ಆಗಸ್ಟ್ 5 ರಂದು ಭಾರತ ಸರ್ಕಾರವು ಸಂವಿಧಾನದ 370 ನೇ ವಿಧಿಯ ಕೆಲವು ನಿಬಂಧನೆಗಳನ್ನು ನಿಷ್ಕ್ರಿಯಗೊಳಿಸಿದೆ. ಲಡಾಖ್ ಮತ್ತು ಜಮ್ಮು ಕಾಶ್ಮೀರ ಪ್ರದೇಶಗಳನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಚಿಸಲು ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಗಿದೆ. ಈ ಆಡಳಿತಾತ್ಮಕ ಮರುಸಂಘಟನೆಯ ನಿರ್ಧಾರವು ಅಲ್ಲಿನ ಆಡಳಿತವನ್ನು ಸುಧಾರಿಸಲಿದೆ ಮತ್ತು 370 ನೇ ವಿಧಿಯ ಪ್ರಯೋಜನಗಳಿಂದ ವಂಚಿತರಾದ ಜನರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ನೀಡಲಿದೆ. 370ನೇ ವಿಧಿಯ ಬಗ್ಗೆ ತೆಗೆದುಕೊಂಡ ನಿರ್ಧಾರವು ನಿಯಂತ್ರಣ ರೇಖೆಯ (ಎಲ್ಒಸಿ) ಸ್ಥಾನಮಾನವನ್ನು ಬದಲಾಯಿಸಿಲ್ಲ. 370 ನೇ ವಿಧಿಯನ್ನು ಪರಿವರ್ತನೆ ಮತ್ತು ವಿಶೇಷ ನಿಬಂಧನೆಗಳನ್ನು ಒಳಗೊಂಡಿರುವ ಸಂವಿಧಾನದ ಭಾಗ XXI ಅಡಿಯಲ್ಲಿ ತಾತ್ಕಾಲಿಕವಾಗಿಡಲು ಉದ್ದೇಶಿಸಲಾಗಿತ್ತು. 1950 ರಿಂದ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಶಾಸನ ಮತ್ತು ನಿಬಂಧನೆಗಳನ್ನು ಅನ್ವಯಪಡಿಸುವ ಉದ್ದೇಶದಿಂದ ಕಲಂ 370 ರ ಅಡಿಯಲ್ಲಿ ಒಟ್ಟು 54 ರಾಷ್ಟ್ರಪತಿ ಆದೇಶಗಳು / ಘೋಷಣೆಗಳನ್ನು ಹೊರಡಿಸಲಾಗಿದೆ. ಎರಡು ಇತ್ತೀಚಿನ ಆದೇಶಗಳು ಸೇರಿದಂತೆ 1950-54ರ ಅವಧಿಯಲ್ಲಿ ಹೆಚ್ಚಿನ ಸಮಗ್ರ ಆದೇಶಗಳನ್ನು ಆ ರಾಜ್ಯಕ್ಕೆ ಅನ್ವಯಗೊಳಿಸುವಂತೆ ಮಾಡಲಾಗಿದೆ. ಅದರಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮತ್ತು 2019ರ ಭಡ್ತಿ / ಮೀಸಲಾತಿ ಕಾಯ್ದೆ ಕೂಡ ಸೇರಿದೆ.
ಈ ರಾಷ್ಟ್ರಪತಿ ಆದೇಶಗಳು / ಘೋಷಣೆಗಳು ಏಕೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಜಮ್ಮು ಕಾಶ್ಮೀರ ಆಡಳಿತವನ್ನು ದೇಶದ ಉಳಿದ ಭಾಗಗಳೊಂದಿಗೆ ಸಮನ್ವಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಇರಾದೆಯನ್ನೇ ಇಟ್ಟುಕೊಂಡಿದ್ದವು. ಆದರೆ ಆಡಳಿತಾತ್ಮಕ ದಕ್ಷತೆಯ ಕೊರತೆ ಮತ್ತು ಆಡಳಿತದ ಕೆಟ್ಟ ಗುಣಮಟ್ಟದ ಪರಿಣಾಮ ಏಕೀಕರಣದ ಪ್ರಕ್ರಿಯೆ ದುರ್ಬಲಗೊಂಡಿತ್ತು. ಭಾರತದ ಬಹು ಪಾಲು ಸಂಪನ್ಮೂಲಗಳನ್ನು ಯಾವುದೇ ಅಭಿವೃದ್ಧಿಯಿಲ್ಲದ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದೆ. ಎಲ್ಲಾ ಕೇಂದ್ರೀಯ ಅನುದಾನಗಳಲ್ಲಿ ಹತ್ತು ಪ್ರತಿಶತವನ್ನು ವಾಸ್ತವವಾಗಿ ಜಮ್ಮುಕಾಶ್ಮೀರದಲ್ಲಿ ವಾಸಿಸುವ ಭಾರತದ ಒಟ್ಟು ಜನಸಂಖ್ಯೆಯ ಒಂದು ಶೇಕಡಾಕ್ಕೆ ನೀಡಲಾಗಿದೆ. ಹೀಗಿ ನೀಡಿದ ಹಣದ ಮೊತ್ತ 27,70,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ, ಅಲ್ಲಿನ ಬಹುತೇಕ ಸಾಮಾನ್ಯ ಜನರಿಗೆ ಕೇಂದ್ರ ಅನುದಾನ ತಲುಪಲೇ ಇಲ್ಲ. ಅಲ್ಲಿನ ಉದ್ದೇಶಿತ ಅಭಿವೃದ್ಧಿ ಪ್ರಯತ್ನಗಳು ಶಸ್ತ್ರಾಸ್ತ್ರ, ಸ್ಫೋಟಕಗಳ ಕಳ್ಳಸಾಗಣೆ, ಅಕ್ರಮ ವ್ಯಾಪಾರ ಮುಂತಾದ ಕಾನೂನು ಬಾಹಿರ ಕೃತ್ಯಗಳ ಸವಾಲುಗಳನ್ನು ಎದುರಿಸಬೇಕಾಗಿ ಬಂತು.
ಒಂದು ಪ್ರಬಲ ನಿರ್ಧಾರದಲ್ಲಿ, ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಹೊರಗಿನವರಿಗೆ ಕಾಶ್ಮೀರ ವಿವಾದದಲ್ಲಿ ಯಾವುದೇ ಪಾತ್ರವನ್ನು ವಹಿಸುವ ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮಹಾರಾಜ ಹರಿ ಸಿಂಗ್ ಅವರು 1947/48 ರಲ್ಲಿ ಭಾರತದ ಒಕ್ಕೂಟದೊಂದಿಗೆ ಸೇರುವ ಸಹಿಯನ್ನು ಮಾಡಿದ ವೇಳೆ, ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಲಾಗಿತ್ತು, ಆದರೆ ಲಡಾಖ್ ಉಲ್ಲೇಖಿಸಲ್ಪಟ್ಟಿಲ್ಲ. ‘ಜಮ್ಮು ಮತ್ತು ಕಾಶ್ಮೀರ’ ಎಂಬ ಘಟಕವು ಒಂದು ರಾಜ್ಯವಾಗಿ ಅಸ್ತಿತ್ವದಲ್ಲಿರಬೇಕು, ಏಕೆಂದರೆ 1947/48 ರಲ್ಲಿ ಇನ್ಸ್ಟ್ರುಮೆಂಟ್ ಆಫ್ ಅಕ್ಸೆಷನ್ ಗೆ ಸಹಿ ಹಾಕಿದಾಗ ಪಿಓಕೆಯು ಜಮ್ಮು ಕಾಶ್ಮೀರದ ಭಾಗವಾಗಿತ್ತು. ಭವಿಷ್ಯದಲ್ಲಿ ನಮ್ಮ ಪಿಒಕೆ ಅನ್ನು ನಮ್ಮ ಜಮ್ಮು ಕಾಶ್ಮೀರದೊಂದಿಗೆ ಸಂಯೋಜಿಸುವ ಕಾರಣಕ್ಕಾಗಿಯಾದರೂ ಜಮ್ಮು ಕಾಶ್ಮೀರವನ್ನು ಒಂದೇ ರಾಜ್ಯವಾಗಿ ಇಡಲೇಬೇಕು. ಭವಿಷ್ಯದಲ್ಲಿ, ಭಾರತವು ಪಿಒಕೆ ತನ್ನದು ಎಂದು ಹೇಳಿಕೊಳ್ಳುವಾಗ ಅಥವಾ ಬೇಡಿಕೆಯಿಟ್ಟಾಗ, ಪಿಓಕೆಯನ್ನು ಒಳಗೊಂಡಂತೆ ಸಂಪೂರ್ಣ ಜಮ್ಮುಕಾಶ್ಮೀರ ಪ್ರದೇಶವು ತನ್ನದು ಎಂಬುದನ್ನು ಪಾಕಿಸ್ಥಾನಕ್ಕೆ ತೋರಿಸಲು ಸಹಿ ಹಾಕಿದ ಇನ್ಸ್ಟ್ರುಮೆಂಟ್ ಆಫ್ ಅಕ್ಸೆಷನ್ ಮುಖ್ಯ ಸಾಧನವಾಗುತ್ತದೆ.
ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರ ಪ್ರದೇಶಗಳಾಗಿ ಘೋಷಿಸುವುದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಸವಾಲುಗಳನ್ನು ಕಟ್ಟುನಿಟ್ಟಾಗಿ ಆಂತರಿಕ ಸಮಸ್ಯೆಯನ್ನಾಗಿ ಮಾಡಿದ್ದಾರೆ. ನವದೆಹಲಿಯ ನಿರ್ಧಾರವು ಈಗ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಲಡಾಖ್ ಸೇರಿದಂತೆ ಜಮ್ಮು ಕಾಶ್ಮೀರದ ಮೇಲೆ ಸಂಪೂರ್ಣವಾಗಿ ಅನ್ವಯ ಆಗುತ್ತಿರುವುದರಿಂದ, ವಿಶ್ವಸಂಸ್ಥೆಯ ಶಿಫಾರಸ್ಸನ್ನು ಜಮ್ಮು ಕಾಶ್ಮೀರದ ಮೇಲೆ ರೂಪಿಸುವುದು ಅನಗತ್ಯವಾಗುತ್ತದೆ. ಜಮ್ಮು ಕಾಶ್ಮೀರ ವಿಶೇಷಾಧಿಕಾರವನ್ನು ಹೊಂದಿಲ್ಲವಾದ್ದರಿಂದ, ಅದು ಅಧಿಕೃತವಾಗಿ ಭಾರತದ ಮತ್ತೊಂದು ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ. ಅಲ್ಲಿ ಯಾವುದೇ ಬಾಹ್ಯ ಅಭಿಪ್ರಾಯವು ಪ್ರಸ್ತುತವಾಗುವುದಿಲ್ಲ. ಭಾರತೀಯ ಒಕ್ಕೂಟಕ್ಕೆ ಜಮ್ಮು ಕಾಶ್ಮೀರವನ್ನು ಸೇರಿಸಿದ ಕೀರ್ತಿ ಔಪಚಾರಿಕವಾಗಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ.
ಅಮೆರಿಕ ಆಡಳಿತ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನೇರ ಜ್ಞಾನವನ್ನು ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಜಮ್ಮು ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕೇಳಿಕೊಂಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿಕೊಂಡಿದ್ದರು, ಇದನ್ನು ಭಾರತ ಸರ್ಕಾರ ನಿರಾಕರಿಸಿತ್ತು. 370ನೇ ವಿಧಿಯನ್ನು ರದ್ದುಗೊಳಿಸುವ ಮೊದಲು ಕೂಡ ಅಮೆರಿಕಾವು ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಸಾಂದರ್ಭಿಕವಾಗಿ ಭಾರತ ಮತ್ತು ಪಾಕಿಸ್ಥಾನಕ್ಕೆ ಸಲಹೆ ನೀಡುವುದನ್ನು ಬಿಟ್ಟು ಬೇರೆ ಯಾವುದೇ ನಿಲುವನ್ನೂ ಹೊಂದಿರಲಿಲ್ಲ. ಅದರ ನಂತರವೂ, ಕಾಶ್ಮೀರದ ವಿಷಯದ ಬಗ್ಗೆ ಅದಕ್ಕೆ ಸಲಹೆಯನ್ನು ನೀಡುವ ಅಧಿಕಾರ ಇನ್ನಷ್ಟು ಕಡಿಮೆಯಾಗಿದೆ. ಆದರೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮಾತ್ರ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕಾದ ಹಿಂದೆ ಬೀಳುತ್ತಲೇ ಇದ್ದಾರೆ.
ಇನ್ನು ಚೀನಾ ಕೂಡ ಕಾಶ್ಮೀರ ವಿಷಯದ ಬಗ್ಗೆ ಆಗಾಗ ಬಿಟ್ಟಿ ಸಲಹೆಗಳನ್ನು ನೀಡುತ್ತಲೇ ಇರುತ್ತದೆ. ಆದರೆ ಅದು ಕಾಶ್ಮೀರದ ವಿಷಯದಲ್ಲಿ ಪರೋಕ್ಷವಾಗಿ ಪಾಕಿಸ್ಥಾನವನ್ನು ಬೆಂಬಲಿಸುತ್ತಲೇ ಬರುತ್ತಿದೆ. ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ್ದರ ಬಗ್ಗೆಯೂ ಅದು ಅಸಮಾಧಾನವನ್ನು ಹೊಂದಿದೆ. ಆದರೆ ಈ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅದು ಯಾವುದೇ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ. ಅಕ್ಸಾಯ್ ಚಿನ್ ಮತ್ತು ಪಿಓಕೆ ಜಮ್ಮುಕಾಶ್ಮೀರದ ಭಾಗವೇ ಎಂದು ಅಮಿತ್ ಶಾ ಅವರು ಇತ್ತೀಚಿಗೆ ಲೋಕಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆಗಳು ಆರಂಭವಾಗಬೇಕಷ್ಟೇ.
