ಭಾರತ ಮತ್ತು ಚೀನಾ ಅನೌಪಾಚರಿಕ ಶೃಂಗಸಭೆಗೆ ತಮಿಳುನಾಡಿನ ಮಾಮಲ್ಲಪುರಂ ಅನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆ ಬಹುಶಃ ಎಲ್ಲರನ್ನೂ ಕಾಡುತ್ತಿದೆ. ಚೀನಾದೊಂದಿಗೆ ಐತಿಹಾಸಿಕ ಸಂಪರ್ಕ ಹೊಂದಿರುವ ಮಾಮಲ್ಲಪುರಂನ ಶ್ರೀಮಂತ ಸಂಸ್ಕೃತಿಯು ಮೋದಿ ಮತ್ತು ಕ್ಸಿ ಜಿನ್ಪಿಂಗ್ ನಡುವಣ ಭೇಟಿಗೆ ಅತ್ಯುತ್ತಮ ಸ್ಥಳವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
2014ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ವೃದ್ಧಿಸುವ ಯೋಜನೆಗಳ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದರು.
ಈ ವೇಳೆ ಅವರು ನಮ್ಮ ದೇಶದಲ್ಲಿರುವ ಅತ್ಯದ್ಭುತವಾದ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಆ ತಾಣಗಳಲ್ಲಿ ಜಾಗತಿಕ ನಾಯಕರ ಸಭೆಗಳನ್ನು ನಡೆಸುವುದಾಗಿಯೂ ಹೇಳಿಕೊಂಡಿದ್ದರು. ಅಧಿಕಾರಕ್ಕೆ ಬಂದು ಬಳಿಕ ಪ್ರವಾಸಿ ತಾಣಗಳ ಪ್ರಚಾರಕ್ಕೆ, ಉದ್ಧಾರಕ್ಕೆ ಹಲವು ಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಕೊಟ್ಟ ಮಾತಿಗೆ ಅನುಗುಣವಾಗಿ ಪ್ರಮುಖ ಜಾಗತಿಕ ನಾಯಕರ ಪ್ರಮುಖ ಕಾರ್ಯಕ್ರಮಗಳನ್ನು ದೇಶದ ಪ್ರವಾಸಿ ತಾಣಗಳಲ್ಲಿ ಆಯೋಜನೆ ಮಾಡುತ್ತಿದ್ದಾರೆ.
ಇತರ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳೊಂದಿಗಿನ ಸಭೆಗಳನ್ನು ಈ ದೇಶದ ಪ್ರವಾಸಿ ತಾಣಗಳಲ್ಲಿ ಆಯೋಜನೆಗೊಳಿಸಿದರೆ, ಆ ಪ್ರವಾಸಿ ತಾಣಗಳು ಜನಪ್ರಿಯಗೊಳ್ಳುತ್ತವೆ, ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂಬುದು ಅವರ ವಾದವಾಗಿದೆ. ಒಳನಾಡಿನ ಆರ್ಥಿಕತೆಯನ್ನು ವೃದ್ಧಿಸುವ ಅವರ ಕ್ರಮಗಳಲ್ಲಿ ಇದು ಒಂದು.
ಮೋದಿ ತಾವು ನೀಡಿದ ಭರವಸೆಯನ್ನು ಬಹು ಮಟ್ಟಿಗೆ ಪೂರೈಸಿದ್ದಾರೆ. 2017ರ ಏಪ್ರಿಲ್ ತಿಂಗಳಿನಲ್ಲಿ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನಡುವೆ ಇಂಡೋ-ಬಾಂಗ್ಲಾದೇಶ ಸಭೆ ಕೋಲ್ಕತ್ತಾದಲ್ಲಿ ನಡೆಯಿತು, ಇದು ಪೂರ್ವ ಮಹಾನಗರದ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡಿತು.
2017ರ ಜುಲೈನಲ್ಲಿ ಗುಜರಾತ್ನ ಸಬರಮತಿ ನದಿಯ ದಡದಲ್ಲಿ ಚೀನಾ-ಭಾರತದ ನಡುವೆ ಶೃಂಗಸಭೆ ನಡೆಯಿತು. ಇದು ಸಬರಮತಿ ಮತ್ತು ಅಲ್ಲಿರುವ ಮಹಾತ್ಮ ಗಾಂಧಿ ಆಶ್ರಮದಂತಹ ತಾಣಗಳತ್ತ ವಿಶ್ವದ ಗಮನ ಹರಿಯುವಂತೆ ಮಾಡಿತು.
