ನಿನ್ನೆ ಐತಿಹಾಸಿಕ ದಿನವಾಗಿತ್ತು, ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾಸ್ಟರ್ಸ್ಟ್ರೋಕ್ ಘೋಷಣೆಯ ಮೂಲಕ ಹೊಡೆದುರುಳಿಸಿದರು.
ನನಗೆ ಬುದ್ಧಿ ತಿಳಿದಾಗಿನಿಂದ ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಹೇಳುತ್ತಾ ಬರಲಾಗುತ್ತಿದ್ದ ಒಂದು ಸಂಗತಿಯೆಂದರೆ, ಕಾಶ್ಮೀರ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು. ಒಂದಲ್ಲ ಒಂದು ವಿಷಯಕ್ಕೆ ಸದಾ ಪ್ರತಿಭಟನೆ, ದೊಂಬಿಗಳನ್ನು ನಡೆಸುತ್ತಿದ್ದ ಪರಿಸರದಲ್ಲಿ ನಾವು ಬೆಳೆದು ಬಂದೆವು. ಸರ್ಕಾರಗಳ ಅಸಮರ್ಥತೆಯು ದುಷ್ಕರ್ಮಿಗಳ ಅಟ್ಟಹಾಸವನ್ನು ವಿಪರೀತ ಮಟ್ಟಕ್ಕೆ ಕೊಂಡೊಯ್ದಿತ್ತು. ಕಾನೂನುಗಳಿಗೆ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಅವರುಗಳು ಬಂದಿದ್ದರು.
ಸರ್ಕಾರಕ್ಕೆ ಬದ್ಧತೆ, ಆಶಯವಿದ್ದರೆ ಏನೂ ಅಸಾಧ್ಯವಲ್ಲ ಎಂಬುದನ್ನು ಕಳೆದ ಕೆಲವು ದಿನಗಳಿಂದ ನಿಮ್ಮ ಸರ್ಕಾರ ತೆಗೆದುಕೊಂಡ ನಿಖರವಾದ ಯೋಜಿತ ಕ್ರಮಗಳು ಸಾಬೀತುಪಡಿಸಿ ತೋರಿಸಿದೆ. ಪ್ರಧಾನಿ ಮತ್ತು ಅವರ ಸರ್ಕಾರ ಸಮಸ್ಯೆಯನ್ನು ಸರಿಪಡಿಸಲು ಬದ್ಧತೆಯ ನಿರ್ಧಾರವನ್ನು ತೆಗೆದುಕೊಂಡರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಇಂದು ಸಾಬೀತಾಗಿದೆ. ಇಂದಿನ ನಿಮ್ಮ ಸರ್ಕಾರ ತೋರಿಸಿದ ಅರ್ಧದಷ್ಟು ಬದ್ಧತೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ತೋರಿಸಿದ್ದರೆ ಬಹುಶಃ ನಮ್ಮಂತಹ ಅನೇಕ ಕಾಶ್ಮೀರಿ ಪಂಡಿತರು ಸುಮಾರು ಮೂರು ದಶಕಗಳಿಂದ ತಮ್ಮ ಮನೆಗಳಿಂದ ದೂರವಿರುವ ಅನಿವಾರ್ಯತೆ ಇರುತ್ತಿರಲಿಲ್ಲ.
