ನೀವು ಕುಳಿತಿರುವ ಕುರ್ಚಿಯನ್ನು, ಎದುರಿರುವ ಮೇಜನ್ನು ಅಥವಾ ಅಗೋ ಆ ಬಾಗಿಲನ್ನು ಜೋರಾಗಿ ಅಲುಗಾಡಿಸಿ, ಗಟ್ಟಿಯಾಗಿದೆಯೇ? ಹೂಂ.. ಹಾಗೆ ಗಟ್ಟಿಮುಟ್ಟಾಗಿರಲು ಆ ಮರವೆಷ್ಟು ಮುಖ್ಯವೋ, ಅದರೊಳಗೆ ಅಡಗಿರುವ ಅಂಟೂ ಅಷ್ಟೇ ಮುಖ್ಯ ಅಲ್ಲವೇ? ಹಾಗೆ ಅರ್ಧ ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತವನ್ನು ಅಂಟಿಸಿಕೊಟ್ಟ ವ್ಯಕ್ತಿಯ ಕಥೆಯನ್ನು ಸ್ವಲ್ಪ ತಿಳಿಯೋಣ. ಹೆಚ್ಚಿನ ಭಾರತೀಯರಿಗೂ ಗೊತ್ತಿಲ್ಲ ಫೇವಿಕಾಲ್ ಅಥವಾ ಪಿಡಿಲೈಟ್ ಕಂಪನಿ ಭಾರತದ್ದು ಎಂದು. ಸಾಧಕರ ಜೀವನ ಸದಾ ಒಂದು ಸ್ಫೂರ್ತಿಯ ಕಡಲು. ಅಂತಹುದೇ ಒಂದು ಭಾರತದ ಫೇವಿಕಾಲ್ ಮ್ಯಾನ್ ಬಲ್ವಂತ್ ಪಾರೇಖರ ಬದುಕು. 1959 ರ ಸುಮಾರಿನಲ್ಲಿ ಯಾರದೋ ಕಛೇರಿಯಲ್ಲಿ ಕುಳಿತು ಫೈಲ್ಗಳ ಧೂಳು ಹೊಡೆಯುತ್ತಾ, ಟೇಬಲ್ಗಳ ಒರೆಸುತ್ತಿದ್ದವರಿಗೆ ಇದು ತನ್ನ ಬದುಕಲ್ಲ ಎನ್ನಿಸಿಬಿಟ್ಟಿತು. ಅವತ್ತು ಮುಂದೇನು ಅಂತ ಕುಳಿತವರಿಗೆ ಜೊತೆಯಾದದ್ದು ತಮ್ಮ ಸುಶೀಲ್ ಮತ್ತು ಹೂಡಿಕೆದಾರ ಮೋಹನ್. ಹೇಗಿದ್ದರೂ ಹೊಸ ವೈದ್ಯರಿಗಿಂತ ಹಳೆಯ ಕಾಂಪೌಂಡರ್ ವಾಸಿ ಎನ್ನುವ ಗಾದೆಯಂತೆ ಒಂದು ವ್ಯವಸ್ಥೆಯಲ್ಲಿ ಒಳಹೊರಗನ್ನು ಅಲ್ಲಿಯ ಜವಾನ ಒಂದು ಪಾಲು ಜಾಸ್ತಿಯೇ ತಿಳಿದಿರುತ್ತಾನೆ. ಅಂತಹ ತಮ್ಮ ಅನುಭವಗಳನ್ನು ದಶಕಗಳ ಕಾಲ ಧಾರೆಯೆರೆದು ಪಿಡಿಲೈಟ್ ಕಟ್ಟಿದವರು ಪಾರೇಖರು. ಅಲ್ಲಿಂದ ಮುಂದೆ ನಿರ್ಮಾಣವಾಗಿದ್ದು ಇತಿಹಾಸ.
