ಈ ಬಾರಿ ಆಸ್ಕರ್ ಪ್ರಶಸ್ತಿಗೆ ಭಾರತದ ಪ್ರವೇಶವನ್ನು ಆಯ್ಕೆ ಮಾಡುವ ಸವಾಲು ಅತ್ಯಂತ ಕಠಿಣವಾಗಿತ್ತು. ಯಾಕೆಂದರೆ ಈ ಬಾರಿ ಹಲವು ಅದ್ಭುತ ಎನಿಸುವಂತಹ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಆದರೆ ಈ ಎಲ್ಲಾ ಸಿನಿಮಾವನ್ನು ನಿರ್ಲಕ್ಷ್ಯ ಮಾಡಿರುವ ಜ್ಯೂರಿ ಕಮಿಟಿ ಸಾಮಾನ್ಯ ಸಿನಿಮಾ ‘ಗಲ್ಲಿ ಬಾಯ್’ ಅನ್ನು ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವನ್ನಾಗಿಸಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿದೆ.
ಜ್ಯೂರಿ ಸಮಿತಿಯ ಮುಖ್ಯಸ್ಥೆ ಅಪರ್ಣಾ ಸೇನ್ ಭಾರತದ ಪ್ರವೇಶವನ್ನು ಆಯ್ಕೆ ಮಾಡುವಲ್ಲಿ ತನ್ನ ಅಜೆಂಡಾವನ್ನು ಪ್ರಮುಖ ಆದ್ಯತೆಯನ್ನಾಗಿಸಿ, ಉಳಿದೆಲ್ಲಾ ಅರ್ಹತಾ ಮಾನದಂಡಗಳನ್ನು ನಿರ್ಲಕ್ಷ್ಯ ಮಾಡಿದ್ದು ಇದಕ್ಕೆ ಪ್ರಮುಖ ಕಾರಣ ಎಂದು ಹಲವಾರು ಮಂದಿ ಅಭಿಪ್ರಾಯಿಸಿದ್ದಾರೆ. ‘ಗಲ್ಲಿ ಬಾಯ್’ಗಿಂತಲೂ ಅದ್ಭುತವಾದ ಸಿನಿಮಾಗಳು ಭಾರತದಲ್ಲಿ ನಿರ್ಮಾಣವಾಗಿದೆ ಎಂದು ಜ್ಯೂರಿ ಸಮಿತಿಯ ನಿರ್ಧಾರವನ್ನು ವಿರೋಧಿಸಿರುವ ಹಲವು ಮಂದಿಯ ಅಭಿಪ್ರಾಯವಾಗಿದೆ. ಬಹಳಷ್ಟು ಜನರು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಗಲ್ಲಿ ಬಾಯ್ಗಿಂತಲೂ ಅದ್ಭುತವಾದ ಸಿನಿಮಾಗಳು ಭಾರತದಲ್ಲಿ ನಿರ್ಮಾಣವಾಗಿದ್ದು, ಇವುಗಳು ಆಸ್ಕರ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದವು. ಅಂತಹ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ.
🔹 ಅಂಧಾಧುನ್
ಈ ಸಿನಿಮಾನವನ್ನು ಶ್ರೀರಾಮ್ ರಾಘವನ್ ಅವರು ನಿರ್ದೇಶನ ಮಾಡಿದ್ದು, ಆಯುಷ್ಮನ್ ಖುರಾನಾ ಮತ್ತು ಟಬು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಆಯುಷ್ಮನ್ ದೃಷ್ಟಿಹೀನ ಪಿಯಾನೋ ವಾದಕನ ಪಾತ್ರವನ್ನು ಇದರಲ್ಲಿ ನಿರ್ವಹಿಸಿದ್ದಾರೆ. ಕೆಲವು ಅನಗತ್ಯ ಸಂದರ್ಭಗಳಿಂದಾಗಿ ಕೊಲೆಯೊಂದಕ್ಕೆ ಆತ ಸಾಕ್ಷಿಯಾಗುತ್ತಾನೆ. ಆ ಸಂದಿಗ್ಧ ಸ್ಥಿತಿಯಿಂದ ಆತ ಹೇಗೆ ಹೊರಬರುತ್ತಾನೆ ಎಂಬುದು ಚಿತ್ರದ ತಿರುಳಾಗಿದೆ. ಈ ಚಿತ್ರವನ್ನು ಹಿಂದಿ ಚಿತ್ರರಂಗದ ಒಂದು ಮೇರುಕೃತಿ ಎಂದು ಬಣ್ಣಿಸಲಾಗಿದೆ. ಈ ಸಿನಿಮಾದ ಅಂತ್ಯವು ಇಂದಿಗೂ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ನಲ್ಲಿ ಚರ್ಚೆತ ವಿಷಯವಾಗಿ ಉಳಿದಿದೆ. ಆಯುಷ್ಮನ್ ಅವರಿಗೆ ಇತ್ತೀಚೆಗೆ ಅದೇ ಚಿತ್ರಕ್ಕಾಗಿ ಅತ್ಯುತ್ತಮ ನಟ ಎಂಬ ಜಂಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು.
