ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೂತಾನ್ ರಾಷ್ಟ್ರಕ್ಕೆ ನೀಡಿದ ಭೇಟಿಯು ಅವರ ಇತರ ವಿದೇಶ ಪ್ರವಾಸಗಳಿಗಿಂತ ಭಿನ್ನವಾಗಿತ್ತು.
ಈ ಭೇಟಿಯ ವೇಳೆ ಮೋದಿಯವರು ಭಾರತ ಮತ್ತು ಹಿಮಾಲಯನ್ ಸಾಮ್ರಾಜ್ಯದ ನಡುವಿನ ಸಂಬಂಧದಲ್ಲಿ ಹೊಸ ಮತ್ತು ರೋಮಾಂಚಕಾರಿ ಅಧ್ಯಾಯವನ್ನು ಅನಾವರಣಗೊಳಿಸಿದ್ದಲ್ಲದೆ, ವಿಶೇಷವಾಗಿ ಭೂತಾನ್ನ ಯುವ ಮತ್ತು ಮಹತ್ವಾಕಾಂಕ್ಷೆಯ ಜನರನ್ನು ಗುರಿಯಾಗಿಸಿಕೊಂಡು ‘ಭಾವನಾತ್ಮಕ ಸಂಪರ್ಕ’ವನ್ನು ಬೆಸೆಯುವಲ್ಲಿಯೂ ಅವರ ಭೇಟಿ ಯಶಸ್ವಿಯಾಯಿತು.
ಭೂತಾನ್ನ ಮುಂದಿನ ಪೀಳಿಗೆಯನ್ನು ತಲುಪಲು ಮೋದಿಗೆ ಬಲವಾದ ಕಾರಣವಿತ್ತು. ಭೂತಾನಿನ ಹಿರಿಯರು ಮತ್ತು ಮಧ್ಯವಯಸ್ಕರು ಭಾರತದೊಂದಿಗೆ ಹೆಚ್ಚು ಅವಿನಾಭಾವವನ್ನು ಹೊಂದಿದ್ದಾರೆ ಮತ್ತು ಭೂತಾನಿನ ಕಿರಿಯರು ಜಗತ್ತಿಗೆ ತಮ್ಮನ್ನು ಹೆಚ್ಚು ಒಡ್ಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಕಿರಿಯರು ಚೀನಾಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಚೀನಾದ ಸಾಧನೆಗಳು ಮತ್ತು ವಿಶ್ವ ಶಕ್ತಿಯಾಗಿ ಅದರ ಹೊರಹೊಮ್ಮುವಿಕೆ ಅವರನ್ನು ಹೆಚ್ಚು ಪ್ರಚೋದಿಸುತ್ತಿದೆ.
“ಶೈಕ್ಷಣಿಕ ಮತ್ತು ಯುವ ವಿನಿಮಯ ಕಾರ್ಯಕ್ರಮಗಳು ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಅಧ್ಯಯನ ಮಾಡಲು ತೆರಳುವ ಯುವ ಭೂತಾನ್ ಪುರುಷ ಮತ್ತು ಮಹಿಳೆಯರಿಗೆ ಧನಸಹಾಯ ಮುಂತಾದ ಯೋಜನೆಗಳ ಮೂಲಕ ಚೀನಾ ಭೂತಾನ್ನಲ್ಲಿ ಯುವ ಪೀಳಿಗೆಯನ್ನು ಸಕ್ರಿಯವಾಗಿ ಆಕರ್ಷಿಸುತ್ತಿದೆ” ಎಂದು ಭೂತಾನ್ ವೀಕ್ಷಕರೊಬ್ಬರು ಹೇಳಿದ್ದಾರೆ.
ಹೀಗಾಗಿ ಮೋದಿಯವರು ಅಲ್ಲಿನ ಕಿರಿಯರೊಂದಿಗೆ ಬಾಂಧವ್ಯ ಬೆಸೆಯುವ ನಡೆಯನ್ನು ಅನುಸರಿಸಿದ್ದು ಭವಿಷ್ಯದ ದೃಷ್ಟಿಯಿಂದ ಸಕಾರಾತ್ಮಕ ನಡೆಯಾಗಿದೆ. ಚೀನಾದ ವಿನಾಶಕಾರಿ ಪ್ರಭಾವದಿಂದ ಅವರನ್ನು ದೂರವಿರಿಸುವಲ್ಲಿ ಮೋದಿಯವರು ಮೊದಲ ಹೆಜ್ಜೆ ಇಡುವುದು ಕಡ್ಡಾಯವಾಗಿತ್ತು ಮತ್ತು ತಮ್ಮ ಸಂವಹನ ಕೌಶಲ್ಯದಿಂದ ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಭೂತಾನ್ನ ರಾಯಲ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ನೀಡಿದ ಭಾಷಣವು ಅವರ ಭೇಟಿಯ ಪ್ರಮುಖ ಭಾಗವಾಗಿತ್ತು. ಮೋದಿ ತಮ್ಮ ಸ್ಪೂರ್ತಿದಾಯಕ ಭಾಷಣದ ಮೂಲಕ ಭೂತಾನ್ ಯುವಜನತೆಯ ಹೃದಯವನ್ನು ಗೆದ್ದುಕೊಂಡಿದ್ದಾರೆ.
