ಪಾಕಿಸ್ಥಾನ ಎಂದರೆ ಸುಳ್ಳು ಹೇಳುವ, ಭಯೋತ್ಪಾದಕರನ್ನು ನಿರಂತರವಾಗಿ ಉತ್ಪಾದಿಸಿ ಭಾರತ ಮತ್ತಿತರ ದೇಶಗಳಿಗೆ ರಪ್ತು ಮಾಡುವ ಕುಖ್ಯಾತ ದೇಶ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಜಗಜ್ಜಾಹೀರಾಗಿರುವ ಸಂಗತಿ. ಇಡೀ ಜಗತ್ತೇ ಪಾಕಿಸ್ಥಾನ ಸುಳ್ಳು ಹೇಳುವ, ಉಗ್ರರನ್ನು ಉತ್ಪಾದಿಸುವ ದೇಶವೆಂದು ಸಾರಿದರೂ ಅಮೆರಿಕ, ಚೀನಾ ಅಷ್ಟಾಗಿ ಅದನ್ನು ಒಪ್ಪಿರಲಿಲ್ಲ. ಆದರೆ ಅಮೆರಿಕದ ಹೃದಯ ಭಾಗದಲ್ಲಿ ಬಿನ್ ಲಾಡೆನ್ ಉಗ್ರ ದಾಳಿ ನಡೆಸಿ, ಅಮೆರಿಕದ ಆತ್ಮಾಭಿಮಾನಕ್ಕೆ ಪೆಟ್ಟುಕೊಟ್ಟು ಪಾಕಿಸ್ಥಾನದಲ್ಲಿ ಆಶ್ರಯ ಪಡೆದ ಬಳಿಕ, ಅಮೆರಿಕ ಕೂಡ ಪಾಕಿಸ್ಥಾನವನ್ನು ನಖಶಿಖಾಂತ ದ್ವೇಷಿಸತೊಡಗಿದ್ದು ಹಳೆಯ ವಿಷಯ. ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ಖಾನ್ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಸಂಪ್ರದಾಯದಂತೆ ಆತನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಥವಾ ಅವರ ಸರ್ಕಾರದಿಂದ ಯಾವುದೇ ಅಧಿಕೃತ ಸ್ವಾಗತ ದೊರೆಯಲೇ ಇಲ್ಲ. ಕೊನೆಗೆ ಅಮೆರಿಕದಲ್ಲಿರುವ ಪಾಕ್ ರಾಯಭಾರಿ ವಿಮಾನ ನಿಲ್ದಾಣಕ್ಕೆ ಬಂದು ಇಮ್ರಾನ್ ಖಾನ್ ಅವರನ್ನು ಸ್ವಾಗತಿಸಬೇಕಾಯಿತು. ಪಾಕ್ ಪ್ರಧಾನಿ ಅಥವಾ ಅಧ್ಯಕ್ಷರು ಅಥವಾ ಆ ದೇಶದ ಸರ್ಕಾರಿ ಅಧಿಕಾರಿಗಳು ಈಗ ಯಾವುದೇ ದೇಶಕ್ಕೆ ಹೋದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ. ಇಂತಹ ದಯನೀಯ ಸ್ಥಿತಿಗೆ ಕಾರಣ ಮಾತ್ರ ಪಾಕಿಸ್ಥಾನವನ್ನು ಇದುವರೆಗೆ ಆಳಿದ, ತಪ್ಪು ಹೆಜ್ಜೆಯಿಟ್ಟ ನಾಯಕರೇ ಎಂಬುದು ಸ್ಪಷ್ಟಾತಿಸ್ಪಷ್ಟ.