ಇಂದು ಮಾಡಿದ ಸಾಂವಿಧಾನಿಕ ಮತ್ತು ಕಾನೂನು ಬದಲಾವಣೆಗಳು ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯನ್ನು ಬದಲಿಸುತ್ತದೆ ಎಂಬ ನಂಬಿಕೆ ಇದೆ, ಅದಕ್ಕಿಂತಲೂ ಈ ನಿರ್ಧಾರ ಭಾರತವನ್ನು ಅಳಿಸಲಾಗದ ಭಾಗವೆಂದು ಪರಿಗಣಿಸುವಂತೆ ಮಾಡಿದೆ. ಯುಎನ್ ನಿರ್ಣಯಗಳೂ ಕೂಡ ಶಿಪಾರಸ್ಸುಗಳಾಗುತ್ತವೆಯೇ ಹೊರತು ಕಡ್ಡಾಯವಾಗುವುದಿಲ್ಲ. ಯಾವುದೇ ಸಾಂವಿಧಾನಿಕ ಮತ್ತು ಕಾನೂನು ಬದಲಾವಣೆಗಳನ್ನು ಸೂಕ್ತವೆಂದು ಭಾವಿಸಿ ಅನ್ವಯಿಸುವ ಹಕ್ಕನ್ನು ಭಾರತ ಹೊಂದಿದೆ. ಮಿರ್ಪುರ್-ಮುಜಫರಾಬಾದ್ ಬೆಲ್ಟ್ ಮತ್ತು ಪಿಒಕೆ ಗಿಲ್ಗಿಟ್ ಬಾಲ್ಟಿಸ್ತಾನ್ ಬೆಲ್ಟ್ನ ವಿಷಯದಲ್ಲಿ ಪಾಕಿಸ್ಥಾನ ಅನುಸರಿಸಿದ ಮಾದರಿಯನ್ನೇ ಭಾರತಕ್ಕೂ ಅನುಸರಿಸುವ ಹಕ್ಕಿದೆ. ಪಾಕಿಸ್ಥಾನವು ಭಾರತದ ನಿರ್ಧಾರದ ವಿರುದ್ಧ ಕಿರುಚಬಹುದು ಮತ್ತು ಕೂಗಬಹುದು ಅಥವಾ ಅದರ ಭಯೋತ್ಪಾದಕ ಮೂಲಕ ಹಿಂಸಾಚಾರವನ್ನು ಹೆಚ್ಚಿಸಬಹುದು, ಆದರೆ ಅದಕ್ಕೆ ಜಮ್ಮು ಕಾಶ್ಮೀರದ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇಂದು ಮಾಡಿದ ಬದಲಾವಣೆಗಳು ಜಮ್ಮುಕಾಶ್ಮೀರಕ್ಕೆ ರಾಜಿಮಾಡಿಕೊಳ್ಳಲಾಗದ ಪ್ರಮುಖ ಆಸಕ್ತಿಯನ್ನು ರೂಪಿಸುತ್ತದೆ, ಇದು ಉಳಿದ ಜಗತ್ತಿಗೆ ಬಲವಾದ ಸಂದೇಶವನ್ನು ಕಳುಹಿಸುತ್ತದೆ.
370ನೇ ವಿಧಿಯನ್ನು ರದ್ದುಪಡಿಸಿದ ವಿಧಾನದ ಬಗ್ಗೆ ಭಾರತದ ಕೆಲವು ವಿರೋಧ ಪಕ್ಷಗಳು ಆಕ್ರೋಶವನ್ನು ವ್ಯಕ್ತಪಡಿಸಿವೆ. ಆದರೆ, ಈ ನಿರ್ಧಾರವು ಯಾವುದೇ ನಿರ್ಣಾಯಕ ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು, ಮೂರು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ಮಧ್ಯದಲ್ಲಿ ಇರುವ ಮತ್ತು ವಿಶ್ವದ ಪರಮಾಣು ಮುಖಾಮುಖಿಯ ಪ್ರಮುಖ ತಾಣವೆಂದು ಪರಿಗಣಿಸಲ್ಪಟ್ಟ ತನ್ನ ರಾಜ್ಯವೊಂದರ ವಿಶೇಷ ಸ್ವಾಯತ್ತತೆಯನ್ನು ಯಾವುದೇ ಅಂತಾರಾಷ್ಟ್ರೀಯ ಅಸಮ್ಮತಿ ಇಲ್ಲದೆ ಕೊನೆಗೊಳಿಸಿದೆ ಎಂಬುದು ಸಣ್ಣ ವಿಷಯವಲ್ಲ. ಭವಿಷ್ಯದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಜ್ಜಾಗಿಯೇ ಅದು ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಮುಖ್ಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.