ಬಡವರ ಸಂಕಷ್ಟಗಳನ್ನು ತೀರಾ ಹತ್ತಿರದಿಂದ ನೋಡಿದ್ದ ಡಾ. ಬಿ. ಆರ್. ರಮಣ ರಾವ್ ಅವರು ಬಡ, ದುರ್ಬಲ ವರ್ಗದ ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇದುವರೆಗೆ ಅವರು 2 ಮಿಲಿಯನ್ಗೂ ಅಧಿಕ ಜನರಿಗೆ ಅವರು ಉಚಿತವಾಗಿ ಚಿಕಿತ್ಸೆಯನ್ನು ನೀಡಿದ್ದಾರೆ. ತಮ್ಮ ಸೇವೆಯ ಮೂಲಕ ಸಾರ್ಥಕತೆಯನ್ನು ಕಾಣುತ್ತಿರುವ ಅವರು, ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸುತ್ತಿದ್ದಾರೆ. ತಮ್ಮ ಸೇವೆಗಾಗಿ ಅವರು ಪದ್ಮಶ್ರೀ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ.
ಮೂಲತಃ ಭದ್ರಾವತಿಯವರಾಗಿರುವ ಡಾ. ರಮಣ ರಾವ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಡಯಾಬಿಟಿಸ್, ಅಲರ್ಜಿ, ಹೃದಯ ಸಂಬಂಧಿ ತೊಂದರೆ ಮುಂತಾದ ಹಲವು ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುವ ಅವರು, ತಮ್ಮ ಬಳಿ ಹಣವಿಲ್ಲದೆ ಬಂದ ಯಾರನ್ನೂ ವಾಪಾಸ್ ಕಳುಹಿಸಿಲ್ಲ. ರೋಗಿಯ ವೈದ್ಯಕೀಯ ಹಿನ್ನಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸುವ ಅವರು ಔಷಧಿಯ ಜೊತೆಗೆ ಸಲಹೆ ಸೂಚನೆಗಳನ್ನೂ ನೀಡುತ್ತಾರೆ. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿರುವವರಿಗೂ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ.
ಬೆಂಗಳೂರು-ತುಮಕೂರು ಹೆದ್ದಾರಿಯ ಬಳಿಯ ಟಿ. ಬೇಗೂರ್ ಗ್ರಾಮದಲ್ಲಿ ಅವರ ಕ್ಲಿನಿಕ್ ಇದ್ದು, ಇದು ಉಚಿತ ಸೇವೆಯನ್ನು ನೀಡುತ್ತಿರುವ ವಿಶ್ವದ ಅತ್ಯಂತ ಹಳೆಯ ಚಿಕಿತ್ಸಾಲಯವೆಂದು ಕರೆಯಲು ಅರ್ಹವಾಗಿದೆ.
“ನಾನು ಬಡವರ ದುಃಖವನ್ನು ಕಡಿಮೆ ಮಾಡಲು ಬಯಸಿದ್ದೆ, ನನ್ನ ಹೆತ್ತವರು ಕೂಡ ನನ್ನನ್ನು ವೈದ್ಯನನ್ನಾಗಿ ಮಾಡಿದ್ದು ಇದೇ ಕಾರಣಕ್ಕೆ” ಎಂದು 68 ವರ್ಷದ ಪದ್ಮಶ್ರಿ ಡಾ.ಬಿ.ರಮಣ ರಾವ್ ಹೇಳುತ್ತಾರೆ. ಅವರು ಕಳೆದ 46 ವರ್ಷಗಳಲ್ಲಿ 2 ಮಿಲಿಯನ್ ಗ್ರಾಮೀಣ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಿದ್ದಾರೆ ಮತ್ತು ನೀಡುತ್ತಲೇ ಇರುತ್ತಾರೆ.
ಮೂಲ ಚಿಕಿತ್ಸೆಯ ಹೊರತಾಗಿ, ಡಾ. ರಾವ್ ಅವರ ಚಿಕಿತ್ಸಾಲಯವು ಉಚಿತ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ತಪಾಸಣೆ, ರಕ್ತ ಪರೀಕ್ಷೆಗಳು, ಎಲೆಕ್ಟ್ರೋಕಾರ್ಡಿಯೋಗ್ರಫಿ (ಇಸಿಜಿ), ನೆಬ್ಯುಲೈಸೇಶನ್ ಇತ್ಯಾದಿಗಳನ್ನು ಮಾಡುತ್ತದೆ. ದಾದಿಯರು, ಕಾಂಪೌಂಡರ್ಗಳು, ಲ್ಯಾಬ್ ತಂತ್ರಜ್ಞರು ಮತ್ತು ಸಹಾಯಕರನ್ನು ಒಳಗೊಂಡ 35 ಜನರ ಸಮರ್ಪಿತ ತಂಡದ ಬೆಂಬಲವನ್ನು ಅವರು ಹೊಂದಿದ್ದಾರೆ.
