ಜಮ್ಮು: ಕಳೆದ ಕೆಲವು ದಿನಗಳಿಂದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಲಾಂಚಿಂಗ್ ಪ್ಯಾಡುಗಳಲ್ಲಿ ಭಯೋತ್ಪಾದಕರ ಬಲವನ್ನು ಹೆಚ್ಚಿಸುವ ಮತ್ತು ನುಸುಳುಕೋರರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ತಳ್ಳುವ ಪ್ರಯತ್ನವನ್ನು ಪಾಕಿಸ್ಥಾನ ತೀವ್ರಗೊಳಿಸಿದೆ ಎಂದು ಸೇನೆಯ ಉನ್ನತ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡುತ್ತಿದೆ ಎಂದು ಉತ್ತರ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸರ್ಕಾರ ಹಿಂತೆಗೆದುಕೊಂಡು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಪ್ರಸ್ತಾಪಿಸಿದ ಒಂದು ದಿನದ ನಂತರ, ಲೆಫ್ಟಿನೆಂಟ್ ಜನರಲ್ ಸಿಂಗ್ ಅವರು ಶ್ರೀನಗರದಲ್ಲಿ ನಡೆದ ಕೋರ್ ಗ್ರೂಪ್ ಆಫ್ ಇಂಟೆಲಿಜೆನ್ಸ್ ಮತ್ತು ಸೆಕ್ಯುರಿಟಿ ಏಜೆನ್ಸಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಈ ವೇಳೆ ಯಾವುದೇ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಿರುವಂತೆ, ಕಾರ್ಯಾಚರಣೆಯ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಭದ್ರತಾ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಸಂಗತಿಗಳ ಬಗ್ಗೆ ಪರಿಶೀಲನೆಗಳನ್ನು ನಡೆಸಿದ್ದಾರೆ.
ಶಾಂತಿ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಸಿಂಗ್ ಹೇಳಿದ್ದಾರೆ ಎಂದು ಉಧಂಪುರ ಮೂಲದ ಸೇನಾಧಿಕಾರಿಗಳು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.