ಪ್ಲಾಸ್ಟಿಕ್ ಸೃಷ್ಟಿ ಮಾಡುತ್ತಿರುವ ಆವಾಂತರಗಳು ಇಡೀ ಜಗತ್ತಿಗೇ ಇಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪರಿಸರಕ್ಕೆ ಈಗಾಗಲೇ ಪ್ಲಾಸ್ಟಿಕ್ ಸಾಷಕ್ಟು ಹಾನಿಯನ್ನು ಮಾಡಿದೆ. ಭಾರತದಲ್ಲಿ ಪ್ಲಾಸ್ಟಿಕ್ನಿಂದ ಮುಕ್ತಿ ಪಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಆದರೆ ಯಾವುದೂ ಪರಿಣಾಮಕಾರಿಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಅರಣ್ಯಾಧಿಕಾರಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಪಶ್ಚಿಮ ಮೆಡಿನಿಪುರದಿಂದ 25 ಕಿಲೋಮೀಟರ್ ದೂರದಲ್ಲಿರುವ ಪಿರಕಟದಲ್ಲಿ ಫಾರೆಸ್ಟ್ ರೇಂಜ್ ಆಫೀಸರ್ ಆಗಿ ನಿಯೋಜನೆಗೊಂಡಿರುವ ಪಾಪನ್ ಮೊಹಂತಾ ಎರಡು ವಿಧಾನಗಳ ಮೂಲಕ ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಈ ಮೂಲಕ ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡಲು ಪ್ರಕೃತಿ ತಾಯಿಗೆ ಸಹಾಯ ಮಾಡುತ್ತಿದ್ದಾರೆ.
37 ವರ್ಷ ವಯಸ್ಸಿನ ಅಧಿಕಾರಿಯಾಗಿರುವ ಮೊಹಂತಾ ಅವರು, ಎಲ್ಲಾ ರೀತಿಯ ಪ್ಲಾಸ್ಟಿಕ್ ಬಾಟಲಿಗಳನ್ನು ಹೂವಿನ ಕುಂಡಗಳಾಗಿ ಪರಿವರ್ತಿಸುತ್ತಾರೆ. ಈಗಾಗಲೇ ಅವರು ತಮ್ಮ ಕಚೇರಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಅತ್ಯಧಿಕ ಸಂಖ್ಯೆಯ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ.
ತಾನು ಎಲ್ಲೇ ಇದ್ದರೂ ಅಲ್ಲಿ ಮನೆಯಂತಹ ಪರಿಸರ ಇರಬೇಕು ಎಂಬುದು ಮೊಹಂತಾ ಅವರ ಹೆಬ್ಬಯಕೆ. ಅದೇ ಕಾರಣಕ್ಕೆ ಅವರು ತಮ್ಮ ಕಛೇರಿಯಲ್ಲಿ ಸುಂದರವಾದ ಹೂದೋಟವನ್ನು ನಿರ್ಮಾಣ ಮಾಡಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳನ್ನು ಹೂ ಕುಂಡಗಳಾಗಿ ಬಳಸಿಕೊಂಡು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಿದ್ದಾರೆ. ಅವರ ಕಾರ್ಯ ಇತರ ಎಲ್ಲಾ ಅಧಿಕಾರಿಗಳಿಗೂ ಪ್ರೇರಣೆಯಾಗಿದೆ.
“ನಾನು ಮನೆ, ಸಂಸಾರವನ್ನು ಹೊಂದಿದ್ದೇನೆ. ಆದರೆ ವರ್ಗಾವಣೆಗೊಂಡು ಈ ಪ್ರದೇಶಕ್ಕೆ ಬಂದಾಗ ಎಲ್ಲವೂ ಬಣ್ಣ ಕಳೆದುಕೊಂಡಿತ್ತು. ಹೀಗಾಗಿ ಏನಾದರು ಮಾಡಬೇಕು ಅಂದುಕೊಂಡೆ. ಹೀಗಾಗಿ ಹುದೋಟ ನಿರ್ಮಾಣ ಆರಂಭಿಸಿದೆ” ಎಂದು ಮೊಹಂತಾ ಹೇಳುತ್ತಾರೆ.
ನಮ್ಮನ್ನು ಹಸಿರಿನಿಂದ ಸುತ್ತುವರಿಸಿಕೊಳ್ಳುವುದು ಶಾಂತಿಯನ್ನು ಸಾಧಿಸುವ ಒಂದು ಮಾರ್ಗವಾಗಿದೆ ಎಂದು ಮೊಹಂತಾ ನಂಬುತ್ತಾರೆ. ಅವರು ಪ್ಲಾಸ್ಟಿಕ್ ಬಾಟಲಿಗಳನ್ನು ಚಿಂದಿ ಆಯುವವರಿಂದ ಸಂಗ್ರಹಿಸುತ್ತಾರೆ. “ನಾನು ಸಾಮಾನ್ಯವಾಗಿ ಚಿಂದಿ ಆಯುವವರ ಬಳಿ ಹೋಗುತ್ತೇನೆ. ಬಾಟಲಿಗಳನ್ನು ನನಗೆ ಮಾರಾಟ ಮಾಡುವಂತೆ ಅವರನ್ನು ಕೇಳುತ್ತೇನೆ. ಈ ರೀತಿಯಾಗಿ, ನಾನು ತುಂಬಾ ಕಡಿಮೆ ಬೆಲೆಗೆ ಬಹಳಷ್ಟು ಬಾಟಲಿಗಳನ್ನು ಪಡೆದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ.
