ಸುಬ್ರಹ್ಮಣ್ಯ : ಕಳೆದ ಹಲವಾರು ವರ್ಷಗಳಿಂದ ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅವ್ಯವಸ್ಥೆಗೆ ಮುಕ್ತಿ ದೊರಕಿಲ್ಲ.ಆದರೆ ಈ ಬಾರಿ ಕೊಂಚ ಅನುದಾನ ಲಭ್ಯವಾಗಿ ರಸ್ತೆ ಕಾಮಗಾರಿ ನಡೆಸಲಾಗಿತ್ತು.ಆದರೆ ಇದೀಗ ಕಾಮಗಾರಿ ನಡೆದು 2 ತಿಂಗಳಾಗಿಲ್ಲ, ರಸ್ತೆ ಎದ್ದು ಹೋಗಿದೆ.
ಗುತ್ತಿಗಾರು ಕಮಿಲ ಬಳ್ಪ ಜಿಲ್ಲಾ ಪಂಚಾಯತ್ ರಸ್ತೆ ಕಳೆದ ಹಲವಾರು ಸಮಯಗಳಿಂದ ಅವ್ಯವಸ್ಥೆ ಕೂಡಿತ್ತು.ಸರಿಯಾದ ಡಾಮರೀಕರಣವಾಗದೆ ರಸ್ತೆಯಲ್ಲಿ ಓಡಾಟವೇ ಕಷ್ಟವಾಗಿತ್ತು.ಈ ಬಗ್ಗೆ ಸ್ಥಳೀಯರು ಅನೇಕ ಸಮಯಗಳಿಂದ ವಿವಿಧ ಪ್ರಯತ್ನ ಮಾಡುತ್ತಲೇ ಇದ್ದರು.ಜನಪ್ರತಿನಿಧಿಗಳಿಂದ ತೊಡಗಿ ಜಿಲ್ಲಾಧಿಕಾರಿವರೆಗೂ ಒತ್ತಾಯ ಮಾಡಿದ್ದರು. ಈ ರಸ್ತೆಯ ಮೂಲಕ ಹರಿಹರ, ಬಾಳುಗೋಡು ಸೇರಿದಂತೆ ವಿವಿದೆಡೆಯ ಜನತೆ ಪುತ್ತೂರು , ಕಡಬ ತೆರಳಲು ಸಮೀಪವಾಗಿತ್ತು.ಅದಲ್ಲದೆ ಗುಂಡ್ಯ-ಸುಬ್ರಹ್ಮಣ್ಯ -ಜಾಲ್ಸೂರು ರಾಜ್ಯ ಹೆದ್ದಾರಿಯಿಂದ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.ಹೀಗಾಗಿ ಈ ರಸ್ತೆ ಸಂಪೂರ್ಣ ಡಾಮರೀಕರಣಕ್ಕೆ ಒತ್ತಾಯ ಇತ್ತು.ಆದರೆ ದುರಸ್ತಿ ಕೂಡಾ ಸರಿಯಾಗಿ ನಡೆದಿರಲಿಲ್ಲ.
ಸ್ಥಳಿಯರ ಗ್ರಾಪಂ ಸದಸ್ಯರ ಒತ್ತಾಯದ ಮೇರೆಗೆ ಶಾಸಕ ಎಸ್.ಅಂಗಾರ ಹಾಗೂ ತಾಪಂ ಸದಸ್ಯ ಮುಳಿಯ ಕೇಶವ ಭಟ್ ಅವರ ಪ್ರಯತ್ನದಿಂದ ಹಾಗೂ ಜಿಪಂ ಸದಸ್ಯ ಕೆಎಸ್ ದೇವರಾಜ್ ಅವರ ಸಹಕಾರದಿಂದ ಈ ಬಾರಿ 25 ಲಕ್ಷ ಹಾಗೂ ಕಳೆದ ವರ್ಷ 25 ಲಕ್ಷರೂಪಾಯಿ ಅನುದಾನವನ್ನು ಒದಗಿಸಿದ್ದರು. ಅದರಲ್ಲಿ ಕಳೆದ ವರ್ಷ ೨೫ ಲಕ್ಷ ರೂಪಾಯಿ ಅನುದಾನದಲ್ಲಿ ಡಾಮರೀಕರಣ ಮಾಡಲಾಗಿತ್ತು.ಅದೂ ಕೂಡಾ ವರ್ಷದಲ್ಲೇ ಒಂದೆರಡು ಕಡೆ ಎದ್ದು ಹೋಗಿತ್ತು.ಇಂದಿಗೂ ಈ ರಸ್ತೆಯ ದುರಸ್ತಿ ನಡೆಸಿಲ್ಲ.