ನಿಮ್ಮ ನಿರ್ಧಾರವನ್ನು ಹಿಂದೂಗಳ ಪರ ಎಂದು ತಳ್ಳಿಹಾಕುವವರು ಇದ್ದಾರೆ, ಆದರೆ ನನ್ನ ನಿರ್ಗತಿಕ ಸಮುದಾಯದ ಬಗ್ಗೆ ಒಂದು ರಾಷ್ಟ್ರವಾಗಿ ಭಾರತವು ಜವಾಬ್ದಾರಿಯನ್ನು ಹೊಂದಿದೆ ಎಂದು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ, ಅವರೆಂದೂ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದವರಲ್ಲ. ನಮ್ಮ ಧರ್ಮದ ಕಾರಣದಿಂದಾಗಿಯೇ ನಮ್ಮನ್ನು ನಮ್ಮ ನೆಲದಲ್ಲಿ ಬೇಟೆಯಾಡಲಾಗಿದೆ ಎಂಬ ಅಂಶವನ್ನು ತಮ್ಮನ್ನು ತಾವು ಜಾತ್ಯತೀತ ಎಂದು ಕರೆದುಕೊಳ್ಳುವವರು ಯಾಕೆ ನಿರ್ಲಕ್ಷ್ಯ ಮಾಡಿದರು ಎಂದು ಪ್ರಶ್ನಿಸಲು ನಾನು ಬಯಸುತ್ತೇನೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯವು ಕೇವಲ ಕಾಶ್ಮೀರಿ ಮುಸ್ಲಿಮರನ್ನು ಒಳಗೊಂಡಿಲ್ಲ, ನಮ್ಮ ಅನೇಕ ‘ಬುದ್ಧಿಜೀವಿಗಳು’ ಮತ್ತು ಕಾರ್ಯಕರ್ತರು ಈ ಅಂಶವನ್ನು ನಂಬಲೇ ಬೇಕು! ಜಮ್ಮು ಮತ್ತು ಲಡಾಖ್ ಜನರು ಸುದೀರ್ಘ ಸಮಯದಿಂದ ಮಲತಾಯಿ ಧೋರಣೆಯನ್ನು ಅನುಭವಿಸಿದ್ದಾರೆ. ಲಡಾಖ್ಗೆ ಕೇಂದ್ರಾಡಳಿತ ಸ್ಥಾನಮಾನವನ್ನು ನೀಡುವ ಮೂಲಕ, ನಿಮ್ಮ ಸರ್ಕಾರವು ಶಾಂತಿಪ್ರಿಯ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ. ಲಡಾಖಿಗೆ ನೀವು ಕಾಶ್ಮೀರಿ ಕೇಂದ್ರಿತ ನೀತಿಗಳಿಂದ ಕಳೆದುಹೋಗಿರುವ ಗುರುತನ್ನು ನೀಡಿದ್ದೀರಿ.
ಜಮ್ಮುವು ಕಾಶ್ಮೀರವನ್ನು ಸಮತೋಲನಗೊಳಿಸುತ್ತದೆ ಮತ್ತು ಅದನ್ನು ಹಾಗೇ ಇರಿಸಲು ಸಹಾಯ ಮಾಡುತ್ತದೆ. ವಿವಾದಾತ್ಮಕ ಕಲಂ 370 ರ ಹಿಂತೆಗೆದುಕೊಳ್ಳುವಿಕೆಯು ಆರ್ಥಿಕ ಕುಸಿತದಲ್ಲಿರುವ ಕಣಿವೆಯಲ್ಲಿ ಪ್ರಗತಿ ಮತ್ತು ಅಭಿವೃದ್ಧಿಯನ್ನು ತರಲಿದೆ. ಉದ್ಯಮಿಗಳ ಮುಕ್ತ ಪ್ರವೇಶವು ಕಾಶ್ಮೀರದಲ್ಲಿ ಅಗತ್ಯವಿರುವ ಉದ್ಯೋಗ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಲಿದೆ. ಸಮಯ ಕಳೆಯುತ್ತಿದ್ದಂತೆ, ಭಾರತದ ಉಳಿದ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಿದ್ದಂತೆ, ಕಾಶ್ಮೀರದ ನೈಜತೆ ಮತ್ತೆ ಬಹುಸಾಂಸ್ಕೃತಿಕ ಮತ್ತು ಪ್ರಗತಿಪರವಾಗಿ ಪರಿವರ್ತನೆಗೊಳ್ಳಲಿದೆ. ಸ್ಥಳೀಯರು ತಮ್ಮದೇ ಆದ ಸಂಕುಚಿತ ವಿಧಾನವನ್ನು ಮೀರಿ ನೋಡುವುದನ್ನು ಕಲಿಯುತ್ತಾರೆ ಮತ್ತು ಹೊಸ ಆಲೋಚನೆಗಳು ಮತ್ತು ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ.
ಕಾಶ್ಮೀರಿ ಯುವಕರಿಗೆ ಇಂದು ಉತ್ತಮ ಆದರ್ಶಗಳು ಬೇಕಾಗಿವೆ, ಅವರು ತಮ್ಮ ಸ್ವಾರ್ಥಿ ಆಡಳಿತ ವರ್ಗದಿಂದ ಸೀಮಿತಗೊಳಿಸಲ್ಪಟ್ಟಿರುವ ಮಿತಿಗಳನ್ನು ಮೀರಿ ನೋಡಬೇಕಾದ ಅಗತ್ಯವಿದೆ.
