ಹೈದರಾಬಾದಿನ 55 ವರ್ಷದ ಝಹರ ಬೇಗಂ ಒಣ ಮೀನು ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಯಾಗಿದ್ದಾರೆ. ಮುಂಜಾನೆಯಿಂದ ಆರಂಭವಾಗುವ ಅವರ ಕೆಲಸ ಬೆಳಿಗ್ಗೆ 11.30ರವರೆಗೂ ಮುಂದುವರೆಯುತ್ತದೆ.
“ನಾನು ಪ್ರತಿದಿನ ಸುಮಾರು 400 ರೂಪಾಯಿ ಗಳಿಸುತ್ತೇನೆ ಮತ್ತು ಸುಮಾರು ಎರಡು ತಿಂಗಳ ಹಿಂದೆ ನಾನು ಗಳಿಸಿದ ಮೊತ್ತದ ಅರ್ಧದಷ್ಟು ಭಾಗವನ್ನು ಫುಡ್ ಕಾರ್ಟ್ ಬಾಡಿಗೆಗೆ ಖರ್ಚು ಮಾಡಬೇಕಾಗಿತ್ತು, ಇದರಿಂದ ನನ್ನ ಆದಾಯ ಕುಂಠಿತವಾಗುತ್ತಿತ್ತು. ಅದರ ಜೊತೆಗೆ, ಕಾರ್ಟ್ ಮೇಲ್ ಮೇಲ್ಛಾವಣಿ ಇರಲಿಲ್ಲ, ಆದ್ದರಿಂದ ಮಳೆ ಬಂದಾಗ ವ್ಯಾಪಾರವು ನಷ್ಟಕ್ಕೀಡಾಗುತ್ತಿತ್ತು, ತೆಳ್ಳನೆಯ ಟರ್ಪಲಿನ್ ಯಾವುದೇ ರೀತಿಯ ಪ್ರಯೋಜನವನ್ನೂ ನೀಡುತ್ತಿರಲಿಲ್ಲ”ಎಂದು ಅವರು ಹೇಳುತ್ತಾರೆ.
ಇಂದು, ಝಹರ ಸಂತುಷ್ಟವಾಗಿದ್ದಾರೆ. ಅದಕ್ಕೆ ಕಾರಣ ಸೌರಶಕ್ತಿ ಚಾಲಿತ ಇ-ಕಾರ್ಟ್. ಅವರು ಸೌರಶಕ್ತಿ ಚಾಲಿತ ಇ-ಕಾರ್ಟ್ ಅನ್ನು ಇಂದು ಬಳಸುತ್ತಿದ್ದಾರೆ. ಅದರಲ್ಲಿ ಬಲ್ಬ್, ಫ್ಯಾನ್ ಮತ್ತು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಬಹುದು. ಇದು ಸೌರ ಮೇಲ್ಛಾವಣಿಯನ್ನು ಹೊಂದಿದೆ, ಇದು ಎಲ್ಲಾ ಹವಮಾನದಲ್ಲೂ ಬಳಕೆಗೆ ಯೋಗ್ಯವಾಗಿದೆ.
ಈ ಕಾರ್ಟ್ ಅನ್ನು ವಿಶಾಕ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದೆ ಮತ್ತು ATUM ಎಂಬ ಈ ಕಂಪನಿಯ ಅದ್ಭುತ ಉತ್ಪನ್ನ ಪರಿಸರ ಸ್ನೇಹಿ, ಇಂಧನ-ದಕ್ಷ ಮತ್ತು ಶಕ್ತಿ ಉತ್ಪಾದಿಸುವ ಸೌರ ಚಾವಣಿ ವ್ಯವಸ್ಥೆಯನ್ನು ಒಳಗೊಂಡಿದೆ.
ವಿಶಾಕ ಇಂಡಸ್ಟ್ರೀಸ್ ಅನ್ನು 1983 ರಲ್ಲಿ ಡಾ.ಜಿ.ವಿವೇಕಾನಂದ್ ಅವರು ಸ್ಥಾಪಿಸಿದರು ಮತ್ತು ಅವರ ಮಗ ಜಿ.ವಂಶಿ ಕೃಷ್ಣ ಅವರು 2017 ರಲ್ಲಿ ಇದರ ನೇತೃತ್ವ ವಹಿಸಿಕೊಂಡರು.