ಭಾರತದಲ್ಲಿ ಸಂಭವಿಸಿದ ಬಹುತೇಕ ಉಗ್ರ ಕೃತ್ಯಗಳ ಹಿಂದೆ ಇದ್ದಿದ್ದು ಪಾಕಿಸ್ಥಾನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು. ಈ ಸತ್ಯವನ್ನು ಭಾರತವು ಸಮಯ ಸಂದರ್ಭ ದೊರೆತಾಗಲೆಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳುತ್ತಲೇ ಬಂದಿದೆ. ತನ್ನ ಈ ವಾದಕ್ಕೆ ಪೂರಕವಾಗಿ ಸಾಕಷ್ಟು ಬಲವಾದ ಸಾಕ್ಷ್ಯಗಳನ್ನು ಒದಗಿಸುತ್ತಲೇ ಬಂದಿದೆ. ಇಷ್ಟಾದರೂ ಪಾಕಿಸ್ಥಾನ ಮಾತ್ರ ತನ್ನ ನೆಲದಲ್ಲಿ ಯಾವುದೇ ಉಗ್ರರಿಲ್ಲ, ಉಗ್ರ ಸಂಘಟನೆಗಳೂ ಇಲ್ಲ ಎಂದು ವಾದಿಸುತ್ತಲೇ ಬಂದಿತ್ತು. ಪಾಕಿಸ್ಥಾನದ ಈ ವಿತಂಡವಾದ ಹಸೀ ಹಸಿ ಸುಳ್ಳಿನ ಕಂತೆ ಎಂಬುದು ಇಡೀ ಜಗತ್ತಿಗೂ ತಿಳಿದಿತ್ತು. ಹಾಗಾಗಿ ಯಾರೂ ಪಾಕಿಸ್ಥಾನದ ಈ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇರಲಿಲ್ಲ. ಪಾಕಿಸ್ಥಾನ ಹೇಳುವ ಸುಳ್ಳುಗಳು ಅಂತಾರಾಷ್ಟ್ರೀಯ ಸುಳ್ಳಿನ ಕಂತೆ ಎಂಬುದು ಇಡೀ ಜಗತ್ತಿಗೂ ತಿಳಿದಿತ್ತು. ಪಾಕಿಸ್ಥಾನ ಹೇಳುವ ಸುಳ್ಳುಗಳು ಅಂತಾರಾಷ್ಟ್ರೀಯ ವಲಯದಲ್ಲಿ ಯಾವುದೇ ಪರಿಣಾಮಗಳನ್ನೂ ಬೀರುತ್ತಿರಲಿಲ್ಲ.
ಆದರೆ ಏನಾಶ್ಚರ್ಯ! ಇದೇ ಮೊದಲ ಬಾರಿಗೆ, “ಪಾಕಿಸ್ಥಾನದಲ್ಲಿ ಉಗ್ರರಿದ್ದಾರೆ. ಉಗ್ರ ಸಂಘಟನೆಗಳೂ ಕಾರ್ಯಾಚರಿಸುತ್ತಿವೆ” ಎಂದು ಒಪ್ಪಿಕೊಳ್ಳುವ ಧೈರ್ಯವನ್ನು ಪಾಕ್ ಪ್ರಧಾನಿ ಇಮ್ರಾನ್ಖಾನ್ ತೋರಿದ್ದಾರೆ. ಅಮೆರಿಕ ಪ್ರವಾಸದಲ್ಲಿದ್ದ ಪಾಕ್ ಪ್ರಧಾನಿ ಇಮ್ರಾನ್ಖಾನ್, “ಪಾಕಿಸ್ಥಾನದಲ್ಲಿ ಸುಮಾರು 40 ಬೇರೆ ಬೇರೆ ಉಗ್ರ ಸಂಘಟನೆಗಳಿದ್ದು, 40 ಸಾವಿರ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಅಪಘಾನಿಸ್ಥಾನ ಅಥವಾ ಕಾಶ್ಮೀರದಲ್ಲಿ ಹೋರಾಡಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಹೇಳುವ ಮೂಲಕ ‘ಕಹಿಸತ್ಯ’ವನ್ನು ಬಯಲು ಮಾಡಿದ್ದಾರೆ. ಅಷ್ಟೇ ಅಲ್ಲ, ಅಲ್ ಖೈದಾ ಉಗ್ರ ನಾಯಕ ಬಿನ್ ಲಾಡೆನ್ ಪಾಕಿಸ್ಥಾನದಲ್ಲಿರುವ ಮಾಹಿತಿ ಅಲ್ಲಿನ ಸರ್ಕಾರಕ್ಕೆ ಇತ್ತು ಎಂಬ ಸತ್ಯವನ್ನೂ ಹೊರಹಾಕಿದ್ದಾರೆ. ನಮ್ಮಲ್ಲಿ ಮಕ್ಕಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಹಾಗಾಗಿ ಪಾಕ್ ಜನಸಂಖ್ಯೆ ಏರುತ್ತಿದೆ. ಆದರೆ ಯಾವುದೇ ಉಗ್ರರನ್ನು ನಾವು ಉತ್ಪಾದಿಸುತ್ತಿಲ್ಲ ಎಂದು ಹಿಂದಿನ ಅಧ್ಯಕ್ಷರು 2005 ರಲ್ಲಿ ಹೇಳಿಕೆ ನೀಡಿದ್ದರು. ಭಾರತದಲ್ಲಿ ನಡೆದ ಯಾವುದೇ ಭಯೋತ್ಪಾದಕ ಕೃತ್ಯಗಳಿಗೂ ತನಗೂ ಸಂಬಂಧವಿಲ್ಲವೆಂದೇ ಪಾಕ್ ಆಡಳಿತಗಾರರು ಹೇಳಿಕೊಂಡು ಬಂದಿದ್ದರು. ಇಡೀ ಜಗತ್ತೇ ತನ್ನ ಮಾತನ್ನು ನಂಬುವುದಿಲ್ಲವೆಂಬ ಅರಿವಾದಾಗ ಈಗ ಪಾಕ್ ಪ್ರಧಾನಿ ಇಮ್ರಾನ್ಖಾನ್ ಕೊನೆಗೂ ಸತ್ಯವನ್ನು ಅನಾವರಣಗೊಳಿಸಿ, ಪಾಕಿಸ್ಥಾನದ ನಿಜಬಣ್ಣವನ್ನು ತೆರೆದಿಟ್ಟಿದ್ದಾರೆ.
ಪಾಕಿಸ್ಥಾನದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಯಾರೇ ಪ್ರಧಾನಿಯಾದರೂ ಅವರೆಲ್ಲರೂ ಸೇನೆಯ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ. ಅದು ಜುಲ್ಫಿಕರ್ ಭುಟ್ಟೋ ಇರಲಿ, ಜಿಯಾ ಉಲ್ ಹಕ್ ಆಗಿರಲಿ, ಬೆನಜೀರ್, ನವಾಜ್ ಷರೀಫ್ ಯಾರೇ ಆಗಿದ್ದರೂ ಸೇನೆ ಹೇಳಿದಂತೆಯೇ ಕೇಳಬೇಕು. ಇಮ್ರಾನ್ ಖಾನ್ ಕೂಡ ಇದಕ್ಕೆ ಅಪವಾದವಲ್ಲ. ಆದರೆ ಪಾಕಿಸ್ಥಾನಕ್ಕೀಗ ಸತ್ಯ ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ, ಅಮೆರಿಕ, ಚೀನಾದಂತಹ ಬಲಾಢ್ಯ ರಾಷ್ಟ್ರಗಳಿಂದ ಹರಿದು ಬರುತ್ತಿದ್ದ ಅಪಾರ ಶಸ್ತ್ರಾಸ್ತ್ರ, ಕೋಟಿ ಕೋಟಿ ಹಣದ ಹರಿವು ಈಗ ನಿಂತು ಹೋಗಿವೆ. ಭಯೋತ್ಪಾದನೆಗೆ ಅಂಕುಶ ಹಾಕುವವರೆಗೆ ಯಾವುದೇ ಆರ್ಥಿಕ, ಶಸ್ತ್ರಾಸ್ತ್ರ ಮತ್ತಿತರ ನೆರವು ನೀಡುವುದಿಲ್ಲವೆಂದು ಅವೆಲ್ಲ ಸ್ಪಷ್ಟಪಡಿಸಿವೆ. ಪರಿಣಾಮವಾಗಿ ಪಾಕಿಸ್ಥಾನದಲ್ಲೀಗ ತೀವ್ರ ಆರ್ಥಿಕ ಹಿನ್ನಡೆ. ವ್ಯಾಪಾರ- ವ್ಯವಹಾರ ಸ್ಥಗಿತ. ಜನರಲ್ಲಿ ಹತಾಶೆ, ಆಕ್ರೋಶದ ಭುಗಿಲು. ಇತ್ತ ಉಗ್ರರ ನೆಲೆಗಳಲ್ಲೂ ಹಣದ ಹರಿವಿಲ್ಲದೆ ಕಂಗಾಲು. ಪ್ರಧಾನಿಯಾಗಿ ದೇಶ ಮುನ್ನಡೆಸುವ ಗುರುತರ ಹೊಣೆ ಹೊತ್ತಿರುವ ಇಮ್ರಾನ್ಖಾನ್ಗೆ ಸತ್ಯ ಒಪ್ಪಿಕೊಳ್ಳದೆ ವಿಧಿಯೇ ಇಲ್ಲ ಎಂಬ ಇಕ್ಕಟ್ಟಿನ ಚಿಂತಾಜನಕ ಸ್ಥಿತಿ ಎದುರಾಗಿದೆ.
ಪಾಕ್ನ ಉಗ್ರಸ್ನೇಹಿ ನೀತಿಯಿಂದಾಗಿ ಭಾರತ ಈವರೆಗೆ ಅನೇಕ ಸಾವು-ನೋವುಗಳನ್ನು ಕಾಣಬೇಕಾಯಿತು. ಕಾಶ್ಮೀರದ ನೆಲದಲ್ಲಂತೂ ನಿತ್ಯ ರಕ್ತದೋಕುಳಿ ಹರಿದಿದೆ. ಪುಲ್ವಾಮಾ ದಾಳಿಯೂ ಸೇರಿದಂತೆ ಪಾಕ್ ನಡೆಸಿದ ಅನೇಕ ದಾಳಿಗಳಲ್ಲಿ ನಮ್ಮ ನೂರಾರು ಅಮಾಯಕ ಸೈನಿಕರು ಸಾವಿಗೀಡಾಗ ಬೇಕಾಯಿತು. ಇದಕ್ಕೆಲ್ಲ ಪಾಕಿಸ್ಥಾನ ಈಗ ಹೊಣೆ ಹೊರಲೇಬೇಕು.
ಪುಲ್ವಾಮ ದಾಳಿಗೂ ತನಗೂ ಸಂಬಂಧವಿಲ್ಲವೆಂದು ಪಾಕಿಸ್ಥಾನ ಅದೆಷ್ಟೇ ತಿಪ್ಪೆ ಸಾರಿಸಿದರೂ ಭಾರತದ ಸಮರ್ಥ ನಾಯಕತ್ವವು ಅಂತಾರಾಷ್ಟ್ರೀಯವಾಗಿ ಪಾಕಿಸ್ಥಾನವನ್ನು ಏಕಾಂಗಿಯಾಗಿಸುವಲ್ಲಿ ರಾಜತಾಂತ್ರಿಕ ಯಶಸ್ಸು ಕಂಡಿತು. ಭಾರತ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಪ್ರತ್ಯುತ್ತರವನ್ನೂ ನೀಡಿತು. ಬಾಲಾಕೋಟ್ನಲ್ಲಿ ಉಗ್ರರ ಶಿಬಿರಗಳೇ ಇರಲಿಲ್ಲ ಎಂಬ ಪಾಕ್ ವಾದ ಮತ್ತೊಂದು ಸುಳ್ಳಿನ ಕಂತೆ ಎಂಬುದು ಇಡೀ ಜಗತ್ತಿಗೆ ಮನವರಿಕೆಯಾಗಿತ್ತು.