ಆದರೆ, ಅತ್ಯುತ್ತಮ ವಿದೇಶಿ ಚಿತ್ರ ಎಂಬ ಆಸ್ಕರ್ ಪ್ರಶಸ್ತಿಗೆ ಭಾರತೀಯ ಪ್ರವೇಶವಾಗಿ ಅಂಧಾಧೂನ್ ಅನ್ನು ತಿರಸ್ಕರಿಸುವ ನಿರ್ಧಾರವು ಅತ್ಯುತ್ತಮ ಚಿತ್ರವೊಂದಕ್ಕೆ ಮಾಡಿದ ಅವಮಾನವಾಗಿದೆ. ಅದೇ ರೀತಿ 2013 ರಲ್ಲೂ, ‘ದಿ ಲಂಚ್ಬಾಕ್ಸ್ ’ ದೇಶ ಮತ್ತು ಪ್ರಪಂಚದ ಕಣ್ಣಿಗೆ ಅತ್ಯಂತ ಪ್ರಿಯವಾಗಿತ್ತು, ಆದರೆ ಆಗಲೂ ನಮ್ಮ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ತೀರ್ಪುಗಾರರ ಸಮಿತಿಯು ಅದನ್ನು ಆಸ್ಕರ್ ಪ್ರಶಸ್ತಿಗೆ ಅರ್ಹವೆಂದು ಪರಿಗಣಿಸಲಿಲ್ಲ. ನಂತರ ಅದೇ ಚಿತ್ರವನ್ನು ಅತ್ಯುತ್ತಮ ವಿದೇಶಿ ಚಿತ್ರಕ್ಕಾಗಿ BAFTA ಚಲನಚಿತ್ರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು ಮತ್ತು ಅದು ಸಣ್ಣ ಅಂತರದಿಂದ ಪ್ರಶಸ್ತಿ ಗೆಲ್ಲುವುದನ್ನು ತಪ್ಪಿಸಿಕೊಂಡಿತ್ತು.
🔹 ರತ್ಚಾಸನ್ (ರತ್ಸಾಸನ್) –
ಅಂಧಾಧುನ್ ದೇಶಾದ್ಯಂತ ಬಿಡುಗಡೆಯಾದ ದಿನವೇ, ರತ್ಚಾಸನ್ (ರತ್ಸಾಸನ್) ತಮಿಳುನಾಡಿನಲ್ಲಿ ಬಿಡುಗಡೆಯಾಯಿತು. ರತ್ಸಾಸನ್ ಎಂದರೆ ರಾಕ್ಷಸ ಎಂದರ್ಥ, ಮತ್ತು ಈ ಚಿತ್ರದಲ್ಲಿ ವಿಷ್ಣು ವಿಶಾಲ್, ಅಮಲಾ ಪಾಲ್ ಮತ್ತು ಸರವಣನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕಥೆಯು ಕಥಾನಾಯಕ ತನ್ನ ತಂದೆ ತೀರಿಕೊಂಡ ನಂತರ ಪೊಲೀಸ್ ಇಲಾಖೆಗೆ ಸೇರಿ ಪೊಲೀಸ್ ಅಧಿಕಾರಿಯಾಗುವುದಾಗಿದೆ. ಅಧಿಕಾರಿಯಾದ ಬಳಿಕ ಆತ ಹಲವಾರು ಹುಡುಗಿಯರು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ನಂತರ ಕೊಲೆಗೀಡಾಗುವ ಪ್ರಕರಣದ ತನಿಖೆಯನ್ನು ನಡೆಸುತ್ತಾನೆ.
ಅಂಧಾಧುನ್ ಮಾದರಿಯಲ್ಲೇ ಈ ಚಿತ್ರವು ಆಸಕ್ತಿದಾಯಕ ಮತ್ತು ಬಲವಾದ ಕಥೆಯುಳ್ಳ ಚಿತ್ರವಾಗಿದೆ. ಈ ದಿನಗಳಲ್ಲಿ ನಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಬಹಳಷ್ಟು ವಿಷಯ ಆಧಾರಿತ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ. ಅವುಗಳು ಯಾರ ಭಾವನೆಗಳನ್ನು ಕೆರಳಿಸದೆ ತಮ್ಮ ವಿಷಯವನ್ನು ಮುಂದಿಡಲು ಸಂಪೂರ್ಣವಾಗಿ ಸಮರ್ಥವೂ ಆಗಿವೆ. ಆದರೆ ದುರದೃಷ್ಟವಶಾತ್, ಅಂಧದುನ್ ಅಂತೆಯೇ, ರತ್ಸಾಸನ್ ಅನ್ನು ಆಸ್ಕರ್ ಪ್ರಶಸ್ತಿಗೆ ಕಡೆಗಣಿಸಲಾಯಿತು.
🔹 ಉರಿ-ದಿ ಸರ್ಜಿಕ್ ಸ್ಟ್ರೈಕ್
ಈ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲು ಕಡೆಗಣಿಸಿದ್ದು ಜ್ಯೂರಿ ಸಮಿತಿಯ ಸ್ಪಷ್ಟ ತಾರತಮ್ಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಈ ಸಿನಿಮಾವು ಆಡಂಬರ ಅಥವಾ ಅನಗತ್ಯ ಸನ್ನಿವೇಶಗಳನ್ನು ಹೊಂದಿಲ್ಲ. ಯಾವುದೇ ಹೆಚ್ಚುವರಿ ತುರುಕುವಿಕೆ ಇಲ್ಲದೆ ಇದು ಭಾರತೀಯ ಸೇನೆಯ ಶೌರ್ಯವನ್ನು ಪ್ರದರ್ಶಿಸಿದೆ. ಭಾರತೀಯ ಸೇನೆಯ ವೈಭವೀಕರಣ ಮತ್ತು ಮೋದಿ ಟೀಕೆ ಇಲ್ಲದೇ ಇರುವುದರಿಂದ ಈ ಸಿನಿಮಾವು ಬುದ್ಧಿಜೀವಿಗಳ ಕ್ರೈಟೀರಿಯಾವನ್ನು ತಲುಪಿಲ್ಲ ಎಂದೆನಿಸುತ್ತದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಅವರು ಅದನ್ನು ಟೀಕಿಸಲು ಆರಂಭಿಸಿದ್ದರು.
ಕೇವಲ ಒಂದು ವರ್ಷದ ಹಿಂದೆ, ‘ಪದ್ಮಾವತ್’ ಸಿನಿಮಾದ ಕುರಿತು ಸಹಿಷ್ಣುತೆಯ ಉಪದೇಶಗಳನ್ನು ನೀಡುತ್ತಿದ್ದ ಬುದ್ಧಿಜೀವಿಗಳು ‘ಉರಿ’ ಸಿನಿಮಾವನ್ನು ತಿರಸ್ಕರಿಸುವ ಭರದಲ್ಲಿ ತಮ್ಮದೇ ಆದ ಸಿದ್ಧಾಂತವನ್ನು ಮರೆತಿದ್ದರು. ಆದರೆ, ಉರಿ ಯಶಸ್ವಿಯಾಗಿ ಬಿಡುಗಡೆಯಾಗಿದ್ದು ಮಾತ್ರವಲ್ಲ, ಅದು ಎಲ್ಲಾ ವೀಕ್ಷಕರ ಹೃದಯವನ್ನು ಗೆದ್ದುಕೊಂಡಿತು. ಚಿತ್ರದ ಸಂಭಾಷಣೆ, ‘ಹೌ ಈಸ್ ದಿ ಜೋಶ್’ (ಇದನ್ನು ಹೆಚ್ಚಾಗಿ ಭದ್ರತಾ ಪಡೆಗಳಲ್ಲಿನ ಸೈನಿಕರನ್ನು ಪ್ರೇರೇಪಿಸಲು ಬಳಸಲಾಗುತ್ತದೆ) ಹಲವಾರು ತಿಂಗಳುಗಳ ಕಾಲ ದೇಶದಾದ್ಯಂತ ಪ್ರತಿಧ್ವನಿಸುತ್ತಿತ್ತು.