“ಕಳೆದ ಹತ್ತು ವರ್ಷಗಳಿಂದ ಕಂಪನಿಯು ಸುಸ್ಥಿರತೆಗೆ ವಿಶೇಷ ಆಸಕ್ತಿಯನ್ನು ವಹಿಸಿದೆ ಮತ್ತು ಅದಕ್ಕೆ ಅನುಗುಣವಾಗಿ, ಮರುಬಳಕೆ ಅಥವಾ ಪರಿಸರ ಸ್ನೇಹಿಯಾಗಿರುವ ಕಟ್ಟಡ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ” ಎಂದು 30 ವರ್ಷದ ವಂಶಿ ಹೇಳುತ್ತಾರೆ.
2017 ರ ಆರಂಭದಲ್ಲಿ, ಅವರು ‘ವಿ-ನೆಕ್ಸ್ಟ್’ ಎಂಬ ಹೆಸರಿನ ಫೈಬರ್ ಸಿಮೆಂಟ್ ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದರು, ಅದು ATUM ನ ಮೂಲವನ್ನು ರೂಪಿಸುತ್ತದೆ.
“ನಾವು ಫ್ಲೈ ಆ್ಯಶ್, ಸಿಮೆಂಟ್ ಮತ್ತು ಮರುಬಳಕೆಯ ಸಿಮೆಂಟ್ ಚೀಲಗಳನ್ನು ಬಳಸಿ ಈ ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಪ್ರಬಲವಾಗಿದೆ ಮತ್ತು ಪ್ಲೈವುಡ್, ಜಿಪ್ಸಮ್ ಬೋರ್ಡ್ಗಳು ಮತ್ತು ಮರಳು / ನೀರು ಆಧಾರಿತ ನಿರ್ಮಾಣ ಸಾಮಗ್ರಿಗಳಿಗೆ ಸುಲಭದ ಪರ್ಯಾಯವಾಗಿದೆ ಮತ್ತು ಸುಸ್ಥಿರ ಮನೆಗಳನ್ನು ನಿರ್ಮಿಸಲು ಬಯಸುವ ಹಲವಾರು ಜನರು ಇದನ್ನು ಈಗಾಗಲೇ ಬಳಸುತ್ತಿದ್ದಾರೆ”ಎಂದು ಅವರು ಹೇಳುತ್ತಾರೆ.
ಮೂರು ವರ್ಷಗಳ ಹಿಂದೆ ಅವರು ಸೌರ ಛಾವಣಿಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದರು. ಸುಮಾರು 2.5 ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ, ATUM ಸಂಯೋಜಿತ ಸೌರ ಮೇಲ್ಛಾವಣಿಯನ್ನು ನಿರ್ಮಿಸಲು ಡಿಸೆಂಬರ್ 2018 ರಲ್ಲಿ ಪ್ರಾರಂಭಿಸಿದರು.
ATUM ಮತ್ತು ಅದರ ಪ್ರಯೋಜನಗಳನ್ನು ವಿವರಿಸಿರುವ ವಂಶಿ, “ATUM ಮೇಲ್ಛಾವಣಿಯನ್ನು ವಿ-ನೆಕ್ಸ್ಟ್ನಲ್ಲಿ 72 ಸೌರ ಕೋಶಗಳನ್ನು ಸರಿಪಡಿಸುವ ಮೂಲಕ ತಯಾರು ಮಾಡಲಾಗಿದೆ. ಇದು ಸಾಂಪ್ರದಾಯಿಕ ಮೇಲ್ಛಾವಣಿಯ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತದೆ ಮತ್ತು ಹೆಚ್ಚಿನ ಉಷ್ಣ ವಾಹಕತೆಯೊಂದಿಗೆ ತಾಪಮಾನವನ್ನು ನಿಯಂತ್ರಿಸುತ್ತದೆ. ಸಾಂಪ್ರದಾಯಿಕ ಸೌರ ಫಲಕಗಳಿಗಿಂತ ಇದು ಭಿನ್ನವಾಗಿ, ATUM ಅನ್ನು ಮೇಲ್ಮೈಗಳ ಮೇಲೆ ಜೋಡಿಸಬೇಕಾಗಿಲ್ಲ ಮತ್ತು ಪರಸ್ಪರ ಪಕ್ಕದಲ್ಲಿಯೇ ಇಡಬಹುದು, ಇದರಿಂದಾಗಿ ಜಾಗದ ಗರಿಷ್ಠ ಬಳಕೆಗೆ ಇದು ಅನುವು ಮಾಡಿಕೊಡುತ್ತದೆ” ಎಂದಿದ್ದಾರೆ.
