ಬಂಟ್ವಾಳ : ಸಂಭ್ರಮಕ್ಕಿಂತ ಸಂಯಮವು ಹಿರಿದಾದುದು. ಆ ಸಂಯಮ ವ್ಯಕ್ತಿಯಲ್ಲಿದ್ದಾಗ ಮುಂದೆ ಯಾವುದೇಸೂಚನೆಗಳ ಅಗತ್ಯತೆ ಬೇಕಾಗುವುದಿಲ್ಲ. ಸಂಯಮವು ಜೀವನದ ದಾರಿಯಾಗಬೇಕು. ವಿದ್ಯಾಸಂಸ್ಥೆಯಲ್ಲಿ ಕಲಿತ ಸಂಯಮ -ನಿಯಮವು ಸಮಾಜಕ್ಕೆ ವಿದ್ಯಾರ್ಥಿಯು ತೆರಳಿದ ನಂತರ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಅಜಯ್ ಕುಂಬ್ರಬೈಲ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಣವ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳಾದ ಪ್ರಜ್ಞಾನ ಸ್ವಾತಿ ಪ್ರಭಾಸ ,ಮಾನವಿಕ, ಪ್ರದ್ಯೋತ, ಪ್ರದೀಪ್ತ ಸಂಘ, ಪ್ರತಾಪ ಕ್ರೀಡಾ ಸಂಘ ಪ್ರಭೋಧ ವಾಣಿಜ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಸಿಕ್ಕಿದ ಅವಕಾಶವನ್ನು, ಅಪೂರ್ವ ಸಂದರ್ಭ ಎಂದು ತಿಳಿದು ಆ ಕ್ಷಣವನ್ನು, ಅವಕಾಶಗಳನ್ನು ಬಳಸಿಕೊಂಡು ಜವಾಬ್ದಾರಿಯಿಂದ ಒಟ್ಟಿಗೆ ಸಾಗುವ ಮನ ವಿದ್ಯಾರ್ಥಿನಾಯಕರುಗಳದ್ದಾಗಬೇಕು ಆ ಚೈತನ್ಯ ನಿಮ್ಮಲ್ಲಿ ಬೆಳಗಲಿ ಎಂದು ಹರಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿ ವಿಠಲ ನಾಯ್ಕ ಮಾತನಾಡಿ ವಿದ್ಯಾರ್ಥಿ ಸಂಘದ ಅಗತ್ಯತೆಯ ಬಗ್ಗೆ ತಿಳಿಸಿ ಇಂದು ಎಲ್ಲಾ ಕಾಲೇಜುಗಳಲ್ಲಿಯೂ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳ ಸಮಸ್ಯೆಯನ್ನು ವಿದ್ಯಾರ್ಥಿ ನಾಯಕರುಗಳಲ್ಲಿ ಹೇಳಿದಾಗ ಅದು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರ ತನಕ ತಲುಪುತ್ತದೆ, ವಿದ್ಯಾರ್ಥಿ ಸಂಘವು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ನಡುವಿನ ಕೊಂಡಿಯಿದ್ದಂತೆ ಎಂದರು.ತಮ್ಮ ಸಂಸ್ಥೆಯಲ್ಲಿ ಕಳೆದ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟ ಅವರು ಹಿಂದಿನ ವ್ಯವಸ್ಥೆಗೂ ಇಂದಿನ ವ್ಯವಸ್ಥೆಗೂ, ಹೋಲಿಸಿ ಅಭಿವೃದ್ಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಕೃಷ್ಣಪ್ರಸಾದ ವಿದ್ಯಾರ್ಥಿ ಪ್ರತಿನಿಧಿ , ವಿವಿದ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋದಿಸಿದರು. ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿದ್ದ ಶ್ರೀರಾಮ ತೃತೀಯ ಬಿ.ಎ., ಕಾರ್ಯದರ್ಶಿಯಾಗಿ ಶರಣ್ ಕುಮಾರ್ ದ್ವಿತೀಯ ಬಿ.ಕಾಂ, ಜೊತೆ ಕಾರ್ಯದರ್ಶಿಯಾಗಿ ಮೋಹಿನಿ ತೃತೀಯ ಬಿ.ಕಾಂ, ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ತರಗತಿ ಪ್ರತಿನಿಧಿ ಗಳು ಪ್ರಮಾಣ ವಚನ ಸ್ವೀಕರಿಸಿದರು.
ಇತಿಹಾಸ ಉಪನ್ಯಾಸಕಿ ರೇಖಾ ಚುನಾವಣಾ ಪ್ರಕ್ರಿಯೆಯ ವರದಿ ವಾಚಿಸಿದರು. ಬೆಂಗಳೂರು ಲಾಲ್ಬಾಗ್ ಸಸ್ಯತೋಟ ಇಲಾಖಾಧಿಕಾರಿ ಲಕ್ಷ್ಮಿ ಅರುಣ್ಕುಮಾರ್, ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಯತಿರಾಜ್ ನಿರೂಪಿಸಿ, ವಾಣಿಜ್ಯ ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿ, ಉಪನ್ಯಾಸಕಿ ಸುನೀತಾ ವಂದಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.