ಒಂದು ಸಾಮಾನ್ಯ ಗುಮಾಸ್ತನ ಕೈಯಲ್ಲಿ ಕಾಸಿರದ ಪುಟ್ಟ ಕನಸು ಇಂದು ಹೆಮ್ಮರವಾಗಿ ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆದಿದೆ. ಕಂಪೆನಿಯು ಇಂದು ಎರಡನೆಯ ಪೀಳಿಗೆಯ ಕೈಯಲ್ಲಿದೆ. ಪಿಡಿಲೈಟ್ ಕಂಪನಿ ಮುಖ್ಯಸ್ಥ ನಿತಿನ್ ಚೌಧರಿ ಹೀಗೆ ಹೇಳುತ್ತಾರೆ “ಪಿಡಿಲೈಟ್ ಎಂಬ ಬ್ರಾಂಡ್ ಇದೆ ಎನ್ನುವುದು ಕೂಡ ಗ್ರಾಹಕರಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಫೇವಿಕಾಲ್. ಗ್ರಾಹಕರ ಮನಸ್ಸಿಗೆ ತನ್ನ ಗುಣಮಟ್ಟ ಮತ್ತು ಜಾಹೀರಾತುಗಳಿಂದಲೇ ಹತ್ತಿರವಾದ ಉತ್ಪನ್ನ.” ಇಂದು ಪಿಡಿಲೈಟ್ ಕಂಪನಿಯ ಏಳು ಸಾವಿರ ಕೋಟಿ ರೂಪಾಯಿಗಳ ವ್ಯವಹಾರದಲ್ಲಿ 1/3 ರಷ್ಟನ್ನು ಫೇವಿಕಾಲ್ ಒಂದೇ ತಂದು ಕೊಡುತ್ತದೆ ಎಂದರೆ ನಿಮಗೆ ಅದರ ಶಕ್ತಿ ಅರಿವಾಗಬಹುದು.
ಭಾರತದ ಫೇವಿಕಾಲ್ ಮ್ಯಾನ್ ಎಂದೇ ಕರೆಯಲ್ಪಡುವ ಬಲ್ವಂತ್ರಾಯ್ ಕಲ್ಯಾಣ್ಜಿ ಪಾರೇಖ್. ಸರಳವಾಗಿ ಬಲ್ವಂತ್ ಪಾರೇಖ್. 1925 ರಲ್ಲಿ ಗುಜರಾತಿನ ಬಾವನಗರ್ ಜಿಲ್ಲೆಯ ಮಹುವ ಎಂಬ ಪುಟ್ಟ ಊರು. ಬಾಲ್ಯದ ದಿನಗಳನ್ನು ಮಹುವದಲ್ಲಿ ಕಳೆದ ಅವರು ಎಳೆಯವೆಯಲ್ಲಿ ದೊಡ್ಡ ಬ್ಯುಸಿನೆಸ್ಮನ್ ಆಗುವ ಕನಸು ಕಂಡವರು. ಆದರೆ ಅಜ್ಜ ಮ್ಯಾಜಿಸ್ಟ್ರೇಟ್ ಆಗಿದ್ದರಿಂದಲೋ ಏನೋ ನ್ಯಾಯಶಾಸ್ತ್ರದ ಪದವಿಯನ್ನು ಪಡೆಯಲು ಮುಂಬಯಿಗೆ ತೆರಳಬೇಕಾಯಿತು. ಓದುತ್ತಾ ಇದ್ದವರಿಗೆ ಅದೇನೋ ಸ್ವಾತಂತ್ರ್ಯ ಹೋರಾಟದ ತುಡಿತ. ಹಿಂದೆ ಮುಂದೆ ನೋಡದೆ ಗುಜರಾತಿಗೆ ಬಂದು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಧುಮುಕಿದರು. ನಂತರ ಮತ್ತೆ ವಿದ್ಯಾಭ್ಯಾಸ ಮುಗಿಸಲು ಮುಂಬೈಗೆ ಹೋದರು. ಓದುತ್ತಿರುವಾಗಲೇ ಕಾಂತಾ ಬೆನ್ ಜೊತೆ ವಿವಾಹ. ಜವಾಬ್ದಾರಿ ಹೆಚ್ಚುತ್ತಲೇ ಹೋಯಿತು. ಕೈಯಲ್ಲಿ ಬಿಡಿಗಾಸು ಇರದ ಸಮಯ. ಆದರೂ ಅವರು ಪದವಿ ಪಡೆದ ನಂತರ ವಕೀಲಿ ವೃತ್ತಿ ಮಾಡಲೇ ಇಲ್ಲ. ಕಾರಣ ಇಷ್ಟೇ ಅದರಲ್ಲಿ ಸುಳ್ಳು ಹೇಳುವ ಅವಶ್ಯಕತೆ ಇರುತ್ತದೆ. ನನಗೆ ಆ ರೀತಿ ಮಾಡಲು ಇಷ್ಟ ಇಲ್ಲ ಎಂದು. ಅಜ್ಜ ಮ್ಯಾಜಿಸ್ಟ್ರೇಟ್ ಆಗಿದ್ದವರು, ಬಯಸಿದ್ದರೆ ದೊಡ್ಡ ಹುದ್ದೆಯ ತಲುಪಬಹುದಿತ್ತು. ಆದರೆ ತಮ್ಮ ಸಿದ್ಧಾಂತಗಳಿಗೆ ಕಟ್ಟು ಬಿದ್ದ ಅವರು ಬಡತನವನ್ನು ಪರಿಗಣಿಸದೆ ವಕೀಲಿ ವೃತ್ತಿಗೆ ಒಲ್ಲೆ ಎಂದರು. 1959 ರ ಸುಮಾರಿಗೆ ಜೀವನೋಪಾಯಕ್ಕಾಗಿ ಒಂದು ಪ್ರಿಂಟಿಂಗ್ ಪ್ರೆಸ್ ಸೇರಿದರು. ಅಲ್ಲಿ ಸಿಗುವ ಸ್ವಲ್ಪ ಮಾತ್ರ ಸಂಬಳ, ಊರು ಮಹಾನಗರಿ ಮುಂಬೈ, ಇಬ್ಬರ ಸಂಸಾರ, ಬದುಕು ಸಂಭಾಳಿಸಲು ಆಗಲೇ ಇಲ್ಲ. ನಂತರ ಅವರು ಒಂದು ಪೀಠೋಪಕರಣ ಮಾರಾಟ ಮಳಿಗೆಯಲ್ಲಿ ಪ್ಯೂನ್ ಆಗಿ ಸೇರಿಕೊಂಡರು. ಇಲ್ಲಿಯೂ ಅವರ ಕುಟುಂಬ ಇದ್ದುದು ಪುಟ್ಟ ಗೋಡೌನ್ ಅಂತಹ ಸ್ಥಳದಲ್ಲಿ. ಆದರೆ ಅವರ ಬದುಕು ಇಲ್ಲಿ ದೊಡ್ಡ ತಿರುವು ತೆಗೆದುಕೊಂಡಿತು. ಮರಗೆಲಸ, ಪೀಠೋಪಕರಣ ಹೀಗೆ ಆ ವ್ಯವಹಾರದ ಒಳಹೊರಗನ್ನು ಅರಿಯಲು ಸಹಾಯವಾಯಿತು. ಆದರೂ ಅವರದು ತೃಪ್ತಿಯಿಲ್ಲದ ಜೀವನ. ಹೊಸತೇನನ್ನೋ ಮಾಡುವ ತುಡಿತ. ಅಂತಹ ಸಮಯದಲ್ಲಿ ಬಲ್ವಂತರ ಶಕ್ತಿ ಸಾಮರ್ಥ್ಯಗಳ ಅರಿವಿದ್ದ ಮೋಹನ್ ಎಂಬ ವ್ಯಕ್ತಿ ನೀನು ವ್ಯವಹಾರ ನಡೆಸಬಹುದು, ನಾನು ನಿನ್ನ ಬೆನ್ನಿಗೆ ಇದ್ದೇನೆ. ಅಷ್ಟು ಸಾಕಾಗಿತ್ತು, ಪಾರೇಖರು ಸೈಕಲ್, ಅಡಿಕೆ, ಪೇಪರ್ ಬಣ್ಣಗಳ ವಿದೇಶಗಳಿಗೆ ಆಮದು ರಫ್ತು ಮಾಡಲು ನಿಂತರು. ಅಂತೂ ತಮ್ಮದೇ ಆದ ವ್ಯವಹಾರ ಮಾಡಲು ಶುರು ಮಾಡಿದಾಗ ಕಿರಿಯ ತಮ್ಮ ಸುಶೀಲ್ ಪಾರೇಖ್ ಕೂಡ ಅಣ್ಣನ ಜೊತೆಯಾದರು. ಅವರದು ಪಿಡಿಲೈಟ್ ಕಂಪನಿ. ಆದರೆ ಬಲ್ವಂತರ ಸೃಜನಶೀಲ ವ್ಯಕ್ತಿತ್ವ ಅವರನ್ನು ಸುಮ್ಮನಾಗಲು ಬಿಡಲೇ ಇಲ್ಲ.
