ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಅಭೂತಪೂರ್ವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಡಿಜಿಟಲ್ ಪಾವತಿಯ ಮಾರುಕಟ್ಟೆ ಪಾಲಿನಲ್ಲಿ ಸರ್ಕಾರ ಬೆಂಬಲಿತ BHIM UPI ಮತ್ತು ರುಪೇ ಕಾರ್ಡ್ಗಳು (ಕ್ರೆಡಿಟ್ + ಡೆಬಿಟ್ + ಪ್ರಿಪೇಯ್ಡ್) ಪ್ರಮಾಣದಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮತ್ತು ಮೌಲ್ಯದಲ್ಲಿ ಶೇ.65ಕ್ಕಿಂತಲೂ ಹೆಚ್ಚಾಗಿದೆ.
ರುಪೇ ಕಾರ್ಡ್ಗಳ ಅದ್ಭುತ ಯಶಸ್ಸು ಭಾರತದ ಹೊರಗೂ ಅದರ ಜನಪ್ರಿಯತೆಯನ್ನು ಹೆಚ್ಚಿಸಿದೆ. ಇದೀಗ ಮೋದಿ ಸರ್ಕಾರ ಈ ಸೌಲಭ್ಯವನ್ನು ಯುಎಇಯಲ್ಲಿ ಪ್ರಾರಂಭಿಸಲಾಗಿದ್ದು, ಬಹ್ರೇನ್ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ದೇಶಗಳಲ್ಲಿ ಪ್ರಾರಂಭಿಸಲು ಸಜ್ಜಾಗಿದೆ. ಈಗಾಗಲೇ ಪ್ರಧಾನಿ ಮೋದಿಯವರು ಭಾರತದ ತಮ್ಮ ದಕ್ಷಿಣ ಏಷ್ಯಾದ ನೆರೆಯ ಮತ್ತು ಪ್ರಮುಖ ಮಿತ್ರ ಭೂತಾನ್ನಲ್ಲಿ ರುಪೇ ಕಾರ್ಡ್ಗಳಿಗೆ ಚಾಲನೆಯನ್ನು ನೀಡಿದ್ದಾರೆ.
ಕಾರ್ಡ್ ಆಧಾರಿತ ವಹಿವಾಟುಗಳನ್ನು ಉತ್ತೇಜಿಸಲು ಮತ್ತು ನಗದು ಆಧಾರಿತ ಆರ್ಥಿಕತೆಯನ್ನು ಕುಗ್ಗಿಸಲು ಭಾರತೀಯ ಬಳಕೆದಾರರಿಗಾಗಿ ರುಪೇ ಕಾರ್ಡ್ ಅನ್ನು ಆರಂಭಿಸಲಾಗಿದೆ. ಪ್ರಸ್ತುತ 195 ದೇಶಗಳಲ್ಲಿ ಈ ಕಾರ್ಡ್ ಅಂಗೀಕರಿಸಲ್ಪಟ್ಟಿದೆ. ವಿದೇಶಿ ಕಂಪನಿಗಳು ಮತ್ತು ಬಳಕೆದಾರರು ರುಪೇನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಸಿಂಗಾಪುರವು ರುಪೇ ಯೋಜನೆಯನ್ನು ಪಡೆದ ಮೊದಲ ವಿದೇಶಿ ರಾಷ್ಟ್ರವಾಗಿದ್ದು, ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮತ್ತು ಬಿಹೆಚ್ಐಎಂ ಮೊಬೈಲ್ ಪೇಮೆಂಟ್ ಅಪ್ಲಿಕೇಶನ್ನಂತಹ ಇತರ ಸೌಲಭ್ಯಗಳನ್ನೂ ಪಡೆದುಕೊಂಡಿದೆ. ರುಪೇ ಸೌಲಭ್ಯವನ್ನು ಪಡೆದ ಮತ್ತೊಂದು ದೇಶವೆಂದರೆ ದ್ವೀಪ ರಾಷ್ಟ್ರ ಮಾಲ್ಡೀವ್ಸ್.
