ಡೆಹ್ರಾಡೂನ್: ಉತ್ತರಾಖಂಡದ ತೆಹ್ರಿ ಜಿಲ್ಲೆಯ ಪ್ರತಾಪನಗರ ಜನರ 13 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ನ್ಯೂ ತೆಹ್ರಿ ಅನ್ನು ಪ್ರತಾಪನಗರದೊಂದಿಗೆ ಸಂಪರ್ಕಿಸುವ ದೋಬ್ರ-ಚಾಂತಿ ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದೆ. 440 ಮೀಟರ್ ಉದ್ದದ ಬ್ರಿಡ್ಜ್ ಇದಾಗಿದ್ದು, ಭಾರತದ ಅತೀ ಉದ್ದದ ಏಕ ಪಥದ ವಾಹನ ಚಲಿಸಬಲ್ಲ ತೂಗು ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
“ಪ್ರತಾಪನಗರ ಮತ್ತು ತೌಲ್ಧರ್ ಜನರಿಗೆ ದೋಬ್ರ-ಚಾಂತಿ ಸೇತುವೆ ಬಹಳ ಮುಖ್ಯವಾಗಿದೆ. ಈ ಸೇತುವೆ ನಿರ್ಮಾಣಕ್ಕಾಗಿ ಒಟ್ಟು ಮೊತ್ತದ ಹಣವನ್ನು ಶೀಘ್ರಗತಿಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಎಂಜಿನಿಯರ್ಗಳಿಗೆ ಸೂಚನೆ ನೀಡಲಾಯಿತು. ಶೀಘ್ರದಲ್ಲೇ ಈ ಸೇತುವೆಯನ್ನು ಸಂಚಾರಕ್ಕಾಗಿ ತೆರೆಯಲಾಗುವುದು. ಸೇತುವೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ಕಾರ್ಮಿಕರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರಯತ್ನವನ್ನು ನಾನು ಅಭಿನಂದಿಸುತ್ತೇನೆ” ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಹೇಳಿದ್ದಾರೆ.
ಈ ಸೇತುವೆಯ ಮೇಲ್ಮೈಯನ್ನು ಜೋಡಿಸುವ ಕೆಲಸ ಪೂರ್ಣಗೊಂಡಿದೆ. ರೇಲಿಂಗ್ ಮತ್ತು ಕೋಟಿಂಗ್ ಅನ್ನು ಅಳವಡಿಸಿದ ನಂತರ, ಅಧಿಕಾರಿಗಳು ರಸ್ತೆ ಸುರಕ್ಷತೆಗೆ ನೋ ಆಬ್ಜೆಕ್ಷನ್ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲಿದ್ದಾರೆ. ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಸ್ವೀಕರಿಸಿದ ನಂತರ ಈ ಸೇತುವೆಯನ್ನು ಮುಂದಿನ ಮಾರ್ಚ್ ವೇಳೆಗೆ ಸಾರ್ವಜನಿಕರಿಗೆ ತೆರೆಯಲಾಗುವುದು ಎಂದಿದ್ದಾರೆ.
ರಾಜಕೀಯ ನಾಯಕತ್ವದ ಬದ್ಧತೆ ಮತ್ತು ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಈ ಸೇತುವೆಯ ಕಾಮಗಾರಿಯು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೀಗ ದೋಬ್ರ-ಚಾಂತಿ ಸೇತುವೆ ಕಾರ್ಯ ಪೂರ್ಣಗೊಂಡಿರುವುದು ಆ ಭಾಗದ ಜನರ ಸಂತೋಷಕ್ಕೆ ಕಾರಣವಾಗಿದೆ.
440 ಮೀಟರ್ ಉದ್ದದ ಈ ಸೇತುವೆ ರಾಷ್ಟ್ರದ ಅತಿ ಉದ್ದದ ಏಕ-ಪಥದ ವಾಹನ ಚಲಿಸಬಲ್ಲ ತೂಗು ಸೇತುವೆಯಾಗಿದೆ. ಕೆಲವು ಸಂಸ್ಥೆಗಳು ವಿನ್ಯಾಸವನ್ನು ನೀಡಲು ವಿಫಲವಾದ ನಂತರ, ಕೊರಿಯನ್ ಕಂಪನಿಯಿಂದ ಸೇತುವೆ ವಿನ್ಯಾಸವನ್ನು ಸರ್ಕಾರವು ಪಡೆದುಕೊಂಡಿತು. ಈ ಸೇತುವೆ ನಿರ್ಮಾಣಕ್ಕೆ ಸುಮಾರು 150 ಕೋಟಿ ರೂ. ವ್ಯಯ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.