ಇತ್ತೀಚೆಗೆ ಹೊಸದಾಗಿ ರಚನೆಗೊಂಡ ಲೋಕಸಭೆಯಲ್ಲಿ ನೂತನ ಸಂಸದನಾಗಿ ಆಯ್ಕೆಯಾದ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್- ಇ- ಇತ್ತೆಹಾದ್ – ಉಲ್-ಮುಸ್ಲಿಮಾನ್) ನಾಯಕ ಅಸಾದುದ್ದೀನ್ ಓವೈಸಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿ ಸಂಸದರು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಘೋಷಣೆಯೊಂದಿಗೆ ಆತನನ್ನು ಸ್ವಾಗತಿಸಿದ ಸುದ್ದಿ ಸಾಕಷ್ಟು ಪ್ರಚಾರ ಪಡೆಯಿತು. ಬಿಜೆಪಿ ಸಂಸದರು ಓವೈಸಿಗೆ ಹೀಗೆ ಕಿಚಾಯಿಸಲು ಕಾರಣ ಅವರು ಭಾರತ್ ಮಾತಾ ಕೀ ಜೈ, ಜೈಶ್ರೀರಾಮ್ ಘೋಷಣೆಗೆ ಸದಾ ವಿರೋಧಿಯಾಗಿದ್ದ ಎಂಬುದು. ದೇಶ ಮೊದಲು, ಭಾರತ ಮಾತೆಯೇ ನಮ್ಮೆಲ್ಲರ ತಾಯಿ ಎಂಬ ಕೋಟಿ ಕೋಟಿ ಭಾರತೀಯರ ಸಹಜ ಆಶಯಗಳಿಗೆ ಓವೈಸಿ ವಿರುದ್ಧವಾಗಿಯೇ ವರ್ತಿಸುತ್ತಿರುವುದು ಅವರು ಆಗಾಗ ಮಾಡುವ ದೇಶ ವಿರೋಧಿ ಭಾಷಣಗಳಿಂದಲೇ ವ್ಯಕ್ತವಾಗಿದೆ. ಮೊನ್ನೆ ಪ್ರಮಾಣವಚನ ಸ್ವೀಕರಿಸಿದ ಬಳಿಕವೂ ಅವರು ಘೋಷಿಸಿದ್ದು ‘ಜೈ ಎಂಐಎಂ, ತಕ್ಬೀರ್ – ಅಲ್ಲಾಹು ಅಕ್ಬರ್, ಜೈಹಿಂದ್, ಜೈ ಭೀಮ್’ ಎಂದು. ಭಾರತ ಮಾತೆಗೆ ಅವರ ಈ ಘೋಷಣೆಯಲ್ಲಿ ಸ್ಥಾನವಿರಲೇ ಇಲ್ಲ.
ಅದೇನೂ ವಿಶೇಷವಲ್ಲ, ಬಿಡಿ. ಭಾರತ, ಭಾರತಮಾತೆ, ಭಾರತೀಯತೆಯನ್ನು ಜನ್ಮದಾರಭ್ಯ ನಖಶಿಖಾಂತವಾಗಿ ದ್ವೇಷಿಸಿಕೊಂಡೇ ಬೆಳೆದಿರುವ ಓವೈಸಿ ಬಾಯಿತಪ್ಪಿ ‘ಭಾರತ್ ಮಾತಾ ಕೀ ಜೈ’ ಎಂದು ಹೇಳಲು ಸಾಧ್ಯವೇ ಇಲ್ಲ. ಅಲ್ಲಾಹು ಅಕ್ಬರ್ ಜೊತೆಗೆ ಬೇಕಿದ್ದರೆ ‘ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಆತನ ಬಾಯಿಯಿಂದ ಹೊರಬೀಳಬಹುದಷ್ಟೆ!