ಯುಪಿಐ ಮತ್ತು ರುಪೇ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಈ ಹಿಂದೆ ಅನೇಕ ತಜ್ಞರು ಮತ್ತು ಸಮಿತಿಗಳು ಸೂಚಿಸಿದ್ದವು. ಡಿಜಿಟಲ್ ಪಾವತಿಗಳ ಕುರಿತು ನಂದನ್ ನಿಲೇಕಣಿ ನೇತೃತ್ವದ ಸಮಿತಿಯು ಯುಪಿಐ ಅನ್ನು ಜಾಗತಿಕವಾಗಿ ತೆಗೆದುಕೊಂಡು ಹೋಗುವ ಸಮಯ ಈಗ ಬಂದಿದೆ ಎಂದು ಶಿಫಾರಸು ಮಾಡಿತ್ತು. ಮಾಧ್ಯಮವೊಂದರಲ್ಲಿ ಪ್ರಕಟವಾದ ಲೇಖನ ‘Privacy 3.0: Unlocking Our Data Driven Future’ನಲ್ಲಿ ಲೇಖಕ ರಾಹುಲ್ ಮತ್ತನ್ ಅವರು, ಯುಪಿಐ ವಿಶ್ವ ದರ್ಜೆಯದ್ದಾಗಿದೆ ಮತ್ತು ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ವಾದಿಸಿದ್ದರು. “ಯುಪಿಐ ವಿಕೇಂದ್ರೀಕೃತವಾಗದಿರಬಹುದು ಆದರೆ ಅಸಮರ್ಪಕ ಮೊಬೈಲ್ ನೆಟ್ವರ್ಕ್ಗಳಲ್ಲೂ ಸಹ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ” ಎಂದು ಮತ್ತನ್ ಬರೆದಿದ್ದಾರೆ.
ರುಪೇ ಕಾರ್ಡ್ ಅನ್ನು ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆಯಡಿ ಸಾರ್ವಜನಿಕ ಸಾರಿಗೆಗೂ ಸಹ ಬಳಸಬಹುದು ಎಂದು ಸರ್ಕಾರ ಪ್ರಸ್ತಾಪಿಸಿದೆ. ಕಾರ್ಡಿನ ದಕ್ಷತೆ ಮತ್ತು ಉಪಯೋಗಗಳು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿವೆ ಮತ್ತು ಇದು ಜಾಗತಿಕ ಸಮುದಾಯದಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬುದು ಬಹಳ ಸ್ಪಷ್ಟವಾದ ಸಂಗತಿಯಾಗಿದೆ.
ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ, ಅಂತಾರಾಷ್ಟ್ರೀಯ ಡಿಜಿಟಲ್ ವಹಿವಾಟು ದಿಗ್ಗಜರಾದ ವೀಸಾ, ಮಾಸ್ಟರ್ಕಾರ್ಡ್ ಮತ್ತು ಅಮೇರಿಕನ್ ಎಕ್ಸ್ಪ್ರೆಸ್ ಏಕಸ್ವಾಮ್ಯತ್ವದ ಅಹಂನಲ್ಲಿ ಬೀಗುತ್ತಿದ್ದವು. ಯಾಕೆಂದರೆ ಅವರಿಗೆ ಸವಾಲೊಡ್ಡುವ ಮತ್ತೊಂದು ಕಾರ್ಡ್ ಯಾವುದೂ ಇರಲಿಲ್ಲ. ಗ್ರಾಹಕರಿಗೆ ಇವುಗಳು ಅತಿರೇಕದ ಪರಿಷ್ಕರಣಾ ಶುಲ್ಕವನ್ನು ವಿಧಿಸುತ್ತಿದ್ದವು ಮತ್ತು ಕಾರ್ಡ್ ಪಾವತಿಗಳನ್ನು ಪ್ರಮುಖ ಅಭ್ಯಾಸವನ್ನಾಗಿ ಮಾಡುವಲ್ಲಿ ಇವುಗಳು ಯಶಸ್ವಿಯಾಗಿದ್ದವು. ಮೋದಿ ಸರ್ಕಾರವು ದೇಶದಲ್ಲಿ ಸ್ವಂತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿತು ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮೂಲಸೌಕರ್ಯಗಳನ್ನು ನಿರ್ಮಿಸಿತು. ಇದರಿಂದ ವೀಸಾ, ಮಾಸ್ಟರ್ಕಾರ್ಡ್ ಮತ್ತು ಅಮೇರಿಕನ್ ಎಕ್ಸ್ಪ್ರೆಸ್ ಏಕಸ್ವಾಮ್ಯ ಮುರಿಯಿತು.