ಅವರು ಭಾರತ ಮತ್ತು ಭೂತಾನ್ ನಡುವಿನ ಇತಿಹಾಸದ ಮತ್ತು ಭೌಗೋಳಿಕತೆಯ ಹಂಚಿಕೆಯನ್ನು ಎತ್ತಿ ತೋರಿಸಿದರು, ಯುವಜನರಲ್ಲಿ ಅವರ ನಾಗರಿಕ ಪರಂಪರೆ ಮತ್ತು ಆಧ್ಯಾತ್ಮಿಕ ನೀತಿಗಳ ಬಗ್ಗೆ ಹೆಮ್ಮೆ ಮೂಡಿಸಿದರು ಮತ್ತು ಉಭಯ ದೇಶಗಳ ನಡುವಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ದೃಷ್ಟಿಕೋನಗಳನ್ನು ಎತ್ತಿ ತೋರಿಸಿದರು.
ಭೂತಾನಿಗೆ ಲಾಭ ತರುವಂತಹ ಭಾರತ ಮಾಡಿರುವ ಪ್ರಗತಿ ಸಾಧನೆಗಳ ಬಗ್ಗೆ ಅವರು ಉಲ್ಲೇಖಿಸಿದರು ಮತ್ತು ವಿಜ್ಞಾನಿಗಳು, ಆವಿಷ್ಕಾರಿಗಳು, ಉದ್ಯಮಿಗಳು, ಕ್ರೀಡಾ ವ್ಯಕ್ತಿಗಳು, ನಾಯಕರು ಮತ್ತು ಕಲಾವಿದರಾಗುವಂತೆ ಅಲ್ಲಿನ ಯುವಕರನ್ನು ಪ್ರೇರೇಪಿಸಿದರು.
‘ಮೋದಿಯವರ ಕರೆಯನ್ನು ಆಲಿಸಿ ಮುನ್ನಡೆಯಿರಿ, ಭೂತಾನ್ ಯುವ ಜನತೆಗೆ ಮೋದಿ ಸ್ಪೂರ್ತಿದಾಯಕ ಮಾತು’– ಎಂಬ ತಲೆಬರಹಗಳಡಿ ಅಲ್ಲಿನ ಸ್ಥಳೀಯ ಪತ್ರಿಕೆಗಳು ಮೋದಿಯ ಭಾಷಣದ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡಿದವು. ಭೂತಾನ್ನಲ್ಲಿನ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ತಮ್ಮ ಟೈಮ್ಲೈನ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅದನ್ನು ಟ್ವೀಟ್ ಮಾಡಿದ್ದಾರೆ.
ವಿಶೇಷ ವಾಯುಸೇನೆಯ ವಿಮಾನದಲ್ಲಿ ಮೋದಿಯವರು ಪಾರೋ ವಿಮಾನ ನಿಲ್ದಾಣದಿಂದ ಹೊರಟ ಕೂಡಲೇ, ಭೂತಾನ್ನ ಪ್ರಧಾನ ಮಂತ್ರಿ ಲೋಟೇ ಶೆರಿಂಗ್ ಅವರು, “ಮೋದಿಯವರ ಈ ಭೇಟಿ ಹೃದಯದಿಂದ ಹೃದಯವನ್ನು ಬೆಸೆಯುವಲ್ಲಿ ಯಶಸ್ವಿಯಾಗಿದೆ” ಎಂದು ಘೋಷಿಸಿದ್ದರು ಮತ್ತು ಮೋದಿಯೊಂದಿಗಿನ ಸಮಾಲೋಚನೆ ಆಧ್ಯಾತ್ಮಿಕ ಅನುಭವ ನೀಡಿತು ಎಂದಿದ್ದರು.