ಪಾಕ್ ಪ್ರಧಾನಿ ಅಮೆರಿಕದಲ್ಲಿ ಸತ್ಯ ಒಪ್ಪಿಕೊಂಡಿರಬಹುದು. ಸದ್ಯಕ್ಕೆ ಬಂದೆರಗಿರುವ ಆರ್ಥಿಕ ಸಂಕಟದ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪಾಕ್ನಲ್ಲಿ ಉಗ್ರ ಸಂಘಟನೆಗಳಿವೆ, ತರಬೇತಿಯೂ ನಡೆಯುತ್ತಿದೆ ಎಂದು ಇಮ್ರಾನ್ಖಾನ್ ಹೇಳಿರಬಹುದು. ಆದರೆ ಭಯೋತ್ಪಾದನೆಯನ್ನು ಪಾಕ್ನಿಂದ ಬುಡಸಹಿತ ಮೂಲೋತ್ಪಾಟನೆಗೊಳಿಸುವ ಪ್ರಾಮಾಣಿಕ ಕಾಳಜಿ ಇಮ್ರಾನ್ಖಾನ್ಗೆ ಇದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಏಕೆಂದರೆ ಪಾಕಿಸ್ಥಾನದ ಐಎಸ್ಐ ಸಂಸ್ಥೆಯು ಉಗ್ರರಿಗೆ ತರಬೇತಿ ನೀಡುವ, ಉಗ್ರ ಸಂಘಟನೆಗಳಿಗೆ ಬೆಂಬಲಿಸುವ ತನ್ನ ‘ಪ್ರಾಥಮಿಕ’ ಕೆಲಸದಿಂದ ವಿಮುಕ್ತಗೊಂಡಿಲ್ಲ. ಬಾಲಾಕೋಟ್ ವಾಯುದಾಳಿ ಬಳಿಕ ಭಾರತವು ಇನ್ನಷ್ಟು ಉಗ್ರ ನೆಲೆಗಳನ್ನು ನಾಶಪಡಿಸಬಹುದೆಂಬ ಭೀತಿಯಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳನ್ನು ಆಫಘಾನ್ ಗಡಿಗೆ ಸ್ಥಳಾಂತರಿಸಿದೆ. ಭಾರತದ ಮೇಲೆ ಇನ್ನಷ್ಟು ದಾಳಿಗಳನ್ನು ಸಂಘಟಿಸಲು ಲಷ್ಕರೆ-ತಯ್ಬಾ ಮತ್ತು ಐಸಿಸ್ ಉಗ್ರರನ್ನು ಸಜ್ಜುಗೊಳಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳು ಐಎಸ್ಐ ಮೇಲೆ ಪಾಕ್ ಸರ್ಕಾರದ ಯಾವುದೇ ಹಿಡಿತವಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ಈ ಹಿನ್ನೆಲೆಯಲ್ಲಿ ಕೇವಲ ತಮ್ಮ ದೇಶದಲ್ಲಿ ಉಗ್ರರಿದ್ದಾರೆ, ಉಗ್ರ ಸಂಘಟನೆಗಳಿವೆ ಎಂದು ಹೇಳಿಕೊಂಡರೆ ಸಾಲದು. ಉಗ್ರರ ವಿರುದ್ಧ ದಮನಕಾರಿ ನೀತಿ ಅನುಸರಿಸಿ, ಉಗ್ರರ ನೆಲೆಗಳನ್ನು ನಾಶಪಡಿಸುವ ಕೆಲಸವನ್ನು ಇಮ್ರಾನ್ಖಾನ್ ಸರ್ಕಾರ ಮಾಡಬೇಕು. ಆಗಲೇ ಅವರ ಮಾತಿಗೆ ಬೆಲೆ. ಹಾಗಲ್ಲದಿದ್ದರೆ ಹೀಗೆ ತಪ್ಪೊಪ್ಪಿಕೊಳ್ಳುವುದು ಕಣ್ಣೊರೆಸುವ ತಂತ್ರದ ಭಾಗ ಅಥವಾ ಭಾರತದ ವಿರುದ್ಧ ಇನ್ನಾವುದೋ ಷಡ್ಯಂತ್ರಕ್ಕೆ ಹೂಡಿರುವ ಹುನ್ನಾರ ಎಂದೇ ಭಾವಿಸಬೇಕಾಗುತ್ತದೆ.
