ದಾರ್ಶನಿಕರೆಲ್ಲಾ ದೊರೆಗಳಾಬೇಕು, ದೊರೆಗಳು ದಾರ್ಶನಿಕರಾಗಬೇಕು ಎಂದು ಕ್ರಿಸ್ತಪೂರ್ವದಲ್ಲಿ ತತ್ವಜ್ಙಾನಿ ಪ್ಲೇಟೋ ಹೇಳಿದುದನ್ನು ಡಾಕ್ಟರ್ ಎಸ್. ರಾಧಾಕೃಷ್ಣನ್ರಲ್ಲಿ ಭಾರತ ಪ್ರತ್ಯಕ್ಷವಾಗಿ ಕಂಡಿತೆನ್ನಬೇಕು. ಸಾಧಾರಣ ಹಿಂದೂ ಕುಟುಂಬದಲ್ಲಿ 1888 ರ ಸೆಪ್ಟೆಂಬರ್ 5 ರಂದು ವೀರಸಾಮಯ್ಯ ಮತ್ತು ಸೀತಮ್ಮ ದಂಪತಿಗಳ ಎರಡನೆಯ ಮಗನಾಗಿ ರಾಧಾಕೃಷ್ಣನ್ ಜನಿಸಿದರು. ಇವರ ಮೂಲ ಸ್ಥಳ ನೆಲ್ಲೂರು ಜಿಲ್ಲೆಯ ಸರ್ವಪಲ್ಲಿ ಗ್ರಾಮ. ಸರ್ವಪಲ್ಲಿ ಎಂಬುದು ಇವರ ಮನೆತನದ ಹೆಸರು.
ರಾಧಾಕೃಷ್ಣನ್ ಎತ್ತರದ ವ್ಯಕ್ತಿಯಾಗಿದ್ದರು. ಭಾರತದ ಪರಂಪರೆಯ ಹಿರಿಮೆಗರಿಮೆಗಳನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ ಹೇಳಿದರು. ಪೌರ್ವಾತ್ಯ ತತ್ವಜ್ಞಾನವನ್ನು ಪಾಶ್ಚಾತ್ಯ ಜಗತ್ತಿಗೆ ತಿಳಿಸಿಕೊಟ್ಟವರಲ್ಲಿ ರಾಧಾಕೃಷ್ಣನ್ ಅಗ್ರಗಣ್ಯರು. ಅವರೊಬ್ಬ ಆದರ್ಶ ಗುರುವೂ ಆಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಗಮನಿಸಿ ಅವರ ಹುಟ್ಟುಹಬ್ಬವನ್ನು ಭಾರತ ’ಶಿಕ್ಷಕರ ದಿನಾಚರಣೆ’ ಎಂದು ಆಚರಿಸುತ್ತದೆ.
1910 ರಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 20 ವರ್ಷಗಳವರೆಗೆ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಇದೇ ಸಮಯದಲ್ಲಿ ಅವರ ಬರವಣಿಗೆ ಪ್ರಾರಂಭವಾಯಿತು. ಬಹು ಅಮೂಲ್ಯ ಗ್ರಂಥಗಳು ಹೊರಬಂದವು. ಅವರು ಪ್ರಖ್ಯಾತರಾದರು. 1929 ರಲ್ಲಿ ಆಕ್ಸ್ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ತುಲನಾತ್ಮಕ ಧರ್ಮ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು. 1931 ರಲ್ಲಿ ಆಂಧ್ರ ವಿಶ್ವವಿದ್ಯಾನಿಲಯದ ಕುಲಪತಿಯಾದರು. 1948 ರಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗ ಪ್ರಾರಂಭವಾಯಿತು. ರಾಧಾಕೃಷ್ಣನ್ರವರು ಅದರ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದರು.
ಶಿಕ್ಷಣದ ಬಗ್ಗೆ ಸರ್ವಪಲ್ಲಿ ರಾಧಾಕೃಷ್ಣನ್ರವರ ಅಭಿಪ್ರಾಯ
ಶಿಕ್ಷಣವು ಕೇವಲ ಬೌದ್ಧಿಕ ಶಕ್ತಿಯನ್ನು ವಿಕಸನಗೊಳಿಸಿದರೆ ಸಾಲದು, ಅದು ಮನುಷ್ಯನ ಹೃದಯ ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರಬೇಕು. ಈ ಪ್ರಭಾವದಿಂದ ವಿದ್ಯಾರ್ಥಿಗಳಲ್ಲಿ ದಯೆ ಮತ್ತು ಅನುಕಂಪ ಎಂಬ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಮಾನವ ಕಲ್ಯಾಣವೇ ಶಿಕ್ಷಣದ ಮೊದಲ ಗುರಿಯಾಗಬೇಕು.
ಕುತೂಹಲ, ತನಿಖಾ ಮನೋಭಾವ, ಸೃಜನಶೀಲತೆ ಮುಂತಾದ ವಿಚಾರಣಾ ಗುಣವನ್ನು ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಬೆಳೆಸುವಂತಿರಬೇಕು. ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ, ಕರಕುಶಲತೆ ಬೆಳೆಯಬೇಕು. ತಂತ್ರಜ್ಞಾನ ಮತ್ತು ವಿಜ್ಞಾನದ ಅಭ್ಯಾಸಕ್ಕೆ ವಿದ್ಯಾರ್ಥಿಗಳು ತಮ್ಮನ್ನು ತಾವು ಅರ್ಪಿಸುವುದನ್ನು ಹೇಳಿಕೊಡುವಂತಿರಬೇಕು ಶಿಕ್ಷಣ.
ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವ ತರಬೇತಿಯನ್ನು ಶಿಕ್ಷಣವು ನಮಗೆ ಕೊಡಬೇಕು. ಅವಸರದ ನಿರ್ಣಯಗಳಿಂದ ನಾವು ತಪ್ಪು ದಾರಿ ತುಳಿಯಬಾರದು. ಎಲ್ಲವನ್ನು ಕೂಲಂಕಷವಾಗಿ ವಿಚಾರಿಸಬೇಕು. ಇದಕ್ಕೆಲ್ಲಾ ತಾಳ್ಮೆ ಅವಶ್ಯ. ಸ್ವಯಂ ನಿಯಂತ್ರಣ ಅವಶ್ಯ. ಅಂತಹ ಸ್ವಯಂ ನಿಯಂತ್ರಣವನ್ನು ಜನರಲ್ಲಿ ತುಂಬುವುದೇ ಶಿಕ್ಷಣದ ಒಂದು ಪ್ರಮುಖ ಗುರಿಯಾಗಬೇಕು.
ಹೊಸ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಉದಾರ ಗುಣವನ್ನು ಯುವ ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು.
ಆದರ್ಶ ಶಿಕ್ಷಕರಾಗಿ ಡಾ|| ಎಸ್ ರಾಧಾಕೃಷ್ಣನ್
ರಾಧಾಕೃಷ್ಣನ್ ಅವರ ಬೋಧನಾ ಶೈಲಿ, ನಿರರ್ಗಳತೆ, ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಅವರು ಏರು ಜವ್ವನದ ಯುವಕರಂತೆ ಹಾಸ್ಯ, ವಿನೋದಗಳಲ್ಲಿ ತೊಡಗುತ್ತಿದ್ದರು. ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದಲೇ ವೃದ್ಧಿಸುತ್ತದೆ, ಜೊತೆಗೆ ವ್ಯಕ್ತಿತ್ವದ ಸೌಜನ್ಯ, ಸ್ನೇಹಶೀಲತೆ ಎಲ್ಲರ ಗಮನವನ್ನು ಸೆಳೆಯುತ್ತದೆ.
ಅವರು ಕೋಲ್ಕೋತ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು. ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ. ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿ ಪ್ರೇಮದ ಚಿಲುಮೆ ಉಕ್ಕಿಬಂತು. ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ. ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು. ರಾಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟಮೆಂಟನ್ನು ಒರಗುದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು, ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವ ಮಂದಿರವನ್ನು ಭಕ್ತರು ಅಲಂಕರಿಸುವಂತೆ ಅಲಂಕರಿಸಲಾಗಿತ್ತು. ರಾಧಾಕೃಷ್ಣನ್ ಅವರಿಗೆ ಜಯವಾಗಲಿ ಎಂಬ ಕೂಗು ರೈಲ್ವೆ ಸ್ಟೇಷನ್ನಿನ ಆವರಣದಲ್ಲೆಲ್ಲಾ ಮೊಳಗುತ್ತಿತ್ತು. ಆ ದಿನ ಭಾವೋದ್ರೇಕದಿಂದ ಅದೆಷ್ಟು ಜನ ಅತ್ತರೋ ! ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಣ್ಣಿನಲ್ಲೂ ನೀರು ತಂದಿತು. ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಅವರೆಂತಹ ಆದರ್ಶ ಶಿಕ್ಷಕರೆಂದು ಗೊತ್ತಾಗುತ್ತದೆ.
ಶಿಕ್ಷಣದ ಬಗ್ಗೆ ಇಂತಹ ಉನ್ನತ ವಿಚಾರಧಾರೆಯನ್ನು ಹೊಂದಿದ್ದ ಮಹಾನ್ ವ್ಯಕ್ತಿ, ಒಬ್ಬ ಶಿಕ್ಷಕನಾಗಿ ವೃತ್ತಿಯನ್ನು ಆರಂಭಿಸಿ ಅಧ್ಯಯನ, ಅಧ್ಯಾಪನವನ್ನು ನಿರ್ವಂಚನೆಯಿಂದ ಮಾಡುತ್ತಾ ರಾಷ್ಟ್ರಪತಿಯಂತಹ ಉನ್ನತ ಹುದ್ದೆಯನ್ನು ಸಹ ಅಲಂಕರಿಸಿದವರು ಡಾ|| ಸರ್ವಪಲ್ಲಿ ರಾಧಾಕೃಷ್ಣನ್ರವರು. ಇಂತಹ ಮಹಾನ್ ವ್ಯಕ್ತಿಯಿಂದ ಶಿಕ್ಷಕ ಕುಲದವರು, ಸಮಾಜದ ಇನ್ನಿತರರು ಕಲಿಯುವಂತಹುದು ಬಹಳಷ್ಟಿದೆ. ಇಂತಹ ವ್ಯಕ್ತಿಯ ಜನ್ಮದಿನವಾದ ಸೆಪ್ಟೆಂಬರ್ 5 ನ್ನು ರಾಷ್ಟ್ರೀಯ ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸುವುದು ನಮ್ಮೆಲ್ಲಾ ಶಿಕ್ಷಕರಿಗೆ ಒಂದು ಹೆಮ್ಮೆಯ ವಿಚಾರವೇ ಸರಿ.
✍ ಮಮತಾ ಡಿ. ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.