ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಂದಿಗೆ ಬದಲಾಗುವ ಋತುಋತುಗಳೊಡನೆ ನಮ್ಮ ಸರ್ವತೋಮುಖ ಅಭಿವೃದ್ಧಿಯ ಸಾಧಕವೆನಿಸಿವೆ. ಮಾನವನನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ನಮ್ಮ ದೇಶದ ಹಬ್ಬಗಳು ನಮ್ಮ ಬದುಕಿನ ಮೌಲ್ಯಗಳಿಗೆ ಪೂರಕ.
ಭಾರತದ ಹಲವಾರು ಪ್ರದೇಶಗಳಲ್ಲಿ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯನ್ನು ನಾಗ ಪಂಚಮಿ ಎನ್ನುವ ವಿಶೇಷ ಹಬ್ಬದ ದಿನವನ್ನಾಗಿ ಆಚರಿಸುವ ಪದ್ಧತಿಯಿದೆ. ನಾಗ ದೇವತೆಯ ಪೂಜೆಯೊಂದಿಗೆ ಅಣ್ಣ-ತಂಗಿಯರ ವಿಶೇಷ ಅನುಬಂಧದ ದಿನವನ್ನಾಗಿ ಎಲ್ಲೆಡೆ ಆಚರಿಸಲ್ಪಡುವುದು ವಿಶೇಷ.
ಪೂಜೆಯ ಅಂಗವಾಗಿ ದೇವಸ್ಥಾನ ಮತ್ತು ಹುತ್ತಗಳಿಗೆ ಭೇಟಿ ನೀಡಿ ಎಲ್ಲಾ ಕೆಡುಕುಗಳಿಂದ ನಮ್ಮನ್ನು ರಕ್ಷಿಸೆಂದು ಜನರು ಹುತ್ತಗಳಿಗೆ ಹಾಲೆರೆಯುವುದು ಕಂಡು ಬರುತ್ತದೆ. ನಮ್ಮ ಪುರಾಣಗಳಲ್ಲಿ ಈ ದಿನದ ಪ್ರಾಮುಖ್ಯತೆ ಅನೇಕ ಕಥೆಗಳಲ್ಲಿ ಮತ್ತು ಜನಪದ ಕಥನಗಳಲ್ಲಿ ಉಲ್ಲೇಖವಿದೆ.
ವಿಷ್ಣುವಿನೊಡನೆ ಕ್ಷೀರಸಾಗರದಲ್ಲಿ ಸದಾ ನೆಲೆಸಿರುವ ಸಹಸ್ರ ಹೆಡೆಗಳ ಆದಿಶೇಷ, ಶಿವನ ಆಭರಣವಾದ ನಾಗ, ಶ್ರೀರಾಮನ ಸಹೋದರ ಆದಿಶೇಷಾಂಶನಾದ ಲಕ್ಷ್ಮಣ, ಶ್ರೀಕೃಷ್ಣನಿಗೆ ಶರಣಾದ ಕಾಲಿಯಾ ನಾಗ, ಅನಂತ, ವಾಸುಕಿ, ಕಂಬಲ, ತಕ್ಷಕ, ಶಂಖಪಾಲ ಮುಂತಾದ ಅನೇಕ ಜಾತಿಗಳ ನಾಗಸಂತತಿ ನಮ್ಮ ಸನಾತನ ಸಂಸ್ಕೃತಿಯ ಭಾಗವಾಗಿದೆ.
ಒಂದಾನೊಂದು ಊರಿನಲ್ಲಿ ತನ್ನ ನಾಲ್ಕು ಜನ ಅಣ್ಣಂದಿರೊಂದಿಗೆ ವಾಸವಗಿದ್ದ ಹೆಣ್ಣು ಮಗಳೊಬ್ಬಳು ನಾಗರ ಪಂಚಮಿಯ ಪೂಜೆಯಲ್ಲಿದ್ದಾಗ ನಾಗರ ಹಾವೊಂದು ಅವಳ ಅಣ್ಣಂದಿರನ್ನು ಬಲಿ ತೆಗೆದುಕೊಂಡಾಗ ನಾಗನ ಭಕ್ತೆಯಾಗಿದ್ದು ದುಖದಲ್ಲಿ ಮುಳುಗಿದ್ದ ಅವಳ ನೋವನ್ನು ನೋಡಲಾಗದೆ ನಾಗರ ಹಾವು ಅವಳ ಅಣ್ಣಂದಿರಿಗೆ ಮರಳಿ ಜೀವದಾನ ಮಾಡಿತೆಂಬ ಕಥೆಯಿದೆ.
ಅಂತೆಯೇ ಜನಮೇಜಯ ರಾಜನ ತಂದೆ ಪರೀಕ್ಷಿತ ರಾಜ ಸರ್ಪವೊಂದರ ನಿಮಿತ್ತ ಅಸುನೀಗಿ ಮೋಕ್ಷ ಪಡೆದುದನ್ನು ಅರಿತ ಜನಮೇಜಯ ಸರ್ಪಯಾಗವನ್ನು ನೆರವೇರಿಸಿ ನಾಗರ ಪಂಚಮಿಯಂದು ಸಮಾಪ್ತಿಗೊಳಿಸಿದ ಎನ್ನುವ ನಂಬಿಕೆಯಿದೆ.