ಯುಪಿಐ ಮತ್ತು ಬಿಹೆಚ್ಐಎಂ ಅಪ್ಲಿಕೇಶನ್, ಮತ್ತು ರುಪೇ ಕಾರ್ಡ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಸಿಪಿಐ) ಅಭಿವೃದ್ಧಿಪಡಿಸಿದೆ, ಇದನ್ನು ದೇಶದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಚುರಪಡಿಸುತ್ತಿದೆ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಪ್ರಾರಂಭವಾದಾಗಿನಿಂದ ಭಾರತದಲ್ಲಿ ಡಿಜಿಟಲ್ ವಹಿವಾಟು ತೀವ್ರವಾಗಿ ಬೆಳೆಯುತ್ತಿದೆ.
ಫಿಡೆಲಿಟಿ ನ್ಯಾಷನಲ್ ಇನ್ಫರ್ಮೇಷನ್ ಸರ್ವೀಸಸ್ (ಎಫ್ಐಎಸ್) ತನ್ನ ತ್ವರಿತ ಪಾವತಿ ನಾವೀನ್ಯತಾ ಸೂಚ್ಯಾಂಕದಲ್ಲಿ ಯುಪಿಐಗೆ ಅತ್ಯುತ್ತಮ Immediate Payments Interface ಎಂದು ಶ್ರೇಯಾಂಕವನ್ನು ನೀಡಿದೆ. ದೇಶದಲ್ಲಿ ಹಣಕಾಸು ವ್ಯವಸ್ಥೆಯ ಡಿಜಿಟಲೀಕರಣವನ್ನು ಉತ್ತೇಜಿಸಲು ಸರ್ಕಾರ ಡಿಜಿಟಲ್ ಮತ್ತು ಕಾರ್ಡ್ ವಹಿವಾಟನ್ನು ಮುಕ್ತಗೊಳಿಸಿದೆ. ಇದು ದಶಕಗಳಿಂದ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದ ವೀಸಾ ಮತ್ತು ಮಾಸ್ಟರ್ಕಾರ್ಡ್ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಹೊಡೆತವನ್ನು ನೀಡಿದೆ.
ದೇಶವು ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಹೊಂದಿರದಿದ್ದಾಗ ನಿರಂಕುಶವಾಗಿ ವರ್ತಿಸಿದ ವೀಸಾ ಮತ್ತು ಮಾಸ್ಟರ್ಕಾರ್ಡ್ನಂತಹ ಕಂಪನಿಗಳು ಈಗ ಸರ್ಕಾರದ ಕ್ರಮಗಳನ್ನು ಏಕಸ್ವಾಮ್ಯದ ವರ್ತನೆ ಎಂದು ಆರೋಪಿಸಿವೆ. ಆದರೆ ಭಾರತೀಯ ದೃಷ್ಟಿಕೋನದಲ್ಲಿ ಇದು, ಈ ಹಿಂದೆ ತನ್ನ ಸ್ವಂತ ಹಿತಾಸಕ್ತಿಗಾಗಿ ಬಲ ಪ್ರಯೋಗ ಮಾಡುತ್ತಿದ್ದ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಪಾಠವನ್ನು ಕಲಿಸಿದ ವಿಧಾನವಾಗಿದೆ. ದೇಶೀಯ ತಂತ್ರಜ್ಞಾನವಾದ ರುಪೇ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವುದು ಮತ್ತು ಪ್ರತಿ ದೇಶವೂ ಅದನ್ನು ಬಳಸಲು ಉತ್ಸುಕವಾಗಿರುವುದು ಪ್ರತಿಯೊಬ್ಬ ರಾಷ್ಟ್ರೀಯತಾವಾದಿ ಭಾರತೀಯರಿಗೆ ಹೆಮ್ಮೆಯನ್ನು ಮತ್ತು ಸಂತೋಷವನ್ನು ನೀಡುವ ಸಂಗತಿ ಎಂದರೆ ಅತಿಶಯೋಕ್ತಿಯಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.