ಆದರೆ ಮೊನ್ನೆ ಪ್ರಮಾಣವಚನ ಮುಗಿಸಿ, ಕೊನೆಯಲ್ಲಿ ಓವೈಸಿ ಘೋಷಣೆ ಮಾಡಿದಾಗ ‘ಜೈ ಭೀಮ್’ ಎಂಬ ಹೊಸದೊಂದು ಪದ ಸೇರ್ಪಡೆಯಾಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಲೇ ಇಲ್ಲ. ‘ಜೈ ಭೀಮ್’ ಎಂಬುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಉದ್ದೇಶಿಸಿ ಓವೈಸಿ ಮಾಡಿದ ಘೋಷಣೆ. ಓವೈಸಿಗೆ ಇದ್ದಕ್ಕಿದ್ದಂತೆ ಅಂಬೇಡ್ಕರ್ ಬಗ್ಗೆ ಅಭಿಮಾನ ಉಂಟಾಗಲು ಕಾರಣವೇನು? ಭಾರತಮಾತೆಯನ್ನೇ ಒಪ್ಪದ ಒವೈಸಿ ಭಾರತ ಮಾತೆಯನ್ನೂ, ಈ ದೇಶವನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ ಅಂಬೇಡ್ಕರ್ ಅವರನ್ನು ಒಪ್ಪಲು ಸಾಧ್ಯವೇ?
ಅಂಬೇಡ್ಕರ್ ಬಗ್ಗೆ ಓವೈಸಿಗೆ ಯಾವ ಗೌರವಾದರಗಳೂ ಇಲ್ಲ ಎಂಬುದಕ್ಕೆ ನಿದರ್ಶನಗಳು ಬೇಕಿಲ್ಲ. ಕೇವಲ ರಾಜಕೀಯ ಲಾಭದ ಬೇಳೆ ಬೇಯಿಸಿಕೊಳ್ಳಲು ಆತ ‘ಜೈ ಭೀಮ್’ ಎಂಬ ಹೊಸದೊಂದು ಘೋಷವಾಕ್ಯವನ್ನು ಶುರುಹಚ್ಚಿಕೊಂಡಿದ್ದಾರೆ. ಮುಸ್ಲಿಮರು ಮತ್ತು ದಲಿತರು ಒಟ್ಟಾಗಿ ಮತ ಚಲಾಯಿಸಿದರೆ, ಸಂಸತ್ತಿನಲ್ಲಿ ಹಿಂದು ಸಂಸದರ ಸಂಖ್ಯೆಯನ್ನು ಗಣನೀಯವಾಗಿ ಕುಗ್ಗಿಸಬಹುದು.
ಕ್ರಮೇಣ ಶಾಸನ ರೂಪಿಸುವ ಅಧಿಕಾರವನ್ನು ಮುಸ್ಲಿಮರೇ ಕಿತ್ತುಕೊಳ್ಳಬಹುದು. ಇದೇ ಉದ್ದೇಶಕ್ಕಾಗಿ ಅವರಿಗೆ ಇದ್ದಕ್ಕಿದ್ದಂತೆ ಅಂಬೇಡ್ಕರ್ಬಗ್ಗೆ ಅಪಾರ ಅಭಿಮಾನ, ಗೌರವಾದರ ಉಕ್ಕಿ ಹರಿದು ‘ಜೈ ಭೀಮ್’ ಎಂಬ ಘೋಷಣೆಯನ್ನು ನಾಲಿಗೆ ಉಲಿಯುವಂತೆ ಮಾಡಿದೆ. ಅವರ ಇಂತಹ ರಾಜಕೀಯ ಷಡ್ಯಂತ್ರ ಇದೇ ಮೊದಲನೆಯ ಸಲವೇನೋ ಅಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಓವೈಸಿಯ ಎಂಐಎಂ ಮತ್ತು ದಲಿತ ಅಭ್ಯರ್ಥಿಗಳ ನಡುವೆ ಮೈತ್ರಿ ಏರ್ಪಟ್ಟು, ಚುನಾವಣೆಯಲ್ಲಿ ದಲಿತ ಅಭ್ಯರ್ಥಿಗಳು ಸೋತಿದ್ದರು. ಎಂಐಎಂ ಅಭ್ಯರ್ಥಿ ಗೆದ್ದಿದ್ದರು. ದಲಿತರೊಂದಿಗೆ ಮುಸ್ಲಿಮರು ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದು ದಲಿತರು ಗೆಲ್ಲಲಿ ಎಂದಲ್ಲ. ಆ ಸಮುದಾಯದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಲಿಮೆಂಟಿಗೆ ಅಥವಾ ವಿಧಾನಸಭೆಗಳಿಗೆ ಆಯ್ಕೆಯಾಗಲಿ ಎಂಬ ಸದಾಶಯದಿಂದಲೂ ಅಲ್ಲ. ದಲಿತ ಮತಗಳ ಹೆಗಲೇರಿ, ಅವರನ್ನು ಏಣಿಯನ್ನಾಗಿ ಬಳಸಿಕೊಂಡು ಅಧಿಕಾರದ ಪೀಠಕ್ಕೆ ಮುಸ್ಲಿಮರು ಏರಬೇಕು ಎಂಬುದು ‘ಜೈ ಭೀಮ್’ ಘೋಷಣೆಯ ಹಿಂದಿನ ಕುಟಿಲ ರಾಜಕೀಯ ಹುನ್ನಾರ.
2011 ರ ಜನಗಣತಿಯನ್ವಯ, ದೇಶದಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಶೇ. 14. ದಲಿತ ಮತದಾರರ ಸಂಖ್ಯೆ (ಎಸ್ಸಿ ಮತ್ತು ಎಸ್ಟಿ ಸೇರಿ) ಶೇ. 26. ಇವೆರಡೂ ಸೇರಿದರೆ ಶೇ. 40 ರಷ್ಟು ಮತದಾರರಾಗುತ್ತಾರೆ. ಶೇ. 40ರಷ್ಟು ಮತಗಳ ಧ್ರುವೀಕರಣವಾದರೆ , ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂಬುದು ಓವೈಸಿ ಲೆಕ್ಕಾಚಾರ. ಪಾಕಿಸ್ಥಾನದ ಜನಕ ಮಹಮ್ಮದಾಲಿ ಜಿನ್ನಾರ ರಾಜಕೀಯ ಲೆಕ್ಕಾಚಾರವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಆದರೆ ದಲಿತರು – ಮುಸ್ಲಿಮರ ಮೈತ್ರಿ ರಾಜಕೀಯವನ್ನು ಡಾ. ಅಂಬೇಡ್ಕರ್ ಎಂದಿಗೂ ಒಪ್ಪಿರಲಿಲ್ಲ. ಇಂತಹ ಮೈತ್ರಿಯ ಪರಿಕಲ್ಪನೆಯನ್ನು ಅವರು ಖಂಡತುಂಡವಾಗಿ ವಿರೋಧಿಸಿದ್ದರು. 1947 ರ ನವೆಂಬರ್ನಲ್ಲಿ ಮಾಡಿದ ಅವರ ಭಾಷಣದಲ್ಲಿ “”It would be fatal for he scheduled castes, whether in Pakistan or in Hyderabad, to put their faith in the muslims or the Muslim League. It has became a habit with the scheduled castes to look upon the Muslims as their friends simply because they dislike the Hindus.This is a mistaken view'” ಎಂದು ಸ್ಪಷ್ಟವಾಗಿ ಹೇಳಿದ್ದರು.