7ft x 3ft ATUM ಮೇಲ್ಛಾಣಿಯು ಸುಮಾರು 320W ಶಕ್ತಿಯನ್ನು ಉತ್ಪಾದಿಸುತ್ತದೆ. ನಿರ್ದಿಷ್ಟ ಮನೆಯ ಮೇಲ್ಛಾವಣಿಯ ಆಯಾಮಗಳನ್ನು ಅವಲಂಬಿಸಿ ಅದನ್ನು ಅಂಚುಗಳಂತೆ ಇರಿಸಬೇಕಾಗುತ್ತದೆ. ಇದು ಗಟ್ಟಿಮುಟ್ಟಾದ, ತುಕ್ಕು ನಿರೋಧಕ, ಸೋರಿಕೆ-ನಿರೋಧಕ, 300 ಕಿ.ಗ್ರಾಂ ವರೆಗೆ ಭಾರವನ್ನು ಸಹಿಸಿಕೊಳ್ಳುತ್ತದೆ ಮತ್ತು ಸುಮಾರು 2 ಗಂಟೆ 57 ನಿಮಿಷಗಳ ಕಾಲ ಬೆಂಕಿಯನ್ನು ತಡೆದುಕೊಳ್ಳಬಲ್ಲದು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಂಪ್ರದಾಯಿಕ ಸೌರ ಚಾವಣಿ ವ್ಯವಸ್ಥೆಗಳು 10 ರಿಂದ 15 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಆದರೆ, ನಾವು ತಯಾರಿಸುವ ಮೇಲ್ಛಾವಣಿಗಳನ್ನು ಕನಿಷ್ಠ 30 ವರ್ಷಗಳವರೆಗೆ ಬಾಳಿಕೆ ಬರುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದೇವೆ ”ಎಂದು ವಂಶಿ ಹೇಳಿದ್ದಾರೆ.
ಸ್ಮಾರ್ಟ್ಫೋನ್ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಬಹುದಾದ ಮತ್ತು ಉತ್ಪತ್ತಿಯಾಗುವ ಸೌರಶಕ್ತಿಯನ್ನು ನಿರ್ವಹಿಸಲು ಸಾಧ್ಯವಾಗುವಂತಹ ATUM ಅಪ್ಲಿಕೇಶನ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಸುಮಾರು ಆರು ತಿಂಗಳ ಹಿಂದೆ, ವಂಶಿ ಅವರು ಬಾಗ್ ಲಿಂಗಂಪಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಗೆ ಭೇಟಿ ನೀಡಿ ಅತಿಥಿ ಭಾಷಣವನ್ನೂ ಮಾಡಿದ್ದಾರೆ.
“ಅಲ್ಲಿನ ಮಕ್ಕಳ ಪೋಷಕರಲ್ಲಿ ಹೆಚ್ಚಿನವರು ತರಕಾರಿ, ಹಣ್ಣುಗಳು, ಬೇಯಿಸಿದ ಆಹಾರ ಮತ್ತು ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಕಂಡುಕೊಂಡೆ. ಈ ಮಕ್ಕಳು ತಮ್ಮ ಪೋಷಕರು ತಮ್ಮ ಆದಾಯದ ಗಣನೀಯ ಭಾಗವನ್ನು ಕಾರ್ಟ್ ಬಾಡಿಗೆಗೆ ಖರ್ಚು ಮಾಡುತ್ತಾರೆ ಮತ್ತು ಮಳೆ ಬಂದಾಗ ವ್ಯಾಪಾರ ಹಾನಿಗೀಡಾಗುತ್ತದೆ ಎಂದು ವಿವರಿಸಿದರು” ಎಂದು ವಂಶಿ ಹೇಳಿದ್ದಾರೆ.