ಆಗಷ್ಟೇ ಸ್ವಾತಂತ್ರ್ಯ ಬಂದ ಸಮಯ. ಭಾರತ ತನ್ನ ಕಾಲ ಮೇಲೆ ನಿಲ್ಲಲು ಹವಣಿಸುತ್ತಿದ್ದ ಸಮಯ. ಅದೊಂದು ಕಾಲವಿತ್ತು ಭಾರತೀಯ ಬಡಗಿಗಳು, ಮರಗೆಲಸ ಮಾಡುವವರು ಪ್ರಾಣಿಗಳ ಕೊಬ್ಬನ್ನು ಅಂಟಿನ ರೀತಿ ತಮ್ಮ ಕೆಲಸದಲ್ಲಿ ಬಳಸುತ್ತಿದ್ದರು. ಅದನ್ನು ಅಂಟು ಮಾಡುವುದೇ ದೊಡ್ಡ ಕೆಲಸ, ಅದರಲ್ಲೂ ಅದರಿಂದ ಬರುವ ಕೆಟ್ಟ ವಾಸನೆಯ ಹಿಂಸೆ. ಅದನ್ನು ಮುಚ್ಚಿಡಲು ನಾನಾ ಕಸರತ್ತುಗಳ ಮಾಡಬೇಕಿತ್ತು. ಅವಶ್ಯಕತೆಯೇ ಸಂಶೋಧನೆಯ ತಾಯಿ ಎಂಬ ಮಾತಿದೆ. ಹಾಗೆಯೇ ಮರಗೆಲಸಗಳ ಮತ್ತು ಸಂಬಂಧಿಸಿದ ವ್ಯವಹಾರಗಳನ್ನು ಅರಿತಿದ್ದರಿಂದಲೋ ಏನೋ ಸಹಜವಾಗಿ ಪಾರೇಖರಿಗೆ ಈ ಸಮಸ್ಯೆ ಕಂಡುಬಂದಿತು. ಅವರಿಗೆ ಇಲ್ಲೊಂದು ಪರಿಹಾರದ ಅವಶ್ಯಕತೆ ಇದೆ ಎನ್ನಿಸಿತು. ಅಷ್ಟೇ ಭಾರತದಲ್ಲಿ ದಶಕಗಳ ಕಾಲ ಆಳಿದ ಉತ್ಪನ್ನ ಅವತ್ತು ಜನ್ಮ ತಾಳಿತ್ತು. ನಾನಾ ರಾಸಾಯನಿಕ ಪ್ರಯೋಗಗಳ ನಂತರ ಹುಟ್ಟಿದ್ದೇ ಸುಗಂಧ ಪರಿಮಳದ, ಅಚ್ಚ ಬಿಳಿ ಬಣ್ಣದ ಫೇವಿಕಾಲ್. ಅದಕ್ಕೆ ಆ ಹೆಸರು ಬಂದಿದ್ದು ಅದೊಂದು ಕಥೆ. ಜರ್ಮನಿ ಭಾಷೆಯಲ್ಲಿ ಕಾಲ್/ಕೋಲ್ ಎಂದರೆ ಅಂಟಿಸುವ ವಸ್ತು. ಅವರಿಗೆ ಈ ಉತ್ಪನ್ನದ ಕಂಡು ಹಿಡಿಯಲು ಸಹಾಯ ಮಾಡಿದ ಕಂಪನಿಯ ಹೆಸರು ಫೆಡರಲ್ ಡೈಸ್. ಮತ್ತು ಅದಾಗಲೇ ಮೊವಿಕಾಲ್ ಎಂಬ ಕಂಪನಿಯು ಇಂತಹುದೇ ಅಂಟು ತಯಾರಿಸಿ ಮಾರಾಟ ಮಾಡುತ್ತಿತ್ತು. ಇಷ್ಟೆಲ್ಲ ಯೋಚಿಸಿದ ಬಲ್ವಂತ್ ಪಾರೇಖರು ತಮ್ಮ ಕನಸಿನ ಉತ್ಪನ್ನಕ್ಕೆ ಫೇವಿಕಾಲ್ ಎಂದು ಹೆಸರಿಟ್ಟರು. ಮುಂದೊಂದು ದಿನ ತಮ್ಮ ಪಿಡಿಲೈಟ್ ಕಂಪನಿಗೇ ಫೇವಿಕಾಲ್ ಅನ್ವರ್ಥಕನಾಮ ಆಗುತ್ತದೆ ಎಂದು ಅವರಿಗೂ ಗೊತ್ತಿರಲ್ಲವೇನೋ?! ಅಂದಿನಿಂದ ಹಿಡಿದು 1970 ರಲ್ಲಿ 300 ಗ್ರಾಂ ಅಂಟಿನ ಒಂದು ಟ್ಯೂಬ್ ತಯಾರಿಸುವ ತನಕವೂ ಫೇವಿಕಾಲ್ ಉತ್ಪಾದನೆ ಬಿಟ್ಟು ಬೇರೆ ಯೋಚನೆಯನ್ನೇ ಮಾಡಲಿಲ್ಲ. ಭಾರತದಲ್ಲಿ ಅಂಟಿಗೆ ಮತ್ತೊಂದು ಹೆಸರು ಫೇವಿಕಾಲ್ ಆಗಿಬಿಟ್ಟಿತ್ತು.
