ನವದೆಹಲಿ: ‘ಮೊದಲ ಬಳಕೆ ಇಲ್ಲ’ ಎಂಬ ಅಣ್ವಸ್ತ್ರ ನೀತಿಗೆ ಭಾರತವು ಬದ್ಧವಾಗಿದೆ, ಆದರೆ ಮುಂದೇನಾಗುತ್ತದೆ ಎಂಬುದು ಭವಿಷ್ಯದ ಸನ್ನಿವೇಶಗಳ ಮೇಲೆ ಆಧರಿತವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ರಾಜಸ್ಥಾನದ ಪೋಖ್ರಾನ್ನಲ್ಲಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪುಣ್ಯತಿಥಿಯ ಅಂಗವಾಗಿ ಗೌರವಾರ್ಪಣೆಯನ್ನು ಮಾಡಿ ಅವರು ಮಾತನಾಡಿದರು. ಪೋಖ್ರಾನಿನಲ್ಲಿ ವಾಜಪೇಯಿ ಸರ್ಕಾರವಿದ್ದಾಗ ಮೊದಲ ಬಾರಿಗೆ ಅಣ್ವಸ್ತ್ರ ಪರೀಕ್ಷೆಯನ್ನು ಮಾಡಲಾಗಿತ್ತು.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಭಾರತದ ಹಿರಿಯ ಸೇನಾಧಿಕಾರಿಗಳ ಸಿಂಗ್ ಜೊತೆಗಿದ್ದರು.
ಭಾರತವು ತನ್ನ ‘ಮೊದಲ ಬಳಕೆ ಇಲ್ಲ’ ಎಂಬ ಅಣ್ವಸ್ತ್ರ ನೀತಿಯನ್ನು ಇಲ್ಲಿಯವರೆಗೆ ಮುಂದುವರೆಸಿಕೊಂಡು ಬಂದಿದೆ ಎಂಬುದು ನಿಜವಾಗಿದ್ದರೂ, ಭವಿಷ್ಯದಲ್ಲಿ ಇದನ್ನು ಮುಂದುವರಿಸಲಾಗುತ್ತದೆಯೇ ಎಂಬ ಪ್ರಶ್ನೆ ಸಂದರ್ಭ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತವು ಯಾವಾಗಲೂ ಮೊದಲ ಬಳಕೆ ಇಲ್ಲ ನೀತಿಯೊಂದಿಗೆ ಮುಂದುವರಿಯಲು ಬಯಸುವುದಿಲ್ಲ ಎಂಬ ಅಂಶವನ್ನೂ ಈ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
“ಭಾರತವು ಜವಾಬ್ದಾರಿಯುತ ಪರಮಾಣು ರಾಷ್ಟ್ರದ ಸ್ಥಾನಮಾನವನ್ನು ಪಡೆಯುವುದು ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ. ಅಟಲ್ ಜಿ ಅವರ ಶ್ರೇಷ್ಠತೆಗೆ ರಾಷ್ಟ್ರವು ಋಣಿಯಾಗಿರುತ್ತದೆ” ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ವರದಿಯ ಪ್ರಕಾರ, 2018 ರಲ್ಲಿ ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮೊದಲ ಬಳಕೆ ಇಲ್ಲ ಎಂದು ಹೇಳುವ ಬದಲು, ತನ್ನನ್ನು ಜವಾಬ್ದಾರಿಯುತ ಪರಮಾಣು ಶಕ್ತಿ ಮತ್ತು ತಾನು ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬೇಜವಾಬ್ದಾರಿಯುತವಾಗಿ ನಿಯೋಜಿಸುವುದಿಲ್ಲ ಎಂದು ಭಾರತ ಹೇಳಿಕೊಳ್ಳಬೇಕು ಎಂದು ಅಭಿಪ್ರಾಯಿಸಿದ್ದರು.
ಪ್ರಸ್ತುತ, ಮೊದಲ ಬಳಕೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ವಿಶ್ವದ ಎರಡು ರಾಷ್ಟ್ರಗಳ ಪೈಕಿ ಭಾರತವೂ ಒಂದು. ಇನ್ನೊಂದು ಚೀನಾ.
ಇತ್ತೀಚಿನ ವರ್ಷಗಳಲ್ಲಿ, ಭಾರತವು ಮೊದಲ ಬಳಕೆ ಇಲ್ಲ ಎಂಬ ಸಿದ್ಧಾಂತವನ್ನು ಮುಂದುವರಿಸಬೇಕೇ ಎಂಬುದು ರಾಜಕೀಯ ಮತ್ತು ಭದ್ರತಾ ವಲಯಗಳಲ್ಲಿ ಹೆಚ್ಚಾಗಿ ಚರ್ಚಿಸಲ್ಪಡುವ ವಿಷಯವಾಗಿ ಪರಿಣಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.