ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಸೇನೆ ಮುಖ್ಯಸ್ಥ ಮಾರ್ಷಲ್ ಬಿ.ಎಸ್. ಧನೋವಾ ಅವರು ಮುಂದಿನ ತಿಂಗಳು ಪ್ಯಾರಿಸ್ಗೆ ಪ್ರಯಾಣಿಸಲಿದ್ದು, ಈ ವೇಳೆ ಭಾರತೀಯ ವಾಯುಪಡೆ ಖರೀದಿಸಲಿರುವ 36 ರಫೇಲ್ ಯುದ್ಧವಿಮಾನಗಳಲ್ಲಿ ಮೊದಲನೆಯದನ್ನು ಸ್ವೀಕರಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ.
ಸೆಪ್ಟೆಂಬರ್ 20 ರಂದು ಪ್ಯಾರಿಸ್ನಲ್ಲಿ ನಡೆಯಲಿರುವ ಹಸ್ತಾಂತರ ಸಮಾರಂಭದಲ್ಲಿ ಫ್ರಾನ್ಸ್ನ ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ರಫೇಲ್ ತಯಾರಕ ಕಂಪನಿ ಡಸಾಲ್ಟ್ ಏವಿಯೇಷನ್ನ ಹಿರಿಯ ಅಧಿಕಾರಿಗಳು ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಭೇಟಿಗಾಗಿ ಗುರುವಾರ ಫ್ರಾನ್ಸ್ಗೆ ತೆರಳಿದ್ದಾರೆ, ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.
ಹಸ್ತಾಂತರ ಸಮಾರಂಭವನ್ನು ನಿರ್ವಹಿಸುವ ಸಂದರ್ಭದಲ್ಲಿ ಫ್ರೆಂಚ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಭಾರತೀಯ ವಾಯುಪಡೆಯ ಉನ್ನತ ಮಟ್ಟದ ತಂಡ ಈಗಾಗಲೇ ಪ್ಯಾರಿಸ್ಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.
ಸುಮಾರು 58 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್ಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್ನಲ್ಲಿ ಫ್ರಾನ್ಸ್ನೊಂದಿಗೆ ಅಂತರ್-ಸರ್ಕಾರಿ ಒಪ್ಪಂದ ಮಾಡಿಕೊಂಡಿತ್ತು.
ರಫೇಲ್ ಯುದ್ಧ ವಿಮಾನವು ಪ್ರಬಲವಾದ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ರಫೇಲ್ ಯುದ್ಧ ವಿಮಾನವನ್ನು ಸ್ವಾಗತಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಸಿದ್ಧಪಡಿಸುವುದು ಮತ್ತು ಪೈಲಟ್ಗಳ ತರಬೇತಿ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಐಎಎಫ್ ಈಗಾಗಲೇ ಪೂರ್ಣಗೊಳಿಸಿದೆ.
ಐಎಎಫ್ನ ಅತ್ಯಂತ ಆಯಕಟ್ಟಿನ ನೆಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ ಮೊದಲ ರಫೇಲ್ ಸ್ಕ್ವಾಡ್ರನ್ನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇಂಡೋ-ಪಾಕ್ ಗಡಿಯಿಂದ ಈ ನೆಲೆ ಸುಮಾರು 220 ಕಿ.ಮೀ ದೂರದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.