ಇದು ಅವರಿಗೆ ಸುಸ್ಥಿರವಾದ ಮತ್ತು ಎಲ್ಲಾ ಹವಮಾನದಲ್ಲೂ ಉಪಯುಕ್ತವಾದ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ವಂಶಿ ಅವರಿಗೆ ಪ್ರೇರಣೆ ನೀಡಿತು.
ATUM ಕಾರ್ಟ್ ಎಲ್ಲಾ ಹವಾಮಾನದಲ್ಲೂ ರಕ್ಷಣೆ ನೀಡುವುದಲ್ಲದೆ, ಮಾರಾಟಗಾರರು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಲು ಸಾಧ್ಯವಾಗುವಂತೆ ಇದು ಮಾಡುತ್ತದೆ. ಈ ಕಾರ್ಟ್ ವಿದ್ಯುತ್ ಅನ್ನೂ ಉತ್ಪಾದಿಸುತ್ತದೆ.
ನಾಲ್ಕು ತಿಂಗಳುಗಳ ಸಮಯಾವಕಾಶವನ್ನು ತೆಗೆದುಕೊಂಡು ಅವರು ಅಂತಿಮವಾಗಿ ATUM ಚಾಲಿತ ಇ-ಕಾರ್ಟ್ನೊಂದಿಗೆ ಹೊರ ತಂದರು. ಇಲ್ಲಿಯವರೆಗೆ, ಅವರು ಸುಮಾರು 40 ಇ-ಕಾರ್ಟ್ಗಳನ್ನು ಹೈದರಾಬಾದ್ನ ಬೀದಿ ಬದಿ ವ್ಯಾಪಾರಿಗಳಿಗೆ ದಾನ ಮಾಡಿದ್ದಾರೆ ಮತ್ತು ಇನ್ನೂ 20 ಕಾರ್ಟ್ಗಳನ್ನು ಅವರು ದಾನ ಮಾಡಲು ನಿರ್ಧರಿಸಿದ್ದಾರೆ.
ATUM ಪ್ರಸ್ತುತ ಭಾರತದ ಹತ್ತು ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ – ದೆಹಲಿ, ಮುಂಬಯಿ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹ್ಮದಾಬಾದ್, ಪುಣೆ, ಕೊಚ್ಚಿ ಮತ್ತು ಗೋವಾಗಳಲ್ಲಿ ಇದು ಇದೆ.
“ಪ್ರಾರಂಭವಾದ ಕಳೆದ ಎಂಟು ತಿಂಗಳಲ್ಲಿ ನಾವು 3,125 ಕ್ಕೂ ಹೆಚ್ಚು ATUMಗಳನ್ನು ಮಾರಾಟ ಮಾಡಿದ್ದೇವೆ” ಎಂದು ಅವರು ವಂಶಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ನಿರ್ಮಾಣ ಉದ್ಯಮವು ಸ್ವಚ್ಛ, ಪರಿಸರ ಸ್ನೇಹಿ ನಿರ್ಮಾಣ ಬೇಡಿಕೆಗಳಿಗೆ ತಕ್ಕಂತೆ ರೂಪಾಂತರಗೊಳ್ಳುತ್ತಿದೆ ಎಂದು ವಂಶಿ ನಂಬಿದ್ದಾರೆ. ಅಲ್ಲದೆ, ಗೋದಾಮುಗಳು, ರೈಲ್ವೆ ನಿಲ್ದಾಣಗಳು, ಕಾರ್ಖಾನೆಗಳಲ್ಲಿ ಬಳಕೆಯಾಗದ ಮೇಲ್ಛಾವಣಿಯನ್ನು ಸೌರಶಕ್ತಿ ಚಾಲಿತ ಮೇಲ್ಛಾವಣಿಗಳಾಗಿ ಪರಿವರ್ತಿಸಲು ಸಾಕಷ್ಟು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
“ಮೇಲ್ಛಾವಣಿಗಳಿಂದ 40 GW ವಿದ್ಯುತ್ ಉತ್ಪಾದಿಸುವ ಮೂಲಕ ದೇಶದ ಯೋಜಿತ ಸುಸ್ಥಿರ ಗುರಿಗಳನ್ನು ಪೂರೈಸಲು ಪರಿಹಾರಗಳನ್ನು ನಾವು ಕಂಡುಕೊಳ್ಳುತ್ತೇವೆ” ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.