ಹೈದರಾಬಾದ್: ಭಿಕ್ಷಾಟನೆ, ಬಾಲಕಾರ್ಮಿಕತನ ಮುಂತಾದವುಗಳಿಂದ ಸುಮಾರು 3,914 ಮಕ್ಕಳನ್ನು ಈ ವರ್ಷ ತೆಲಂಗಾಣದಲ್ಲಿ ರಕ್ಷಣೆ ಮಾಡಲಾಗಿದೆ ಮತ್ತು ಪೊಲೀಸರು 478 ಪ್ರಕರಣಗಳನ್ನು ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವ ಸಲುವಾಗಿ ಇಲ್ಲಿನ ಪೊಲೀಸ್ ಇಲಾಖೆಯು ‘ಆಪರೇಶನ್ ಮುಸ್ಕಾನ್’ ಅನ್ನು ಆರಂಭಿಸಿದೆ.
ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಸ್ವಾತಿ ಲಕ್ರಾ ಅವರ ಪ್ರಕಾರ, “ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಮತ್ತು ಜೀತಪದ್ಧತಿ, ಸಣ್ಣ ಕೈಗಾರಿಕೆಗಳು, ಭಿಕ್ಷಾಟನೆ ಇತ್ಯಾದಿಗಳಲ್ಲಿ ತೊಡಗಿರುವ ಮಕ್ಕಳನ್ನು ಮುಕ್ತಗೊಳಿಸಲು ನಾವು ಜುಲೈ ತಿಂಗಳಲ್ಲಿ ಆಪರೇಷನ್ ಮುಸ್ಕಾನ್ ಅನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಾಚರಣೆ ಆರಂಭವಾದಾಗಿನಿಂದ ಪೊಲೀಸ್ ತಂಡಗಳು ನಿರ್ಗತಿಕ ಮಕ್ಕಳನ್ನು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಧಾರ್ಮಿಕ ಸ್ಥಳಗಳು, ಸಂಚಾರ ಜಂಕ್ಷನ್ಗಳು, ಫುಟ್ಪಾತ್ಗಳು ಇತ್ಯಾದಿಗಳಿಂದ ರಕ್ಷಣೆ ಮಾಡಿವೆ. ಒಟ್ಟು 3914 ಮಕ್ಕಳನ್ನು ರಕ್ಷಿಸಲಾಗಿದೆ, ಇದರಲ್ಲಿ 3453 ಅಪ್ರಾಪ್ತ ಬಾಲಕರು ಮತ್ತು 461 ಅಪ್ರಾಪ್ತ ಬಾಲಕಿಯರಾಗಿದ್ದಾರೆ” ಎಂದಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಬಾಲ ಕಾರ್ಮಿಕ ಅಪರಾಧವನ್ನು ಪುನರಾವರ್ತಿತವಾಗಿ ಮಾಡಿದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ದತ್ತಾಂಶವನ್ನು ಸಂಗ್ರಹಿಸಲು ನಿರ್ದಿಷ್ಟವಾದ ದೈನಂದಿನ ಪರಿಸ್ಥಿತಿಗಳ ವರದಿಗಳನ್ನು ರೂಪಿಸಲಾಗುತ್ತಿದೆ ಮತ್ತು ಬಾಲ ಕಾರ್ಮಿಕ ಪ್ರಕರಣಗಳು ನಡೆಯುವ ಸ್ಥಳಗಳನ್ನು ಅಥವಾ ಮಕ್ಕಳು ಕೆಟ್ಟ ಪರಿಸ್ಥಿತಿಯಲ್ಲಿರುವ ಸ್ಥಳಗಳನ್ನು ಪತ್ತೆ ಹಚ್ಚಲು ಈ ದತ್ತಾಂಶಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿದೆ. ನಮ್ಮ ರಕ್ಷಣಾ ತಂಡಗಳು ಟಿಎಸ್ ಕಾಪ್ ಮತ್ತು DARPAN ನಲ್ಲಿ ಮುಖ ಗುರುತಿಸುವಿಕೆ ಅಪ್ಲಿಕೇಶನ್ಗಳನ್ನು ಬಳಸಿದ್ದವು. ಡಾಟಾ ಬೇಸ್ ಅನ್ನು ಅಭಿವೃದ್ಧಿಪಡಿಸುವುದರೊಂದಿಗೆ, ಬಾಲ ಕಾರ್ಮಿಕರ ಪ್ರಕರಣಗಳನ್ನು ಒಳಗೊಂಡ ಪುನರಾವರ್ತಿತ ಘಟನೆಗಳ ಮೇಲೆ ನಿಗಾ ಇಡಲಾಗುತ್ತಿದೆ” ಎಂದು ಮಾಹಿತಿಯನ್ನು ನೀಡಿದ್ದಾರೆ.
ತೆಲಂಗಾಣ ಪೊಲೀಸರ ಪ್ರಕಾರ, ಈ ವರ್ಷ ರಕ್ಷಿಸಲ್ಪಟ್ಟ 3914 ಮಕ್ಕಳಲ್ಲಿ 1648 ಮಕ್ಕಳನ್ನು ಮತ್ತೆ ಅವರ ಹೆತ್ತವರೊಂದಿಗೆ ಸೇರಿಸಲಾಗಿದ್ದು, 2266 ಮಕ್ಕಳನ್ನು ರಕ್ಷಣಾ ಆಶ್ರಯಗಳಲ್ಲಿ ಇಡಲಾಗಿದೆ.
ಸೆಕ್ಷನ್ 374 ಐಪಿಸಿ, 353 ಐಪಿಸಿ ಸೆಕ್ಷನ್ 26, 79 ಬಾಲಾಪರಾಧಿ ನ್ಯಾಯ ಕಾಯ್ದೆ 2015 ಮತ್ತು ಸೆಕ್ಷನ್ 14 (1) ರ ಅಡಿಯಲ್ಲಿ ಬಂಧಿತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನ) ಕಾಯ್ದೆ 1976 ರ ಸೆಕ್ಷನ್ 16, 17, 18 ರ ಅಡಿಯಲ್ಲಿ, ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರ 18 (1) ಅಡಿಯಲ್ಲಿ ಮಕ್ಕಳ ಮೇಲಿನ ಅಪರಾಧಕ್ಕೆ ಸಂಬಂಧಿಸಿದ 478 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.