“ತಿಂಗಳಿಗೊಮ್ಮೆ, ರೋಟರಿ ಐ ಆಸ್ಪತ್ರೆಯ ವೈದ್ಯರು ನನ್ನ ಚಿಕಿತ್ಸಾಲಯದಲ್ಲಿ ಕಣ್ಣಿನ ಶಿಬಿರವನ್ನು ನಡೆಸುತ್ತಾರೆ, ಅಲ್ಲಿ ಅವರು ಮೂಲ ಕಣ್ಣಿನ ತಪಾಸಣೆ ಮತ್ತು ಆಪ್ಟಿಕಲ್ ಪರೀಕ್ಷೆಗಳಲ್ಲದೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನೀಡುತ್ತಾರೆ” ಎಂದು ಡಾ. ರಮಣ್ ಹೇಳುತ್ತಾರೆ.
ಇದಲ್ಲದೆ, ಅವರ ಕ್ಲಿನಿಕ್ ಹತ್ತು ಅನುಭವಿ ದಂತವೈದ್ಯರು ಮತ್ತು ದಂತ ಶಸ್ತ್ರಚಿಕಿತ್ಸಕರಿಗೆ ಮೀಸಲಾದ ದಂತ ಘಟಕವನ್ನು ಸಹ ಹೊಂದಿದೆ.
ಡಾ. ರಾವ್ ಅವರ ಸೇವಾ ಕಾರ್ಯವು 1973ರ ಆಗಸ್ಟ್ 15ರಂದು ಪ್ರಾರಂಭವಾಯಿತು, ಅಂದರೆ ಎಂಬಿಬಿಎಸ್ ಪದವಿ ಪಡೆದ ಮರುದಿನವೇ ಉಚಿತ ಸೇವೆಯನ್ನು ಅವರು ಆರಂಭಿಸಿದ್ದರು. ವೈದ್ಯರಾಗುವ ಅವರ ಏಕೈಕ ಗುರಿ ದೀನದಲಿತರಿಗೆ ಸೇವೆ ನೀಡುವುದಾಗಿತ್ತು. ಅವರ ಕುಟುಂಬವು ಟಿ.ಬೇಗೂರಿನಲ್ಲಿ ಸ್ವಲ್ಪ ಭೂಮಿಯನ್ನು ಹೊಂದಿದ್ದರಿಂದ, ಅಲ್ಲಿಯೇ ಅವರು ತಮ್ಮ ಕ್ಲಿನಿಕ್ ನಿರ್ಮಿಸಲು ನಿರ್ಧರಿಸಿದರು.
ವಾರ ಪೂರ್ತಿ ಡಾ. ರಾವ್ ಅವರು ಬೆಂಗಳೂರಿನ ಉನ್ನತ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಭಾನುವಾರ ಬೆಳಿಗ್ಗೆ ಅವರು ಟಿ.ಬೆಗೂರ್ ಕಡೆಗೆ ಹೊರಟು ಅಲ್ಲಿ ಬಡವರಿಗೆ ಚಿಕಿತ್ಸೆ ನೀಡುತ್ತಿದ್ದರು. ತಮ್ಮ ಆದಾಯದ ಗಣನೀಯ ಭಾಗವನ್ನು ಅಸಹಾಯಕ ಗ್ರಾಮಸ್ಥರಿಗೆ ಔಷಧಿಗಳನ್ನು ನೀಡಲು ಅವರು ಖರ್ಚು ಮಾಡುತ್ತಿದ್ದರು. ಇಂದು ಅವರ ಕ್ಲಿನಿಕ್ ಲಕ್ಷಾಂತರ ಜನರಿಗೆ ಸಂಜೀವಿನಿಯಾಗಿದೆ.
ಮೊದಮೊದಲು ಇವರ ಕ್ಲಿನಿಕ್ಗೆ 40 ರಿಂದ 50 ಜನರು ಬರುತ್ತಿದ್ದರು. ಈಗ ಸಂಖ್ಯೆ 1200ಕ್ಕೆ ತಲುಪಿದೆ. ರೋಗಿಗಳ ಸಂಖ್ಯೆ ಎಷ್ಟೇ ಇರಲಿ ಅವರು ಕೊನೆಯ ರೋಗಿಯನ್ನು ಪರೀಕ್ಷಿಸಿಯೇ ಮನೆಗೆ ಹೊರಡುತ್ತಾರೆ ಎಂಬುದು ಅವರ ಶ್ರೇಷ್ಠತೆಗೆ ಒಂದು ಉದಾಹರಣೆಯಾಗಿದೆ.