ತ್ಸೆರಿಂಗ್ಗೆ, ಈ ಭೇಟಿಯು ಸಾಕಷ್ಟು ಮಹತ್ವದ್ದಾಗಿತ್ತು. ಆತಂಕಗಳನ್ನು ಪರಿಹರಿಸುವ ಮತ್ತು ಯುವಕರ ಆಕಾಂಕ್ಷೆಗಳನ್ನು ಈಡೇರಿಸುವ ಭರವಸೆಯ ಮೇರೆಗೆ ಅವರು ಕಳೆದ ವರ್ಷ ಅಧಿಕಾರಕ್ಕೆ ಬಂದರು.
ಆದ್ದರಿಂದ, ತಾಂತ್ರಿಕ ಪ್ರಗತಿಗಳು, ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತ್ವರಿತ ಸುಧಾರಣೆ, ಉದ್ಯೋಗ ಸೃಷ್ಟಿ ಮತ್ತು ವಿಶ್ವದರ್ಜೆಯ ಶಿಕ್ಷಣವನ್ನು ತನ್ನ ದೇಶದ ಯುವ ಪೀಳಿಗೆಗೆ ಲಭ್ಯವಾಗುವಂತೆ ಮಾಡುವುದು ಅವರಿಗೆ ಕಡ್ಡಾಯವಾಗಿದೆ.
ತ್ಸೆರಿಂಗ್ ಅವರ ಸಂತೋಷಕ್ಕೆ ಮತ್ತೊಂದು ಕಾರಣವೂ ಇದೆ, ಮೋದಿಯವರ ಭೇಟಿಯು ಭೂತಾನ್ ಪ್ರಧಾನ ಮಂತ್ರಿಗೆ ತನ್ನ ಭರವಸೆಗಳನ್ನು ಈಡೇರಿಸಲು ಸಹಾಯ ಮಾಡುವ ಒಪ್ಪಂದಗಳನ್ನು ದೃಢಪಡಿಸುವುದಕ್ಕೂ ಕಾರಣವಾಯಿತು. ಶಿಕ್ಷಣ, ಸಂಶೋಧನೆ, ಬಾಹ್ಯಾಕಾಶ ತಂತ್ರಜ್ಞಾನ, ಔಷಧ ಮತ್ತು ವಾಯುಯಾನ ಸುರಕ್ಷತೆ ಕುರಿತ ಹತ್ತು ಒಪ್ಪಂದಗಳಿಗೆ ಭೇಟಿಯ ವೇಳೆ ಸಹಿ ಹಾಕಿ ವಿನಿಮಯ ಮಾಡಿಕೊಳ್ಳಲಾಯಿತು.
ಈ ಒಪ್ಪಂದಗಳು ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಅಭೂತಪೂರ್ವ ಮಟ್ಟದ ಸಹಕಾರಕ್ಕೆ ಕಾರಣವಾಗುತ್ತವೆ ಎಂದು ತ್ಸೆರಿಂಗ್ ಹೇಳಿದರು.
ಅನೇಕ ದಶಕಗಳಿಂದ, ಭಾರತ ಮತ್ತು ಭೂತಾನ್ ನಡುವಿನ ಸಹಕಾರವು ಹಿಮಾಲಯ ರಾಷ್ಟ್ರದಲ್ಲಿ ಜಲ ವಿದ್ಯುತ್ ಯೋಜನೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ಭೂತಾನಿಗೆ ವಿತ್ತೀಯ ನೆರವು ನೀಡುವುದಕ್ಕೆ ಸೀಮಿತವಾಗಿತ್ತು.
ಕಾಲಾನಂತರದಲ್ಲಿ, ಚೀನಾ ಕಿಡಿಗೇಡಿತನದ ಆಟದಿಂದಾಗಿ, ಭಾರತವನ್ನು ಭೂತಾನ್ ಸ್ವಾರ್ಥಿ ಎಂದು ಗ್ರಹಿಸಲು ಪ್ರಾರಂಭಿಸಿತು. ಭಾರತವು ತನ್ನ ಬೆಳೆಯುತ್ತಿರುವ ಇಂಧನದ ಅವಶ್ಯಕತೆಗಳನ್ನು ನೀಗಿಸಲು ಭೂತಾನ್ನಲ್ಲಿ ಜಲ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುತ್ತಿದೆ ಎಂಬ ಭಾವನೆಯನ್ನು ಅದು ಬೆಳೆಸಿಕೊಂಡಿತು.