ಆಶಾದಾಯಕವಾಗಿ, ಈ ಏಕೀಕರಣದ ಕ್ರಮವು ಅವರಿಗೆ ಧರ್ಮವನ್ನು ಮೀರಿ ನೋಡಲು ಮತ್ತು ಭಾರತದ ಉಳಿದ ಭಾಗಗಳೊಂದಿಗೆ ಹೊಂದಾಣಿಕೆ ಮಾಡಲು ಸಾಧ್ಯವಾಗುವಂತೆ ಮಾಡಲಿದೆ. ಕಾಶ್ಮೀರವನ್ನು ‘ಕಾಪಾಡಬೇಕು’ ಮತ್ತು ಪ್ರತ್ಯೇಕವಾಗಿಡಬೇಕು ಎಂದು ಇನ್ನೂ ವಾದಿಸುವವರು, ವಾಸ್ತವವಾಗಿ ಕಾಶ್ಮೀರಿಗಳನ್ನು ರಾಷ್ಟ್ರದ ಇತರ ಭಾಗಗಳೊಂದಿಗೆ ಆರೋಗ್ಯಕರವಾಗಿ ಒಗ್ಗೂಡುವುದನ್ನು ತಡೆಯುತ್ತಿದ್ದಾರೆ. ನಮ್ಮ ದೇಶ ಪ್ರತಿ ರಾಜ್ಯ/ಪ್ರದೇಶಗಳ ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಯಾವಾಗಲೂ ಗೌರವಿಸುವ ಮತ್ತು ಉತ್ತೇಜಿಸುವ ರಾಷ್ಟ್ರವಾಗಿದೆ. ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಯಾವುದೇ ವಿಶೇಷ ಸವಲತ್ತುಗಳು ಎಂದಿಗೂ ತಲುಪಿಲ್ಲ, ಆಗಿದ್ದರೂ ಯಾಕೆ ಕೆಲವು ಕಾಶ್ಮೀರಿಗಳು ವಿಶೇಷ ಸವಲತ್ತುಗಳನ್ನು ಬಯಸುತ್ತಾರೆ? ಕಣಿವೆಯಲ್ಲಿ ವಾಸಿಸುವ ಕಾಶ್ಮೀರಿಗಳನ್ನು ಅವರ ಹಕ್ಕಿನಿಂದ ವಂಚಿತರನ್ನಾಗಿಸಿ ಪ್ರತ್ಯೇಕಿಸುತ್ತಿರುವುದು ಯಾಕೆ? ಒಂದು ವೇಳೆ ಅದು ಧರ್ಮದ ಕಾರಣಕ್ಕಾಗಿಯೇ ಆಗಿದ್ದರೆ, ಕಣಿವೆಯನ್ನು ರಾಷ್ಟ್ರದ ಉಳಿದ ಭಾಗಗಳೊಂದಿಗೆ ಸಂಯೋಜಿಸಲು ಅದಕ್ಕಿಂತಲೂ ಹೆಚ್ಚಿನದಾದ ಕಾರಣಗಳಿವೆ. ಜಾತ್ಯತೀತ ಭಾರತವು ಕೇವಲ ಧರ್ಮದ ಆಧಾರದ ಮೇಲೆ ಪ್ರತ್ಯೇಕವಾಗುವುದನ್ನು ಉತ್ತೇಜಿಸಬೇಕೇ? ನಮ್ಮ ಗೌರವಾನ್ವಿತ ಉದಾರವಾದಿಗಳು ಸಹ ಈ ವಿಷಯವನ್ನು ಒಪ್ಪುವುದಿಲ್ಲ ಎಂದು ನನಗೆ ಖಾತ್ರಿಯಿದೆ!
