ಕರ್ನಾಟಕದ ಹಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು ಪ್ರವಾಹ ಸನ್ನಿವೇಶವನ್ನು ಎದುರಿಸುತ್ತಿವೆ. ಬೆಳಗಾವಿ, ಗೋಕಾಕ್, ಮಡಿಕೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದೆ. ಮಹಾಮಳೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ತಿನ್ನಲು ಆಹಾರವಿಲ್ಲದೆ, ವಿದ್ಯುತ್ ಇಲ್ಲದೆ, ಕುಡಿಯಲು ಶುದ್ಧ ನೀರು ಇಲ್ಲದೆ ಅನೇಕ ಜನರು ಪರದಾಡುವಂತಾಗಿದೆ. ನೆರೆ ಸಂತ್ರಸ್ತರ ಸಹಾಯಕ್ಕೆ ಹಲವಾರು ಜನರು, ಸಂಘಸಂಸ್ಥೆಗಳು ಕೈಜೋಡಿಸಿವೆ. ಅದರಲ್ಲೂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಬಿಎಸ್ ಯಡಿಯೂರಪ್ಪನವರು ಕಾಲಿಗೆ ಟೊಂಕ ಕಟ್ಟಿಕೊಂಡವರಂತೆ ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಈಗಾಗಲೇ ಹಲವು ಭಾಗಗಳಲ್ಲಿ ವೈಮಾನಿಕ ಸಮೀಕ್ಷೆಗಳನ್ನು ಅವರು ನಡೆಸಿದ್ದಾರೆ, ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿ ನೆರೆ ಪರಿಸ್ಥಿತಿಗಳ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನೆರೆಯಿಂದ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರಗಳನ್ನು ಘೋಷಣೆ ಮಾಡಿದ್ದಾರೆ. ”ಜನ-ಜಾನುವಾರುಗಳ ರಕ್ಷಣೆಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ಹೆಚ್ಚುವರಿ ಸೇನೆಯ ತುಕಡಿಗಳನ್ನು ನೆರೆ ಸಂತ್ರಸ್ತರ ಸಹಾಯಕ್ಕಾಗಿ ನಿಯೋಜಿಸಲಾಗುತ್ತದೆ. ಹೆಲಿಕಾಫ್ಟರ್ಗಳ ನಿಯೋಜನೆಯನ್ನೂ ಮಾಡಲಾಗುತ್ತದೆ” ಎಂದು ಅವರು ಘೋಷಣೆ ಮಾಡಿದ್ದಾರೆ. ಅಧಿಕಾರಿಗಳು ಧೃತಿಗೆಡದೆ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು, ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಒದಗಿಸಲಾಗುತ್ತದೆ ಎಂದು ಅವರು ಭರವಸೆಯನ್ನು ನೀಡಿದ್ದಾರೆ. ಅಧಿಕಾರ ವಹಿಸಿಕೊಂಡಾಗಿನಿಂದ ನೆರೆ ಸಂತ್ರಸ್ತರ ನೆರವು ಕಾರ್ಯದಲ್ಲೇ ಮಗ್ನರಾಗುವ ಮೂಲಕ ಅವರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿಎಸ್ ಯಡಿಯೂರಪ್ಪನವರು ಇಂದು ಕರ್ನಾಟಕದಲ್ಲಿ ನೆರೆ ಸಂತ್ರಸ್ತರ ಸೇವಾ ಕಾರ್ಯದಲ್ಲಿ ತೊಡಗಿರುವ ರೀತಿ, ನರೇಂದ್ರ ಮೋದಿಯವರ ಗುಜರಾತ್ ಸಿಎಂ ಆಗಿದ್ದಾಗ ನೆರೆ ಸಂಭವಿಸಿದ ಸಂದರ್ಭದಲ್ಲಿ ನಡೆಸಿದ ಕಾರ್ಯವೈಖರಿಯನ್ನು ನೆನಪಿಸುತ್ತದೆ. ಹೌದು, ನೆರೆ ಸಂತ್ರಸ್ತರ ನೆರವು ಕಾರ್ಯದಲ್ಲಿ ಬಿಎಸ್ ಯಡಿಯೂರಪ್ಪನವರು ಮೋದಿಯನ್ನು ಅನುಸರಿಸುತ್ತಿದ್ದಾರೆ.
2001ರಲ್ಲಿ ಗುಜರಾತಿನಲ್ಲಿ ನಡೆದ ಭೀಕರ ಭೂಕಂಪದ ಸಂದರ್ಭದಲ್ಲಿ, 2005ರಲ್ಲಿ ಅಲ್ಲಿ ಸಂಭವಿಸಿದ ಭೀಕರ ನೆರೆಯ ಸಂದರ್ಭದಲ್ಲಿ ಮೋದಿ ತೆಗೆದುಕೊಂಡ ಕ್ರಮಗಳು, ಮಾಡಿದ ಕಾರ್ಯಗಳನ್ನು ಅಲ್ಲಿನ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ವಿಪತ್ತು ನಿರ್ವಹಣೆಯಲ್ಲಿ ವಿಷಯದಲ್ಲಿ ಅತ್ಯಂತ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದ ಮೋದಿಯವರು, ಗುಜರಾತಿನಲ್ಲಿ ಸಂಭವಿಸಿದ್ದ ಎಲ್ಲಾ ಪ್ರಾಕೃತಿಕ ವಿಕೋಪಗಳನ್ನು ಸವಾಲಾಗಿ ಸ್ವೀಕರಿಸಿದರು. ಜನವರಿ 2001ರಲ್ಲಿ ಭೀಕರ ಭೂಕಂಪದಿಂದ ಉಂಟಾದ ಹಾನಿಯನ್ನು ಸರಿಪಡಿಸಿದ್ದು ಮತ್ತು ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಿದ್ದು, ಪುನರ್ ನಿರ್ಮಾಣ ಕಾರ್ಯ ಮಾಡಿದ್ದು ಮುಖ್ಯಮಂತ್ರಿಯಾಗಿ ಮೋದಿಯವರ ಸಾಧನೆಯನ್ನು ಪ್ರತಿಬಿಂಬಿಸುತ್ತದೆ.