ಜಲ ವಿದ್ಯುತ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಭೂತಾನ್ನ ಪರಿಸರ ವಿಜ್ಞಾನಕ್ಕೆ ಉಂಟಾಗುವ ಅಪಾಯಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಟೀಕೆಗಳೂ ವ್ಯಕ್ತವಾಗಿವೆ.
ಹೀಗಾಗಿ, ಭಾರತವು ಜಲವಿದ್ಯುತ್ ಯೋಜನೆಗಳನ್ನೂ ಮೀರಿ ಭೂತಾನಿಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಗತಿಯ ಒಂದು ಭಾಗವನ್ನು ನೀಡಬೇಕಾಯಿತು. ಟೆಲಿ ಮೆಡಿಸಿನ್, ದೂರ ಶಿಕ್ಷಣ, ಬ್ಯಾಂಕಿಂಗ್ ಮತ್ತು ಟಿವಿ ಪ್ರಸಾರದಲ್ಲಿ ಭೂತಾನಿಗೆ ಸಹಾಯ ಮಾಡುವ ದಕ್ಷಿಣ ಏಷ್ಯಾ ಉಪಗ್ರಹದ ಭಾರತ ಅನುದಾನಿತ ಗ್ರೌಂಡ್ ಸ್ಟೇಶನ್ ಅನ್ನು ಮೋದಿ ಮೊನ್ನೆ ಅಲ್ಲಿ ಉದ್ಘಾಟಿಸಿದರು.
ಭೂತಾನ್ನ ಉದಯೋನ್ಮುಖ ಬಾಹ್ಯಾಕಾಶ ವಿಜ್ಞಾನಿಗಳು ಮುಂದಿನ ದಿನಗಳಲ್ಲಿ ಭೂತಾನ್ನ ಸ್ವಂತ ಉಪಗ್ರಹವನ್ನು ಅಭಿವೃದ್ಧಿಪಡಿಸಲು ಮತ್ತು ಉಡಾವಣೆ ಮಾಡುವ ಸಲುವಾಗಿ ಇಸ್ರೋ ಜೊತೆ ಕೆಲಸ ಮಾಡಲಿದ್ದಾರೆ.
ಇಂಡಿಯಾ ನಾರ್ಲೆಡ್ಜ್ ನೆಟ್ವರ್ಕ್ ಮತ್ತು ಭೂತಾನ್ನ ಡ್ರಕ್ ರಿಸರ್ಚ್ & ಎಜುಕೇಶನ್ ನೆಟ್ವರ್ಕ್ (ಡ್ರುಕ್ರೆನ್) ನಡುವಿನ ಅಂತರ್ ಸಂಪರ್ಕವನ್ನು ಮೋದಿ ಉದ್ಘಾಟಿಸಿದರು, ಇದು ಉಭಯ ದೇಶಗಳ ನಡುವಿನ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು, ಆರೋಗ್ಯ ಮತ್ತು ಕೃಷಿ ಸಂಸ್ಥೆಗಳನ್ನು ಪರಸ್ಪರ ಸಂಪರ್ಕಿಸಲಿದೆ.
ಭಾರತ ಮತ್ತು ಭೂತಾನ್ನ ವಿವಿಧ ಸಂಸ್ಥೆಗಳ ನಡುವೆ ಇನ್ನೂ ಅನೇಕ ಸಮನ್ವಯಗಳನ್ನು ಪ್ರಾರಂಭಿಸಲಾಗಿದೆ. STEM ವಿಷಯಗಳಲ್ಲಿ ಶೈಕ್ಷಣಿಕ ಸಹಕಾರ ಮತ್ತು ಬೋಧಕವರ್ಗ, ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ವಿನಿಮಯಕ್ಕಾಗಿ ಭೂತಾನ್ನ ರಾಯಲ್ ವಿಶ್ವವಿದ್ಯಾಲಯವನ್ನು ಕಾನ್ಪುರ, ದೆಹಲಿ, ಖರಗ್ಪುರ ಮತ್ತು ಮುಂಬೈನ ಐಐಟಿಗಳೊಂದಿಗೆ ಸಂಪರ್ಕಿಸಲಾಗಿದೆ.
ನ್ಯಾಷನಲ್ ಲೀಗಲ್ ಇನ್ಸ್ಟಿಟ್ಯೂಟ್ ಆಫ್ ಭೂತಾನ್ ಮತ್ತು ನ್ಯಾಷನಲ್ ಜ್ಯುಡಿಶಿಯಲ್ ಅಕಾಡೆಮಿ ಆಫ್ ಇಂಡಿಯಾ, ಹಾಗೆಯೇ ಜಿಗ್ಮೆ ಸಿಂಗ್ಯೆ ವಾಂಗ್ಚಕ್ ಸ್ಕೂಲ್ ಆಫ್ ಲಾ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು ವಿಶ್ವವಿದ್ಯಾಲಯ ಇದೇ ರೀತಿಯ ಶೈಕ್ಷಣಿಕ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದೆ.
