ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಸಂಖ್ಯೆಯನ್ನು ಹೆಚ್ಚಳಗೊಳಿಸುವ ಸಲುವಾಗಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡನೆಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಯನ್ನು ನೀಡಿದೆ.
ಈ ಮಸೂದೆಯು ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಧೀಶರುಗಳ ಸಂಖ್ಯೆಯನ್ನು 31 ರಿಂದ 34 ಕ್ಕೆ ಏರಿಸಲು ಅನುಮತಿಯನ್ನು ನೀಡಲಿದೆ. ಇತ್ತೀಚಿಗಷ್ಟೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು, ಸುಪ್ರೀಂಕೋರ್ಟ್ನಲ್ಲಿನ ನ್ಯಾಯಾಧೀಶರುಗಳ ಸಂಖ್ಯೆಯನ್ನು ಹೆಚ್ಚಳಗೊಳಿಸುವ ಅಗತ್ಯವಿದೆ ಎಂದಿದ್ದರು.
2009ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಸಂಖ್ಯೆಯನ್ನು 26ರಿಂದ 31ಕ್ಕೆ ಏರಿಸಲಾಗಿತ್ತು. ಆದರೂ ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿಯುತ್ತಿವೆ. ಮೋದಿಗೆ ಬರೆದ ಪತ್ರದಲ್ಲಿ ಗೋಗಯ್ ಅವರು, ಸುಪ್ರೀಂಕೋರ್ಟ್ನಲ್ಲಿ 58 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ ಎಂದು ಉಲ್ಲೇಖಿಸಿದ್ದರು. ನ್ಯಾಯಾಧೀಶರುಗಳ ಸಂಖ್ಯೆಯನ್ನು ಏರಿಸುವುದರಿಂದ ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದರು.
ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ರಿಂದ 65 ವರ್ಷಕ್ಕೆ ಹೆಚ್ಚಿಸುವ ಸಲುವಾಗಿ ಸಾಂವಿಧಾನಿಕ ತಿದ್ದುಪಡಿಯನ್ನು ಮಾಡುವಂತೆಯೂ ಗೋಗಯ್ ಕೇಳಿಕೊಂಡಿದ್ದರು.
ಜುಲೈನಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು. ಸುಪ್ರೀಂ ಕೋರ್ಟ್ ಮಾತ್ರವಲ್ಲದೆ ಕೆಳ ನ್ಯಾಯಾಲಯಗಳಲ್ಲಿಯೂ ಕೂಡ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದರು. ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್ನ ಹೆಚ್ಚುವರಿ ಕಟ್ಟಡ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.