ಇದೀಗ ಈ ಬಾರಿ ಲಭ್ಯವಾದ 25 ಲಕ್ಷ ರೂಪಾಯಿ ಅನುದಾನದಲ್ಲಿ ದೇವಸ್ಯ ಎಂಬಲ್ಲಿಂದ ಕಮಿಲ ಶಾಲೆಯ ಬಳಿಯವರೆಗೆ ಡಾಮರೀಕಣ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಹಳೆಯ ಡಾಮರು ಕಿತ್ತು ನೂತನವಾಗಿ ಡಾಮರೀಕರಣ ನಡೆಸಲಾಗಿತ್ತು.ರಸ್ತೆ ಡಾಮರೀಕರಣ ವೇಳೆ ಸರಿಯಾದ ಕಾಮಗಾರಿ ನಡೆಯಬೇಕು ಎಂಬ ಕಾರಣಕ್ಕೆ ವಾಹನ ಸಂಚಾರ ಕೂಡಾ ಬಂದ್ ಮಾಡಲಾಗಿತ್ತು.ಕೆಲವು ದಿನಗಳ ಕಾಲ ಬಸ್ ಕೂಡಾ ಓಡಾಟ ನಡೆಸಿರಲಿಲ್ಲ.ಇದಕ್ಕೆ ಸಾರ್ವಜನಿಕರು ಕೂಡಾ ಸಹಕರಿಸಿದ್ದರು.ಆದರೆ ಈ ಸಂದರ್ಭದಲ್ಲೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಜಿಲ್ಲಾ ಪಂಚಾಯತ್ ಸುಳ್ಯದ ಇಂಜಿನಿಯರ್ ಅವರಿಗೆ ಮೌಖಿಕವಾಗಿ ಸಾರ್ವಜನಿಕರು ಮನವಿ ಮಾಡಿದ್ದರು.
ಇದೆಲ್ಲಾ ಆಗಿ ಇದೀಗ ಕಾಮಗಾರಿ ನಡೆದು ೨ ತಿಂಗಳಾಗಿದೆ, ಇನ್ನೂ ಮಳೆಗಾಲದ ಆರಂಭವಾಗಿದೆಯಷ್ಟೇ, ಈಗಲೇ ಇಲ್ಲಿ ಡಾಮರು ಕಿತ್ತುಹೋಗಿದೆ.ಒಂದು ಕಡೆಯಲ್ಲಿ ರಸ್ತೆಯ ಅಲ್ಲಲ್ಲಿ ಡಾಮರು ಕಿತ್ತುಹೋಗಿದೆ, ಇನ್ನು ಭಾರೀ ಮಳೆ ಸುರಿದರೆ ರಸ್ತೆಯ ಗತಿ ಏನು ಎಂಬುದೇ ಈಗಿನ ಪ್ರಶ್ನೆ.ಇಂತಹ ರಸ್ತೆಯ ಒಂದೆರಡು ವರ್ಷದ ಬಳಿಕ ಉಳಿಯುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.ಇದೀಗ ರಸ್ತೆಗೆ ನಿರ್ವಹಣೆ ಕಾಲ ಇದೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ ಎಷ್ಟು ಸಮಯ ಈ ನಿರ್ವಹಣೆಯ ಕಾಲ, ಒಂದು ವರ್ಷದ ಬಳಿಕ ಮತ್ತೆ ಈ ರಸ್ತೆಗೆ ಅನುದಾನ ನೀಡುವವರು ಯಾರು?.ಈಗಲೇ ಹಲವು ವರ್ಷದ ಬೇಡಿಕೆ ಬಳಿಕ ಅನುದಾನ ಲಭ್ಯವಾಗಿದೆ.ಮುಂದೆ ರಸ್ತೆಯ ಅಭಿವೃದ್ಧಿಗೆ ಹೇಗೆ ಎಂಬುದು ಈಗಿನ ಪ್ರಶ್ನೆ.ಹೀಗಾಗಿ ಈಗಾಗಲೇ ಡಾಮರೀಕರಣವಾದ ರಸ್ತೆಯನ್ನು ಮತ್ತೆ ವ್ಯವಸ್ಥಿತವಾಗಿ, ಗುಣಮಟ್ಟದ ಮರುಡಾಮರೀಕರಣ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.