ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು 600 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಅಮೆರಿಕಾದಲ್ಲಿ ಫಂಡ್ ರೈಸಿಂಗ್ ಮಾಡಿದ್ದಾರೆ.
ಹಾರ್ಟ್ ಟು ಹಾರ್ಟ್ (ಎಚ್2ಹೆಚ್) ಪ್ರತಿಷ್ಠಾನದ ಭಾಗವಾಗಿರುವ ಗಾವಸ್ಕರ್ ಇತ್ತೀಚೆಗೆ ‘ಬ್ಯಾಟ್-ಫಾರ್-ಲೈಫ್’ ಎಂಬ ಬಹು ನಗರ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಪ್ರತಿಷ್ಠಾನ ಆರಂಭಿಸಿದ ‘ಫ್ರೀಡಂ ಫ್ರಮ್ ಸಿಎಚ್ಡಿ’ ಕಾರ್ಯಕ್ರಮದ ಭಾಗವಾಗಿ ಅವರು ಈ ಪ್ರವಾಸವನ್ನು ನಡೆಸಿದ್ದರು. ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉಚಿತ ಹೃದಯ ಶಸ್ತ್ರಚಿಕಿತ್ಸೆಗಳಿಗೆ ಜನರ ಭಾಗವಹಿಸುವಿಕೆಯನ್ನು ಪಡೆಯಲು ಪ್ರತಿಷ್ಠಾನವು ಈ ಕಾರ್ಯಕ್ರಮವನ್ನು ನಡೆಸಿದೆ.
“ಭಾರತದಲ್ಲಿನ ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಯನ್ನು ನಡೆಸಲು ಸಹಾಯ ಮಾಡುವ ನಿಟ್ಟಿನಲ್ಲಿ ಅಮೆರಿಕಾದ ಬಹುನಗರಗಳಿಗೆ ಪ್ರವಾಸಕೈಗೊಂಡಿದ್ದು ನಿಜಕ್ಕೂ ನನ್ನ ಅದ್ಭುತ ಆರಂಭಿಕ ಇನ್ನಿಂಗ್ಸ್. ಹಲವಾರು ನಗರಗಳಲ್ಲಿ ಅನೇಕರು ಇದರಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಗಾವಸ್ಕರ್ ಹೇಳಿದ್ದಾರೆ. ನೆರವು ನೀಡಲು ಬಂದವರಿಗೆ ಅವರು ಬ್ಯಾಟಿಗೆ ತಮ್ಮ ಸಹಿಯನ್ನು ಹಾಕಿ ಉಡುಗೊರೆಯಾಗಿ ನೀಡಿದ್ದಾರೆ.
ಈ ಶಸ್ತ್ರಚಿಕಿತ್ಸೆಗಳನ್ನು ಭಾರತದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಗಳು ನಡೆಸಲಿವೆ. 2012 ರಿಂದ ಕನಿಷ್ಠ 10,000 ಉಚಿತ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಮಾಡಲಾಗಿದೆ.
ಆಸ್ಪತ್ರೆಯ ಅಧ್ಯಕ್ಷ ಸಿ ಶ್ರೀನಿವಾಸ್ ಅವರು ಪ್ರತಿಕ್ರಿಯೆ ನೀಡಿ, “36,000 ಕ್ಕೂ ಹೆಚ್ಚು ಮಕ್ಕಳು ಶಸ್ತ್ರಚಿಕಿತ್ಸೆಗಾಗಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಇನ್ನೂ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಚಿಕಿತ್ಸೆ ನೀಡದಿದ್ದರೆ ಅನೇಕರು ದೀರ್ಘಕಾಲ ಬದುಕುವುದಿಲ್ಲ” ಎಂದಿದ್ದಾರೆ
ಭಾರತದಲ್ಲಿ ಪ್ರತಿದಿನ 250 ಕ್ಕೂ ಹೆಚ್ಚು ಮಕ್ಕಳು ಹೃದಯ ಕಾಯಿಲೆಯಿಂದ ಸಾಯುತ್ತಿದ್ದಾರೆ, ಸಮೀಪದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಇಲ್ಲದೇ ಇರುವುದು ಮತ್ತು ಆರ್ಥಿಕ ಅಡೆತಡೆ ಇದಕ್ಕೆ ಕಾರಣವಾಗಿದೆ. ಅನೇಕ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ದೊಡ್ಡ ನಗರಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.