1972 ರಲ್ಲಿ ಮಗ ಎಂ ಬಿ ಪಾರೇಖ್ ಕೂಡ ಜೊತೆಯಾದರು. ಅವರೇ ಹೇಳುವಂತೆ “ನಮ್ಮ ತಂದೆ ಇದ್ದುದೇ ಹಾಗೆ, ಸದಾ ಹೊಸತೇನನ್ನೋ ಮಾಡುವ ತುಡಿತ. ಅವರದು ಸೃಜನಶೀಲ ವ್ಯಕ್ತಿತ್ವ.” ಅಂತಹ ವ್ಯಕ್ತಿಯ ಜೇಬಲ್ಲಿ ಅದೃಷ್ಟ ಮತ್ತು ಬಗಲಲ್ಲಿ ಪರಿಶ್ರಮ ಇದ್ದಾಗ ಫೇವಿಕಾಲ್ ಹಿಂತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಇನ್ನು ಫೇವಿಕಾಲಿನ ಜಾಹೀರಾತುಗಳ ವಿಷಯ. ಅವುಗಳನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ವಾರ್ಷಿಕ ಸುಮಾರು ಎರಡು ನೂರು ಕೋಟಿ ರೂಪಾಯಿಗಳನ್ನು ಪಿಡಿಲೈಟ್ ಜಾಹೀರಾತುಗಳಿಗೆ ವ್ಯಯಿಸುತ್ತದೆ. 1997 ರಲ್ಲಿ ಶುರುವಾದ ‘ಧಂ ಲಗಾ ಕೆ ಹೈಯ್ಶಾ’ ಇಂದ ಹಿಡಿದು ಎಗ್, ವಗಾಬಾಂಡ್, ಮೂಚ್ವಾಲಿ, ಬಸ್, ರೈಲು ಜಾಹೀರಾತುಗಳು ಅಲ್ಲದೆ ಇಂದಿನ ತನಕವೂ ಅವರ ಜಾಹೀರಾತುಗಳಲ್ಲಿ ಜೀವಂತಿಕೆ ಇರುತ್ತದೆ. ನಕಲಿತನ ಎನ್ನಿಸುವುದಿಲ್ಲ. ಮತ್ತೊಂದು ಮಹತ್ವದ ವಿಷಯ ಹೇಳಲೇ ಬೇಕು. ತಮ್ಮ ಬಿಡುವಿಲ್ಲದ ಕೆಲಸದಲ್ಲೂ ತಮ್ಮ ನಾಡನ್ನು ಮರೆಯದ ಬಲ್ವಂತ್ ಪಾರೇಖ್ ಗುಜರಾತಿನ ಸಾಂಸ್ಕೃತಿಕ ಇತಿಹಾಸ ಅಧ್ಯಯನ ಮಾಡಲು ದರ್ಶಕ್ ಫೌಂಡೇಶನ್ ಸ್ಥಾಪಿಸಿದರು. ಎರಡು ಕೋಟಿ ರೂಪಾಯಿಗಳನ್ನು ಬಾವನಗರ್ ಯೋಜನೆಗೆ ನೀಡಿದರು. ವೈಜ್ಞಾನಿಕ ಅಧ್ಯಯನಗಳಿಗೆ ಬಲ್ವಂತ್ ಪಾರೇಖ್ ಸೆಂಟರ್ ಕಟ್ಟಿಸಿದ್ದಾರೆ. ಅಲ್ಲದೆ ಮಹುವದಲ್ಲಿ ಎರಡು ಶಾಲೆ, ಒಂದು ಕಾಲೇಜ್ ಮತ್ತು ಒಂದು ಆಸ್ಪತ್ರೆ ಸ್ಥಾಪಿಸಿದ್ದಾರೆ. 