ಭಾರತದ ಅಧಿಕೃತ ಭಾಷೆ ಎಂಬ ಸ್ಥಾನಮಾನವನ್ನು ಪಡೆದುಕೊಂಡಿರುವ ಹಿಂದಿ, ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ವಿದೇಶಿಯವರು ಭಾರತವನ್ನು ಹಿಂದಿ ಮಾತನಾಡುವ ದೇಶವೆಂದೇ ಪರಿಗಣಿಸುತ್ತಾರೆ. ಬೇರೆ ಬೇರೆ ಭಾಷೆಗಳನ್ನಾಡುವ ಭಾರತೀಯರಿಗೂ ಹಿಂದಿ ಎಂಬುದು ಒಂದು ಚಿರಪರಿಚಿತವಾದ ಭಾಷೆ. ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಅನ್ನು ದೇಶದಲ್ಲಿ ಆಚರಿಸಲಾಗುತ್ತದೆ.
ಸೆಪ್ಟೆಂಬರ್ 14, 1949 ರಂದು ಬಿಯೋಹರ್ ರಾಜೇಂದ್ರ ಸಿಂಹ ಅವರ 50 ನೇ ಜನ್ಮದಿನದಂದು, ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸಂವಿಧಾನ ಸಭೆಯಲ್ಲಿ ಸ್ವೀಕರಿಸಲಾಯಿತು. ಈ ನಿರ್ಧಾರವನ್ನು 1950 ರ ಜನವರಿ 26 ರಿಂದ ಜಾರಿಗೆ ಬರುವಂತೆ ಭಾರತದ ಸಂವಿಧಾನವು ಅಂಗೀಕರಿಸಿತು. ಭಾರತೀಯ ಸಂವಿಧಾನದ 343 ನೇ ವಿಧಿ ಅಡಿಯಲ್ಲಿ ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಲಾಯಿತು. ಭಾರತದಲ್ಲಿ ಒಟ್ಟು 22 ಪರಿಶಿಷ್ಟ ಭಾಷೆಗಳಿವೆ, ಅವುಗಳಲ್ಲಿ ಎರಡು ಅಧಿಕೃತವಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಳಸಲಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಹೆಚ್ಚು ಪ್ರಚಲಿತದಲ್ಲಿದೆ. ಹಿಂದಿಯನ್ನು 250 ದಶಲಕ್ಷ ಜನರು ಮೂಲ ಭಾಷೆಯಾಗಿ ಮಾತನಾಡುತ್ತಾರೆ ಮತ್ತು ಇದು ವಿಶ್ವದ ನಾಲ್ಕನೇ ದೊಡ್ಡ ಭಾಷೆಯಾಗಿದೆ.
‘ದೇವನಾಗರಿ ಲಿಪಿಯಲ್ಲಿನ ಹಿಂದಿ ನಮ್ಮ ಅಧಿಕೃತ ಭಾಷೆಯಾಗಿರುತ್ತದೆ” ಎಂದು ನಮ್ಮ ಸಂವಿಧಾನ ಹೇಳಿದೆ. ಭಾರತದಲ್ಲಿ ಏಕ ಭಾಷೆಯನ್ನು ಹೇರಲು ಯಾರಿಗೂ ಸಾಧ್ಯವಿಲ್ಲ. ಇಲ್ಲಿ ಒಂದೊಂದು ರಾಜ್ಯಕ್ಕೂ ಒಂದೊಂದು ಆಡಳಿತ ಭಾಷೆ ಇದೆ. ಒಂದೊಂದು ರಾಜ್ಯದಲ್ಲೂ ಹಲವು ಉಪ ಭಾಷೆಗಳೂ ಇವೆ. ಹೀಗಾಗಿ ಭಾಷೆಯ ಹೇರಿಕೆ ಸಲ್ಲದು. ಆದರೆ ರಾಷ್ಟ್ರದ ಅಧಿಕೃತ ಭಾಷೆಯಾದ ಹಿಂದಿಯನ್ನು ಯಾರ ಮೇಲೆ ಹೇರಿಕೆ ಮಾಡಲಾಗಿಲ್ಲವಾದರೂ ಅದು ಪ್ರತಿ ಭಾರತೀಯನ ಮನಸ್ಸಲ್ಲಿ ಅಚ್ಚೊತ್ತಿದೆ.
ಹಿಂದಿ ದಿವಸ್ ಅನ್ನು ದೇಶವ್ಯಾಪಿಯಾಗಿ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ಕವನಗಳು, ಕಥೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಇದನ್ನು ಆಚರಿಸಲಾಗುತ್ತದೆ.
ನಾವು ಇನ್ನೂ ಇಂಗ್ಲಿಷ್ ಮನಸ್ಥಿತಿಯ ಗುಲಾಮರು. ಹಿಂದಿಯನ್ನು ರಾಷ್ಟ್ರವ್ಯಾಪಿಯಾಗಿ ಪ್ರಚಾರಗೊಳಿಸುವ ಪ್ರಯತ್ನಕ್ಕೆ ವಿರೋಧ ಮಾಡುತ್ತೇವೆ. ಆದರೆ ಇಂಗ್ಲೀಷ್ ನಮ್ಮ ಭಾಷೆಗಳನ್ನು ಕೊಂದರೂ ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ಕನ್ನಡ, ತಮಿಳು, ಮಲಯಾಳಿ ಇತ್ಯಾದಿ ಭಾಷೆಗಳಿಗೆ ಅಪಾಯವೊಡ್ಡಿರುವುದು ಇಂಗ್ಲೀಷ್ ಹೊರತು ಹಿಂದಿಯಲ್ಲ. ಇಂಗ್ಲೀಷ್ ಈಗ ಅನಿವಾರ್ಯ ಭಾಷೆಯಾಗಿ ಸರ್ವವ್ಯಾಪಿಯಾಗಿ ಹರಡಿಕೊಂಡಿದೆ. ಇದರಿಂದಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಕ್ಷೀಣಿಸುತ್ತಿದೆ. ಆದರೆ ಮಾತುಕತೆ, ಸಂಭಾಷಣೆಗಳಲ್ಲಿ ನಮ್ಮ ಭಾಷೆಯ ತನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದ್ದೇ ಇದೆ.
ದೇಶದ ಅಧಿಕೃತ ಭಾಷೆಯಾಗಿರುವ ಹಿಂದಿಯನ್ನು ನಮ್ಮ ಮಾತೃಭಾಷೆಗೆ ಧಕ್ಕೆ ತಾರದ ರೀತಿಯಲ್ಲಿ ಬಳಕೆ ಮಾಡುವುದರಲ್ಲಿ ಯಾವುದೇ ಅಪರಾಧವಿಲ್ಲ. ನಮ್ಮ ದೇಶದ ಭಾಷೆಗಳನ್ನು ನಾವೇ ಬೆಳೆಸಬೇಕೇ ಹೊರತು ವಿದೇಶಿಯರು ಬಂದು ಬೆಳೆಸುವುದಿಲ್ಲ. ಹಿಂದಿಯ ಜೊತೆ ಜೊತೆಗೆ ಪ್ರತಿ ರಾಜ್ಯದ ಪ್ರತಿ ಭಾಷೆಯನ್ನೂ ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲ ಜೊತೆಗೂಡಿ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.