ಕಾಶ್ಮೀರಿ ಪಂಡಿತರಿಗೆ, ನಿನ್ನೆಯ ದಿನವು ಪವಾಡಕ್ಕಿಂತ ಕಡಿಮೆಯಲ್ಲ. ನಾವು ನಿಜವಾಗಿಯೂ ಭಾವಪರವಶರಾಗಿದ್ದೇವೆ, ಯಾಕೆಂದರೆ 29 ಸುದೀರ್ಘ ವರ್ಷಗಳಲ್ಲಿ ಮೊದಲ ಬಾರಿಗೆ, ಮನೆಯ ಕಡೆಗೆ ಹೋಗುವ ನಮ್ಮ ಮಾರ್ಗವನ್ನು ಮುಳ್ಳಿನಿಂದ ತೆರವುಗೊಳಿಸಲಾಗಿದೆ. ಜೀವಿತಾವಧಿಯಲ್ಲಿ ನಮ್ಮೂರಿಗೆ ಹಿಂದಿರುಗುವುದು ಸಾಧ್ಯ ಎಂಬ ನಂಬಿಕೆಯನ್ನು ನಾವು ತ್ಯಜಿಸಿದ್ದೆವು, ಆದರೆ ಪವಾಡ ನಡೆಯಿತು, ಶಾಂತಿಯುತ, ಪ್ರಗತಿಪರ ಮತ್ತು ಸ್ವಾಗತಾರ್ಹ ನಿರ್ಧಾರವನ್ನು ಕಾಶ್ಮೀರಕ್ಕಾಗಿ ತೆಗೆದುಕೊಳ್ಳಲಾಗಿದೆ. ಪ್ರಪಂಚದಾದ್ಯಂತದ ಜನರು ತಮ್ಮ ಜನ್ಮಸ್ಥಳಗಳಲ್ಲಿ ಸ್ವತಂತ್ರವಾಗಿ ವಾಸಿಸುವಂತೆಯೇ, ನಾವು ಕೂಡ ವಾಸಿಸುತ್ತೇವೆ ಎಂಬ ಆಸೆ ಚಿಗುರಿದೆ. ನಮ್ಮ ಮೂಲಗಳಿಗೆ ಮರಳಲು ಇನ್ನು ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ನಾನು ಸಕಾರಾತ್ಮಕವಾಗಿ ಭರವಸೆಯಿಂದ ಹೇಳುತ್ತೇನೆ. ಹೆಜ್ಜೆಗಳನ್ನು ನಮ್ಮ ಮೂಲದತ್ತ ಇಡಲು, ಒಮ್ಮೆ ವಾಸವಾಗಿದ್ದ ಸ್ಥಳದಲ್ಲಿ ಪುನರ್ವಸತಿ ಪಡೆಯಲು ಮತ್ತು ಅಲ್ಲಿ ಮತ್ತೆ ಜೀವನವನ್ನು ಪುನರಾರಂಭ ಮಾಡಲು ನನ್ನಂತಹ ಅನೇಕರಿಗೆ ನಿಮ್ಮ ಸಹಾಯ ಬೇಕು. ಇಂದಿನ ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ ನಮ್ಮ ಕಾಶ್ಮೀರವನ್ನು ಮುಂದೆ ಕೊಂಡೊಯ್ಯುವ ನಿಮ್ಮ ಯೋಜನೆಯನ್ನು ಬೆಂಬಲಿಸುವ ಅನೇಕರು ಜಗತ್ತಿನಾದ್ಯಂತ ನೆಲೆಸಿದ್ದಾರೆ. ನಮ್ಮ ಪ್ರೀತಿಯ ಕಣಿವೆಯನ್ನು ಭಯೋತ್ಪಾದನೆಯ ಪ್ರಪಾತದಿಂದ ಹೊರಗೆ ಕರೆದೊಯ್ಯುವ ಕಾರ್ಯದಲ್ಲಿ ನಿಮಗೆ ನಮ್ಮ ಬಲವಾದ ಬೆಂಬಲವಿದೆ.
ಒರ್ವ ಕಾಶ್ಮೀರಿಯಾಗಿ, ನಿನ್ನೆಯ ದಿನದಂದು ಗೃಹ ಸಚಿವರು ಘೋಷಿಸಿದ ನಿರ್ಣಾಯಕ ಮತ್ತು ದಿಟ್ಟ ಬದಲಾವಣೆಗಳ ನಿರ್ಧಾರವನ್ನು ನಾನು ಮತ್ತೊಮ್ಮೆ ಪ್ರಶಂಸಿಸುತ್ತೇನೆ. ಪ್ರಧಾನಿ ಮೋದಿ ಈ ಕ್ರಮಗಳನ್ನು ತೆಗೆದುಕೊಳ್ಳದೇ ಇರುತ್ತಿದ್ದರೆ ಜಮ್ಮು ಕಾಶ್ಮೀರದ ನಿರ್ಲಕ್ಷಿತ ಜನಸಂಖ್ಯೆಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿರಲಿಲ್ಲ ಎಂಬುದು ಪ್ರತಿಯೊಬ್ಬ ಕಾಶ್ಮೀರಿ ಪಂಡಿತನಿಗೂ ಗೊತ್ತಿದೆ.
ಬಣ್ಣಿಸಲಾಗದ ಕೃತಜ್ಞತೆಯೊಂದಿಗೆ,
ರೇಣುಕಾ ಧಾರ್
(ಮೂಲ ನೆಲೆಗೆ ತೆರಳುವುದನ್ನು ನಿಮ್ಮಿಂದ ಸಾಧ್ಯವಾಗಿಸಿಕೊಂಡ ಕಾಶ್ಮೀರಿ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.