ಈ ವರ್ಷದ ಆರಂಭದಲ್ಲಿ ಪ್ರಾರಂಭವಾದ ತನ್ನ 12ನೇ ಪಂಚವಾರ್ಷಿಕ ಯೋಜನೆಗೆ ಈಗಾಗಲೇ 5,000 ಕೋಟಿ ರೂ. ಈ ಮೊತ್ತವನ್ನು ನೀಡುವುದಾಗಿ ಭೂತಾನಿಗೆ ಭಾರತ ಭರವಸೆ ನೀಡಿದೆ.
ಜಲಶಕ್ತಿಯು ಉಭಯ ದೇಶಗಳ ನಡುವಿನ ಸಹಕಾರದ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ ಮತ್ತು ಮೋದಿ 740 ಮೆಗಾವ್ಯಾಟ್ ಮಂಗ್ಡೆಚು ಜಲವಿದ್ಯುತ್ ಯೋಜನೆಯನ್ನು ಅಲ್ಲಿ ಉದ್ಘಾಟಿಸಿದರು. ಭೂತಾನ್ನಲ್ಲಿ ಭಾರತದ ನೆರವಿನೊಂದಿಗೆ ನಿರ್ಮಿಸಲಾದ ಅಂತಹ ನಾಲ್ಕನೆಯ ಸ್ಥಾವರ ಇದಾಗಿದೆ ಮತ್ತು ಇದು ಭೂತಾನ್ ಸ್ಥಾಪಿಸಿದ ಜಲ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹಿಂದಿನ 1600 ಮೆಗಾವ್ಯಾಟ್ನಿಂದ 2326 ಮೆಗಾವ್ಯಾಟ್ಗೆ ಹೆಚ್ಚಿಸಿದೆ.
ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ 2500 ಮೆಗಾವ್ಯಾಟ್ ಸುಂಕೋಷ್ ಜಲವಿದ್ಯುತ್ ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಲು ಇದ್ದ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ.
ಮೋದಿಯ ಭೂತಾನ್ ಭೇಟಿ, ಇಂಡೋ-ಭೂತಾನ್ ಸಂಬಂಧಗಳಿಗೆ ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ದಿಕ್ಸೂಚಿಯನ್ನು ನೀಡಿದೆ ಮತ್ತು ಭೂತಾನ್ನ ಯುವ ಮತ್ತು ಮಹತ್ವಾಕಾಂಕ್ಷೆಯ ಬಗ್ಗೆ ಚೀನಾದ ಆಕ್ರಮಣಕಾರಿ ನಡೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲೂ ಇದು ಭದ್ರ ಅಡಿಪಾಯವನ್ನು ಹಾಕಿದೆ.
ಮೋದಿಯವರ ಎರಡು ದಿನಗಳ ಭೇಟಿಯು ಭೂತಾನ್ನ ಮಹತ್ವಾಕಾಂಕ್ಷೆಯ ಯುವಕರಿಗೆ ರೋಚಕ ಅವಕಾಶಗಳನ್ನು ತೆರೆದಿದೆ. ಭಾರತವು ಸಾಧಿಸುತ್ತಿರುವ ಪ್ರಗತಿಯ ಭಾಗವಾಗಬೇಕೆಂದು ಆ ದೇಶದ ಯುವಕರಿಗೆ ಮೋದಿಯವರು ನೇರ ಮನವಿಯನ್ನು ಮಾಡಿದ್ದು ಅತ್ಯಂತ ಶ್ಲಾಘನೀಯವಾಗಿದೆ.
ಹೀಗಾಗಿ, ಮೋದಿಯವರು ತಮ್ಮ ಭೇಟಿಯ ಸಮಯದಲ್ಲಿ ನಮ್ಮ ಹೃದಯಗಳನ್ನು ಮುಟ್ಟಿದರು ಮತ್ತು ಮನಸ್ಸನ್ನು ಪ್ರೇರೇಪಿಸಿದರು ಎಂದು ಭೂತಾನ್ ಪ್ರಧಾನಿ ತ್ಸೆರಿಂಗ್ ಹೇಳಿದ್ದರಲ್ಲಿ ಆಶ್ಚರ್ಯವೇ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.