲಕ್ಷಾಂತರ ಜನರಿಗೆ ಆಗುವುದು ಭಾಷೆಯ ಸಮಸ್ಯೆ. ಇದೇ ರೀತಿಯ ಸಮಸ್ಯೆ ಸಂಪತ್ ಹಾಗು ಅವರ ಸ್ನೇಹಿತರು ಕೆಲವು ವರ್ಷಗಳ ಹಿಂದೆ ಅನುಭವಿಸಿದ್ದರು. ಆದರೆ ಸಂಪತ್ ಅವರು ಬೆಂಗಳೂರು ಮೂಲದ ಯುವತಿಯೊಂದಿಗೆ ಮದುವೆಯಾದ ಕಾರಣ ಅವರಿಗೆ ಕನ್ನಡ ಕಲಿಯುವುದು ಅಷ್ಟು ಕಷ್ಟವಾಗಲಿಲ್ಲ ಎಂದು ಸಂಪತ್ ರಾಮಾನುಜಂ ಹೇಳುತ್ತಾರೆ. ಸಂಪತ್ ಸ್ನೇಹಿತರ ಗುಂಪಿನಲ್ಲೇ ನಿಮಗೆ ಕನ್ನಡ ಬರುತ್ತದೆ ಆದರೆ ನಮಗೆ ಕನ್ನಡ ಅರ್ಥವಾಗುವುದಿಲ್ಲ. ನಮಗೂ ಯಾಕೆ ನೀವು ಕನ್ನಡ ಹೇಳಿಕೊಡಬಾರದು? ಇಂತಹ ಪ್ರಶ್ನೆಗಳು ಜಾಸ್ತಿಯಾದ ಕಾರಣ ಸಂಪತ್ ಮತ್ತು ಅವರ ಪತ್ನಿ ಕನ್ನಡ ಹೇಳಿಕೊಡಲು ಶುರು ಮಾಡಿದರು. 6 ತಿಂಗಳ ನಂತರ ಸಮಾನ ಮನಸ್ಕರು ಅವರದೇ ಆಸಕ್ತಿಯಿಂದ ಬಂದು ಇವರ ಜೊತೆ ಸೇರಿಕೊಂಡರು.
ತಮ್ಮ ಜೊತೆಯಲ್ಲಿದ್ದವರಿಗೆ ಕನ್ನಡ ಹೇಳಿಕೊಡಲು ಪ್ರಾರಂಭಿಸಿ ನಂತರ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿ ಶಿಬಿರಗಳನ್ನು ಮಾಡಲು ಪ್ರಾರಂಭಿಸಿದರು. ತಮ್ಮ ಶಿಬಿರಕ್ಕೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಬರುತ್ತಾರೆ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ ಸಂಪತ್. ನಗರದ ಐಟಿ ಹಬ್ ಎಂದು ಹೆಸರಾಗಿರುವ ಮಾರತ್ಹಳ್ಳಿ ಮತ್ತು ವೈಟ್ ಫೀಲ್ಡ್ನ ಸುತ್ತ ಮುತ್ತ ತಮ್ಮ ಶಿಬಿರವನ್ನು ಆರಂಭಿಸಿದ್ದರ ಪರಿಣಾಮ ಅಲ್ಲಿ ಇರುವ ಕನ್ನಡ ಬರದ ಎಷ್ಟೋ ಜನರು ಕನ್ನಡ ಕಲಿಯುವಂತೆ ಆಗಿದೆ. ಖಾಸಗಿ ಶಾಲೆಯ ಮಕ್ಕಳನ್ನು ಸರ್ಕಾರಿ ಶಾಲೆಗಳ ಮಕ್ಕಳೊಂದಿಗೆ ಮತ್ತು ಐಟಿ ಕ್ಷೇತ್ರದವರನ್ನು ಸ್ಥಳೀಯರೊಂದಿಗೆ ಸೇರಿಸುವುದರ ಮೂಲಕ ಈ ಪ್ರಯತ್ನ ಸುಲಭವಾಗಿದೆ.
ಪ್ರಸ್ತುತ ಈ ಕಾರ್ಯಕ್ರಮದಿಂದ 500 ಜನರು ಅನುಕೂಲ ಪಡೆದಿದ್ದು 15 ಬ್ಯಾಚ್ಗಳನ್ನು ಪೂರ್ಣಗೊಳಿಸಿದೆ. ಸಂಪತ್ ರಾಮಾನುಜಂ ಮತ್ತು ಅವರ ತಂಡದ ಪರಿಶ್ರಮದ ಫಲವಾಗಿ ಇಂದು ಈ ಕಾರ್ಯಕ್ರಮದಲ್ಲಿ ಕನ್ನಡ ಕಲಿತ ಎಷ್ಟೋ ಜನ ಸುಲಲಿತವಾಗಿ ಕನ್ನಡದಲ್ಲಿ ಮಾತನಾಡುವುದಲ್ಲದೆ ಕನ್ನಡದಲ್ಲೇ ಭಾಷಣಗಳನ್ನೂ ಸಹ ಕೊಡುವಷ್ಟು ಚೆಂದವಾಗಿ ಕನ್ನಡ ಕಲಿತಿದ್ದಾರೆ. ಮೂಲ ಬೆಂಗಳೂರಿಗರಾಗದಿದ್ದರೂ ಸಂಪತ್ ರಾಮಾನುಜಂ ಮತ್ತು ಅವರ ಪತ್ನಿ ತಮ್ಮ ರಜೆ ದಿನಗಳನ್ನು ಕನ್ನಡ ಕಲಿಯಲು ಆಸಕ್ತಿ ಇರುವವರಿಗಾಗಿ ಮುಡಿಪಾಗಿಟ್ಟು ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಸಂಪತ್ ರಾಮಾನುಜಂ ಬೆಂಗಳೂರಿಗಾಗಿ ಉತ್ತಮ ದೂರದೃಷ್ಟಿ ಹೊಂದಿರುವ ವ್ಯಕ್ತಿ ಮತ್ತು ಹೆಮ್ಮೆಯ B.CLIP ನಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.