2012 ರಲ್ಲಿ ಬಲ್ವಂತ್ ಪಾರೇಖ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಏಷ್ಯಾದ 45 ನೆಯ ಸಿರಿವಂತ ವ್ಯಕ್ತಿ ಆಗಿದ್ದರು. ಒಟ್ಟು 1.36 ಬಿಲಿಯನ್ ಡಾಲರ್ಗಳ ಒಡೆಯರಾಗಿದ್ದರು. ಅಷ್ಟೇ ಅಲ್ಲದೆ ‘ದಿ ಫೇವಿಕಾಲ್ ಚಾಂಪಿಯನ್ಸ್ ಕ್ಲಬ್’ ಹೆಸರಿನಲ್ಲಿ ಒಂದು ಕ್ಲಬ್ ಆರಂಭಿಸಿ ಮರಗೆಲಸ ಮಾಡುವರಿಗೆ ಹೆಚ್ಚಿನ ಮಾಹಿತಿ, ಅವಕಾಶ ಮತ್ತು ಆದ್ಯತೆಗಳನ್ನು ಪೂರೈಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಫೇವಿಕಾಲ್ ಎಷ್ಟು ಪ್ರಸಿದ್ಧ ಎಂದರೆ HBO ವಾಹಿನಿಯ ಗೇಮ್ಸ್ ಆಫ್ ಥ್ರೋನ್ಸ್ನಲ್ಲಿ ರಾಣಿಯಾದ ಲ್ಯಾನಿಸ್ಟರ್ ‘ನನಗೆ ಆ ಆನೆಗಳು ಬೇಕು’ ಎಂದು ಹೇಳುವ ದೃಶ್ಯವಿತ್ತು. ಅದಕ್ಕೆ ಫೇವಿಕಾಲ್ ಕಂಪನಿಯವರು ‘ಕ್ಷಮಿಸಿ, ಆ ಆನೆಗಳು ಫೇವಿಕಾಲಿನ ಆಸ್ತಿ’ ಎಂದು ಟ್ವಿಟರ್ನಲ್ಲಿ ಚಟಾಕಿ ಹಾರಿಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಜಪಾನಿನ ಪ್ರಧಾನಿಯವರೊಂದಿಗೆ ಮಾತನಾಡುತ್ತ ಹೀಗೆ ಹೇಳಿದ್ದರು “Bond we share is stronger than that of Fevicol.” ಇದರ ಬಗ್ಗೆ ಕೇಳಿದಾಗ ನಸು ನಗುತ್ತ ಉತ್ತರಿಸುವ ಫೇವಿಕಾಲಿನ ಮೊದಲ ಪಾರೇಖ್ ಕುಟುಂಬೇತರ ವ್ಯವಸ್ಥಾಪಕ ನಿರ್ದೇಶಕ ಭರತ್ ಪುರಿ “ಭಾರತದಲ್ಲಿ ಹತ್ತರಲ್ಲಿ ಏಳು ಮನೆಗಳಲ್ಲಿ ವಾಟರ್ ಫ್ರೂಫಿಂಗ್ ಸಮಸ್ಯೆಯಿದೆ. ಅದರಲ್ಲಿ ಮೂರು ಮನೆಗಳಲ್ಲಿ ನಮ್ಮ ಉತ್ಪನ್ನಗಳ ತಲುಪಿಸುತ್ತಿದ್ದೇವೆ. ಅದನ್ನು ಕನಿಷ್ಠ ಹತ್ತರಲ್ಲಿ ಏಳು ಮಾಡುವುದು ನಮ್ಮ ಗುರಿ. ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಸಮಸ್ಯೆಗಳಿಗೆ ನಾವು ಭಾಗವಹಿಸಿ ಪರಿಹಾರ ನೀಡುವುದು ನಮ್ಮ ಆಶಯ. ನಾವು ಜಿಡಿಪಿಯೊಂದಿಗೆ ಬೆಸೆದುಕೊಂಡಿದ್ದೇವೆ. ಗ್ರಾಹಕರು ಜಾಸ್ತಿ ಸಂಪಾದಿಸಿದರೆ ಮನೆ ಕಟ್ಟುತ್ತಾರೆ. ಆಗ ಮಳೆ ನೀರು ನುಗ್ಗದಂತೆ ವಾಟರ್ ಫ್ರೂಫಿಂಗ್ ಮಾಡುತ್ತೇವೆ. ಅವರು ಪೀಠೋಪಕರಣ ತಂದರೆ ಫೇವಿಕಾಲ್ ನೀಡುತ್ತೇವೆ. ಬೇರೇನೋ ಕೊಂಡು ತಂದು ಒಡೆದರೆ ಫೇವಿಕ್ವಿಕ್. ಹೀಗೆ ಮನೆಯ ಪಡಸಾಲೆಯಲ್ಲಿ ಸದಾ ನಾವಿರಲು ಬಯಸುತ್ತೇವೆ.” ಎಷ್ಟು ಭರವಸೆಯ ಮಾತುಗಳು. ಜಿಡಿಪಿ ಸರಿಯಿಲ್ಲ, ಜಿಎಸ್ಟಿ ಬಂದ ಮೇಲೆ ಮುಳುಗಿದೆವು, ಒಳ ಉಡುಪಿಗೂ ಕಾಸಿಲ್ಲ, ಬಿಸ್ಕೆಟ್ ಕಂಪನಿ ಮುಚ್ಚಿತು ಅದಕ್ಕೂ ಸರ್ಕಾರವೇ ಹೊಣೆ ಎನ್ನುವ ಜ್ಞಾನಿಗಳ ನಡುವೆ ಬದುಕಿನ ಪ್ರತಿ ಹಂತದಲ್ಲೂ ಸ್ಫೂರ್ತಿಯಾಗಿ ನಿಲ್ಲಬಲ್ಲದು ಫೇವಿಕಾಲ್ ಅಥವಾ ಪಿಡಿಲೈಟ್ ಕಂಪನಿ. ಜಿಡಿಪಿಯೊಂದಿಗೆ ಮತ್ತು ಜನರ ಬದುಕಿನೊಂದಿಗೆ ಫೇವಿಕಾಲಿನಿಂದ ಪಿಡಿಲೈಟನ್ನು ಅಂಟಿಸಿ ಬಿಟ್ಟಿದ್ದೇವೆ ಎಂದು ಧೈರ್ಯದಿಂದ ಹೇಳುವಾಗ ಅವರ ದೂರಾಲೋಚನೆಗಳು ಅಷ್ಟು ಧೃಢವಾಗಿವೆ ಎಂದು ತಿಳಿಯುತ್ತದೆ. ಇತ್ತೀಚೆಗೆ ಅರವತ್ತರ ಹುಟ್ಟುಹಬ್ಬ ಆಚರಿಸಿದ ಫೇವಿಕಾಲ್ ಕಂಪನಿಯ ಸಂಸ್ಥಾಪಕ ಬಲ್ವಂತ್ ಪಾರೇಖರು 2013 ರಲ್ಲಿ ನಿಧನರಾದರು. ತಾನು ಬೆಳೆದು ಇತರರನ್ನು ಬದುಕಿಸುವ ಚಾಂಪಿಯನ್ಸ್ ಕ್ಲಬ್, ಅಧ್ಯಯನ ಕೇಂದ್ರ, ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆ ಸ್ಥಾಪನೆಯಂತಹ ಅವರ ಪ್ರಯತ್ನಗಳು ಅವರನ್ನು ಜನಮಾನಸದಲ್ಲಿ ನೂರ್ಕಾಲ ಉಳಿಸಲಿದೆ. ದೊಡ್ಡ ಕನಸುಗಳ ಒಬ್ಬ ಪುಟ್ಟ ಪ್ಯೂನ್ ಆರಂಭಿಸಿ ಇಂದು ಏಳು ಸಾವಿರ ಕೋಟಿ ರೂಪಾಯಿಗಳ ತೂಗುವ ಪಿಡಿಲೈಟ್ ಕಂಪನಿಗೆ ಶುಭವಾಗಲಿ.
ಇಷ್ಟೆಲ್ಲಾ ಆಗಿ ಈ ಲೇಖನ ಬರೆಯಲು ಸೌಮ್ಯ ಅವರು ಪ್ರೇರಣೆ. ಹೀಗಾಗಿ ಈ ಲೇಖನ ಅವರಿಗೆ ಅರ್ಪಣೆ. ಅವರ ಬದುಕು ಫೇವಿಕಾಲಿನಷ್ಟೇ ಗಟ್ಟಿಯಾಗಲಿ.
ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.