ಆರ್ಥಿಕ ಸಂಕಟದ ಬೀಸುವ ದೊಣ್ಣೆಯಿಂದ ಪಾರಾಗಲು ಪಾಕ್ ಸದ್ಯಕ್ಕೆ ಸತ್ಯ ಹೇಳಿರಬಹುದೆಂಬುದು ಗುಟ್ಟಲ್ಲ. ಆದರೆ ಪಾಕ್ ಸರ್ಕಾರ ತನ್ನ ದೇಶದಲ್ಲಿರುವ ಉಗ್ರರ ನೆಲೆಗಳನ್ನು ಸಂಪೂರ್ಣ ನಾಶಪಡಿಸದ ಹೊರತು ಅದರ ಯಾವ ಹೇಳಿಕೆಗಳನ್ನು ಯಾರೂ ನಂಬುವುದಿಲ್ಲ. ಪಾಕಿಸ್ಥಾನ ಈಗ ಸತ್ಯ ಹೇಳಿದರೂ ಅದನ್ನು ನಂಬದ ಸ್ಥಿತಿ ಉಂಟಾಗಿರುವುದಕ್ಕೆ ಅದರ ಸ್ವಯಂಕೃತಾಪರಾಧವೇ ಕಾರಣ.
ಭಾರತ ಕಾರ್ಗಿಲ್ ಯುದ್ಧದ ಬಳಿಕ, ತನ್ನ ಆರ್ಥಿಕತೆಯನ್ನು ದುಪ್ಪಟ್ಟು ಗಾತ್ರಕ್ಕೆ ಬೆಳೆಸಿಕೊಂಡು, ಬಡತನದಿಂದ ಹೊರಬರುತ್ತಿರುವ ಜಗತ್ತಿನ ಮೊದಲ ದೇಶವಾಗಿ ಸಮೃದ್ಧಿಯತ್ತ ಸಾಗುತ್ತಿದ್ದರೆ, ಪಾಕಿಸ್ಥಾನವು ನಿರಂತರ ಅಸ್ಥಿರ ರಾಜಕೀಯ, ಆರ್ಥಿಕ ಸಂಕಟ, ಅಭಿವೃದ್ಧಿ ಕುಂಠಿತ, ಅಸಮರ್ಥ ನಾಯಕತ್ವದಿಂದ ತೊಳಲಾಡುತ್ತಿದೆ. ಕ್ರೀಡೆಯಿಂದ ಹಿಡಿದು ಆರ್ಥಿಕ ಅಭಿವೃದ್ಧಿವರೆಗೆ ಹೇಳಿಕೊಳ್ಳುವ ಯಾವುದೇ ಸಾಧನೆಯನ್ನು ಆ ದೇಶ ಮಾಡಿ ತೋರಿಸಿಲ್ಲ. ಉಗ್ರರನ್ನು ಉತ್ಪಾದಿಸಿ, ಭಾರತದ ಮೇಲೆ ಛೂ ಬಿಟ್ಟಿದ್ದೊಂದೇ ಅದರ ಘನಾಂದಾರಿ ಸಾಧನೆ ! ಒಂದು ದೇಶ ಹೇಗೆ ಮುನ್ನಡೆಯಬೇಕು ಎಂಬುದಕ್ಕೆ ಭಾರತ ಒಂದು ದಿವ್ಯ ನಿದರ್ಶನವಾದರೆ, ಒಂದು ದೇಶ ಹೇಗಿರಬಾರದು ಎಂಬುದಕ್ಕೆ ಪಾಕಿಸ್ಥಾನ ಒಂದು ಕೆಟ್ಟ ಉದಾಹರಣೆ.
ಪಾಕಿಸ್ಥಾನ ಇತಿಹಾಸದಿಂದ ಎಂದಾದರೂ ಪಾಠ ಕಲಿಯಬಹುದೇ? ಉತ್ತರಿಸುವವರು ಯಾರು?
✍ ದು. ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.