2005ರ ನೆರೆಯಲ್ಲಿ ತೀವ್ರ ಹಾನಿಗೊಳಗಾಗಿದ್ದ ಗುಜರಾತಿನ ಅನೇಕ ನಗರಗಳು ಸಂಪೂರ್ಣ ನಿರ್ನಾಮವಾಗಿದ್ದವು ಮತ್ತು ಸಾವಿರಾರು ನಿರಾಶ್ರಿತರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಇಂದು ನಿರ್ನಾಮಗೊಂಡಿದ್ದ ಅಲ್ಲಿನ ಪ್ರದೇಶಗಳು ಅಚ್ಚರಿಪಡುವಂತೆ ಅಭಿವೃದ್ಧಿ ಕಂಡಿದೆ. ಗುಜರಾತ್ ಔದ್ಯಮಿಕ ಪ್ರಗತಿಯತ್ತ ದಾಫುಗಾಲು ಇಟ್ಟ ರಾಜ್ಯವಾಗಿ ಇಂದು ಹೊರಹೊಮ್ಮಿದೆ. ಸಾಮಾಜಿಕ-ಆರ್ಥಿಕ ಬೆಳವಣಿಗೆಗಾಗಿ ಅವರು ಪ್ರಾಕೃತಿಕ ವಿಪತ್ತಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದಾರೆ, ಸಾಮಾಜಿಕ ವಲಯದಲ್ಲಿ ಉಂಟಾಗಿದ್ದ ಅಸಮತೋಲನವನ್ನು ಸರಿಪಡಿಸಲು ಮೋದಿ ಅಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.
ಇಂದು ಕರ್ನಾಟಕದಲ್ಲಿ ಸಂಭವಿಸುತ್ತಿರುವ ನೆರೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪನವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಕೂಡ ಮೋದಿಯವರ ಮಾದರಿಯಲ್ಲೇ ತ್ವರಿತ, ಕ್ಷಿಪ್ರ ಮತ್ತು ಕ್ರಿಯಾಶೀಲವಾಗಿದೆ. ಸಾಲು ಸಾಲು ಸಭೆ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ, ಸಂತ್ರಸ್ತರೊಂದಿಗೆ ಮಾತುಕತೆ, ಸಾಂತ್ವನ, ಕ್ಷಿಪ್ರಗತಿಯಲ್ಲಿ ಪರಿಹಾರಗಳ ಘೋಷಣೆ, ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಯಲ್ಲಿ ಅವರು ಮೋದಿಯನ್ನೇ ಅನುರಿಸುತ್ತಿದ್ದಾರೆ.
ಅದೇ ಒಂದು ವರ್ಷಗಳ ಹಿಂದೆ ಸಂಭವಿಸಿದ್ದ ನೆರೆಯನ್ನು ನೆನಪಿಸಿಕೊಳ್ಳೋಣ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಸೇರಿದಂತೆ ಅನೇಕ ಕಡೆಗಳಲ್ಲಿ ನೆರೆ ಸಂಭವಿಸಿತ್ತು, ಆದರೆ ಈ ವೇಳೆ ಸಂದೇದನಾರಹಿತವಾಗಿ ವರ್ತಿಸಿದ್ದ ಸಿಎಂ ಅವರು ರೆಸಾರ್ಟ್ನಲ್ಲಿ ಕಾಲ ಕಳೆದಿದ್ದರು. ಕಾಟಚಾರಕ್ಕಾಗಿ ಅವರು ನಡೆಸಿದ್ದ ವೈಮಾನಿಕ ಸಮೀಕ್ಷೆಯಲ್ಲಿ ನೆರೆಯನ್ನು ನೋಡುವ ಬದಲು ನ್ಯೂಸ್ ಪೇಪರ್ ಓದುತ್ತಾ ಕುಳಿತಿದ್ದರು. ಸೂಪರ್ ಸಿಎಂ ಆಗಿ ದರ್ಪ ಮೆರೆಯುತ್ತಿದ್ದ ಅವರ ಸಹೋದರ ರೇವಣ್ಣ, ಮನೆ ಮಠ ಕಳೆದುಕೊಂಡ ಕೊಡಗಿನ ನೆರೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ರೀತಿ ಅಮಾನವೀಯವಾಗಿತ್ತು. ಕೊಡಗಿನ ನೆರೆ ಸಂತ್ರಸ್ತರಿಗೆ ಇದುವರೆಗೂ ಸೂಕ್ತ ಪುನರ್ ವಸತಿ ಕಲ್ಪಿಸಲಾಗಿಲ್ಲ ಎಂಬುದೇ ದುರಾದೃಷ್ಟಕರ.
ಆದರೆ ಇಂದು ಸರ್ಕಾರವೂ ಬದಲಾಗಿದೆ, ಪರಿಸ್ಥಿತಿಯೂ ಬದಲಾಗಿದೆ. ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ನೆರೆ ಸಂತ್ರಸ್ತರ ವಿಷಯದಲ್ಲಿ ಸಂವೇದನಾಶೀಲರಾಗಿ ವರ್ತಿಸುತ್ತಿದ್ದಾರೆ. ಈ ಮೂಲಕ ಜನರ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.