ನವದೆಹಲಿ: ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರನ್ನು ನೂತನ ಸಂಪುಟ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಅವಧಿಗೆ ಬುಧವಾರ ಆಯ್ಕೆ ಮಾಡಲಾಗಿದೆ.
ಜಾರ್ಖಂಡ್ ಕೇಡರ್ನ 1982 ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಗೌಬಾ ಅವರು, ಹಾಲಿ ಸಂಪುಟ ಕಾರ್ಯದರ್ಶಿ ಪಿ ಕೆ ಸಿನ್ಹಾ ಅವರನ್ನು ರಿಪ್ಲೇಸ್ ಮಾಡುವ ಮೂಲಕ ದೇಶದ ಉನ್ನತ ಅಧಿಕಾರದ ಹುದ್ದೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಅಧಿಕಾರ ವಹಿಸುವುದಕ್ಕೂ ಮೊದಲು ಅವರು ಕ್ಯಾಬಿನೆಟ್ ಸೆಕ್ರೆಟರಿಯಟ್ನಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸೇರಿಕೊಳ್ಳಲಿದ್ದಾರೆ.
“ರಾಜೀವ್ ಗೌಬಾ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸಂಪುಟದ ಆಯ್ಕೆ ಸಮಿತಿ ಅನುಮೋದನೆ ನೀಡಿದೆ, 2019ರ ಆಗಸ್ಟ್ 30ರಿಂದ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗೌಬಾ ಅವರು ಆಗಸ್ಟ್ 31, 2017 ರಂದು ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
60 ವರ್ಷದ ಗೌಬಾ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ, ಇತರ ಜವಾಬ್ದಾರಿಗಳೊಂದಿಗೆ ಎಡಪಂಥೀಯ ಉಗ್ರಗಾಮಿ ವಿಭಾಗವನ್ನು ನೋಡಿಕೊಂಡಿದ್ದರು.
ಗೌಬಾ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ನೀತಿ ನಿರೂಪಣೆ ಮತ್ತು ಕಾರ್ಯಕ್ರಮ ಅನುಷ್ಠಾನದಲ್ಲಿ ಹಿರಿಯ ಹುದ್ದೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
ಪಂಜಾಬಿನಲ್ಲಿ ಜನಿಸಿದ ಗೌಬಾ ಪಾಟ್ನಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ಅವರು 2016 ರಲ್ಲಿ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಹಿಂದಿರುಗುವ ಮೊದಲು ಜಾರ್ಖಂಡ್ನಲ್ಲಿ 15 ತಿಂಗಳು ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಅವರು ನಾಲ್ಕು ವರ್ಷಗಳ ಕಾಲ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮಂಡಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದರು.
ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಅವರು ಆಂತರಿಕ ಭದ್ರತೆ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಭಯೋತ್ಪಾದನೆ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮಾವೋವಾದಿ ಸಮಸ್ಯೆಗಳ ಜೊತೆಗೆ ಇತರ ವಿಷಯಗಳನ್ನೂ ನಿರ್ವಹಿಸಿದ್ದಾರೆ.
ರಾಜೀವ್ ಗೌಬಾ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಪ್ರಮುಖ ಶಿಲ್ಪಿಯೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.