ಇಂತಹ ಎಲ್ಲಾ ಆದಿ ಕಾಲದ ನಂಬಿಕೆಗಳೊಂದಿಗೆ ಆಚಾರ ಪದ್ಧತಿಯಲ್ಲಿ ನಾಗರ ಪಂಚಮಿಯಂದು ಉಪವಾಸ, ವ್ರತ ಮತ್ತು ನಿಯಮಗಳ ಪಾಲನೆ ನಡೆಯುತ್ತದೆ.
ನಾಗನ ಪೂಜೆ, ಹುತ್ತಕ್ಕೆ ಹಾಲೆರೆಯುವುದು ನಮ್ಮ ಪರಂಪರೆಯ ದ್ಯೋತಕ, ಆದರೆ ನಮ್ಮ ಬದುಕಲ್ಲಿ ಪ್ರಕೃತಿಯೊಡನೆ ನಮಗಿರುವ ಅನುಬಂಧದ ದ್ಯೋತಕ ಈ ಭೂಮಿಯ ಎಲ್ಲಾ ಜೀವಿಗಳೊಂದಿಗೂ ನಮಗೆ ಅನ್ಯೋನ್ಯ ಭಾವವಿರಬೇಕೆನ್ನುವುದು ಸೂಕ್ತ.
ವೈಜ್ಞಾನಿಕ ನಿಲುವಿನಲ್ಲಿ ಯೋಚಿಸಿದಾಗ ಹುತ್ತಕ್ಕೆ ಹಾಲೆರೆಯುವುದು, ಹಾವು ಹಾಲನ್ನು ಕುಡಿಯುವುದು ಮುಂತಾದವನ್ನು ವಿಜ್ಞಾನ ಒಪ್ಪುವುದಿಲ್ಲ. ಎಲ್ಲಕ್ಕಿಂತಾ ಮುಖ್ಯವಾಗಿ ನಮ್ಮ ಪರಿಸರದಲ್ಲಿ ವಾಸಿಸುವ ಜೀವಿಗಳಿಗೆ ಉಪದ್ರವ ನೀಡುವುದು ತರವಲ್ಲ. ಲೋಕಹಿತವನ್ನು ಬಯಸುವ ನಾವು ಯಾವುದೇ ಕಾರಣಕ್ಕೂ ನಮ್ಮ ಪರಿಸರದಲ್ಲಿರುವು ಜೀವಜಂತುಗಳಿಗೆ ಹಾನಿ ಮಾಡಬಾರದು.
ನಾಗರಪಂಚಮಿಯಂದು ಹುತ್ತಗಳ ಬಳಿ ತೆರಳಿ ಹಾಲೆರೆಯುವುದು ಹಬ್ಬದ ಆಚರಣೆ. ಆದರೆ ಅಲ್ಲಿನ ಸುತ್ತ ಇರುವ ಪರಿಸರಕ್ಕೆ ಹಾನಿ ಮಾಡಬಾರದಲ್ಲವೇ? ನಿಜವಾದ ಹಾವನ್ನು ಕಂಡರೆ ಹೆದರುವ ಅಥವಾ ಕೊಲ್ಲಲು ಮುಂದಾಗುವ ನಾವು ಮಾಡುವುದು ಜೀವಹಾನಿಯಲ್ಲವೇ? ಸಾರ್ವಜನಿಕ ಉದ್ಯಾನವನಗಳಲ್ಲಿ, ದೇವಸ್ಥಾನಗಳ ಸುತ್ತಾ ಇರುವ ಹುತ್ತಗಳ ಬಳಿ ಹಬ್ಬದ ನಂತರ ಕಾಣಬರುವ ಪರಿಸರಕ್ಕೆ ಹಾನಿಯೆಸಗುವ ಪ್ಲಾಸ್ಟಿಕ್ ಮತ್ತು ವಿನಾಶಕಾರಿ ತ್ಯಾಜ್ಯಗಳು ಕಾಣಬರುವುದು ಅತಿ ಆತಂಕಕಾರಿ ವಿಚಾರ.
ಅನೇಕ ಪ್ರಜ್ಞಾವಂತ ಆಸ್ತಿಕ ಬಂಧುಗಳು ತಮ್ಮ ಮನೆಯಲ್ಲಿರುವ ಬೆಳ್ಳಿ ನಾಗರಕ್ಕೆ ಆಚರಣೆಯ ಕುರುಹಾಗಿ ಹಾಲೆರೆಯುತ್ತಾರೆ. ಮನೆಯಲ್ಲಿ ಭಕ್ತಿಯಿಂದ ನಾಗನನ್ನು ಪೂಜಿಸಿ ಅಣ್ಣ ತಂಗಿಯರು ಒಡಗೂಡಿ ಅನಾಥ ಮಕ್ಕಳಿಗೆ, ವೃದ್ಧರಿಗೆ ಮತ್ತು ವಿಕಲಾಂಗರಿಗೆ ಅದೇ ಹಾಲನ್ನು ಪ್ರಸಾದದ ರೂಪದಲ್ಲಿ ಕೊಟ್ಟಲ್ಲಿ ಪರಿಸರಕ್ಕೆ ಹಾನಿಯೂ ಆಗದು, ಹಬ್ಬವೂ ಸಾರ್ಥಕವೆನಿಸುವುದು.
ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಎಂದು ಬಸವಣ್ಣನವರು ನುಡಿದಿರುವುದು ಇದಕ್ಕೇ ಅಲ್ಲವೇ?
ಹಬ್ಬಗಳ ಆಚರಣೆ ಬಾಹ್ಯವಾಗಿರದೇ ಸೂಕ್ಷ್ಮವಾಗಿ ಅಥವಾ ಸೂಚ್ಯವಾಗಿಯೂ ಆಚರಿಸಬಹುದು.
ನಾಗರ ಪಂಚಮಿ ಹಬ್ಬ ಅಥವಾ ಇನ್ಯಾವುದೇ ಹಬ್ಬಗಳು ನಿಜವಾದ ಅರ್ಥ ಪಡೆಯುವುದು ಪ್ರಾಕೃತಿಕವಾಗಿ ಮನುಷ್ಯ ಸ್ವಾರ್ಥರಹಿತ ಬದುಕನ್ನು ಜೀವಿಸಿದಾಗಲೇ! ನಮ್ಮ ಸಂಸ್ಕೃತಿಯ ಆವಿಷ್ಕಾರ ಮತ್ತು ಪುನಶ್ಚೇತನದ ಶಕ್ತಿ ಯಿರುವುದು ನಮ್ಮ ಅರಣ್ಯಗಲ್ಲಿ ಮತ್ತು ನಮ್ಮ ತಪೋವವನಗಳಲ್ಲಿ.
ದಿನನಿತ್ಯ ನಮಗಾಗುವ ಕಾರುಣ್ಯಭಾವವನ್ನು ಮರೆಸುವ ಅತಿಯಾದ ಆಸೆ, ಸ್ಪರ್ಧೆ ಮತ್ತು ಸಂಘರ್ಷಗಳ ತುಮುಲಗಳನ್ನು ಹೋಗಲಾಡಿಸಿ ನಿರಂತರ ಶಾಂತಿಯನ್ನು ಪ್ರಕೃತಿ ತರಬಲ್ಲ ಶಕ್ತಿಗಿರುವುದು ಪ್ರಕೃತಿಗೆ ಮಾತ್ರ!
ಭಾರತದ ಪ್ರಾಚೀನ ಸಂಸ್ಕೃತಿಯ ಹಿರಿಮೆಯೆಂದರೆ ಮನುಕುಲದ ಆವಿಷ್ಕಾರಕ್ಕೆ ಮೂಲ ನಮ್ಮ ವೃಕ್ಷಸಂಪತ್ತು ಮತ್ತು ಜಲಸಂಪತ್ತು. ನಮ್ಮ ಅರಣ್ಯಗಳಿಂದ ಪ್ರಕೃತಿಯಿಂದ ನಾವು ಕಲಿಯ ಬೇಕಾದದ್ದು ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇರುವುದರಿಂದ ಮತ್ತೊಂದು ಜೀವಿಯ ಬದುಕುವ ಹಕ್ಕನ್ನು ಕಸಿದುಕೊಳ್ಳಬಾರದು. ಯಾವುದೇ ಘರ್ಷಣೆಗಳಿಲ್ಲದೆ ಹೇಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಿ ಸಹಬಾಳ್ವೆಯೊಂದಿಗೆ ಪರಿಪೂರ್ಣತೆಯತ್ತ ಸಾಗಬಹುದು.
ವಿಲಾಸೀ ಭೋಗ ಜೀವನದತ್ತ ಸಾಗುವ ಮನುಷ್ಯ ಆಧುನಿಕತೆಯ ಸೋಗಿನಲ್ಲಿ ಪ್ರಕೃತಿಯಿಂದ ದೂರವಾದ ಮನುಷ್ಯ ಕಾಡುಗಳನ್ನು ರಕ್ಷಿಸದೇ ಕಾಡ ಕಡಿದು ನಾಡ ಕಟ್ಟಿದನು. ತಮ್ಮ ನೆಲೆಯನ್ನು ಕಳೆದುಕೊಂಡ ಪ್ರಾಣಿಗಳು, ಸರ್ಪಗಳು ಮತ್ತು ಅನೇಕ ಪ್ರಭೇದಗಳು ಕಾಣೆಯಾಗುತ್ತಾ ಹೋದವು. ಇದೇ ಕಾರಣದಿಂದ ನಮ್ಮ ನೆಲ, ಜಲ ಮತ್ತು ವಾತಾವರಣದ ಸಂರಕ್ಷಣೆಯ ದೃಷ್ಟಿಯಿಂದ ನಾವು ಹಬ್ಬಗಳ ಪರಂಪರೆಯನ್ನು ಕೈಬಿಡದೇ ಆಚರಿಸಿದಲ್ಲಿ ನಮ್ಮ ಬದುಕು ಸಾರ್ಥಕವಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.