ಈಗ, ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಭಾರತ-ಚೀನಾ ಶೃಂಗಸಭೆಯನ್ನು ಅಕ್ಟೋಬರ್ 11-12ರಂದು ಮಾಮಲ್ಲಪುರಂನಲ್ಲಿ ನಿಗದಿಪಡಿಸಲಾಗಿದೆ, ಇದು ಶಿಲ್ಪಿಗಳು ಮತ್ತು ಶಿಲ್ಪಕಲೆಗೆ ಹೆಸರುವಾಸಿಯಾದ ದೇಶದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಚೀನಾ-ಭಾರತೀಯ ಶೃಂಗಸಭೆಯ ಸ್ಥಳವನ್ನು ಆಯ್ಕೆ ಮಾಡುವಲ್ಲಿ ಮೋದಿ ಸರ್ಕಾರ ಹೆಚ್ಚಿನ ಚಿಂತನೆಯನ್ನು ನಡೆಸಿತ್ತು. ಸಾಮಾನ್ಯವಾಗಿ ಮಹಾಬಲಿಪುರಂ ಎಂದು ಕರೆಯಲ್ಪಡುವ ಮಾಮಲ್ಲಪುರಂ ಅನ್ನು ಕ್ರಿ.ಶ ಏಳನೇ ಶತಮಾನದಲ್ಲಿ ಪಲ್ಲವ ರಾಜವಂಶದ ನರಸಿಂಹವರ್ಮನ್ I ಅವರು ಸ್ಥಾಪಿಸಿದರು.
ಶೃಂಗಸಭೆ ನಡೆಯುವ ಸ್ಥಳ ತಮಿಳುನಾಡಿನ ರಾಜಧಾನಿ ಚೆನ್ನೈನಿಂದ 50 ಕಿ.ಮೀ ದೂರದಲ್ಲಿದೆ. ವಿಶ್ವದ ಇತರ ಭಾಗಗಳೊಂದಿಗೆ ಸರಕು ವ್ಯಾಪಾರವನ್ನು ನಡೆಸಲು ಪಲ್ಲವ ರಾಜ ಇದನ್ನು ಬಂದರು ಪಟ್ಟಣವಾಗಿ ಸ್ಥಾಪಿಸಿದ.
ನರಸಿಂಹವರ್ಮಗೆ ಯುದ್ಧದಲ್ಲಿನ ಶ್ರೇಷ್ಠತೆಗಾಗಿ “ಮಾಮಲ್ಲನ್” ಎಂದು ಬಿರುದನ್ನು ಪ್ರದಾನಿಸಲಾಗಿತ್ತು. ಆದ್ದರಿಂದ, ಬಂದರು ಪಟ್ಟಣಕ್ಕೆ ಮಾಮಲ್ಲಾಪುರಂ ಎಂದು ಹೆಸರು ಬಂತು.
ಪಲ್ಲವರು ತಮ್ಮ ದೂತರನ್ನು ಚೀನಾಕ್ಕೆ ಕಳುಹಿಸುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ, ಇದರಿಂದಾಗಿ ಚೀನಾ ಮತ್ತು ಮಾಮಲ್ಲಪುರಂ ನಡುವೆ ಉತ್ತಮ ಸಂಬಂಧ ಬೆಳೆದಿತ್ತು. ಚೀನಾ-ಪಲ್ಲವ ರಾಜವಂಶದ ಸಂಬಂಧವು ರಕ್ಷಣೆಯ ಬಗೆಗಿನ ತಿಳುವಳಿಕೆಯನ್ನೂ ಒಳಗೊಂಡಿತ್ತು.
ನರಸಿಂಹವರ್ಮನ್ II ಚೀನಾದ ಆಡಳಿತಗಾರರಿಗೆ ಅರಬ್ಬರು ಮತ್ತು ಟಿಬೆಟಿಯನ್ನರ ವಿರುದ್ಧ ಹೋರಾಡಲು ಸಹಾಯ ಹಸ್ತವನ್ನು ನೀಡಿದ್ದರು.
ಚೀನಾದ ಪ್ರವಾಸಿ ಹ್ಯುಯೆನ್ ತ್ಸಾಂಗ್ ನರಸಿಂಹವರ್ಮನ್ I ನೇತೃತ್ವದ ಪಲ್ಲವ ಸಾಮ್ರಾಜ್ಯಕ್ಕೆ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಜನರ ಶೌರ್ಯ, ನಡವಳಿಕೆ ಮತ್ತು ಶಿಕ್ಷಣದಲ್ಲಿನ ಶ್ರೇಷ್ಠತೆಯನ್ನು ಶ್ಲಾಘಿಸಿದ್ದರು.
ಭಾರತ ಮತ್ತು ಚೀನಾಗಳು ಕ್ರಿಸ್ತ ಪೂರ್ವದ ಕಾಲದಿಂದಲೂ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು ಎಂಬ ಆಯಾಮವದಲ್ಲೂ ಮಾಮಲ್ಲಾಪುರಂನಲ್ಲಿ ನಡೆಯುತ್ತಿರುವ ಚೀನಾ-ಭಾರತೀಯ ಶೃಂಗಸಭೆಯ ಮತ್ತೊಂದು ಮಹತ್ವವಾಗಿದೆ.