ಚಿತ್ರದ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಚಲನಚಿತ್ರ ಮಂಡಳಿಯು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಹಿನ್ನಲೆ ಸಂಗೀತ ಮತ್ತು ಅತ್ಯುತ್ತಮ ಸಂಗೀತ ಪ್ರಶಸ್ತಿಗಳನ್ನು ಈ ಸಿನಿಮಾಗೆ ನೀಡಿವೆ. ಅಪರ್ಣಾ ಸೇನ್ ನೇತೃತ್ವದ ಜ್ಯೂರಿ ಸಮಿತಿಯು ಆಸ್ಕರ್ ಪ್ರಶಸ್ತಿಗೆ ಭಾರತೀಯ ಪ್ರವೇಶವಾಗಿ ‘ಉರಿ’ ಅನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡದಿರಲು ಬಹುಶಃ ಇದು ಕೂಡ ಕಾರಣವಾಗಿರಬಹುದು.
🔹 ಕೇಸರಿ
ಆಸ್ಕರ್ ಪ್ರಶಸ್ತಿಗಾಗಿ ಅನುರಾಗ್ ಸಿಂಗ್ ನಿರ್ದೇಶಿಸಿದ ಈ ಚಿತ್ರವನ್ನು ತಿರಸ್ಕರಿಸಿರುವುದನ್ನು ಅನೇಕ ಜನರು ಖಂಡಿಸಿದ್ದಾರೆ. ಈ ಚಿತ್ರವು ಸರ್ ಗಢಿ ಯುದ್ಧವನ್ನು ಆಧರಿಸಿದೆ. 36 ನೇ ಸಿಖ್ ರೆಜಿಮೆಂಟ್ನ ಕೇವಲ 21 ಸೈನಿಕರು 10,000 ಕ್ಕೂ ಹೆಚ್ಚು ಅಫ್ಘಾನ್ ಬುಡಕಟ್ಟು ಜನಾಂಗದವರ ವಿರುದ್ಧ ಕೊನೆಯ ಉಸಿರು ಇರುವವರೆಗೂ ಧೈರ್ಯದಿಂದ ಹೋರಾಡಿದ, ತಮ್ಮ ಹುದ್ದೆಗೆ ನ್ಯಾಯ ಒದಗಿಸಿದ ಸಾಹಸವನ್ನು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆ.
ಇದು ಕೇವಲ ಒಂದು ಹುದ್ದೆಯನ್ನು ರಕ್ಷಿಸುವ ವಿಷಯವಲ್ಲ, ನಮ್ಮ ದೇಶದ ಶೌರ್ಯ ಮತ್ತು ಗೌರವಕ್ಕಾಗಿ ಧರ್ಮಯುದ್ಧದಂತೆ ಹೋರಾಡಿದ ವೀರರ ಇಚ್ಛಾಶಕ್ತಿಯಾಗಿದೆ, ಅದು ಕೂಡ ವಿಶೇಷವಾಗಿ ಬ್ರಿಟಿಷರು ಆಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿತ್ತು. ಇಂದಿಗೂ, ವಿಶ್ವದ ಹಲವಾರು ಮಿಲಿಟರಿ ಇತಿಹಾಸಕಾರರು ಇದನ್ನು ವಿಶ್ವದ ಭೀಕರ, ಸಾಹಸಿ ಯುದ್ಧಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಪರದೆಯ ಮೇಲೆ ಹವಲ್ದಾರ್ ಇಶರ್ ಸಿಂಗ್ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಿದ ರೀತಿ ಕೂಡ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಆದರೆ ಇಂತಹ ಸಿನಿಮಾವನ್ನು ನಿರ್ಲಕ್ಷ್ಯ ಮಾಡಿ, ‘ಗಲ್ಲಿ ಬಾಯ್’ ಅನ್ನು ಭಾರತದ ಆಯ್ಕೆಯಾಗಿ ಪರಿಗಣಿಸಿದ್ದು ಸ್ಪಷ್ಟವಾಗಿ ವಿಲಕ್ಷಣ ನಿರ್ಧಾರವಾಗಿದೆ. ನಮ್ಮ ದೇಸಿ ನಾಯಕರು ಹಾಲಿವುಡ್ ಅನ್ನು ಇಂಪ್ರೆಸ್ ಮಾಡುವುದಿಲ್ಲವೇ, ಅಪರ್ಣಾ ಸೇನ್ ?