ಅಂಬೇಡ್ಕರ್ ಚಿಂತನೆ ಇಷ್ಟು ಸ್ಪಷ್ಟವಾಗಿದ್ದರಿಂದಲೇ ಹಿಂದು ಸಮಾಜದ ಅನ್ಯಾಯಗಳ ವಿರುದ್ಧ ಅವರಿಗೆ ಭಯಂಕರ ಆಕ್ರೋಶವಿದ್ದರೂ ಅವರು ಮುಸ್ಲಿಂ ಮತಕ್ಕೆ ಮತಾಂತರಗೊಳ್ಳಲಿಲ್ಲ. ಹಿಂದು ಧರ್ಮದ್ದೇ ಒಂದು ಕವಲಾಗಿದ್ದ ಬೌದ್ಧ ಮತವನ್ನು ಅಪ್ಪಿಕೊಂಡರು. ಬುದ್ಧ ಅಂಬೇಡ್ಕರ್ ಅವರ ಪಾಲಿಗೆ ಒಬ್ಬ ಮಹಾನ್ ಆಧ್ಯಾತ್ಮಿಕ ಸುಧಾರಕನಾಗಿ ಕಂಡಿದ್ದ. ಬೌದ್ಧ ಮತದ ಅನುಯಾಯಿಯಾದ ಬಳಿಕವೂ ಮುಸ್ಲಿಂ – ದಲಿತ ಹೊಂದಾಣಿಕೆಯ ಬಗ್ಗೆ ಅವರಿಗೆ ಸುತರಾಂ ಒಪ್ಪಿಗೆಯಿರಲಿಲ್ಲ. ಭಾರತದ ಶತ್ರುಗಳಾಗಿರುವ ದೇಶವಿರೋಧಿ ಮುಸ್ಲಿಮರ ಜೊತೆ ದಲಿತರು ರಾಜಕೀಯ ಹೊಂದಾಣಿಕೆ ಮಾಡಿಕೊಂಡರೆ ಅದು ದಲಿತ ಸಮಾಜಕ್ಕೇ ಎಸಗುವ ಘೋರ ಅಪಮಾನ ಎಂದಿದ್ದರು ಅಂಬೇಡ್ಕರ್.
‘ಅಲ್ಲಾಹು ಅಕ್ಬರ್’ ಘೋಷಣೆಯನ್ನು ಮುಸ್ಲಿಮ್ ದಾಳಿಕೋರರು ಭಾರತದ ಮೇಲೆ ಆಕ್ರಮಣ ಮಾಡಿದಾಗ ಹಾಕುತ್ತಿದ್ದರು. ಅದೇ ಘೋಷಣೆಯನ್ನು ಎಂಐಎಂ ನಾಯಕ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಹಾಕುತ್ತಾರೆ. ಆದರೆ ಭಾರತ ಮಾತಾಕಿ ಜೈ ಎನ್ನುವುದಿಲ್ಲ. ಅವರಿಗೆ ಭಾರತದ ಬಗ್ಗೆ, ಭಾರತದ ಸಂವಿಧಾನದ ಬಗ್ಗೆ ಇರುವ ಶ್ರದ್ಧೆ, ಗೌರವವಾದರೂ ಎಂತಹುದು? ಬುದ್ಧನನ್ನು ಗೌರವಾದರಗಳಿಂದ ಕಾಣುವ ಭಾರತೀಯರ ಬಗ್ಗೆ ಓವೈಸಿಯದು ಹಾಗಿದ್ದರೆ ಕೇವಲ ತೋರಿಕೆಯ ಕಪಟಪ್ರೀತಿಯೇ? ದೇಶಕ್ಕಿಂತ ಇಡೀ ಜಗತ್ತಿನ ‘ಇಸ್ಲಾಂ ಸಹೋದರತ್ವ’ (Islamic Brotherhood) ಪರಿಕಲ್ಪನೆಯೇ ಶ್ರೇಷ್ಠ ಎನ್ನುವ ಓವೈಸಿ ಭಾರತವನ್ನು, ಭಾರತ ಮಾತೆಯನ್ನು ಪ್ರೀತಿಸುವ ದಲಿತರನ್ನು ಹೇಗೆ ಕಾಣುತ್ತಾರೆ? ರಾಜಕೀಯದ ಏಣಿಯನ್ನಾಗಿಯೋ? ರಾಜಕೀಯ ಚದುರಂಗ ದಾಟದ ದಾಳಗಳನ್ನಾಗಿಯೋ?