2,000 ವರ್ಷಗಳ ಹಿಂದಿನಿಂದಲೂ ಚೀನಾ-ಭಾರತ ಸಂಪರ್ಕವನ್ನು ಹೊಂದಿದ್ದವು ಎಂಬುದಕ್ಕೆ ಪುರಾತತ್ತ್ವ ಪುರಾವೆಗಳಿವೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಕ್ರಿ.ಪೂ. ಮೊದಲ ಮತ್ತು ಎರಡನೆಯ ಶತಮಾನಕ್ಕೆ ಸೇರಿದ ಕುಂಬಾರಿಕೆ ಕೆಲಸಗಳನ್ನು ತಮಿಳುನಾಡು ಕರಾವಳಿಯಿಂದ ಉತ್ಖನನ ಮಾಡಲಾಗಿದ್ದು, ಆ ದಿನಗಳಲ್ಲಿ ಚೀನಿಯರು ಕಡಲ ವ್ಯಾಪಾರದಲ್ಲಿ ತೊಡಗಿದ್ದರು ಎಂಬುದನ್ನು ಇದು ಸೂಚಿಸುತ್ತದೆ. ಈ ಶತಮಾನಗಳ ಚೀನೀ ನಾಣ್ಯಗಳು ರಾಜ್ಯದಲ್ಲಿ ಪತ್ತೆಯಾಗಿವೆ.
ತಮಿಳು ಸಾಹಿತ್ಯ ಕೃತಿ ಪಟ್ಟಿನಪಲೈ ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ಚೀನಾದ ಹಡಗು ಲಂಗರು ಹಾಕಿದ್ದ ಬಗ್ಗೆ ಉಲ್ಲೇಖ ಮಾಡುತ್ತದೆ. ಕೆಲವು ಚೀನೀ ಸಾಹಿತ್ಯಗಳು ತಮಿಳುನಾಡು ಪ್ರದೇಶಗಳ ಸಂಪರ್ಕವನ್ನು ಉಲ್ಲೇಖಿಸುತ್ತವೆ.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಭಾಗವಾಗಿರುವ ಮಹಾಬಲಿಪುರಂ ಅನ್ನು ಚೀನಾದ ಪಠ್ಯವಾದ ಚಿಯೆನ್ ಹಾನ್ ಶು ನಲ್ಲಿ ‘ಹುವಾಂಗ್ ಚೆ’ ಎಂದು ಉಲ್ಲೇಖಿಸಲಾಗಿದೆ.
2004 ರಲ್ಲಿ ಕಾಂಚೀಪುರಂ ಜಿಲ್ಲೆಯ ಸಲುವಾಂಕುಪ್ಪಂನಲ್ಲಿ ನಡೆಸಿದ ಉತ್ಖನನದಲ್ಲಿ, ಮಹಾಬಲಿಪುರಂ 2,000 ವರ್ಷಗಳ ಹಿಂದೆ ಬಂದರು ಪಟ್ಟಣವಾಗಿತ್ತು ಎಂಬುದು ತಿಳಿದುಬಂದಿದೆ.
ಕ್ರಿ.ಶ ಒಂಬತ್ತನೇ ಶತಮಾನದ ಅಂತ್ಯದವರೆಗೆ ಮಾಮಲ್ಲಪುರಂ ಅಭಿವೃದ್ಧಿ ಹೊಂದುತ್ತಿರುವ ಬಂದರು ಪಟ್ಟಣವಾಗಿತ್ತು, ಈ ಪಟ್ಟಣವು ಚೀನಾದ ‘ಸಿಲ್ಕ್ ರೂಟ್’ ಮತ್ತು ಭಾರತದ ‘ಸ್ಪೈಸ್ ರೂಟ್’ ನ ಭಾಗವಾಗಿತ್ತು. ಕಾಂಚಿಪುರಂನ ರೇಷ್ಮೆ ಉದ್ಯಮವು ಚೀನಾದಿಂದ ಕಚ್ಚಾ ರೇಷ್ಮೆಯನ್ನು ಮಾಮಲ್ಲಪುರಂ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು.
ಚೀನಾದೊಂದಿಗಿನ ಮಾಮಲ್ಲಪುರಂನ ಸಂಬಂಧಗಳ ಶ್ರೀಮಂತ ಇತಿಹಾಸವನ್ನು ಗಮನಿಸಿದರೆ, ಕ್ಸಿ ಜಿನ್ಪಿಂಗ್ ಅವರನ್ನು ಮಾಮಲ್ಲಪುರಂಗೆ ಕರೆಸಿ ಶೃಂಗಸಭೆಯನ್ನು ನಡೆಸಲು ನಿರ್ಧರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವು ಅತ್ಯುತ್ತಮವಾದುದು ಎನಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.