ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ದೇಶದ ಜನರೊಂದಿಗೆ ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಮಾತ್ರವಲ್ಲದೆ ಅವರೊಂದಿಗೆ ದೂರವಾಣಿ ಮಾತುಕತೆಯನ್ನೂ ನಡೆಸಿದ್ದಾರೆ. ಶನಿವಾರ ಲತಾ ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಹಬ್ಬಗಳ ಸಾಲು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ ಹಬ್ಬವನ್ನು ಆಚರಿಸುವಂತೆ ದೇಶದ ಜನರಿಗೆ ಕರೆಯನ್ನು ನೀಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ, ಬಡಬಗ್ಗರಿಗೆ ಸಹಾಯವನ್ನು ಮಾಡುವ ಮೂಲಕ ಅವರ ಕತ್ತಲೆಯನ್ನು ನಿವಾರಿಸಿ ಹಬ್ಬವನ್ನು ಆಚರಿಸೋಣ ಎಂದು ಕರೆ ನೀಡಿದ್ದಾರೆ.
ದೇಶದ ಹೆಣ್ಣುಮಕ್ಕಳು ಹೆಮ್ಮೆಪಡುವಂತಹ ಸಾಧನೆಯನ್ನು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳು ರಾಷ್ಟ್ರಕ್ಕೆ ನೀಡುವ ಕೊಡುಗೆಯನ್ನು ಗೌರವಿಸುವ ಸಲುವಾಗಿ ಭಾರತ ಲಕ್ಷ್ಮಿ ಹ್ಯಾಶ್ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನವರಾತ್ರಿ, ದೀಪಾವಳಿಯ ಸಂದರ್ಭದಲ್ಲಿ ವಿಷಯಗಳನ್ನು ಹಂಚಿಕೊಳ್ಳಲು ಮೋದಿ ಕರೆ ನೀಡಿದ್ದಾರೆ.
ಇ- ಸಿಗರೇಟುಗಳ ಬಗ್ಗೆಯೂ ಮಾತನಾಡಿದ ಮೋದಿ, ಯಾವುದೇ ತರನಾದ ತಂಬಾಕು ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇ- ಸಿಗರೇಟುಗಳು ಹಾನಿಕಾರಕವಲ್ಲ ಎಂಬ ಭ್ರಮೆಯನ್ನು ಹುಟ್ಟಿಸುವಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ. ಆದರೆ ಇದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆ. ಮಕ್ಕಳು ಬಹುಬೇಗನೆ ಇದರ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಮ್ಮ ಸರಕಾರವು ಇ- ಸಿಗರೇಟುಗಳನ್ನು ನಿಷೇಧಿಸುವ ನಿರ್ಧಾರವನ್ನು ಮಾಡಿದೆ ಎಂದಿದ್ದಾರೆ.
ಪರಿಸರ ಸಂರಕ್ಷಣೆಯ ಬಗ್ಗೆ ಒತ್ತಿ ಹೇಳಿದ ಮೋದಿ, ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಭಾರತದಿಂದ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವ ಆಂದೋಲನವನ್ನು ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಸಮಸ್ತ ಭಾರತೀಯರು ಕೈಜೋಡಿಸುತ್ತಾರೆ ಎಂಬ ಭರವಸೆಯಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.