ಇಷ್ಟು ಮಾತ್ರವಲ್ಲದೇ, ರಾವ್ ಅವರ ಸೇವೆ ಕ್ಲಿನಿಕ್ ಗೋಡೆಗಳ ಆಚೆಗೂ ಬೆಳೆದು ನಿಂತಿದೆ. ಆರೋಗ್ಯ ಸಮಸ್ಯೆಗೆ ಹಳ್ಳಿಗಳಲ್ಲಿನ ನೈರ್ಮಲ್ಯ ಸಮಸ್ಯೆಯೂ ಕಾರಣ ಎಂಬುದು ಅವರಿಗೆ ದಶಕಗಳ ಕಾಲ ಕ್ಲಿನಿಕ್ ನಡೆಸಿದ ಬಳಿಕ ಅರಿವಾಯಿತು.
“ಗ್ರಾಮಗಳಲ್ಲಿ ಶೌಚಾಲಯಗಳೇ ಇರಲಿಲ್ಲ. 1991 ರ ಸುಮಾರಿಗೆ ನಾವು ಶೌಚಾಲಯಗಳನ್ನು ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದ್ದೇವೆ. ಈ ಸಂಖ್ಯೆ ಇತ್ತೀಚೆಗೆ 700 ದಾಟಿದೆ ”ಎಂದು ಡಾ ರಾವ್ ಹೇಳುತ್ತಾರೆ.
ಅವರು 50 ಶಾಲೆಗಳನ್ನು ತಮ್ಮ ಮೇಲ್ವಿಚಾರಣೆಗೆ ತೆಗೆದುಕೊಂಡರು. ‘ದತ್ತು’ ಎಂಬ ಪದವನ್ನು ಅವರು ಇಲ್ಲಿ ಒಪ್ಪಿಕೊಳ್ಳುವುದಿಲ್ಲ. ಸೇವೆಯ ಉತ್ಸಾಹವನ್ನು ದತ್ತು ಎಂಬ ಪದ ಹಾಳುಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಅದೇನೇ ಇದ್ದರೂ, ಈ ಹಳ್ಳಿ ಶಾಲೆಗಳ ಎಲ್ಲಾ ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಅವರು ಪೂರೈಸಿದ್ದಾರೆ.
ಕರ್ನಾಟಕದ ಅನೇಕ ಪ್ರದೇಶಗಳು ನೀರಿನ ಕೊರತೆ ಮತ್ತು ಬರಗಾಲದಿಂದ ಪರದಾಡುತ್ತವೆ. ಅಂತಹ 16 ಹಳ್ಳಿಗಳಲ್ಲಿ ಡಾ.ರಾವ್ ಅವರು ಆಳವಾದ ಬೋರ್ವೆಲ್ಗಳನ್ನು ಅಗೆಯುವ ಮೂಲಕ ನೀರಿನ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.
ಡಾ.ರಾವ್ ಅವರು ಪರಿಸರ ಜಾಗೃತಿಯ ಕಟ್ಟಾ ಬೆಂಬಲಿಗರೂ ಹೌದು. ಪ್ರಕೃತಿ ಸಂರಕ್ಷಣೆ ಬಗ್ಗೆ ಕೇವಲ ಅವರು ಮಾತನಾಡುವುದಿಲ್ಲ, ಬದಲಿಗೆ ಕೆಲಸವನ್ನೂ ಮಾಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಗಿಡಗಳನ್ನು ನೆಡುತ್ತಾರೆ, ಇದುವರೆಗೆ ಅವರು 35 ಸಾವಿರ ಗಿಡಗಳನ್ನು ನೆಟ್ಟು, ಪೋಷಿಸಿದ್ದಾರೆ.
ಬರೋಬ್ಬರಿ 46 ವರ್ಷಗಳಿಂದ ತಮ್ಮ ಸೇವೆಯನ್ನು ಮುಂದುವರೆಸುತ್ತಾ ಬಂದಿರುವ ಡಾ.ರಮಣ ರಾವ್ ಅವರು ಸ್ವಾರ್ಥ ತುಂಬಿದ ಜಗತ್ತಿನ ನಿಸ್ವಾರ್ಥ ಸೇವಕನಾಗಿದ್ದಾರೆ. ಹಣಕ್ಕಾಗಿ ವೈದ್ಯ ವೃತ್ತಿಯನ್ನು ಆರಿಸಿಕೊಳ್ಳುವವರ ನಡುವೆ ಸಮಾಜಕ್ಕಾಗಿ ವೈದ್ಯನಾದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.