ಬೆಳ್ತಂಗಡಿ : ಇಂದಿನ ಪತ್ರಿಕೋದ್ಯಮದಲ್ಲಿ ಜಾಹೀರಾತಿನ ಆಶೆಯಿಂದಾಗಿ ಬರಲೇಬೇಕಾದ ಸುದ್ದಿಗಳು ಮಾಯವಾಗುತ್ತಿರುವುದು ದುರಂತ. ಪೂರ್ವಾಗ್ರಹ ಪೀಡಿತ ವರದಿಗಳೇ ಹೆಚ್ಚಾಗಿದ್ದು ವಸ್ತುನಿಷ್ಠ ವರದಿಗಳು ಇಲ್ಲವಾಗಿವೆ. ಹೀಗಾಗಿ ಪತ್ರಕರ್ತರ ಜವಾಬ್ದಾರಿ ಮಹತ್ತರವಾಗಿದೆ. ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿಷಾದಿಸಿದರು.ಅವರು ಶನಿವಾರ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚಾರಣೆ-ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ದಶಮಾನೋತ್ಸವ ವರ್ಷಾರಂಭವನ್ನು ಸಮಾರಂಭದ ಭಾವಚಿತ್ರವನ್ನು ಕ್ಲಿಕ್ಕಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಪತ್ರಿಕೆಗಳನ್ನು ಕಾರ್ಪೋರೇಟ್ ಜಗತ್ತು ನಿಯಂತ್ರಿಸುತ್ತಿರುವುದರಿಂದ ಅವರಿಗೆ ಬೇಕಾದ ಸುದ್ದಿಗಳು ಮಾತ್ರ ಬರುತ್ತವೆಯೇ ಹೊರತು ಸಾರ್ವಜನಿಕರಿಗೆ ಅಗತ್ಯವಾದದ್ದು ಪ್ರಕಟವಾಗುವುದಿಲ್ಲ. ಕಾರ್ಪೋರೇಟ್ ಸಂಸ್ಥೆಗಳು, ಪಟ್ಟಭದ್ರ ಹಿತಾಸಕ್ತಿಗಳು ಜನಸಮುದಾಯದ ಮನೋಭಾವವನ್ನೇ ತಿರುಚುತ್ತಿವೆ. ರಾಜಕಾರಣಿಗಳು, ಅಧಿಕಾರಿಗಳು ಪತ್ರಕರ್ತರ ಮಾತು ಕೇಳದಿದ್ದರೆ ಅವರ ವಿರುದ್ಧ ಸತ್ಯಕ್ಕೆ ದೂರವಾದ ವರದಿಗಳು ಪ್ರಸಾರ ಮಾಡುವಷ್ಟು ಪತ್ರಿಕಾ ಮಾಧ್ಯಮ ಮುಂದುವರಿದಿದೆ. ಸವಾಲಿನ ತನಿಖಾ ವರದಿಗಳು ಇಲ್ಲವಾಗಿದ್ದು ಏಕಮುಖ ವರದಿಗಳೇ ಬರುತ್ತಿವೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಪತ್ರಕರ್ತರದ್ದು ಸವಾಲಿನ ಬದುಕು. ಪೈಪೋಟಿಯ ದಿನಗಳಲ್ಲಿ ಪ್ರತಿದಿನವೂ ಮಹತ್ತರವಾದ ಸುದ್ದಿಗಳಿಗಾಗಿ ತಡಕಾಡಬೇಕಾಗುತ್ತದೆ. ಟಿ.ವಿ.ವಾಹಿನಿಗಳಲ್ಲಿ ವಸ್ತುನಿಷ್ಠ ವಾರ್ತೆಗಳ ಬದಲು ಮೂಢನಂಬಿಕೆಗಳನ್ನು ಬೆಳೆಸುವ, ಧಾರ್ಮಿಕ ಶೋಷಣೆಗಳನ್ನು ಪೋಷಣೆ ಮಾಡುವ ವಿಚಾರಗಳೇ ಪ್ರಸಾರವಾಗುತ್ತಿರುವುದು ವಿಷಾದನೀಯ. ಇಷ್ಟೆಲ್ಲಾ ಅವಾಂತರಗಳ ಮಧ್ಯೆಯೂ ಪತ್ರಿಕಾಧರ್ಮಕ್ಕೆ ನ್ಯಾಯ ಒದಗಿಸುವ ಕೆಲಸ ವರದಿಗಾರರಿಂದ ಆಗಬೇಕಾಗಿದೆ ಎಂದ ಅವರು ಸಂಘದ ದಶಮಾನೋತ್ಸವ ಕಾರ್ಯಕ್ರಮಗಳಿಗೆ ಶುಭಹಾರೈಸಿದರು.
