ಸುಳ್ಯ: ಸುಳ್ಯ ನಗರದ ರಥಬೀದಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಸಮರ್ಪಕವಾಗಿದೆ ಮತ್ತು ಕಳಪೆಯಾಗಿದೆ ಎಂದು ಆರೋಪಿಸಿ ಹಾಗು ರಸ್ತೆ ಬದಿಯಲ್ಲಿ ಇಂಟರ್ಲಾಕ್ ಅಳವಡಿಕೆ ಪೂರ್ತಿಯಾಗದೆ ಇರುವುದನ್ನು ಪ್ರತಿಭಟಿಸಿ ಬಿಎಂಎಸ್ ಪ್ರಾಯೋಜಿತ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ನಗರ ಪಂಚಾಯಿತಿ ಕಚೇರಿ ಎದುರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ರಥಬೀದಿ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ತೀರಾ ಕಳಪೆಯಾಗಿದೆ, ಅಲ್ಲದೆ ಚರಂಡಿಗೆ ಅಳವಡಿಸಿದ ಸಿಮೆಂಟ್ ಸ್ಲಾಬ್ಗಳು ಕುಸಿದು ಹೋಗಿದೆ. ಇಂಟರ್ಲಾಕ್ ಅಳವಡಿಕೆ ಪೂರ್ತಿಯಾಗಿಲ್ಲ. ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಸಾರ್ವಜನಿಕರಿಗೆ, ದ್ವಿಚಕ್ರ ವಾಹನ ಚಾಲಕರಿಗೆ, ರಿಕ್ಷಾ ಚಾಲಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಅಲ್ಲದೆ ನಗರದ ಬಹುತೇಕ ಅಡ್ಡ ರಸ್ತೆಗಳೂ ತೀರಾ ಹಾಳಾಗಿದ್ದು ಸಂಚಾರಕ್ಕೆ ದುಸ್ತರವಾಗಿದೆ. ಇದ್ನು ಸರಿಪಡಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ನಗರ ಪಂಚಾಯಿತಿ ಸ್ಪಂದಿಸಿಲ್ಲ ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಬಿಎಂಎಸ್ ಸಂಘಟನೆಯ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಭಟ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತ್ತಡ್ಕ, ಸಂಘದ ಕಾನೂನು ಸಲಹೆಗಾರ ಭಾಸ್ಕರ ರಾವ್, ಮಾಜಿ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಮುಳ್ಯ ಹೇಳಿದರು. ಮುಂದಿನ ೨೦ ದಿನಗಳಲ್ಲಿ ರಥಬೀದಿ ಕಾಮಗಾರಿ ಪೂರ್ತಿಗೊಳಿಸಿದ್ದರೆ ಮತ್ತು ನಗರದ ಅಡ್ಡರಸ್ತೆಗಳ ದುರಸ್ಥಿ ಕಾಮಗಾರಿ ಮುಗಿಸದಿದ್ದರೆ ಮುಖ್ಯ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಇವರು ಎಚ್ಚರಿಸಿದರು. ಸಂಘದ ಕೋಶಾಧಿಕಾರಿ ಗಿರೀಶ್, ರಾಧಾಕೃಷ್ಣ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ತರಾಟೆಗೆ: ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಲು ಆಗಮಿಸಿದ ನಗರ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಮತ್ತು ರಿಕ್ಷಾ ಚಾಲಕರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ರಸ್ತೆ ಅವ್ಯವಸ್ಥೆಯ ಬಗ್ಗೆ ಪ್ರತಿಭಟನಾಕಾರರು ಮುಖ್ಯಾಧಿಕಾರಿಯನ್ನು ತರಾಟೆಗೆತ್ತಿಕೊಂಡರು. ಮುಖ್ಯಮಂತ್ರಿ, ಸಚಿವರುಗಳು ಬಂದರೆ ರಾತ್ರೋ-ರಾತ್ರಿ ರಸ್ತೆ ರಿಪೇರಿ ಮಾಡುತ್ತೀರಿ, ಸಾರ್ವಜನಿಕರು ಮನವಿ ನೀಡಿದರೆ ರಸ್ತೆ ರಿಪೇರಿ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರು ನಗರ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
20 ದಿನದಲ್ಲಿ ನಗರದಲ್ಲಿರುವ ಎಲ್ಲಾ ರಸ್ತೆಗಳನ್ನು ದುರಸ್ಥಿಪಡಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು. ರಥಬೀದಿ ಅಭಿವೃದ್ಧಿ ಕಾಮಗಾರಿ ನಗರ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿಲ್ಲ. ರಥಬೀದಿಯ ಇಂಟರ್ಲಾಕ್ ಅಳವಡಿಕೆ ಕಾರ್ಯಕೂಡಲೇ ಆರಂಭಿಸುವುದಾಗಿ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.