🔹 ದಿ ತಾಷ್ಕೆಂಟ್ ಫೈಲ್ಸ್
ಈ ಚಿತ್ರದ ಬಗ್ಗೆ ಪ್ರಸ್ತಾಪಿಸಿದರೆ ಅನೇಕ ಜನರು ತಲೆ ಕೆಡಿಸಿಕೊಳ್ಳಬಹುದು, ಆದರೆ ಈ ಚಿತ್ರ ಆಸ್ಕರ್ಗೆ ಆಯ್ಕೆ ಆಗಿಲ್ಲ ಎಂಬುದು ನಮ್ಮ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ನೇಮಕ ಮಾಡಿದ ಪ್ರಸ್ತುತ ಜ್ಯೂರಿ ಸಮಿತಿಯ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ. ಆಸ್ಕರ್ ಇತಿಹಾಸವನ್ನು ನೋಡಿದರೆ, ನಮ್ಮ ದೇಶದ ಎರಡನೇ ಪ್ರಧಾನ ಮಂತ್ರಿಯ ನಿಗೂಢ ಸಾವಿನ ಬಗ್ಗೆ ಮಾಡಿದ ತನಿಖಾ ಸಿನಿಮಾ ಆಸ್ಕರ್ ತೀರ್ಪುಗಾರರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿತ್ತು ಎಂದು ನಾವು ನಿಸ್ಸಂಶಯವಾಗಿ ಹೇಳಬಹುದು. ಅತ್ಯುತ್ತಮ ವಿದೇಶಿ ಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆಲ್ಲದಿದ್ದರೂ ಸಹ, ಅಂತಹ ಚಿತ್ರವು ನಿಸ್ಸಂದೇಹವಾಗಿ ನಾಮನಿರ್ದೇಶನವನ್ನು ಗಳಿಸಬಹುದಿತ್ತು. ಆದರೂ, ನಾಮನಿರ್ದೇಶನಕ್ಕಾಗಿ ‘ಗಲ್ಲಿ ಬಾಯ್’ ಅನ್ನು ಕಳುಹಿಸಿಕೊಟ್ಟು, ಈ ಸಿನಿಮಾವನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿ ವೈಯಕ್ತಿಕ ಸಿದ್ಧಾಂತ ಪ್ರಖರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಇದಲ್ಲದೆ, ‘ಮಹಾನತಿ’, ‘ಟಂಬಬಾದ್’, ‘ಬಾದೈ ಹೋ’ ಚಿತ್ರಗಳೂ ಬಿಡುಗಡೆಯಾಗಿವೆ. ಇದು ಭಾರತದ ಚಿತ್ರಣವನ್ನು ಉತ್ತಮ ರೀತಿಯಲ್ಲಿ ತೋರಿಸುತ್ತದೆ, ಆದರೆ ‘ಗಲ್ಲಿ ಬಾಯ್’ ನಂತಹ ಸಾಮಾನ್ಯ ಚಿತ್ರಕ್ಕಾಗಿ ಅವರು ಈ ಸಿನಿಮಾಗಳನ್ನು ನಿರ್ಲಕ್ಷಿಸಿದ್ದಾರೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ನೇಮಿಸಿದ ಸಮಿತಿಯು ವೈಯಕ್ತಿಕ ಕಾರ್ಯಸೂಚಿಯನ್ನು ಅತ್ಯುನ್ನತ ಸ್ಥಾನದಲ್ಲಿರಿಸಿದರೆ, ಈ ಮೂಲಕ ಭಾರತೀಯ ಸಿನೆಮಾ ಎಂದಿಗೂ ಪ್ರಗತಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.