ಶಾಸಕ ಕೆ. ವಸಂತ ಬಂಗೇರ ಅವರು ದಿನಾಚರಣೆಯನ್ನು ಉದ್ಘಾಟಿಸಿದರು. ಶಾಸಕರು ಸಂಘದ ಪರವಾಗಿ ಮಂಜುವಾಣಿ ಮಾಸಪತ್ರಿಕೆ ಸಂಪಾದಕ ಪ್ರೊ.ಎಸ್.ಪ್ರಭಾಕರ್ ಅವರನ್ನು ಸಮ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಪ್ರಭಾಕರ ಅವರು ಜನರಭಾವನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಬೇಕಾದದ್ದು ವರದಿಗಾರನ ಕರ್ತವ್ಯವಾಗಿದೆ. ಪ್ರಕೃತಿ ವಿಕೋಪಗಳಿಗೆ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ವಿದ್ಯಾರ್ಥಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸುವ, ಜಾಗೃತಿಗೊಳಿಸುವ ಕೆಲಸ ಪತ್ರಿಕೆಗಳಿಂದಾಗಬೇಕು ಎಂದ ಅವರು ವರದಿಗಾರರು ಗುರಿ, ನಿಯತ್ತು, ಆಸಕ್ತಿಯಿಂದ ಮುಂದುವರಿಯಬೇಕೆಂದು ಆಶಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಬಿ.ಎಸ್.ಕುಲಾಲ್ ಅಧ್ಯಕ್ಷತೆ ವಹಿಸಿ ಮುಂದಿನ ಸಂಘದ ದಶಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.ಶಿಬಿ ಧರ್ಮಸ್ಥಳ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಭುವನೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಆರ್.ಎನ್.ಪೂವಣಿ ಸಮ್ಮಾನಿತ ಪರಿಚಯ ನೀಡಿದರು. ಲಕ್ಷ್ಮೀ ಮಚ್ಚಿನ ವಂದಿಸಿದರು.
ರಾಜ್ಯದ ಅರ್ಧದಷ್ಟು ಜನಸಂಖ್ಯೆ ಇರುವ ಕೇರಳದಲ್ಲಿ ಎಲ್ಲಾ ಮಲಯಾಳಂ ದಿನಪತ್ರಿಕೆಗಳ ಪ್ರಸರಣವು ಎಂಭತ್ತು ಲಕ್ಷದಿಂದ ಒಂದು ಕೋಟಿಯತನಕ ಮುಟ್ಟುತ್ತದೆ. ಆದರೆ ರಾಜ್ಯದಲ್ಲಿ ಮಾತ್ರ ಅದು ಸುಮಾರು ಇಪ್ಪತ್ತು ಲಕ್ಷ ಇದ್ದು ಇದು ಕೇರಳದ ಒಂದು ಪತ್ರಿಕೆಯ ಪ್ರಸರಣಕ್ಕೆ ಸಮವಾಗಿದೆ. ಈಚೆಗೆ ಬೆಳ್ತಂಗಡಿ ನಡೆದ ಟ್ಯಾಂಕರ್ ಅಗ್ನಿಗಾಹುತಿಯಾದ ವರದಿ ಮತ್ತು ಭಾವಚಿತ್ರವನ್ನು ಮಲೆಯಾಳಂ ಮನೋರಮಾ ಪತ್ರಿಕೆಯು ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟಿಸಿತ್ತು ಎಂದು ಡಿಸಿ ಅವರು ಬೊಟ್ಟು ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.