ಮೊಹಂತಾ ಅವರ ಸ್ವ-ನಿರ್ಮಿತ ಉದ್ಯಾನದಲ್ಲಿ, ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಕುಂಡಗಳು ಮಾತ್ರ ಆಕರ್ಷಣೆಗಳಲ್ಲ. ಕಲಾತ್ಮಕವಾಗಿ ಚಿತ್ರಿಸಿದ ಪಾಟ್ಗಳು ಮತ್ತು ರಬ್ಬರ್ ಟೈರ್ಗಳು ತಕ್ಷಣವೇ ನಮ್ಮ ಗಮನವನ್ನು ಸೆಳೆಯುತ್ತವೆ. ಮೊಹಂತಾ ಅವರು ಆಟೋಗಳ ಮತ್ತು ಟ್ಯಾಕ್ಸಿಗಳ ಹಳೆಯ ಟೈರ್ಗಳನ್ನು ಅರ್ಧದಷ್ಟು ಕತ್ತರಿಸಿ, ಅವುಗಳ ಮೇಲೆ ಸುಂದರವಾಗಿ ಪೇಯಿಂಟ್ ಮಾಡುತ್ತಾರೆ. ಬಳಿಕ ಅವುಗಳಲ್ಲಿ ಸುಂದರವಾದ ಹೂಬಿಡುವ ಸಸ್ಯಗಳನ್ನು ನೆಡುತ್ತಾರೆ.
ಅವರು ತಮ್ಮ ಉದ್ಯಾನಕ್ಕಾಗಿ, ಬಳಸಿದ ಮತ್ತು ಮುರಿದ ಮಣ್ಣಿನ ಮಡಕೆಗಳನ್ನು ಮರುಬಳಕೆ ಮಾಡುತ್ತಾರೆ, ಅಂಗಡಿ ಮಾಲೀಕರಿಂದ ಅವರು ಇವುಗಳನ್ನು ಖರೀದಿ ಮಾಡುತ್ತಾರೆ.
ಮೊಹಂತಾ ಉದ್ಯಾನವನ್ನು ನೋಡಲು ಹತ್ತಿರದ ನಗರಗಳಿಂದ ಸಾಕಷ್ಟು ಜನರು ಬರುತ್ತಾರೆ. ಅವರ ಉದ್ಯಾನ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. “ಜನರು ಇಲ್ಲಿಗೆ ಬಂದು ವಿವಿಧ ಹೂವಿನ ಸಸ್ಯಗಳನ್ನು ಅತ್ಯಂತ ಕುತೂಹಲದಿಂದ ನೋಡುತ್ತಾರೆ. ನನ್ನ ಕಾರ್ಯಕ್ಕೆ ಹಲವಾರು ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ”ಎಂದು ಮೊಹಂತಾ ಹೇಳುತ್ತಾರೆ.
ಇವರ ಉದ್ಯಾನವೆಂದರೆ ಶಾಲಾ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಮೊಹಂತಾ ಅವರು ಹತ್ತಿರದ ಶಾಲಾ ಕಾಲೇಜುಗಳಿಗೆ ತೆರಳಿ ಗಿಡ ಮರಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಾರೆ. ಪ್ಲಾಸ್ಟಿಕ್ ಅನ್ನು ಹೇಗೆ ಉಪಯುಕ್ತ ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡದಂತೆ ಬಳಸಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತಾರೆ. ತರಗತಿಗಳನ್ನು ಸುಂದರಗೊಳಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಹೂವಿನ ಕುಂಡಗಳನ್ನಾಗಿಸುವಂತೆ ಸಲಹೆ ನೀಡುತ್ತಾರೆ. ಮಾತ್ರವಲ್ಲ ಪ್ಲಾಸ್ಟಿಕ್ ಕುಂಡಗಳನ್ನೂ ಅವರು ಮಕ್ಕಳಿಗೆ ವಿತರಿಸುತ್ತಾರೆ.
ಮೊಹಂತಾ ಅವರು ಉದ್ಯಾನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಮೆಚ್ಚುಗೆಯನ್ನು ಗಳಿಸಿದೆ. ಅವರ ಕಾರ್ಯಕ್ಕೆ ಪ್ರಶಂಸೆಗಳ ಸುರಿ ಮಳೆಯೇ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.