ಚೆನ್ನೈ: ಅಮೋಘ ಯೋಗ ಪ್ರತಿಭೆಯನ್ನು ಹೊಂದಿರುವ ತಮಿಳುನಾಡಿನ ತಿರುನ್ವೇಲಿ ಜಿಲ್ಲೆಯ 10 ವರ್ಷದ ಬಾಲಕಿಯೊಬ್ಬಳು ದೃಷ್ಷಿ ವಿಕಲಚೇತನರಿಗೆ ಯೋಗವನ್ನು ಕಲಿಸಿಕೊಡುತ್ತಿದ್ದಾಳೆ. ಅವಳ ಪ್ರತಿಭೆ ಮತ್ತು ಸೇವಾ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
5ನೇ ತರಗತಿಯನ್ನು ಓದುತ್ತಿರುವ ಪೆ. ಪ್ರಿಶಾ ಪ್ರತಿ ವಾರಾಂತ್ಯಗಳಲ್ಲಿ ವಿಶೇಷ ಶಾಲೆಗಳಿಗೆ ಮತ್ತು ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿರುವವರಿಗೆ ಯೋಗವನ್ನು ಹೇಳಿಕೊಡುತ್ತಾಳೆ. ಯೋಗ ಬದುಕಿನ ಗುಣಮಟ್ಟವನ್ನು ಉನ್ನತೀಕರಿಸುತ್ತದೆ ಎಂಬುದು ಆಕೆಯ ಪ್ರತಿಪಾದನೆಯಾಗಿದೆ.
ದೃಷ್ಟಿಹೀನರಿಗಾಗಿರುವ ಸರ್ಕಾರಿ ಶಾಲೆಯೊಂದರಲ್ಲಿ ಕಲಿಯುತ್ತಿರುವ 14 ವರ್ಷದ ಹರಿ ಆಕಾಶ್, ಪ್ರಿಶಾಳ ಯೋಗ ಕಲಿಸಿಕೊಡುವ ಗುಣವನ್ನು ಕೊಂಡಾಡಿದ್ದಾನೆ, ಆರು ತಿಂಗಳಲ್ಲಿ ನನ್ನ ಶ್ರದ್ಧೆ, ಏಕಾಗ್ರತೆಗಳು ಉತ್ತಮಗೊಂಡಿದೆ ಎಂದು ಆತ ಹೇಳುತ್ತಾನೆ.
ಭಾಗಶಃ ದೃಷ್ಟಿ ಹೊಂದಿರುವ 10 ನೇ ತರಗತಿ ವಿದ್ಯಾರ್ಥಿ ಸಂಧನಮರಿ, ಪ್ರಿಶಾಳ ಯೋಗ ತರಗತಿಗಳಿಗೆ ಹಾಜರಾಗಲು ಯಾವಾಗಲೂ ಉತ್ಸುಕಳಾಗಿರುತ್ತೇನೆ ಎಂದು ಹೇಳುತ್ತಾಳೆ.
“ಯೋಗದಿಂದಾಗಿ ನನ್ನ ನೆನಪು ಸುಧಾರಿಸಿದೆ. ನಾನು ಯೋಗವನ್ನು ನನ್ನ ದಿನಚರಿಯ ಭಾಗವನ್ನಾಗಿ ಮಾಡಿದಾಗಿನಿಂದಲೂ ನನ್ನ ದೃಷ್ಟಿ ಸುಧಾರಿಸಿದೆ” ಎಂದು ಆಕೆ ಹೇಳುತ್ತಾಳೆ.
“ದೃಷ್ಟಿ ವಿಕಲಚೇತನ ಮಕ್ಕಳು ಯೋಗವನ್ನು ಪ್ರೀತಿಸುತ್ತಾರೆ. ಪ್ರಿಶಾಳ ಯೋಗ ಭಂಗಿಯನ್ನು ಅನುಸರಿಸುವಂತೆ ನಾವು ಮಕ್ಕಳಿಗೆ ಮೌಖಿಕ ವ್ಯಾಖ್ಯಾನವನ್ನು ನೀಡುತ್ತೇವೆ. ಅವಳು ಮಾಡುವ ಆಸನಗಳನ್ನು ಮಾಡಲು ನಾವು ಮಕ್ಕಳಿಗೆ ಸಹಾಯ ಮಾಡುತ್ತೇವೆ.” ಎಂದು ಶಾಲೆಯ ಸಹಾಯಕ ಮುಖ್ಯ ಶಿಕ್ಷಕಿ ಹೆಲೆನ್ ಹೇಳುತ್ತಾರೆ.
ಪ್ರಿಶಾ ತಾಯಿ ಜಿ. ದೇವಿ ಪ್ರಿಯಾ ವಕೀಲರಾಗಿದ್ದಾರೆ. ಜೊತೆಗೆ ಯೋಗ ಶಿಕ್ಷಕಿ ಕೂಡ ಹೌದು. ತಾಯಿಯೇ ಪ್ರಿಶಾಳ ಮೊದಲ ಗುರು. ಪ್ರಿಶಾ ಕೇವಲ ಒಂದೂವರೆ ವರ್ಷದವಳಾಗಿದ್ದಾಗಿನಿಂದಲೂ ಯೋಗ ಮಾಡುತ್ತಿದ್ದಾಳೆ. ನಡೆಯಲು ಬರುವ ಮೊದಲೇ ಆಕೆ ಕೆಲವು ಆಸನಗಳನ್ನು ಮಾಡುತ್ತಿದ್ದಳು ಎಂದು ಅವರ ತಾಯಿ ಹೇಳುತ್ತಾರೆ.
ಪ್ರಿಶಾ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಥೈಲ್ಯಾಂಡ್ ಮತ್ತು ಮಲೇಷ್ಯಾದಲ್ಲೂ ದಾಖಲೆಗಳನ್ನು ನಿರ್ಮಿಸಿದ್ದಾಳೆ.
ವೆಬ್ಸೈಟ್ www.recordsetter.com ಪ್ರಕಾರ, ಪ್ರಿಶಾ ರಾಜಕಪೋಟಾಸನದಲ್ಲಿ ಮೂರು ನಿಮಿಷಗಳ ಕಾಲ ಗಲ್ಲದ ಸಹಾಯದೊಂದಿಗೆ ನಿಂತು ದಾಖಲೆಯನ್ನು ಬರೆದಿದ್ದಾಳೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಪಟ್ಟಿ ಮಾಡಲಾಗಿರುವಂತೆ, ಪ್ರಿಶಾ ತನ್ನ ಹೆಸರಿನಲ್ಲಿ 16 ದಾಖಲೆಗಳನ್ನು ಹೊಂದಿದ್ದಾಳೆ. ಪ್ರಸ್ತುತ ಗಿನ್ನಿಸ್ ವಿಶ್ವ ದಾಖಲೆಯ ಮೇಲೆ ಆಕೆ ಕಣ್ಣಿಟ್ಟಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.