ವಾಸ್ತವವಾಗಿ ಓವೈಸಿಗೆ ದಲಿತರ ಉದ್ಧಾರದ ಕಿಂಚಿತ್ ಕಾಳಜಿಯೂ ಇಲ್ಲ. ಅವರು ದಲಿತರಿಗಾಗಿ ಮಾಡಿದ ಒಂದಾದರೂ ಘನಾಂದಾರಿ ಕಲ್ಯಾಣ ಕಾರ್ಯಕ್ರಮವಿದ್ದರೆ ಹೇಳಲಿ, ನೋಡೋಣ. ಪಾರ್ಲಿಮೆಂಟ್ ಭವನದಲ್ಲಿ ರಾರಾಜಿಸುತ್ತಿರುವ ಅಂಬೇಡ್ಕರ್ ಪ್ರತಿಮೆಗೆ ಓವೈಸಿ ಒಮ್ಮೆಯಾದರೂ ಗೌರವದಿಂದ ನಮನ ಸಲ್ಲಿಸಿದ್ದಾರಾ?
ಓವೈಸಿಯ ನಿಜವಾದ ಚಿಂತೆಯೇ ಬೇರೆ. ದೇಶದಲ್ಲಿ ಶೇ. 14 ರಷ್ಟು ಮುಸ್ಲಿಮರಿದ್ದರೂ ಪಾರ್ಲಿಮೆಂಟ್ನಲ್ಲಿ ಈ ಪ್ರಮಾಣಕ್ಕೆ ತಕ್ಕಂತೆ ಮುಸ್ಲಿಂ ಎಂಪಿಗಳಿಲ್ಲವಲ್ಲ ಎಂಬ ಚಿಂತೆ ಅತೀವವಾಗಿ ಕಾಡುತ್ತಿದೆ. ಕನಿಷ್ಠ 76 ಎಂಪಿಗಳಾದರೂ ಇರಬೇಕಿತ್ತು. ಆದರೆ ಈಗಿರುವುದು 27 ಮಾತ್ರ. 1980 ರಲ್ಲಿ ಮಾತ್ರ ಒಮ್ಮೆ ಈ ಸಂಖ್ಯೆ 49ಕ್ಕೇರಿತ್ತು. ಮುಸ್ಲಿಮರೊಂದಿಗೆ ದಲಿತರು ಒಂದಾದರೆ ಪಾರ್ಲಿಮೆಂಟ್ನಲ್ಲಿ ಮುಸ್ಲಿಂ ಎಂಪಿಗಳ ಸಂಖ್ಯೆ ಹೆಚ್ಚಿಸಬಹುದೆಂಬ ಹುನ್ನಾರವೇ ‘ಜೈ ಭೀಮ್’ ಘೋಷಣೆಗೆ ಕಾರಣ.
ಓವೈಸಿಯ ಈ ಕುಟಿಲ ಹುನ್ನಾರಗಳನ್ನು ಅರ್ಥಮಾಡಿಕೊಳ್ಳದಷ್ಟು ದಲಿತರು ದಡ್ಡರೇನಲ್ಲ. ಆದರೆ ದಲಿತರನ್ನು ಈಗಲೂ ಅಸ್ಪೃಶ್ಯರಾಗಿ ಕಾಣುವ ಹಿಂದು ಸಮಾಜದ ಕೆಲ ವರ್ಗಗಳು ಓವೈಸಿಯ ರಾಜಕೀಯ ಹುನ್ನಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ.
ಓವೈಸಿಯಂತಹವರಿಂದ ಹಿಂದು ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.