ಮಂಗಳೂರು: ಸ್ಯಾಕ್ಸೋಫೋನ್ ಲೋಕದ ಸಾಮ್ರಾಟ ಕದ್ರಿ ಗೋಪಾಲನಾಥ್ ಅವರು ಶುಕ್ರವಾರ ಮುಂಜಾನೆ ವಿಧಿವಶರಾಗಿದ್ದಾರೆ.
ಮಂಗಳೂರಿನ ಪದವಿನಂಗಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಅವರಿಗೆ ಗುರುವಾರ ರಾತ್ರಿ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ 4.45ಕ್ಕೆ ಅವರು ಇಹಲೋಕವನ್ನು ತ್ಯಜಿಸಿದ್ದಾರೆ.
ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರಾಗಿದ್ದ ಅವರು, ಸ್ಯಾಕ್ಸೋಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಳವಡಿಸಿಕೊಂಡು ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದ್ದರು.
1948ರ ಡಿಸೆಂಬರ್ 11ರಂದು ದಕ್ಷಿಣ ಕನ್ನಡದ ಸಜೀಪಮೂಡದಲ್ಲಿ ಜನಿಸಿದ ಇವರಿಗೆ ತಂದೆ ತನಿಯಪ್ಪ ಅವರೇ ಮೊದಲ ಗುರುವಾಗಿದ್ದರು. ತನಿಯಪ್ಪ ನಾದಸ್ವರ ವಿದ್ವಾಂಸರಾಗಿದ್ದರು. ಚಿಕ್ಕಂದಿನಿಂದಲೇ ನಾದಸ್ವರವನ್ನು ಅಭ್ಯಾಸ ಮಾಡಿದರು. ವಿದೇಶಿ ವಾದ್ಯವನ್ನು ಭಾರತೀಯ ಸಂಗೀತದೊಂದಿಗೆ ಮಿಲಿತಗೊಳಿಸಿದವರಲ್ಲಿಯೂ ಇವರು ಪ್ರಮುಖರು.
ಸ್ಯಾಕ್ಸೋಫೋನ್ ವಾದನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದ ಕದ್ರಿ ಗೋಪಾಲನಾಥ್ ಅವರು, ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿವೆ.
ಅವರ ಅಗಲುವಿಕೆಯಿಂದ ನಾದಸ್ವರ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.